
ಮೈಸೂರು (ಜು.11): ಪ್ರಖ್ಯಾತ ಹಿರಿಯ ಗಾಯಕಿ ಎಸ್. ಜಾನಕಿ ಅವರ ನಿಧನದ ಬೆನ್ನಲ್ಲೇ ಅವರ ಅಂತಿಮ ಸಂಸ್ಕಾರ ಮತ್ತು ಪಾರ್ಥಿವ ಶರೀರದ ಸಾರ್ವಜನಿಕ ದರ್ಶನದ ವ್ಯವಸ್ಥೆಗಾಗಿ ಜಿಲ್ಲಾಡಳಿತ ತೀವ್ರ ಸಿದ್ಧತೆ ಕೈಗೊಂಡಿದೆ. ಈ ಮಧ್ಯೆ, ಎಸ್.ಜಾನಕಿ ಅವರ ಅಂತ್ಯಸಂಸ್ಕಾರಕ್ಕಾಗಿ ಮಾಜಿ ಸಚಿವ ಹಾಗೂ ಜೆಡಿಎಸ್ ಮುಖಂಡ ಸಾ.ರಾ. ಮಹೇಶ್ ಅವರು ಮೈಸೂರಿನಲ್ಲಿ ಉಚಿತವಾಗಿ ನಿವೇಶನ ನೀಡಲು ಮುಂದೆ ಬಂದಿದ್ದಾರೆ.
ಎಸ್. ಜಾನಕಿ ಅವರ ಅಂತ್ಯಕ್ರಿಯೆ ಕುರಿತು ಮಹತ್ವದ ಪ್ರಕಟಣೆ ಹೊರಡಿಸಿರುವ ಮಾಜಿ ಸಚಿವ ಸಾ.ರಾ. ಮಹೇಶ್, "ಜಾನಕಿ ಅಮ್ಮ ಅವರ ಅಂತ್ಯಸಂಸ್ಕಾರವನ್ನು ಮೈಸೂರಿನಲ್ಲಿಯೇ ಮಾಡುವುದಾದರೆ, ನನ್ನ ಸ್ವಯಾರ್ಜಿತ ಆಸ್ತಿಯಾಗಿರುವ ಮೈಸೂರಿನ ಆರ್.ಟಿ. ನಗರದಲ್ಲಿನ 60*40 ಅಳತೆಯ ಒಂದು ನಿವೇಶನವನ್ನು ಉಚಿತವಾಗಿ ನೀಡಲು ನಾನು ಸಿದ್ಧನಿದ್ದೇನೆ. ಜಾನಕಿ ಅವರ ಕುಟುಂಬಸ್ಥರು ಒಪ್ಪಿಗೆ ಸೂಚಿಸಿದರೆ ಆ ಜಾಗವನ್ನು ಅವರ ಹೆಸರಿನ ಟ್ರಸ್ಟ್‌ಗೆ ಹಸ್ತಾಂತರಿಸಲಾಗುವುದು. ಈ ಕುರಿತು ಈಗಾಗಲೇ ಮೈಸೂರು ಜಿಲ್ಲಾಡಳಿತಕ್ಕೂ ಅಧಿಕೃತ ಮಾಹಿತಿ ನೀಡಿದ್ದೇನೆ" ಎಂದು ತಿಳಿಸಿದ್ದಾರೆ.
ಇನ್ನೊಂದೆಡೆ, ಜಾನಕಿ ಅಮ್ಮ ಕೊನೆಯುಸಿರೆಳೆದ ಮೈಸೂರಿನ ಅಪೋಲೋ ಆಸ್ಪತ್ರೆಯ ಆವರಣದಲ್ಲೇ ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಮಹತ್ವದ ತುರ್ತು ಸಭೆ ಪ್ರಗತಿಯಲ್ಲಿದೆ. ಸಭೆಯಲ್ಲಿ ಮೈಸೂರು ಜಿಲ್ಲಾಧಿಕಾರಿ (DC), ನಗರ ಪೊಲೀಸ್ ಆಯುಕ್ತರು (CP), ಸ್ಥಳೀಯ ಶಾಸಕರು ಹಾಗೂ ಎಸ್. ಜಾನಕಿ ಅವರ ಕುಟುಂಬದ ಸದಸ್ಯರು ಭಾಗವಹಿಸಿದ್ದಾರೆ.
ಈ ಉನ್ನತ ಮಟ್ಟದ ಸಭೆಯಲ್ಲಿ ಜಾನಕಿ ಅಮ್ಮನವರ ಪಾರ್ಥಿವ ಶರೀರದ ಸಾರ್ವಜನಿಕ ಅಂತಿಮ ದರ್ಶನಕ್ಕೆ ಮಾಡಬೇಕಾದ ಭದ್ರತಾ ವ್ಯವಸ್ಥೆ ಹಾಗೂ ಅಂತ್ಯಸಂಸ್ಕಾರವನ್ನು ಎಲ್ಲಿ ಮತ್ತು ಯಾವ ಸಮಯದಲ್ಲಿ ನೆರವೇರಿಸಬೇಕು ಎಂಬ ಬಗ್ಗೆ ಸುದೀರ್ಘ ಚರ್ಚೆ ನಡೆಯುತ್ತಿದೆ. ಸಭೆ ಮುಗಿದ ತಕ್ಷಣವೇ ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಮಾಧ್ಯಮಗಳ ಮೂಲಕ ಅಂತಿಮ ಸಂಸ್ಕಾರದ ಸ್ಥಳ ಮತ್ತು ನಿಖರ ಸಮಯದ ಅಧಿಕೃತ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಲಿದ್ದಾರೆ.