
ವಿಶೇಷ ಸ್ಪಷ್ಟನೆ: ಪವನ್ ಕಲ್ಯಾಣ್ ಅವರ ಪತ್ನಿಯ ಮೂಲ ಹೆಸರು ಅನ್ನಾ ಲೆಜ್ನೆವಾ (Anna Lezhneva). ಆದರೆ ಅವರು 2013ರಲ್ಲಿ ಪವನ್ ಕಲ್ಯಾಣ್ ಅವರನ್ನು ವಿವಾಹವಾದ ನಂತರ ತಮ್ಮ ಉಪನಾಮವನ್ನು ಬದಲಾಯಿಸಿಕೊಂಡು ಅನ್ನಾ ಕೊನಿಡೇಲಾ (Anna Konidala) ಎಂದು ಕರೆಯಲ್ಪಡುತ್ತಿದ್ದಾರೆ.
ಟಾಲಿವುಡ್ನ ಪವರ್ ಸ್ಟಾರ್ ಹಾಗೂ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ವೈಯಕ್ತಿಕ ಜೀವನ ಇದೀಗ ಮತ್ತೆ ಸುದ್ದಿಯಲ್ಲಿದೆ. ಮೂರನೇ ಪತ್ನಿ ಅನ್ನಾ ಕೊನಿಡೇಲಾ ಅವರಿಂದ ಬೇರೆಯಾಗುವ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ, ಈ ಹಿಂದೆ ಮೊದಲ ಇಬ್ಬರು ಪತ್ನಿಯರಿಗೆ ವಿಚ್ಛೇದನದ ಸಂದರ್ಭದಲ್ಲಿ ಎಷ್ಟು ಹಣ ನೀಡಿದ್ದಾರೆ ಎಂಬ ಚರ್ಚೆ ಶುರುವಾಗಿದೆ. ಮೊದಲ ಪತ್ನಿ ನಂದಿನಿಗೆ 5 ಕೋಟಿ ರೂಪಾಯಿ ನೀಡಿದ್ದರಾ? ಎರಡನೇ ಪತ್ನಿ ರೇಣು ದೇಸಾಯಿ ಅವರಿಗೆ ಬರೋಬ್ಬರಿ 40 ಕೋಟಿ ರೂಪಾಯಿ ಜೀವನಾಂಶ ಕೊಟ್ಟಿದ್ದಾರಾ? ಈ ಕುರಿತ ಆಸಕ್ತಿದಾಯಕ ವಿವರ ಇಲ್ಲಿದೆ.
ಪವನ್ ಕಲ್ಯಾಣ್ ಅವರು 1997ರಲ್ಲಿ ನಂದಿನಿ ಅವರನ್ನು ವಿವಾಹವಾಗಿದ್ದರು. ಆದರೆ, ಇವರ ದಾಂಪತ್ಯ ಜೀವನದಲ್ಲಿ ಹೆಚ್ಚು ಕಾಲ ಸುಖವಾಗಿರಲಿಲ್ಲ. ಹಲವು ವರ್ಷಗಳ ನಂತರ ಇಬ್ಬರೂ ಬೇರೆಯಾಗಲು ನಿರ್ಧರಿಸಿದ್ದು, 2008ರಲ್ಲಿ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದರು.
ಈ ಸಂದರ್ಭದಲ್ಲಿ ನಂದಿನಿ ಅವರಿಗೆ ಪವನ್ ಕಲ್ಯಾಣ್ ಬರೋಬ್ಬರಿ 5 ಕೋಟಿ ರೂಪಾಯಿ ಜೀವನಾಂಶ ನೀಡಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಒನ್ಟೈಮ್ ಸೆಟಲ್ಮೆಂಟ್ ರೂಪದಲ್ಲಿ ಚೆಕ್ ಮೂಲಕ ಈ ಹಣವನ್ನು ನೀಡಿದ್ದರು ಎನ್ನಲಾಗಿದೆ. ಈ ವಿಚಾರವನ್ನು ಪವನ್ ಕಲ್ಯಾಣ್ ಅವರೇ ರಾಜಕೀಯ ಸಭೆಯೊಂದರಲ್ಲಿ ಪ್ರಸ್ತಾಪಿಸಿದ್ದರು ಎಂಬ ವರದಿಗಳೂ ಪ್ರಕಟವಾಗಿದ್ದವು. ಹೀಗಾಗಿ ಅವರ ಮೊದಲ ವಿಚ್ಛೇದನದ ವೇಳೆ ನೀಡಿದ ಹಣದ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು.
ಮೊದಲ ಪತ್ನಿಯಿಂದ ವಿಚ್ಛೇದನ ಪಡೆದ ಬಳಿಕ ಪವನ್ ಕಲ್ಯಾಣ್ ನಟಿ ರೇಣು ದೇಸಾಯಿ ಅವರೊಂದಿಗೆ ಪ್ರೀತಿಯಲ್ಲಿ ಬಿದ್ದರು. ಇಬ್ಬರೂ 2009ರಲ್ಲಿ ವಿವಾಹವಾಗಿದ್ದರು. ಈ ಜೋಡಿಗೆ ಅಕಿರಾ ನಂದನ್ ಹಾಗೂ ಆದ್ಯಾ ಎಂಬ ಇಬ್ಬರು ಮಕ್ಕಳಿದ್ದಾರೆ. ಆದರೆ, ಈ ದಾಂಪತ್ಯವೂ ಹೆಚ್ಚು ಕಾಲ ಮುಂದುವರಿಯಲಿಲ್ಲ. 2012ರಲ್ಲಿ ಇಬ್ಬರೂ ಬೇರೆಯಾಗಿದ್ದರು.
ಇವರ ವಿಚ್ಛೇದನದ ಬಳಿಕ ರೇಣು ದೇಸಾಯಿ ಅವರಿಗೆ ಪವನ್ ಕಲ್ಯಾಣ್ 40 ಕೋಟಿ ರೂಪಾಯಿ ಜೀವನಾಂಶ ನೀಡಿದ್ದಾರೆ ಎಂಬ ಸುದ್ದಿ ವ್ಯಾಪಕವಾಗಿ ಹರಡಿತ್ತು. ಆದರೆ, ಈ ಸುದ್ದಿಗೆ ಸ್ವತಃ ರೇಣು ದೇಸಾಯಿ ಅವರೇ ಸ್ಪಷ್ಟನೆ ನೀಡಿದ್ದರು.
40 ಕೋಟಿ ರೂಪಾಯಿ ಪಡೆದಿದ್ದೇನೆ ಎಂಬುದು ಸುಳ್ಳು ಎಂದು ಹೇಳಿದ್ದ ಅವರು, ಪವನ್ ಕಲ್ಯಾಣ್ ಅವರಿಂದ ಯಾವುದೇ ಮಾಸಿಕ ಜೀವನಾಂಶ ಅಥವಾ ಪ್ರತ್ಯೇಕ ಹಣವನ್ನು ಪಡೆದಿಲ್ಲ ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದರು. ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಪವನ್ ಕಲ್ಯಾಣ್ ಒಂದು ಫ್ಲಾಟ್ ಅಥವಾ ಆಸ್ತಿಯನ್ನು ನೀಡಿದ್ದರು. ಅದನ್ನು ನಂತರ ಮಾರಾಟ ಮಾಡಿ ಬೇರೆಡೆ ಹೂಡಿಕೆ ಮಾಡಿರುವುದಾಗಿ ವಿವರಿಸಿದ್ದರು. ಹೀಗಾಗಿ 40 ಕೋಟಿ ರೂಪಾಯಿ ಜೀವನಾಂಶ ಪಡೆದಿದ್ದಾರೆ ಎಂಬ ಸುದ್ದಿ ನಿಜವಲ್ಲ ಎಂದು ಸ್ಪಷ್ಟಪಡಿಸಿದ್ದರು.
ಮೂರನೇ ಪತ್ನಿ ಅನ್ನಾ ಕೊನಿಡೇಲಾ ಜೊತೆಗೂ ಬಿರುಕು & ವಿಚ್ಛೇದನ?
ಎರಡನೇ ಮದುವೆಯ ಬಳಿಕ ಪವನ್ ಕಲ್ಯಾಣ್ ಅವರ ಜೀವನಕ್ಕೆ ಬಂದವರು ರಷ್ಯಾ ಮೂಲದ ಮಾಜಿ ಮಾಡೆಲ್ ಹಾಗೂ ನಟಿ ಅನ್ನಾ ಲೆಜ್ನೆವಾ. 2011ರಲ್ಲಿ ಬಿಡುಗಡೆಯಾದ 'ತೀನ್ ಮಾರ್' ಸಿನಿಮಾದ ಚಿತ್ರೀಕರಣದ ವೇಳೆ ಇಬ್ಬರ ಪರಿಚಯವಾಗಿತ್ತು ಎನ್ನಲಾಗಿದೆ. ನಂತರ ಸ್ನೇಹ ಪ್ರೀತಿಯಾಗಿ ಬದಲಾಗಿದ್ದು, 2013ರ ಸೆಪ್ಟೆಂಬರ್ನಲ್ಲಿ ಇಬ್ಬರೂ ವಿವಾಹವಾಗಿದ್ದರು.
ಮದುವೆಯ ಬಳಿಕ ಅನ್ನಾ ಲೆಜ್ನೆವಾ ಅವರು ಅನ್ನಾ ಕೊನಿಡೇಲಾ ಎಂದೂ ಗುರುತಿಸಿಕೊಂಡಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಸುಮಾರು 13 ವರ್ಷಗಳ ಕಾಲ ಒಟ್ಟಿಗೆ ಜೀವನ ನಡೆಸಿದ್ದ ಈ ಜೋಡಿ ಇದೀಗ ಬೇರೆಯಾಗುವ ನಿರ್ಧಾರ ಪ್ರಕಟಿಸಿದೆ.
ನವೆಂಬರ್ 9, 2026ರಂದು ಪವನ್ ಕಲ್ಯಾಣ್ ಮತ್ತು ಅನ್ನಾ ಕೊನಿಡೇಲಾ ಅವರ ವಿಚ್ಛೇದನದ ಕುರಿತ ಜಂಟಿ ಹೇಳಿಕೆ ಹೊರಬಿದ್ದಿದೆ. ಪರಸ್ಪರ ಒಪ್ಪಿಗೆ ಮತ್ತು ಗೌರವದೊಂದಿಗೆ ಬೇರೆಯಾಗಲು ನಿರ್ಧರಿಸಿರುವುದಾಗಿ ತಿಳಿಸಿರುವ ದಂಪತಿ, ತಮ್ಮ ಖಾಸಗಿತನವನ್ನು ಗೌರವಿಸುವಂತೆ ಅಭಿಮಾನಿಗಳು ಹಾಗೂ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಆದರೆ, ಈ ನಿರ್ಧಾರದ ಹಿಂದಿನ ನಿಖರ ಕಾರಣವನ್ನು ಬಹಿರಂಗಪಡಿಸಿಲ್ಲ.
ಒಟ್ಟಿನಲ್ಲಿ, ಪವನ್ ಕಲ್ಯಾಣ್ ಅವರ ಮೂರು ವಿವಾಹಗಳು ಮತ್ತು ವೈಯಕ್ತಿಕ ಜೀವನದ ಬೆಳವಣಿಗೆಗಳು ಇದೀಗ ಮತ್ತೆ ಚರ್ಚೆಗೆ ಬಂದಿವೆ. ಮೊದಲ ವಿಚ್ಛೇದನದ ವೇಳೆ 5 ಕೋಟಿ ರೂಪಾಯಿ ನೀಡಿದ್ದರು ಎನ್ನುವ ವರದಿ, ಎರಡನೇ ಪತ್ನಿ ರೇಣು ದೇಸಾಯಿ 40 ಕೋಟಿ ರೂಪಾಯಿ ಜೀವನಾಂಶದ ಸುದ್ದಿಯನ್ನು ತಳ್ಳಿಹಾಕಿರುವುದು ಹಾಗೂ ಮೂರನೇ ದಾಂಪತ್ಯದ ಅಂತ್ಯದ ಸುದ್ದಿ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.