Firefly Movie Review: ಆಂತರ್ಯ ಕಂಡುಕೊಳ್ಳುವ ಹುಡುಕಾಟದ ಕಥನ

Published : Apr 26, 2025, 10:55 AM ISTUpdated : Apr 26, 2025, 11:03 AM IST
Firefly Movie Review: ಆಂತರ್ಯ ಕಂಡುಕೊಳ್ಳುವ ಹುಡುಕಾಟದ ಕಥನ

ಸಾರಾಂಶ

ಇದ್ದಕ್ಕಿದ್ದಂತೆ ಅಲ್ಲಿ ಬಣ್ಣ ಬಣ್ಣದ ದೀಪಗಳು ಬೆಳಗಿ ಇಡೀ ವಾತಾವರಣ ಕಲರ್‌ಫುಲ್ ಆಗಿ ಬದಲಾಗುತ್ತದೆ.- ಇಂಥಾ ಚಂದದ ದೃಶ್ಯಗಳ ಸರಮಾಲೆಯೇ ಈ ಸಿನಿಮಾದಲ್ಲಿದೆ.   

ರಾಜೇಶ್ ಶೆಟ್ಟಿ

ಚಿತ್ರ 1- ಗದ್ದೆ ಬದುವಿನಲ್ಲಿ ನಾಯಕ ಕುಳಿತಿದ್ದಾನೆ. ಖಿನ್ನನಾಗಿದ್ದಾನೆ. ಯೋಚನೆ ಬಾಧಿಸುತ್ತಿದೆ. ಕತ್ತಲು ಆವರಿಸುತ್ತಿದೆ. ಇದ್ದಕ್ಕಿದ್ದಂತೆ ಆ ಗದ್ದೆಯಲ್ಲಿ ನೂರಾರು ಲೈಟುಗಳು ಧಿಗ್ಗನೆ ಬೆಳಗುತ್ತವೆ. ಹುಡುಗನ ಕಣ್ಣು ಅರಳುತ್ತದೆ. ಚಿತ್ರ 2- ಹಸಿರು ಹಿನ್ನೆಲೆ. ಹುಡುಗಿಯೊಬ್ಬಳು ಬಂದಿದ್ದಾಳೆ. ಅಪರಿಚಿತರಾದ ಅವರಿಬ್ಬರು ನಡೆಯುತ್ತಿದ್ದಾರೆ. ಆಕೆ ಖುಷಿಯಿಂದ ಡಾನ್ಸ್ ಮಾಡುತ್ತಾಳೆ. ಇದ್ದಕ್ಕಿದ್ದಂತೆ ಅಲ್ಲಿ ಬಣ್ಣ ಬಣ್ಣದ ದೀಪಗಳು ಬೆಳಗಿ ಇಡೀ ವಾತಾವರಣ ಕಲರ್‌ಫುಲ್ ಆಗಿ ಬದಲಾಗುತ್ತದೆ.- ಇಂಥಾ ಚಂದದ ದೃಶ್ಯಗಳ ಸರಮಾಲೆಯೇ ಈ ಸಿನಿಮಾದಲ್ಲಿದೆ. 

ನಿರ್ದೇಶಕರು ಅಷ್ಟರ ಮಟ್ಟಿಗೆ ದೃಶ್ಯಗಳನ್ನು ನಂಬಿಕೊಂಡಿದ್ದಾರೆ. ಚಂದಕ್ಕೆ ಮರುಳಾಗಿದ್ದಾರೆ. ಒಂದೊಂದು ಫ್ರೇಮ್‌ ಕೂಡ ಅದ್ಭುತವಾಗಿ ಕಟ್ಟಿದ್ದಾರೆ. ಅದರ ಕ್ರೆಡಿಟ್‌ ಛಾಯಾಗ್ರಾಹಕ ಅಭಿಲಾಷ್‌ ಕಲ್ಲತ್ತಿಗೂ ಸಲ್ಲುತ್ತದೆ. ಇದು ವಿದೇಶಕ್ಕೆ ಹೋಗಿ ಬಂದಿರುವ ಹುಡುಗನ ಕತೆ. ದೊಡ್ಡದೊಂದು ಆಘಾತದಿಂದ ಅವನ ಬದುಕಿನ ಮುಂದೆ ಬಹುದೊಡ್ಡ ಪ್ರಶ್ನೆ ಬಂದು ನಿಲ್ಲುತ್ತದೆ. ಆ ಪ್ರಶ್ನೆಯನ್ನು ತೊಡೆಯಲು ಅ‍ವನು ನಡೆಸುವ ಹೋರಾಟ ಈ ಕತೆ. ನಿರ್ದೇಶಕರು ವಿಶೇಷ ದೃಶ್ಯಗಳ ಮೂಲಕ, ರೂಪಕಗಳ ಮೂಲಕ ಕತೆ ಹೇಳುತ್ತಾರೆ. ಸಂತೋಷದ ಹುಡುಕಾಟವನ್ನು ತರುತ್ತಾರೆ. ಗಾಢ ದುಃಖವನ್ನು ದಾಟಿಸುತ್ತಾರೆ. ಅವರಿಗೆ ಧಾವಂತವಿಲ್ಲ. 

ಫೈರ್ ಫ್ಲೈ
ನಿರ್ದೇಶನ:
ವಂಶಿ
ತಾರಾಗಣ: ವಂಶಿ, ಅಚ್ಯುತ್‌ ಕುಮಾರ್‌, ಸುಧಾರಾಣಿ, ರಚನಾ ಇಂದರ್, ಆನಂದ್‌ ನೀನಾಸಂ, ಮೂಗು ಸುರೇಶ್
ರೇಟಿಂಗ್: 3

ಸಮಾಧಾನದಿಂದ, ಅವಸರವೂ ಸಾವಧಾನದ ಬೆನ್ನೇರಿದಂತೆ ಕತೆ ಹೇಳುತ್ತಾರೆ. ಅಂತರಾಳ ಅರ್ಥ ಮಾಡಿಕೊಳ್ಳಲು ಸಂಯಮ ಬೇಕಿರುತ್ತದೆ. ದುಃಖದಲ್ಲಿ ಆರಂಭವಾಗುವ ಸಿನಿಮಾ ಸಂತೋಷದಲ್ಲಿ ಮುಗಿಯುತ್ತದೆ. ಸಮಾಧಾನವನ್ನು ಉಳಿಸುತ್ತದೆ. ನಟ ವಂಶಿ ಇಡೀ ಚಿತ್ರದ ತುಂಬಾ ಆವರಿಸಿ ತಾನೊಬ್ಬ ಉತ್ತಮ ನಟನೆಂದು ಸಾಬೀತು ಪಡಿಸಿದ್ದಾರೆ. ಶಿವರಾಜ್‌ಕುಮಾರ್‌ ಕೆಲವೇ ದೃಶ್ಯಗಳಲ್ಲಿ ಕಾಣಿಸಿದರೂ ಖುಷಿ ಕೊಡುತ್ತಾರೆ. ರಚನಾ ಇಂದರ್‌ ಉಪಸ್ಥಿತಿ ಸ್ಕ್ರೀನ್‌ಗೆ ಆಹ್ಲಾದತೆ ತರುತ್ತಾರೆ. ಇದೊಂದು ಅತ್ಯುತ್ತಮ ಮೇಕಿಂಗ್‌ ಇರುವ, ಆಂತರ್ಯದ ಬೆಳಕು ಕಂಡುಕೊಳ್ಳುವ ರೂಪಕ ಪ್ರಧಾನ ಸಿನಿಮಾ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕಳ್ಳಭಟ್ಟಿ ದಂಧೆ ನಡುವೆ ಅರಳುವ ಪ್ರೀತಿ: ಇಲ್ಲಿದೆ 'ಧರ್ಮಂ' ಸಿನಿಮಾ ವಿಮರ್ಶೆ
'ಅಖಂಡ 2' ಫಸ್ಟ್ ರಿವ್ಯೂ ವೈರಲ್.. ಹುಚ್ಚೆಬ್ಬಿಸುವಂತಿವೆ ಬಾಲಯ್ಯ ಮಾಸ್ ಡೈಲಾಗ್‌ಗಳು, ಚಿತ್ರದ ಮೈನಸ್ ಏನು?