Balaramana Dinagalu Review: 80ರ ದಶಕದ ಬೆಂಗಳೂರಿನ ಭೂಗತ ಜಗತ್ತಿನಲ್ಲಿ ಮರಿ ಟೈಗರ್ ಆರ್ಭಟ!

Published : Jun 27, 2026, 04:21 PM IST
Balaramana Dinagalu

ಸಾರಾಂಶ

Balaramana Dinagalu Review: 80ರ ದಶಕದ ಬೆಂಗಳೂರಿನ ಭೂಗತ ಜಗತ್ತು, ವಿನೋದ್ ಪ್ರಭಾಕರ್ ಅಭಿನಯ ಮತ್ತು ಕೆ.ಎಂ. ಚೈತನ್ಯ ನಿರ್ದೇಶನದ 'ಬಲರಾಮನ ದಿನಗಳು' ಸಿನಿಮಾ ಹೇಗಿದೆ? ಸಂಪೂರ್ಣ ಕನ್ನಡ ವಿಮರ್ಶೆ ಮತ್ತು ರೇಟಿಂಗ್ ಓದಿ.

ರಾಜೇಶ್ ಶೆಟ್ಟಿ

80ರ ದಶಕದಲ್ಲಿನ ಭೂಗತ ಜಗತ್ತನ್ನು ಧರಿಸಿದ್ದ ಬೆಂಗಳೂರಿನ ವಿವರಣೆ, ಕ್ರೋಧಾವೇಶ, ನಿಟ್ಟುಸಿರು, ವಿಷಾದವನ್ನು ದಾಟಿಸುವ ಕೃತಿ ಎಷ್ಟೇ ಸಲ ಬಂದರೂ ಸಣ್ಣ ಕುತೂಹಲವಂತೂ ಇದ್ದೇ ಇರುತ್ತದೆ. ಈ ಸಿನಿಮಾ ಆ ವಿಭಾಗಕ್ಕೆ ಸೇರುವಂತಹ ಕೃತಿ. ಕೆ.ಎಂ. ಚೈತನ್ಯ ಆ ಕಾಲದ ಬೆಂಗಳೂರನ್ನು ಸೊಗಸಾಗಿ ಕಾಣಿಸಿದ್ದಾರೆ. ಆ ದಿನಗಳು ಸಿನಿಮಾದ ಪಾತ್ರಗಳನ್ನು ಅತ್ಯಂತ ಅಚ್ಚುಕಟ್ಟಾಗಿ ಈ ಕತೆಯಲ್ಲಿ ಜೋಡಿಸಿದ್ದಾರೆ. ಆ ಎರಡು ಕಾರಣಕ್ಕೆ ಈ ಸಿನಿಮಾ ಮೆಚ್ಚುಗೆ ಗಳಿಸುತ್ತದೆ.

ಮೂರನೇ ಮೆಚ್ಚುಗೆ ವಿನೋದ್‌ ಪ್ರಭಾಕರ್‌. ತಣ್ಣಗಿನ ನೋಟದಿಂದ, ಆಕ್ರೋಶದ ನಿಲುವಿನಿಂದ, ಅಸಹಾಯಕ ಮುಖಭಾವದಿಂದ ಅವರು ಗೆಲ್ಲುತ್ತಾರೆ. ಬಲರಾಮನ ಪಾತ್ರವನ್ನು ಜೀವಿಸಿದ್ದಾರೆ. ತುಂಬಾ ಅಚ್ಚರಿದಾಯಕ ಮೆಚ್ಚುಗೆ ಎಂದರೆ ವಿನಯ್‌ ಗೌಡ. ಧ್ವನಿಯಿಂದ, ನಟನೆಯಿಂದ ಅವರ ಪಾತ್ರವನ್ನು ‍ವಿಭಿನ್ನವಾಗಿ ನಿಲ್ಲುವಂತೆ ಮಾಡಿದ್ದಾರೆ.

ಇನ್ನು ಕಥಾಹಂದರದ ವಿಚಾರಕ್ಕೆ ಬಂದರೆ, ಇದೊಂದು ಬಯೋಗ್ರಫಿಯಂತಹ ಕತೆ. ಒಬ್ಬ ಹಳ್ಳಿ ಹುಡುಗ ಆಕಸ್ಮಿಕ ಅನಿವಾರ್ಯತೆಯಿಂದ ಬದುಕಿನ ದಾರಿ ಬದಲಿಸುವ ಕತೆ. ಮುಗ್ಧತೆ, ಅಸಾಮಾನ್ಯ ಸಾಮರ್ಥ್ಯ, ಅಸಹಾಯಕತೆ ಈ ಹಂತಗಳಲ್ಲಿ ಅವನ ಪಯಣವನ್ನು ನೋಡಬಹುದು. ನಿರ್ದೇಶಕರು ಅತ್ಯಂತ ನಿರ್ಲಿಪ್ತವಾಗಿ ಕತೆ ಹೇಳುತ್ತಾರೆ. ಅವರು ದಾರಿಯನ್ನು ರೋಚಕಗೊಳಿಸಬಹುದಾಗಿತ್ತು. ಆದರೆ ಇವರ ದಾರಿಯೇ ಭಿನ್ನ. ತಾರಕಕ್ಕೂ ಹೋಗುವುದಿಲ್ಲ.

ಚಿತ್ರ: ಬಲರಾಮನ ದಿನಗಳು

ನಿರ್ದೇಶನ: ಕೆ.ಎಂ. ಚೈತನ್ಯ

ತಾರಾಗಣ: ವಿನೋದ್ ಪ್ರಭಾಕರ್‌, ಪ್ರಿಯಾ ಆನಂದ್, ವಿನಯ್‌ ಗೌಡ, ಆಶಿಶ್ ವಿದ್ಯಾರ್ಥಿ, ರಮೇಶ್ ಇಂದಿರಾ

ರೇಟಿಂಗ್: 3

ಮಂದ್ರಕ್ಕೂ ಇಳಿಯುವುದಿಲ್ಲ. ಸರಳರೇಖೆಯಂತೆ ಚಲಿಸುತ್ತಾರೆ. ಊಹಿಸಬಹುದಾದ ಕತೆಯ ಅಂತ್ಯದಲ್ಲಿ ಬದುಕಿನ ನಿರರ್ಥಕತೆಯನ್ನು ಸಾರುತ್ತಾರೆ. ಕತೆಯಲ್ಲಿ ಹೊಸತೇನು ಎಂದು ಕೇಳಬಾರದು. ಕತೆ ಆವರಿಸಿಕೊಳ್ಳಬೇಕು. ಆಮೇಲೆ ಉಳಿಯಬೇಕೋ ಬೇಡವೋ ಅನ್ನುವುದನ್ನು ಆ ಕತೆಯೇ ನಿರ್ಧರಿಸುತ್ತದೆ. ಈ ಸಿನಿಮಾ ಅಂತಹ ಒಂದು ಕತೆ. ಇಲ್ಲಿ ಬದುಕಿದೆ. ಕೈಮೀರಿ ಹೋಗುವ ಪವಾಡವಿದೆ. ಎಲ್ಲಕ್ಕಿಂತ ಹೆಚ್ಚಾಗಿ ವಿಷಾದವಿದೆ. ಆ ವಿಷಾದವೇ ಈ ಸಿನಿಮಾದ ದಾರಿಯನ್ನು ನಿರ್ಧರಿಸುತ್ತದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Moda Kavida Vatavarana Review: ಮಳೆ, ಮಂಜು, ಹಸಿರು ಬೆಟ್ಟಗಳ ನಡುವೆ ಸಿಂಪಲ್ ಸುನಿ ಮ್ಯಾಜಿಕ್!
Urabba Movie Review: ಉಜ್ಜನಿ ಜಾತ್ರೆಯ ವೈಭವ, ಚೌಡೇಶ್ವರಿ ಲೀಲೆ, ಹೇಗಿದೆ ತನಿಷಾ ಸಿನಿಮಾ?