
ರಾಜೇಶ್
ಕೆಲವು ಕತೆಗಳನ್ನು ಕಲಾವಿದರೇ ಹೆಚ್ಚು ಹತ್ತಿರಗೊಳಿಸುತ್ತಾರೆ. ಇಂದು ಅಂಥಾ ಒಂದು ಸಿನಿಮಾ. ಈ ಚಿತ್ರದಲ್ಲಿ ನಟಿಸಿರುವ ಹರಿ ಶರ್ವ, ದೀಪಿಕಾ ಆರಾಧ್ಯ, ಧರ್ಮಣ್ಣ ಎಷ್ಟು ಸೊಗಸಾಗಿ ನಟಿಸಿದ್ದಾರೆ ಎಂದರೆ ಅವರಿಂದ ಕತೆ ಆಪ್ತವಾಗುತ್ತಾ ಹೋಗುತ್ತದೆ. ನಿರ್ದೇಶಕರ ವಿನ್ಯಾಸವೂ ಅದೇ ರೀತಿ ಇದೆ. ಇಲ್ಲಿ ಯಾವುದನ್ನೂ ಅವರು ತೀರಾ ಸಂಕೀರ್ಣಗೊಳಿಸುವುದಿಲ್ಲ, ಅನವಶ್ಯಕವಾಗಿ ಭಾರ ಹೊರಿಸುವುದಿಲ್ಲ. ಸರಳವಾಗಿ ಮಧ್ಯಮ ವರ್ಗದ ಒಬ್ಬ ಒಳ್ಳೆಯ ಮನಸ್ಸಿನ ಹುಡುಗನ ಕತೆಯನ್ನು ಹೇಳಲು ಶುರು ಮಾಡುತ್ತಾರೆ.
ಅವನಿಗೊಬ್ಬ ತರಲೆ ಸ್ನೇಹಿತ. ಅವರ ದೈನಂದಿನ ಬದುಕು ತೆರೆದುಕೊಳ್ಳುತ್ತದೆ. ಹರೆಯದ ಹುಡುಗರ ಪ್ರೇಮ ಗೀಮ ಇತ್ಯಾದಿ ಕತೆಗಳು ನಡೆಯುತ್ತಿರುತ್ತವೆ. ಅಂಥಾ ಹೊತ್ತಲ್ಲಿ ನಾಯಕನಿಗೊಂದು ಹಳೇ ಪ್ರೇಮಕತೆ ಇರುವುದು ಬಯಲಿಗೆ ಬಂದು ಕತೆಗೊಂದು ವೇಗ ದಕ್ಕುತ್ತದೆ. ಆಮೇಲೊಂದು ತಿರುವು, ತ್ಯಾಗ, ವಿಷಾದ ಎಲ್ಲವೂ ಒಂದೊಂದಾಗಿಯೇ ಎದುರಾಗುತ್ತದೆ. ಮಧ್ಯಮ ವರ್ಗದ ಕುಟುಂಬ ವರ್ಗದ ಪ್ರತಿಯೊಬ್ಬರ ಆಸೆ, ಆಕಾಂಕ್ಷೆಗಳ ಮೂಲಕ ಕತೆ ಕಟ್ಟಿದ್ದಾರೆ ನಿರ್ದೇಶಕರು. ಅವರ ನಿರೀಕ್ಷೆ, ಸಂಕಷ್ಟಗಳೇ ಕತೆಯನ್ನು ಮುಂದಕ್ಕೆ ಕರೆದುಕೊಂಡು ಹೋಗುತ್ತವೆ.
ಅಮರ ಪ್ರೇಮಿ ಅರುಣ
ನಿರ್ದೇಶನ: ಪ್ರವೀಣ್ ಕುಮಾರ್ ಜಿ.
ತಾರಾಗಣ: ಹರಿ ಶರ್ವ, ದೀಪಿಕಾ ಆರಾಧ್ಯ, ಧರ್ಮಣ್ಣ, ಬಲರಾಜವಾಡಿ, ಕೃತಿ ಭಟ್, ಮಹೇಶ್ ಬಂಗ್, ಮಂಜಮ್ಮ ಜೋಗತಿ
ರೇಟಿಂಗ್: 3
ಇಲ್ಲಿ ಯಾರೂ ಭಯಂಕರ ವಿಲನ್‌ಗಳಿಲ್ಲ. ಯಾರೂ ಅಂಥಾ ಕೆಟ್ಟವರೂ ಇಲ್ಲ. ಪರಿಸ್ಥಿತಿಯೇ ವಿಲನ್ನು. ಆ ಪರಿಸ್ಥಿತಿಗಳನ್ನು ವಿಷಾದಪೂರ್ಣವಾಗಿ, ಲವಲವಿಕೆಯಿಂದ ಹೇಳಿದ್ದಾರೆ. ನಾಯಕನ ಕತೆಯನ್ನು ನೋಡಿದರೆ ಆಗಾಗ ಅಯ್ಯೋ ಪಾಪ ಅನ್ನಿಸುತ್ತದೆ. ಕಡೆಗೊಂದು ದಿನ ಎಲ್ಲವೂ ಒಳ್ಳೆಯದೇ ಆಗುತ್ತದೆ ಎಂಬಂತೆ ಚಿತ್ರಕತೆ ಇದೆ. ನಮ್ಮ ನಡುವಿನ ಪಾತ್ರಗಳೇ ತೆರೆ ಮೇಲೆ ಕಾಣಿಸುತ್ತಿರುವಂತೆ, ಕತೆ ಹೇಳುವಂತೆ ಭಾಸ ಮಾಡಿಸುವುದು ಈ ಚಿತ್ರದ ವಿಶೇಷತೆ ಮತ್ತು ಹೆಚ್ಚುಗಾರಿಕೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.