
ಮೈಸೂರು (ಜು.11): ಪ್ರಖ್ಯಾತ ಹಿರಿಯ ಗಾಯಕಿ ಎಸ್. ಜಾನಕಿ ಅವರ ಹಠಾತ್ ನಿಧನಕ್ಕೆ ಕಾರಣವೇನು ಎಂಬ ಗೊಂದಲಕ್ಕೆ ಈಗ ತೆರೆ ಬಿದ್ದಿದೆ. ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆಯು ಜಾನಕಿ avr ಆರೋಗ್ಯ ಸ್ಥಿತಿ ಹಾಗೂ ಸಾವಿನ ನಿಖರ ಕಾರಣದ ಕುರಿತು ಅಧಿಕೃತ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ. ಇಂದು ಮಧ್ಯಾಹ್ನ ಕಾಲು ನೋವಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದ ಗಾನಕೋಗಿಲೆ, ಸಂಜೆ ವೇಳೆಗೆ ಹಠಾತ್ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂದು ಆಸ್ಪತ್ರೆ ದೃಢಪಡಿಸಿದೆ.
ಆಸ್ಪತ್ರೆಯ ಅಧಿಕೃತ ಪ್ರಕಟಣೆಯ ಪ್ರಕಾರ, ಎಸ್. ಜಾನಕಿ ಅವರನ್ನು ಜುಲೈ 11ರಂದು ಮಧ್ಯಾಹ್ನ 12:49 ಕ್ಕೆ ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಗೆ ತಂದಾಗ ಅವರ ಆರೋಗ್ಯ ಸ್ಥಿತಿ ಅತ್ಯಂತ ಗಂಭೀರವಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ವೈದ್ಯರು ಅವರನ್ನು ತಪಾಸಣೆಗೆ ಒಳಪಡಿಸಿ, ಹೆಚ್ಚಿನ ತುರ್ತು ನಿರ್ವಹಣೆಗಾಗಿ ತಕ್ಷಣವೇ ತೀವ್ರ ನಿಗಾ ಘಟಕಕ್ಕೆ (ICU) ಸ್ಥಳಾಂತರಿಸಿದ್ದರು.
ಖಾಸಗಿ ಆಸ್ಪತ್ರೆಯ ಆಂತರಿಕ ಮೂಲಗಳ ಮಾಹಿತಿ ಪ್ರಕಾರ, ಜಾನಕಿ ಅವರಿಗೆ ಇಂದು ಮಧ್ಯಾಹ್ನ ನೋವು ತೀವ್ರವಾಗಿತ್ತು. ಕಾಲಿಗೆ ಆಗಿದ್ದ ಗಾಯ, ಗ್ಯಾಂಗ್ರೀನ್ ಆಗಿ ಬದಲಾಗಿತ್ತು ಎನ್ನಲಾಗಿದೆ. ಇದಕ್ಕಾಗಿಯೇ ಆಸ್ಪತ್ರೆಗೆ ಬಂದಿದ್ದರು. ಅವರ ಕಾಲಿನಲ್ಲಿ ಇನ್ಫೆಕ್ಷನ್ (ಸೋಂಕು) ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದ್ದ ಕಾರಣ ಅವರಿಗೆ ತಕ್ಷಣವೇ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆಯನ್ನು ಆರಂಭಿಸಲಾಗಿತ್ತು.
ಅಪೋಲೋ ಆಸ್ಪತ್ರೆಯ ತಜ್ಞ ವೈದ್ಯರ ಬಹುಶಿಸ್ತೀಯ ತಂಡ (Multidisciplinary Team) ಅತ್ಯಂತ ಕಟ್ಟುನಿಟ್ಟಾದ ವೈದ್ಯಕೀಯ ಆರೈಕೆ ಮತ್ತು ನಿರಂತರ ಮೇಲ್ವಿಚಾರಣೆಯನ್ನು ಐಸಿಯುನಲ್ಲಿ ಕೈಗೊಂಡಿತ್ತು. ಆದರೆ, ದುರದೃಷ್ಟವಶಾತ್ ಚಿಕಿತ್ಸೆ ಪ್ರಗತಿಯಲ್ಲಿದ್ದಾಗಲೇ ಜಾನಕಿ ಅವರಿಗೆ ಹಠಾತ್ ಹೃದಯ ಸ್ತಂಭನ (Cardiac Arrest) ಉಂಟಾಗಿದೆ. ವೈದ್ಯರು ಅವರನ್ನು ಉಳಿಸಿಕೊಳ್ಳಲು ತೀವ್ರ ಪ್ರಯತ್ನ ನಡೆಸಿದರೂ ಸಹ, ಚಿಕಿತ್ಸೆ ಫಲಕಾರಿಯಾಗದೆ ಇಂದು ರಾತ್ರಿ 7:30 ಕ್ಕೆ ಅವರು ನಿಧನರಾಗಿದ್ದಾರೆ ಎಂದು ಆಸ್ಪತ್ರೆಯ ವೈದ್ಯಕೀಯ ಮಂಡಳಿ ಅಧಿಕೃತವಾಗಿ ಘೋಷಿಸಿದೆ.
ಕಾಲಿನ ಇನ್ಫೆಕ್ಷನ್ ತೀವ್ರವಾಗಿ ಇಡೀ ದೇಹಕ್ಕೆ ಹರಡಿದ್ದರಿಂದ ಉಂಟಾದ ಆರೋಗ್ಯ ಏರುಪೇರು ಹಾಗೂ ಹಠಾತ್ ಹೃದಯಾಘಾತವೇ ಗಾನಕೋಗಿಲೆಯ ಸಾವಿಗೆ ಪ್ರಮುಖ ಕಾರಣ ಎಂದು ಆಸ್ಪತ್ರೆಯ ಪ್ರಕಟಣೆ ಸ್ಪಷ್ಟಪಡಿಸಿದೆ.