
The Tourist Family Movie Review in Kannada: ರೆಫ್ಯೂಜಿಗಳನ್ನು ಯಾವುದೇ ಕಾಯ್ದೆ ಕಾನೂನುಗಳಿಲ್ಲದೆ ಕೇವಲ ಮಾನವೀಯತೆಯ ಆಧಾರದಿಂದ ದೇಶದೊಳಗೆ ಬಿಟ್ಟುಕೊಳ್ಳಬಹುದೇ? ಈ ತರಹದ ಕಥಾವಸ್ತು ಹೊಂದಿರುವ ಚಿತ್ರ ದಿ ಟೂರಿಸ್ಟ್ ಫ್ಯಾಮಿಲಿ.
ಅಭಿಶಾನ್ ಜೀವಿಂತ್ ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ಎಂ ಸಸಿಕುಮಾರ್, ಸಿಮ್ರನ್, ಮಿಥುನ್ ಜೈಶಂಕರ್, ಕಮಲೇಶ್ ಜಗನ್ ಮುಖ್ಯ ಪಾತ್ರದಲ್ಲಿದ್ದಾರೆ.
ಕೋವಿಡ್ ಪ್ಯಾಂಡಮಿಕ್ ಕಾಲಮಾನದಲ್ಲಿ ನಡೆದ ಕಥೆ ಇದು. ಕೋವಿಡ್ ಮತ್ತು ನಾನಾ ಕಾರಣಗಳಿಂದ ಆರ್ಥಿಕ ಕುಸಿತ ಕಂಡ ದೇಶಗಳಲ್ಲಿ ಶ್ರೀಲಂಕಾ ಕೂಡ ಒಂದು. ಇಲ್ಲಿ ಬೆಲೆಗಳು ದುಬಾರಿಯಾಗಿ ಮಧ್ಯಮ ವರ್ಗದ ಜನರಿಗೆ ಜೀವನ ಬಲುಕಷ್ಟವಾಗಿ ಅಲ್ಲಿನ ನಾಗರೀಕರು ಅಲ್ಲಿಂದಿಲ್ಲಿಗೆ ವಲಸೆ ಹೋಗುತ್ತಾರೆ. ಅಂತಹ ಗಂಡ ಹೆಂಡತಿ ಎರಡು ಮಕ್ಕಳಿರುವ ಧರ್ಮದಾಸನ ಸಂಸಾರ ಹಿಂದೂ ಮಾಹಾಸಾಗರದಿಂದ ಸಾಧಾರಣ ಬೋಟ್‌ನಲ್ಲಿ ಜೀವ ಹಿಡಿದು ಪ್ರಯಾಣ ಮಾಡಿ ರಾಮೇಶ್ವರಂ ತಲುಪುತ್ತಾರೆ. ಒಂದು ದೇಶಕ್ಕೆ ಬರುವ ಅಧಿಕೃತ ಪರವಾನಿಗೆ ಅವರ ಬಳಿ ಏನೂ ಇಲ್ಲ. ಆದರೂ ಭಾರತದಲ್ಲಿ ಹೇಗಾದರೂ ಬದುಕು ಕಟ್ಟಿಕೊಳ್ಳಬಹುದು ಎಂಬ ನಂಬಿಕೆ ಅವರಿಗೆ. ಶ್ರೀಲಂಕಾ ಮಾತು ಕೂಡಾ ತಮಿಳೇ ಆದರೂ ಉಚ್ಛಾರಣೆ ವಿಭಿನ್ನ. ಈ ಸಮಸ್ಯೆಯಿಂದ ಸಿಕ್ಕಿಹಾಕಿಕೊಳ್ಳಬಹುದೆಂಬ ಭಯ ಇದ್ದರೂ ಹೇಗೋ ಗಟ್ಟಿ ಮನಸ್ಸು ಮಾಡಿ ಬಂದು ಬಿಡುತ್ತಾರೆ.
ರಾಮೇಶ್ವರಂ ತಲುಪಿದ ಕೂಡಲೆ ಪೊಲೀಸಿನವರಿಗೆ ಸಿ ಕ್ಕಿಕೊಳ್ಳುತ್ತಾರೆ. ಇವರ ಭಾಷೆಯ ಉಚ್ಛಾರಣೆಗೆ ಶಂಕೆ ವ್ಯಕ್ತಪಡಿಸಿದ ಪೊಲೀಸರಿಗೆ ತಾವು ಕೇರಳದವರೆಂದು ಸುಳ್ಳು ಹೇಳುತ್ತಾರೆ. ಕೇರಳದಲ್ಲಿ ನಷ್ಟ ಅನುಭವಿಸಿ ಇದ್ದುದ್ದೆಲ್ಲ ಮಾರಿಕೊಂಡು ಹೊಸ ಜೀವನ ಕಟ್ಟಿಕೊಳ್ಳಲು ಇಲ್ಲಿಗೆ ಬಂದಿದ್ದೇವೆ ಎನ್ನುತ್ತಾರೆ. ಧರ್ಮದಾಸನ ಕೊನೆಯ ಮಗನ ಚುರುಕುತನ, ಧರ್ಮದಾಸನ ಮುಗ್ಧತೆ ಅವನ ಹೆಂಡತಿ ವಾಸಂತಿಯ ಮುಖದಲ್ಲಿರುವ ಅಪ್ಪಟ ಗೃಹಿಣಿಯ ಕಳೆ ನೋಡಿದ ಪೊಲೀಸರಿಗೆ ಇವರು ಮುಗ್ಧರು ಎನಿಸುತ್ತದೆ.
ಪೊಲೀಸ್ ಎಸಿಪಿಯ ಕೈಯಲ್ಲಿದ್ದ ಒಂದು ನಾಯಿಯ ಹಚ್ಚೆ ನೋಡಿದ ಧರ್ಮದಾಸನ ಮಕ್ಕಳು ತಮ್ಮ ಬ್ಯಾಗೇಜಿನಿಂದ ಒಂದು ಜೀವಂತ ನಾಯಿಮರಿಯನ್ನು ತೆಗೆದು ತೋರಿಸಿ ಇದು ನಮ್ಮ ಪ್ರೀತಿಯ ಒಡನಾಡಿ ಎನ್ನುತ್ತಾರೆ. ಆ ನಾಯಿ ಅವರಿಗೆ ರಾಮೇಶ್ವರಂನ ಸಮುದ್ರ ತೀರದಲ್ಲಿ ಸಿಕ್ಕಿರುತ್ತದೆ. ಆ ಎಸಿಪಿಯ ಮಗನ ಹೆಸರೂ ಧರ್ಮದಾಸನ ಚಿಕ್ಕಮಗನ ಹೆಸರೂ ಒಂದೇ ಆಗಿರುತ್ತದೆ. ಹೀಗೆ ಏನೇನೋ ಭಾವುಕತೆಗಳು ಪೊಲೀಸಿನವರನ್ನು ಕಟ್ಟಿ ಹಾಕುತ್ತದೆ. ಸಹಾನುಭೂತಿ ಮತ್ತು ಮಾನವೀಯತೆಯಿಂದ ಧರ್ಮದಾಸನ ಕುಟುಂಬವನ್ನು ಕಳಿಸಿ ಬಿಡುತ್ತಾರೆ.
ವಸಂತಿಯ ಅಣ್ಣ ಪ್ರಕಾಶ್ ರಾಮೇಶ್ವರಂನಲ್ಲೇ ಇರುತ್ತಾನೆ. ಅವನ ಸಹಾಯದಿಂದ ಚೆನ್ನೈ ಗೆ ಬರುವ ಇವರಿಗೆ ಅಲ್ಲಿನ ಕೇಶವ ಕಾಲೋನಿ ಎಂಬ ಬಡಾವಣೆಯಲ್ಲಿ ಒಂದು ಮನೆ ಸಿಗುತ್ತದೆ. ಅದರ ಮಾಲೀಕ ಪೊಲೀಸಿನವನಾದರೂ ಇವರ ಬಗ್ಗೆ ಹೆಚ್ಚು ಏನೂ ಪ್ರಶ್ನಿಸುವುದಿಲ್ಲ. ಇವರ ಮಾತನ್ನು ನಂಬುತ್ತಾನೆ. ಮನೆಗೆ ಬೇಕಾದ ಎಲ್ಲ ಸಾಮಾನು ಸರಂಜಾಮುಗಳು ಇವರು ಭಾರತದ ಪ್ರಜೆಗಳೆಂದು ಬಿಂಬಿಸುವ ನಕಲಿ ಆಧಾರ್ ಕಾರ್ಡುಗಳು, ವೋಟರ್ ಐಡಿ ಎಲ್ಲವನ್ನೂ ಪ್ರಕಾಶ್ ಹೊಂದಿಸಿ ಕೊಡುತ್ತಾನೆ. ಹೀಗೆ ರಾಮೇಶ್ವರಂನಲ್ಲಿ ಧರ್ಮದಾಸನ ಹೊಸ ಜೀವನ ಶುರುವಾಗುತ್ತದೆ. ಧರ್ಮದಾಸನಿಗೆ ಕೆಲಸ ಇಲ್ಲ. ಈಗ ಹೊಸದಾಗಿ ಕೆಲಸ ಹುಡುಕಿಕೊಳ್ಳಬೇಕು. ದೊಡ್ಡಮಗ ನಿತುಸನ್‌ಗೆ ಇಂಜಿನಿಯರಿಂಗ್ ಆಗಿದೆ ಆದರೆ ಕೆಲಸ ಸಿಕ್ಕಿಲ್ಲ. ವಲಸೆ ಬಂದಿರುವುದರಿಂದ ಕೆಲವು ಕಾಲ ಕಳೆಯಬೇಕು. ಚಿಕ್ಕಮಗನನ್ನು ಇಲ್ಲಿಯದೇ ಶಾಲೆಗೆ ಸೇರಿಸುತ್ತಾರೆ.
ಆ ಕಾಲೋನಿಯಲ್ಲೇ ಇರುವ ಒಬ್ಬರಿಗೆ ತಮ್ಮ ಕಾರು ಚಾಲನೆಗೆ ಚಾಲಕ ಬೇಕಾಗಿರುತ್ತದೆ. ಧರ್ಮದಾಸ್ ಅವರನ್ನು ಚಾಲಕನ ಹುದ್ದೆಗೆ ಕೇಳಿ ಕೊಳ್ಳುತ್ತಾನೆ. ಅವರು ಒಂದು ವಾರದ ಪ್ರೊಬೆಷನರಿ ಸಮಯ ಕೊಟ್ಟು ಕೆಲಸ ಕೊಡುತ್ತಾರೆ. ಪ್ರಕಾಶ ತನ್ನ ತಂಗಿ ವಾಸಂತಿಗೆ ಇಲ್ಲಿ ಯಾರ ಬಳಿಯೂ ಹೆಚ್ಚು ಮಾತುಕತೆ ಬೇಡ ಯಾರಿಗಾದರೂ ನೀವು ಶ್ರೀಲಂಕಾದವರು ಎಂದು ಅನುಮಾನ ಬಂದರೆ ಕಷ್ಟವಾಗುತ್ತದೆ ಎಂದು ಎಚ್ಚರಿಸಿ ಹೋಗುತ್ತಾನೆ. ಆದರೆ ವಸಂತಿಯ ನೆರೆಮನೆಯಾಕೆ ಒಬ್ಬ ನಡು ವಯಸ್ಸಿನ ಮಹಿಳೆ ವಸಂತಿಯನ್ನು ನೋಡಿ ತಾನೇ ಸ್ನೇಹ ಬೆಳೆಸಿ ಬರುತ್ತಾಳೆ. ವಸಂತಿಗೂ ಆಕೆ ಇಷ್ಟವಾಗುತ್ತಾರೆ. ಇಬ್ಬರ ಮನೆಗಳಿಂದಲೂ ಖಾದ್ಯಗಳು ವಿನಿಮಯವಾಗುತ್ತದೆ. ಆ ವೃದ್ಧೆ ತನ್ನ ಗಂಡನ ಜೊತೆಗೆ ಇರುತ್ತಾಳೆ. ಮಕ್ಕಳು ಇರುವುದಿಲ್ಲ. ಅವರದು ಆ ಕಾಲಕ್ಕೇ ಪ್ರೇಮ ವಿವಾಹ ಆದ್ದರಿಂದ ಬಂಧುಗಳು ದೂರ ಮಾಡಿರುತ್ತಾರೆ. ಹೀಗಾಗಿ ವಸಂತಿ ಆಕೆಯನ್ನು ಅಮ್ಮ ಎಂದು, ಆತನನ್ನು ಅಪ್ಪ ಎಂದು ಕರೆಯತೊಡಗಿ ಬಹುಬೇಗ ಆಪ್ತಳಾಗಿಬಿಡುತ್ತಾಳೆ.
ಧರ್ಮದಾಸನ ಮಗ ಓದಿದವನಾದರೂ ಇಲ್ಲಿ ಉದ್ಯೋಗವಿಲ್ಲದೆ ಮಾನಸಿಕವಾಗಿ ಕುಗ್ಗಿರುತ್ತಾನೆ. ಪದೇ ಪದೇ ತನ್ನ ತಂದೆಗೆ ನಿನ್ನಿಂದ ನಾನು ಓದಿದ್ದರೂ ಕೆಲಸ ಇಲ್ಲದೆ ನಿರುದ್ಯೋಗಿಯಾದೆ ನನ್ನ ಪ್ರೀತಿಸುತ್ತಿದ್ದ ಹುಡುಗಿಯನ್ನು ತೊರೆದು ಇಲ್ಲಿಗೆ ಬರಬೇಕಾಯಿತು ಎಂದು ಸಿಡುಕುತ್ತಿರುತ್ತಾನೆ. ಎರಡನೇ ಮಗ ಬದಲಾದ ಪರಿಸರಕ್ಕೆ ಹೊಂದಿಕೊಂಡು ಬಿಡುತ್ತಾನೆ ಹಾಗೂ ತನ್ನ ಚುರುಕುತನ ಮುಗ್ಧತೆಯಿಂದ ಅಲ್ಲಿ ಕಾಲೋನಿಯವರಿಗೆಲ್ಲ ಬಹಳ ಪ್ರಿಯನಾಗುತ್ತಾನೆ. ಈ ಎರಡನೇ ಮಗನನ್ನು ನೋಡಿದಾಗ ನಿಮಗೆ ಬಾಲ ಪುನೀತ್ ರಾಜ್ ಕುಮಾರ್ ನೆನಪಾದರೆ ಅಚ್ಚರಿಯಿಲ್ಲ. ವಸಂತಿ ಗಂಡ ದೊಡ್ಡ ಮಗನ ಹಣಾಹಣಿಯನ್ನು ಸಂಭಾಳಿಸುತ್ತಾ ಅಕ್ಕಪಕ್ಕದವರೊಡನೆ ಸ್ನೇಹದಿಂದ ಸಹನೆಯಿಂದ ಬದುಕು ಮುಂದುವರೆಸುತ್ತಾಳೆ.
ಇನ್ನೇನು ಇವರೆಲ್ಲ ಬದಲಾದ ಪರಿಸರ ಹಾಗೂ ಬದುಕಿಗೆ ಹೊಂದಕೊಂಡರು ಎಂದು ಪ್ರೇಕ್ಷಕ ನಿಟ್ಟಿಸಿರು ಬಿಡುವ ವೇಳೆಗೆ ಒಂದು ರೋಚಕ ತಿರುವು ಕಾಣುತ್ತದೆ.
ಹಠಾತ್ತಾಗಿ ನಗರದಲ್ಲಿ ಒಂದು ಕಡೆ ಬಾಂಬ್ ಬ್ಲಾಸ್ಟ್ ಆಗಿ ಹಲವರು ಗಾಯಗೊಳ್ಳುತ್ತಾರೆ. ಅಲ್ಲಿನ ಸಿಸಿಟಿವಿ ಪರಿಶೀಲಿಸಿದಾಗ ಧರ್ಮದಾಸನು ಅದೇ ಏರಿಯಾದ ಒಂದು ಸಾರ್ವಜನಿಕ ಕಸದ ಬುಟ್ಟಿಗೆ ಕಸ ಹಾಕುವುದು ಕಾಣುತ್ತದೆ. ಇದನ್ನು ಕಡಲ ತೀರದಲ್ಲಿ ಇವರನ್ನು ನೋಡಿದ್ದ ಪೊಲೀಸ್ ಎಸಿಪಿ ಭೈರವನ್ ಹಾಗೂ ಅವನ ಸಿಬ್ಬಂದಿಗೆ ಧರ್ಮದಾಸನ ಗುರುತು ಸಿಗುತ್ತದೆ. ತನ್ನ ಸಹೋದ್ಯೋಗಿಗಳು ಧರ್ಮದಾಸನ ವಿಷಯವನ್ನು ತಮ್ಮ ಮೇಲಾಧಿಕಾರಿಗೆ ತಿಳಿಸು ಎಂದು ಹೇಳಿದರೂ ಭೈರವನ್ ನಿರ್ಲಕ್ಷಿಸುತ್ತಾನೆ. ಏಕೆಂದರೆ ಅವರ ಮೇಲಾಧಿಕಾರಿ ಬಲವನ್ ಕೊಂಚವೂ ಮಾನವೀಯತೆಯೇ ಇಲ್ಲದ ಕ್ರೂರಿ. ಆ ಮೇಲಾಧಿಕಾರಿಯ ಕೈಗೆ ಸಿಕ್ಕು ಒಬ್ಬ ಶಂಕಿತ ಅಪರಾಧಿ ಹೊಡೆತಗಳಿಂದ ಆಸ್ಪತ್ರೆ ಸೇರಿರುತ್ತಾನೆ. ಹೀಗಾಗಿ ಭಯದಿಂದ ಭೈರವನ್ ಧರ್ಮದಾಸನ ವಿಷಯವನ್ನು ತನ್ನ ಮೇಲಾಧಿಕಾರಿಯಿಂದ ಮುಚ್ಚಿಡುತ್ತಾನೆ. ದುರದೃಷ್ಟವಶಾತ್ ಆ ಬಾಂಬ್ ಬ್ಲಾಸ್ಟ್ ಪ್ರಕರಣ ವಿಚಾರಣೆ ಈ ಮೇಲಾಧಿಕಾರಿಗೇ ಬರುತ್ತದೆ. ಅವನು ಭೈರವನ್ ಹಾಗೂ ಸಿಬ್ಬಂದಿಗೆ ಆ ಬಾಂಬ್ ಸ್ಫೋಟಗೊಂಡ ಜಾಗದ ಸಿಸಿಟಿವಿ ದೃಶ್ಯಗಳನು ತರಲು ಹೇಳುತ್ತಾನೆ. ಈ ಮಧ್ಯೆ ಒಬ್ಬ ಯುವಕ ಬೈರವನ್ ಕೆಲಸ ಮಾಡುವ ಠಾಣೆಗೆ ಬಂದು ತನ್ನ ನಾಯಿ ಕಳೆದು ಹೋಗಿದೆ ಹುಡುಕಿ ಕೊಡಿ ಎಂದು ದೂರು ಕೊಡುತ್ತಾನೆ. ಆ ನಾಯಿಯ ಫೋಟೋ ನೋಡಿದಾಗ ಭೈರವನ್ ಬೆಚ್ಚಿ ಬೀಳುತ್ತಾನೆ. ಧರ್ಮದಾಸನನ ಮಗನ ಕೈಯಲ್ಲಿ ಅಂದು ಇದ್ದ ನಾಯಿಯೇ ಅದು. ಈಗ ಭೈರವನ್ ಗೆ ಭಯ ಶುರುವಾಗುತ್ತದೆ. ತಾನು ಯಾರೋ ಭಯೋತ್ಪಾದಕರನ್ನು ಯಾವುದೇ ಪರವಾನಗಿ ನೋಡದೆ ದೇಶದೊಳಗೆ ಬಿಟ್ಟಿದ್ದೇನೆ ಎಂದು ಕಳವಳಿಸುತ್ತಾನೆ. ತನ್ನ ಸಹೋದ್ಯೋಗಿಗಳ ಬಳಿಯೂ ಅಲವತ್ತುಕೊಳ್ಳುತ್ತಾನೆ. ಆದರೂ ಅವನಿಗೆ ಒಂದು ನಂಬಿಕೆ ಇರುತ್ತದೆ, ಧರ್ಮದಾಸನ ಸಂಸಾರ ಭಯೋತ್ಪಾದಕರಲ್ಲ, ಮುಗ್ಧರು ಎಂದು. ಏನೇ ಆಗಲಿ ಇದನ್ನು ತನ್ನ ಮೇಲಾಧಿಕಾರಿಗೆ ತಿಳಿಸಲೇ ಬೇಕು ಎಂದು ಎಲ್ಲರೂ ನಿರ್ಧರಿಸಿ ಮೇಲಾಧಿಕಾರಿ ಬಲವನ್‌ಗೆ ಹೇಳಿಬಿಡುತ್ತಾರೆ. ಬಲವನ್‌ಗೆ ಈ ಬಾಂಬ್ ಬ್ಲಾಸ್ಟ್ ಪ್ರಕರಣ ಪ್ರತಿಷ್ಠೆಯಾಗಿ ತೆಗೆದುಕೊಂಡಿರುತ್ತಾನೆ. ಹಾಗಾಗಿ ಭೈರವನ್ ಮತ್ತು ಸಿಬ್ಬಂದಿಗೆ ಬೈದರೂ ಧರ್ಮದಾಸ್ ಸಂಸಾರ ಎಲ್ಲಿದೆ ಎಂದು ಹುಡುಕಲು ಕಠಿಣವಾಗಿ ಆದೇಶಿಸುತ್ತಾನೆ. ಈ ಬಲವನ್ ಬಹಳ ಕ್ರೂರಿ, ಒಂದು ಕೇಸಿನ ಸಂಬಂಧ ಒಬ್ಬ ಆರೋಪಿಯನ್ನು ಹಿಗ್ಗಾಮಗ್ಗಾ ಹೊಡೆದು ಆ ಆರೋಪಿ ಸಾಯುವ ಸ್ಥಿತಿ ತಲುಪಿ ಆಸ್ಪತ್ರೆಯಲ್ಲಿ ಇರುತ್ತಾನೆ. ಅವನೊಂದು ವೇಳೆ ಸತ್ತರೆ ಬಲವನ್ ಸಸ್ಪೆಂಡ್ ಆಗುವುದಲ್ಲದೆ ಜೈಲು ಪಾಲೂ ಆಗಬೇಕಾಗುತ್ತದೆ. ಈ ಬಾಂಬ್ ಬ್ಲಾಸ್ಟ್ ಪ್ರಕರಣ ಶೋಧಿಸಿದರೆ ತನ್ನ ಶಿಕ್ಷೆಯ ಪ್ರಮಾಣ ಕಡಿಮೆ ಆಗಬಹುದು ಎಂಬ ಆಲೋಚನೆ ಅವನದ್ದು.
ದಾಸ್ ಮನೆಯ ಮಾಲೀಕ ರಾಘವನ್‌ಗೆ ಕುರಲ್ ಎಂಬ ಒಬ್ಬ ಮಗಳಿರುತ್ತಾಳೆ. ಇವಳೂ ಮತ್ತು ದಾಸ್ ಮಗ ನಿತುಸನ್ ಒಂದೆ ವಯಸ್ಸಿನವರಾಗಿ ಬಹಳ ಬೇಗ ಆಪ್ತರಾಗುತ್ತಾರೆ. ಇದರ ವಿವರ ಸಿನಿಮಾದಲ್ಲೇ ನೋಡಿ. ನಿತು ಕುರಲ್ ಬಳಿ ತನ್ನ ಫ್ಯಾಮಿಲಿಯ ಕತೆಯೆಲ್ಲ ಹೇಳಿ ಬಿಡುತ್ತಾನೆ. ತಾವು ಶ್ರೀಲಂಕಾದಿಂದ ವಲಸೆ ಬಂದವರು ಎಂದೂ ಹೇಳಿರುತ್ತಾನೆ. ಶ್ರೀಲಂಕಾದಲ್ಲಿ ತನ್ನ ಪ್ರೇಮ ವಿಫಲವಾಗಿ ಆ ಹುಡುಗಿ ಬೇರೆ ಮದುವೆಯಾದ ಬಗ್ಗೆಯೂ ಹೇಳಿಕೊಳ್ಳುತ್ತಾನೆ. ಕುರಲ್ ಕೂಡ ತನ್ನ ಮೊದಲ ಪ್ರೇಮದಲ್ಲಿ ಪೆಟ್ಟು ತಿಂದಿರುತ್ತಾಳೆ. ಹೀಗಾಗಿ ಇವರಿಬ್ಬರೂ ಬಹಳ ಬೇಗ ಹತ್ತಿರವಾಗುತ್ತಾರೆ.
ಒಂದು ದಿನ ವಸಂತಿಗೆ ಆಪ್ತವಾಗಿದ್ದ ಆ ವೃದ್ಧ ಮಹಿಳೆ ಕೊನೆಯುಸಿರೆಳೆಯುತ್ತಾಳೆ. ಆಗ ಧರ್ಮದಾಸ್ ಹಾಗೂ ವಸಂತಿ ತೋರಿಸಿದ ಮಾನವೀಯತೆ ಮತ್ತು ಸಹಾಯದಿಂದ ಕಾಲೋನಿಯವರೆಲ್ಲ ಇವರಿಗೆ ಆತ್ಮೀಯರಾಗಿ ಬಿಡುತ್ತಾರೆ. ಆಗ ಒಂದು ಸಂದರ್ಭದಲ್ಲಿ ಧರ್ಮದಾಸ ತಾವು ಶ್ರೀಲಂಕಾದಿಂದ ವಲಸೆ ಬಂದವರು, ತಮಗೆ ಭಾರತದ ಯಾವುದೇ ಪರವಾನಗಿ ದಾಖಲೆಯಿಲ್ಲ ಹೊಟ್ಟೆ ಪಾಡಿಗಾಗಿ ಇಲ್ಲಿ ಬಂದೆವು ಎಂದು ನಿಜವನ್ನು ತಿಳಿಸಿ ಬಿಡುತ್ತಾರೆ. ಆರು ತಿಂಗಳಿಂದ ದಾಸನ ಸಂಸಾರದ ನಡವಳಿಕೆಯನ್ನು ನೋಡಿರುವ ನೆರೆಯವರು ದಾಸನ ಸಂಸಾರವನ್ನು ಶಂಕಿಸುವುದಿಲ್ಲ. ಬದಲಾಗಿ ಅವರೂ ತಮ್ಮಲ್ಲಿ ಒಬ್ಬರು ಎಂದು ತಿಳಿದು ಆದರಿಸುತ್ತಾರೆ ಹಾಗೂ ಅವರು ರೆಫ್ಯೂಜಿಗಳೆಂದು ಎಲ್ಲಿಯೂ ಬಾಯಿ ಬಿಡುವುದಿಲ್ಲ.
ಪೊಲೀಸ್ ತನಿಖೆಯಲ್ಲಿ ದಾಸ್ ಮನೆ ಪತ್ತೆ:
ಭೈರವನ್ ರಾಮೇಶ್ವರದಿಂದ ದಾಸ್ ಸಂಸಾರವನ್ನು ಕರೆತಂದ ಟ್ಯಾಕ್ಸಿಯವನನ್ನು ಶೋಧಿಸಿ ಅವನಿಂದ ದರ್ಮದಾಸ್ ಮನೆಯನ್ನು ಕಂಡು ಕೊಳ್ಳುತ್ತಾನೆ. ಒಂದು ದಿನ ಇದ್ದಕ್ಕಿದ್ದಂತೆ ಕೇಶವ ಕಾಲೊನಿಯಲ್ಲಿ ಪೊಲೀಸ್ ವ್ಯಾನುಗಳ ದಂಡೇ ಬಂದು ಬಿಡುತ್ತದೆ. ಕಾಲೋನಿ ಸುತ್ತುವರಿಯುತ್ತದೆ. ಪೊಲೀಸ್ ಅಧಿಕಾರಿ ಬಲವನ್ ಮೈಕ್ ಹಿಡಿದು ಕಾಲೋನಿಯವರಿಗೆ 'ನಿಮ್ಮ ಕಾಲೋನಿಯಲ್ಲಿ ಯಾರಾದರೂ ರೆಫ್ಯೂಜಿಗಳು ಇದ್ದರೆ ಅವರೇ ಬಂದು ಶರಣಾಗತರಾಗಿ. ಇಲ್ಲವಾದರೆ ನಾವು ಒಬ್ಬೊಬ್ಬರ ಮನೆಯನ್ನೂ ಶೋಧಿಸಬೇಕಾಗುತ್ತದೆ. ಇದರ ಪರಿಣಾಮ ನೆಟ್ಟಗಿರುವುದಿಲ್ಲ,' ಎಂದು ಎಚ್ಚರಿಸುತ್ತಾನೆ. ಯಾರೂ ಮುಂದೆ ಬರುವುದಿಲ್ಲ ಆದರೆ ಇದನ್ನು ಕೇಳಿಸಿಕೊಂಡ ದಾಸನ ಮನೆಯವರಿಗೆ ಭಯ ಶುರುವಾಗುತ್ತದೆ.
ಎಷ್ಟು ಹೊತ್ತಾದರೂ ಯಾರೂ ಬರದಾದಾಗ ಬಲವನ್ ತನ್ನ ಸಿಬ್ಬಂದಿಯೊಡನೆ ಮನೆಮನೆಗೂ ಶೋಧನೆ ಪ್ರಾರಂಭಿಸುತ್ತಾನೆ. ಕಾಲೋನಿಯ ಪ್ರತಿ ಮನೆಯನ್ನೂ ಚೆಕ್ ಮಾಡುತ್ತಾನೆ. ಅವರ ಭಾಷೆ ಸೇರಿ ಪ್ರತಿಯೊಂದನ್ನೂ ಚೆಕ್ ಮಾಡುತ್ತಾನೆ. ಭೈರವನ್ ಜತೆಗೇ ಇರುತ್ತಾನೆ. ಭೈರವನ್ ಅವರನ್ನು ನೋಡಿರುವುದರಿಂದ ಅವನನ್ನೇ ಕೇಳುತ್ತಾನೆ ಇವರಾ ಅಂತ. ಯಾರನ್ನು ತೋರಿಸಿದರೂ ಬೈರವನ್ ಇವರಲ್ಲ ಎನ್ನುತ್ತಾನೆ. 'ಅಯ್ಯೋ ಧರ್ಮದಾಸ್ ಫ್ಯಾಮಿಲಿ ಸಿಕ್ಕಿಕೊಳ್ಳುತ್ತಾರಲ್ಲ ಉಗ್ರ ವಿಚಾರಣೆ ಎದುರಿಸಬೇಕಾಗುತ್ತದೆ ಏನಪ್ಪಾ ಗತಿ' ಎನಿಸುತ್ತದೆ. ನೋಡುವ ನಮಗೇ ಎದೆ ಡವಡವಡ!
ಕೊನೆಗೆ ಬಲವನ್ ಭೈರವನ್ ಜೊತೆ ಧರ್ಮದಾಸನ ಮನೆಗೂ ಬರುತ್ತಾನೆ. ಭೈರವನನ್ನು ನೋಡುತ್ತಲೇ ಧರ್ಮದಾಸ್ ಮತ್ತು ಮನೆಯವರಿಗೆ ನಡುಕ ಶುರುವಾಗುತ್ತದೆ. ಇವನೇ ಆದಿನ ನಮ್ಮನ್ನು ನೋಡಿದ್ದಾನೆ ಈಗ ಗುರುತು ಹಿಡಿದು ಬಿಡುತ್ತಾನೆ. ಜೀವನ ಅರಸಿ ಬಂದವರಿಗೆ ಇಲ್ಲಿನ ಜೈಲಿನಲ್ಲಿ ಕೊಳೆಯುವಂತಾಗುತ್ತದಲ್ಲ, ಎಂದು ದಾಸನ ಮನೆಯವರು ಬೆವೆತು ಹೋಗುತ್ತಾರೆ. ಬಲವನ್ ದಾಸ್ ಮನೆಯವರ ಎಲ್ಲಾ ದಾಖಲೆ ಪರಿಶೀಲಿಸುತ್ತಾನೆ. ಎಲ್ಲವೂ ಸರಿಯಿದೆ. ಅವರ ಮಾತಾಡುವ ಭಾಷೆಯನ್ನು ಗಮನಿಸುತ್ತಾನೆ. ನೀವೇಕೆ ಉಚ್ಚಾರಣೆ ಹಾಗೆ ಮಾಡುತ್ತೀರಿ ಎಂದು ಕೇಳುತ್ತಾನೆ. ಇವರೇನಾ ನೋಡು ಎಂದು ಭೈರವನ್‌ಗೆ ಗದರಿಸಿ ಹೇಳುತ್ತಾನೆ. ಅಷ್ಟರಲ್ಲಿ ಬಲವನ್ ಕೈಯಲ್ಲಿ ಮಾರಣಾಂತಿಕವಾಗಿ ಏಟು ತಿಂದಿದ್ದ ಆರೋಪಿ ಸತ್ತು ಹೋಗಿದ್ದಾನೆ ಎಂಬ ಫೋನ್ ಬರುತ್ತದೆ. ಭೈರವನ್ ಸಹ ಆ ಇವರು ರೆಫ್ಯೂಜಿಗಳಲ್ಲ ಎಂದು ಬಿಡುತ್ತಾನೆ.
ದಾಸ್ ಲಂಕಾದವರೆಂದು ಗೊತ್ತಾಗುತ್ತಾ?
ಕತೆ ಇಷ್ಟಕ್ಕೆ ನಿಲ್ಲಿಸುತ್ತೇನೆ. ಈಗ ಧರ್ಮದಾಸ್ ಮನೆಯವರು ಶ್ರೀಲಂಕಾದವರು ಎಂದು ಗೊತ್ತಾಗುತ್ತಾ? ಗೊತ್ತಾಗಿಯೂ ಭೈರವನ್ ಹೇಳಲಿಲ್ಲವಾ? ಅವನು ಹೇಳದಿರಲೇನು ಕಾರಣ? ಭೈರವನ್ ಧರ್ಮದಾಸನ ಸಂಸಾರ ಗುರುತಿಸುವುದರಲ್ಲಿ ಸೋತನಾ? ಅಥವಾ ಬೇರೇನಾದರೂ ಕಾರಣಗಳಿದೆಯಾ? ಬಲವನ್‌ನ ಮುಂದಿನ ಹೆಜ್ಜೆ ಏನು? ಪ್ರತಿ ಮನೆಗೂ ಹೋಗಿ ಚೆಕ್ ಮಾಡಿದರೂ ಧರ್ಮದಾಸನ ಫ್ಯಾಮಿಲಿ ರೆಫ್ಯೂಜಿಗಳೆಂದು ಪೊಲೀಸಿನವರಿಗೆ ಗೊತ್ತಾಗಲಿಲ್ಲ ಯಾಕೆ? ಈ ಎಲ್ಲಾ ಪ್ರಶ್ನೆಗಳಿಗೆ ಜಿಯೋ ಹಾಟ್ ಸ್ಟಾರ್ ನಲ್ಲಿರುವ ದಿ ಟೂರಿಸ್ಟ್ ಫ್ಯಾಮಿಲಿ ನೋಡಿ.
ಮಾನವೀಯತೆ ದೃಷ್ಟಿಯಿಂದ ಇವೆಲ್ಲವೂ ಸರಿ. ಅವರು ಪೊಲೀಸಿನವರಿಗೆ ಸಿಗಬಾರದು ಅವರ ಪಾಡಿಗೆ ಅವರು ಬದುಕುತ್ತಿದ್ದಾರೆ, ಅವರೇನು ಕೊಲೆಗೆಡುಕರಲ್ಲ. ಕಳ್ಳರಲ್ಲ ನಮ್ಮ ಹಾಗೇ ಸಾಮಾನ್ಯರೆಂದೂ ನಮಗೂ ಅನಿಸುತ್ತದೆ. ಆದರೆ ಎಲ್ಲ ರೆಫ್ಯೂಜಿಗಳು ಭಯೋತ್ಪಾದಕರಲ್ಲ. ಆದರೆ ಎಲ್ಲಾ ರೆಫ್ಯೂಜಿಗಳು ಇದೇ ರೀತಿ ಇರುವುದಿಲ್ಲ. ಆದರೂ ರೆಫ್ಯೂಜಿಗಳನ್ನು ಹೀಗೆ ಕುರುಡಾಗಿ ನಮ್ಮ ದೇಶದೊಳಗೆ ಯಾವ ಪರವಾನಿಗೆ ಇಲ್ಲದೆ ಹೇಗೆ ಬಿಟ್ಟುಕೊಳ್ಳುವುದು? ಹಾಗೆ ಬಿಟ್ಟುಕೊಂಡರೆ ಏನೇನು ಸಮಸ್ಯೆಗಳಾಗುತ್ತದೆ ಎಂಬ ಯೋಚನೆ ಬಂದಾಗ ಚಿಂತಿಸುವಂತೆ ಆಗುತ್ತದೆ. ಸಿನಿಮಾ ಮಟ್ಟಿಗೆ ಇವೆಲ್ಲ ಸರಿ ಅಷ್ಟೇ ನಿಜಜೀವನಕ್ಕೆ ಇದು ಸುರಕ್ಷಿತ ಅಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.