
ಮೈಸೂರು (ಜು.11): ಪ್ರಖ್ಯಾತ ಹಿರಿಯ ಗಾಯಕಿ ಎಸ್. ಜಾನಕಿ ಅವರ ನಿಧನದ ಬೆನ್ನಲ್ಲೇ ಅವರ ಕುಟುಂಬಸ್ಥರೊಂದಿಗೆ ನಡೆಸಿದ ಸುದೀರ್ಘ ಚರ್ಚೆಯ ನಂತರ, ಎಸ್.ಜಾನಕಿ ಅಂತ್ಯಸಂಸ್ಕಾರದ ಸ್ಥಳ ಹಾಗೂ ಸಮಯವನ್ನು ಜಿಲ್ಲಾಡಳಿತ ಅಧಿಕೃತವಾಗಿ ಪ್ರಕಟಿಸಿದೆ. ಎಸ್.ಜಾನಕಿ ಅವರ ಕೊನೆಯ ಇಚ್ಛೆಯಂತೆಯೇ ಮೈಸೂರಿನಲ್ಲಿಯೇ ಅವರ ಅಂತ್ಯಕ್ರಿಯೆ ನಡೆಸಲು ತೀರ್ಮಾನಿಸಲಾಗಿದ್ದು, ಮುಖ್ಯಮಂತ್ರಿಗಳ ನಿರ್ದೇಶನದಂತೆ ಸಕಲ ಸರ್ಕಾರಿ ಗೌರವಗಳೊಂದಿಗೆ ಈ ಪ್ರಕ್ರಿಯೆ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ.
ತಮ್ಮ ಅಂತ್ಯಸಂಸ್ಕಾರವು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿಯೇ ನಡೆಯಬೇಕು ಎಂಬುದು ಸ್ವತಃ ಎಸ್. ಜಾನಕಿ ಅವರ ತೀವ್ರ ಆಕಾಂಕ್ಷೆಯಾಗಿತ್ತು. ಅವರ ಆ ಇಚ್ಛೆಯಂತೆಯೇ ಅವರ ಕುಟುಂಬ ಸದಸ್ಯರ ಒಪ್ಪಿಗೆಯ ಮೇರೆಗೆ ಮೈಸೂರಿನಲ್ಲಿಯೇ ಅಂತ್ಯಸಂಸ್ಕಾರ ಮಾಡಲು ನಿರ್ಧರಿಸಲಾಗಿದೆ. ಖುದ್ದು ಮುಖ್ಯಮಂತ್ರಿಗಳೇ ನನ್ನೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದು, ಸಕಲ ಸರ್ಕಾರಿ ಗೌರವಗಳೊಂದಿಗೆ ಗೌರವಾನ್ವಿತ ವಿದಾಯ ನೀಡಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ. ಸಿಎಂ ಸೂಚನೆಯಂತೆಯೇ ಎಲ್ಲ ಸಿದ್ಧತೆಗಳು ನಡೆಯುತ್ತಿವೆ ಎಂದು ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರ.ೆ
ಎಸ್.ಜಾನಕಿ ಅವರ ಪಾರ್ಥಿವ ಶರೀರದ ಸಾರ್ವಜನಿಕ ಹಾಗೂ ಅಭಿಮಾನಿಗಳ ಅಂತಿಮ ನಮನಕ್ಕಾಗಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ. ನಾಳೆ (ಭಾನುವಾರ) ಬೆಳಗ್ಗೆ 8 ಗಂಟೆಯಿಂದ ಸಾರ್ವಜನಿಕರು ಹಾಗೂ ಗಣ್ಯರು ಜಾನಕಿ ಅಮ್ಮನವರ ಅಂತಿಮ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಸದ್ಯ ಪಾರ್ಥಿವ ಶರೀರವನ್ನು ಆಸ್ಪತ್ರೆಯಲ್ಲೇ ಇರಿಸಲಾಗಿದ್ದು, ಯಾವುದೇ ಅಭಿಮಾನಿಗಳು ಅಥವಾ ಸಾರ್ವಜನಿಕರು ಆಸ್ಪತ್ರೆಯ ಆವರಣಕ್ಕೆ ಬಂದು ಗೊಂದಲ ಸೃಷ್ಟಿಸಬಾರದು. ಸಾರ್ವಜನಿಕ ದರ್ಶನಕ್ಕೆ ನಾಳೆ ಬೆಳಗ್ಗೆ 8 ಗಂಟೆಯ ನಂತರ ಮಹಾರಾಜ ಕಾಲೇಜು ಮೈದಾನದಲ್ಲೇ ವ್ಯವಸ್ಥೆ ಇರುವುದರಿಂದ ನೇರವಾಗಿ ಅಲ್ಲಿಗೇ ಬರಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ.
ಮಹಾರಾಜ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ದರ್ಶನ ಪ್ರಕ್ರಿಯೆ ಮುಗಿದ ಬಳಿಕ, ನಾಳೆ ಸಂಜೆ ವೇಳೆಗೆ ಎಚ್.ಡಿ. ಕೋಟೆ ತಾಲೂಕಿನ ಬೋಗಾದಿರ ಕನಿಯನ ಹುಂಡಿಯಲ್ಲಿ ಸಾಕು ಮಗ ನವೀನ್ ಅವರ 'ನವೀನ್ ಫಾರ್ಮ್ ಹೌಸ್'ನಲ್ಲಿ ಎಸ್. ಜಾನಕಿ ಅವರ ಅಂತ್ಯಸಂಸ್ಕಾರವನ್ನು ನೆರವೇರಿಸಲು ಸ್ಥಳ ನಿಗದಿಪಡಿಸಲಾಗಿದೆ. ಅಲ್ಲಿ ಸಕಲ ಪೊಲೀಸ್ ಗೌರವಗಳು ಹಾಗೂ ಸತ್ಕಾರಗಳೊಂದಿಗೆ ಸಂಗೀತ ಲೋಕದ ಧ್ರುವತಾರೆಯನ್ನು ಮಣ್ಣು ಮಾಡಲಾಗುವುದು ಎಂದು ಜಿಲ್ಲಾಡಳಿತ ಖಚಿತಪಡಿಸಿದೆ.
ಎಸ್ ಜಾನಕಿ ಅವರ ಮೊಮ್ಮಗಳು ಅಪ್ಸಾರ ಅವರಿಂದ ಅಂತ್ಯ ಸಂಸ್ಕಾರ ನೆರವೇರಲಿದೆ. ಅವರ ಏಕೈಕ ಪುತ್ರ ಈ ವರ್ಷದ ಜನವರಿಯಲ್ಲಿ ಸಾವು ಕಂಡಿದ್ದರು.ಹೀಗಾಗಿ ಮಗನ ಮಗಳಾದ ಅಪ್ಸಾರಳಿಂದ ಅಂತ್ಯ ಸಂಸ್ಕಾರ ನೆರವೇರಲಿದೆ. ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.