Jothe Jotheyali: ಅಸಹಕಾರದ ಆರೋಪ ಸುಳ್ಳು: ನಟ ಅನಿರುದ್ಧ್‌

By Govindaraj SFirst Published Aug 21, 2022, 3:15 AM IST
Highlights

* ಕಾಡಿನ ಚಿತ್ರೀಕರಣಕ್ಕೆ ಕ್ಯಾರವಾನ್‌, ನಟನೆಗೆ ಸೂಕ್ತ ಸಂಭಾವನೆ ಕೇಳಿದ್ದು ತಪ್ಪೇ?
* ನಿರ್ದೇಶಕ ಮಧು ಜೊತೆ ಕೆಲಸ ಕಷ್ಟ, ಅವರಿಂದಾಗಿ ಹಲವರು ಕಣ್ಣೀರಿಟ್ಟಿದ್ದಾರೆ
* ಜೊತೆ ಜೊತೆಯಲಿ ಧಾರಾವಾಹಿ ಜಟಾಪಟಿ ಬಗ್ಗೆ ಸ್ಪಷ್ಟನೆ

ಬೆಂಗಳೂರು (ಆ.21): ‘ಜೊತೆ ಜೊತೆಯಲಿ ಧಾರಾವಾಹಿ ನಿರ್ಮಾಪಕರು ನನ್ನ ಮೇಲೆ ಮಾಡುತ್ತಿರುವ ಆರೋಪಗಳು ಸತ್ಯಕ್ಕೆ ದೂರವಾಗಿವೆ. ಒಂದು ವೇಳೆ ಅವರು ಮಾಡುತ್ತಿರುವ ಆರೋಪಗಳು ನಿಜವೇ ಆಗಿದ್ದರೆ ಅದನ್ನು ಅವರ ಮಕ್ಕಳ ಮೇಲೆ ಕೈ ಇಟ್ಟು ಹೇಳಲಿ’ ಎಂದು ನಟ ಅನಿರುದ್ಧ್‌ ಪ್ರತಿಕ್ರಿಯಿಸಿದ್ದಾರೆ.

ಅನಿರುದ್ಧ್‌ ಹಾಗೂ ಮೇಘಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ, ಆರೂರು ಜಗದೀಶ್‌ ನಿರ್ಮಾಣದ ‘ಜೊತೆ ಜೊತೆಯಲ್ಲಿ’ ಧಾರಾವಾಹಿ ತಂಡದಲ್ಲಿ ಬಿರುಕು ಉಂಟಾಗಿ ಆರ್ಯವರ್ಧನ್‌ ಪಾತ್ರಧಾರಿ ಅನಿರುದ್ಧ್‌ ಅವರನ್ನು ಧಾರಾವಾಹಿ ತಂಡ ದೂರ ಇಟ್ಟಿದೆ ಎನ್ನುವ ವಿಚಾರ ಆರೂರು ಜಗದೀಶ್‌ ತಿಳಿಸಿದ್ದರು. ಶನಿವಾರ ತಮ್ಮನ್ನು ಭೇಟಿ ಮಾಡಿದ ಮಾಧ್ಯಮಗಳ ಜತೆಗೆ ಈ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಅನಿರುದ್ಧ್‌ ಅವರು, ನಿರ್ಮಾಪಕ ಆರೂರು ಜಗದೀಶ್‌ ಅವರ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ಜೊತೆ ಜೊತೆಯಲಿ ಕಿರಿಕ್; ನಟ ಅನಿರುದ್ಧ್ ವಿರುದ್ಧ ಆರೂರ್ ಜಗದೀಶ್ ಆರೋಪಗಳ ಸುರಿಮಳೆ

ಕಾಡಿಗೆ ಕ್ಯಾರವಾನ್‌: ‘ಕ್ಯಾರವಾನ್‌ ಇಲ್ಲದಿದ್ದರೆ ನಾನು ಚಿತ್ರೀಕರಣಕ್ಕೆ ಬರೋದಿಲ್ಲ ಅಂತ ಹೇಳಿದ್ದಾರೆ. ನಾನು ರಂಗಭೂಮಿ ಕಲಾವಿದ. ಕ್ಯಾರವಾನ್‌ ಇಲ್ಲದಿದ್ದರೂ ಇರೋಕೆ ಗೊತ್ತು. ಕಾಡಿನಲ್ಲಿ ಚಿತ್ರೀಕರಣ ಇತ್ತು. ಆಗ ಕ್ಯಾರವಾನ್‌ ಇಲ್ಲದಿದ್ರೆ ಹೇಗೆ ಇರಬೇಕು? ಹೆಂಗಸರು ಇದ್ದಾಗ ಕ್ಯಾರವಾನ್‌ ಇಲ್ಲದಿದ್ರೆ ಅವರು ಬಟ್ಟೆಬದಲಾಯಿಸೋದು ಹೇಗೆ? ಅಕ್ಕ ಪಕ್ಕ ಇರೋರ ಮನೆಗೆ ಹೋಗಿ ಬಾತ್‌ರೂಮ್‌ ಕೇಳೋಕೆ ಆಗುತ್ತದೆಯೇ? ಹೀಗಾಗಿ ಕಾಡಿನಲ್ಲಿ ಚಿತ್ರೀಕರಣ ಇದ್ದ ದಿನ ಕ್ಯಾರವಾನ್‌ ಕೇಳಿದ್ದು ನಿಜ. ಆದರೆ, ಅದು ಇಲ್ಲದೆ ಹೋದರೆ ನಾನು ಚಿತ್ರೀಕರಣಕ್ಕೇ ಬರೋದೇ ಇಲ್ಲ ಅಂತ ಹೇಳಿಲ್ಲ ಎಂದಿದ್ದಾರೆ.

ಕೋಪಕ್ಕೆ ಕಾರಣ: ‘ನಾನು ನಿರ್ದೇಶಕರ ಮೇಲೆ ಕೋಪ ಮಾಡಿಕೊಂಡಿದ್ದು ಸೀನ್‌ ಪೇಪರ್‌ ಕಾರಣಕ್ಕೆ. ಸೀನ್‌ ಪೇಪರ್‌ ಪದೇ ಪದೇ ತಡವಾಗಿ ಕಳುಹಿಸುತ್ತಿದ್ದರು. ಸ್ವಲ್ಪ ಬೇಗ ಕಳುಹಿಸಿ ಎಂದು ಕೇಳಿದ್ದೇ ತಪ್ಪಾ? ಎಂದು ಪ್ರಶ್ನಿಸಿದರು. ಸಂಚಿಕೆ ನಿರ್ದೇಶಕ ಮಧು ಉತ್ತಮ… ಸೆಟ್‌ನಲ್ಲಿ ಕಿರುಚಿಕೊಂಡೇ ಕೆಲಸ ಮಾಡ್ತಾರೆ. ಅವರ ಜೊತೆ ಕೆಲಸ ಮಾಡೋದು ಕಷ್ಟಇದೆ. ಅವರ ನಡವಳಿಕೆಯಿಂದ ಕಲಾವಿದರು ಕಣ್ಣೀರು ಹಾಕಿದ್ದಾರೆ. ಕಟ್‌ ಮಾಡಿದ ಸಂಭಾವನೆ ಕೊಡ್ತೇನೆಂದು ಹೇಳಿ ಕೊಡಲಿಲ್ಲ. ಇದನ್ನೆಲ್ಲ ಕೇಳಿದರೆ ನನ್ನ ಅಹಂಕಾರಿ ಅಂತಾರೆ.

ಮೂರ್ಖರು ಎಂದಿಲ್ಲ: ನಾವೆಲ್ಲ ಮೂರ್ಖರ ರೀತಿ ಕೆಲಸ ಮಾಡೋದು ಬೇಡ ಎಂದಿದ್ದೇನೆ ಹೊರತು, ಯಾರನ್ನೂ ನಾನು ಮೂರ್ಖ ಎಂದು ದೂಷಿಸಿಲ್ಲ. ಒಂದೂವರೆ ವರ್ಷ ಹಗಲು ರಾತ್ರಿ ಕೆಲಸ ಮಾಡಿದ್ದೇನೆ. ಸಂಭಾವನೆ ಹೊರತಾಗಿ ಪ್ರೊಡಕ್ಷನ್‌ನಿಂದ ನಾನು ನೀರು ಕೂಡ ತೆಗೆದುಕೊಂಡಿಲ್ಲ. ನನ್ನ ಅಮ್ಮ ನನಗೆ ಊಟ, ತಿಂಡಿ, ನೀರು ಕೊಟ್ಟು ಕಳುಹಿಸುತ್ತಿದ್ದರು. ನಟಿ ಮೇಘಾ ಶೆಟ್ಟಿಹಾಗೂ ಛಾಯಾಗ್ರಾಹಕರಿಗೆ ಇದೇ ರೀತಿ ತೊಂದರೆ ಆಗಿ ಅವರನ್ನು ಧಾರಾವಾಹಿಯಿಂದ ತೆಗೆಯಬೇಕು ಅಂದಾಗ ನಾನೇ ಮುಂದೆ ನಿಂತು ಅವರನ್ನು ತಂಡದಲ್ಲಿ ಉಳಿಸಿದೆ. ಈಗ ನನಗೇ ಆ ಪರಿಸ್ಥಿತಿ ಬಂದಿದೆ.

ನನ್ನ ಅಭಿಪ್ರಾಯ ಕೇಳಿಲ್ಲ: ನಾನು ಈ ಬಗ್ಗೆ ಕರ್ನಾಟಕ ಟೆಲಿವಿಷನ್‌ ಅಸೋಸಿಯೇಷನ್‌ ಅಧ್ಯಕ್ಷರ ಬಳಿ ಮಾತನಾಡುತ್ತೇನೆ. ಎರಡು ವರ್ಷ ಕಿರುತೆರೆಯಲ್ಲಿ ನನಗೆ ಅವಕಾಶ ಕೊಡಬಾರದು ಎಂದು ನಿರ್ಮಾಪಕರು ಬ್ಯಾನ್‌ ಮಾಡಿದ್ದಾರಂತೆ. ನಿರ್ಮಾಪಕರು ಮಾತ್ರ ನಿರ್ಧಾರ ತಗೊಳ್ಳೋದು ಹೇಗೆ? ನನ್ನನ್ನೂ ಕರೆದು ಮಾತನಾಡಬಹುದಲ್ಲ. ಸಮಸ್ಯೆಯನ್ನು ನಿರ್ಮಾಪಕರ ಸಂಘದವರು ಬಗೆಹರಿಸಲು ಹೇಗೆ ಪ್ರಯತ್ನಿಸಬೇಕು, ಅದನ್ನ ಮಾಡಿಲ್ಲ’ ಎಂದು ಅವರು ಹೇಳಿದರು.

'ಜೊತೆ ಜೊತೆಯಲಿ' ತಂಡದ ಜೊತೆ ಕಿರಿಕ್; ಕಿರುತೆರೆಯಿಂದ ನಟ ಅನಿರುದ್ಧ್ ಕಿಕ್ ಔಟ್

ಈ ಧಾರಾವಾಹಿ ಇರೋದು ನನ್ನಿಂದ ಅಂತ ನಾನು ಯಾವತ್ತು ಭಾವಿಸಿಲ್ಲ. ನನ್ನಲ್ಲಿ ದುರಹಂಕಾರ ಇದ್ದಿದ್ರೆ ಇಷ್ಟರೊಳಗೆ ಗೊತ್ತಾಗಬೇಕಿತ್ತು. ನಾನು ಪಾತ್ರಕ್ಕಾಗಿ ಮಾತ್ರ ಶ್ರಮ ಪಟ್ಟಿದ್ದೇನೆ. 12 ಕೆಜಿ ತೂಕ ಇಳಿಸಿಕೊಂಡಿದ್ದೇನೆ. ಒಂದು ದಿನ ಮೊದಲೇ ಸೀನ್‌ ಪೇಪರ್‌ ಕೊಡಿ ಅಂತ ಕೇಳಿದ್ದೇನೆ. ಯಾಕೆಂದರೆ ನಾನು ಹೋಮ್‌ ವರ್ಕ್ ಮಾಡಿ ಕ್ಯಾಮೆರಾ ಮುಂದೆ ಬರುತ್ತೇನೆ. ದೃಶ್ಯಗಳು ಚೆನ್ನಾಗಿ ಬರಲಿ ಅಂತ ಮಾತ್ರ ಹೀಗೆ ಮಾಡುತ್ತೇನೆ. ಅದು ನನ್ನ ತಪ್ಪಾ? ನನ್ನದು ಸಾವಿರಾರು ಕೋಟಿ ಒಡೆಯನ ಪಾತ್ರ. ಅಂಥ ಪಾತ್ರ ಇನ್ನೋವಾ ಕಾರಿನಲ್ಲಿ ಓಡಾಡುತ್ತದೆ. ಈ ಬಗ್ಗೆ ಕೇಳಿದ್ದರಲ್ಲಿ ತಪ್ಪೇನಿದೆ’ ಎಂದು ಪ್ರಶ್ನಿಸಿದರು.

click me!