
“ಏನ್ ಸಿನಿಮಾ ಗುರು..! ಸಿನಿಮಾ ಮುಗಿದರೂ ಮೈಂಡ್‌ನಿಂದ ಹೋಗ್ತಾನೇ ಇಲ್ಲ!” - ಇತ್ತೀಚೆಗೆ ಈ ಹಾರರ್ ಥ್ರಿಲ್ಲರ್ ನೋಡಿದ ಪ್ರೇಕ್ಷಕರ ಪ್ರತಿಕ್ರಿಯೆ ಹೀಗಿದೆ. ಥಿಯೇಟರ್‌ನಲ್ಲಿ ಸದ್ದು ಮಾಡಿದ್ದ ಸಿನಿಮಾ, ಬಳಿಕ OTTಯಲ್ಲೂ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ವಿಶೇಷವಾಗಿ ಹಾರರ್, ಮಿಸ್ಟರಿ ಮತ್ತು ಫ್ಯಾಂಟಸಿ ಕಥೆಗಳನ್ನು ಇಷ್ಟಪಡುವವರಿಗೆ ಈ ಸಿನಿಮಾ ಸಖತ್ ಇಂಟರೆಸ್ಟಿಂಗ್ ಆಗಿದೆ.
OTTಯಲ್ಲಿ ಮತ್ತೆ ಸದ್ದು ಮಾಡ್ತಿದೆ ಈ ಸಿನಿಮಾ!
ಇತ್ತೀಚಿನ ದಿನಗಳಲ್ಲಿ OTT ಪ್ರೇಕ್ಷಕರಿಗೆ ಸಿನಿಮಾಗಳಿಗೇನೂ ಕೊರತೆಯಿಲ್ಲ. ಪ್ರತಿವಾರ ಹೊಸ ಹೊಸ ಚಿತ್ರಗಳು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆಯಾಗುತ್ತಲೇ ಇವೆ. ಅದರಲ್ಲೂ ಹಾರರ್, ಕ್ರೈಂ ಥ್ರಿಲ್ಲರ್ ಮತ್ತು ಸಸ್ಪೆನ್ಸ್ ಸಿನಿಮಾಗಳಿಗೆ ಪ್ರೇಕ್ಷಕರಿಂದ ವಿಶೇಷ ಕ್ರೇಜ್ ಇದೆ. ಇದೀಗ ಅಂತಹದ್ದೇ ಒಂದು ಸಿನಿಮಾ OTTಯಲ್ಲಿ ಪ್ರೇಕ್ಷಕರನ್ನು ಸೀಟ್‌ನ ತುದಿಯಲ್ಲಿ ಕೂರಿಸುವಲ್ಲಿ ಯಶಸ್ವಿಯಾಗಿದೆ. ಅದುವೇ ಆದಿ ಸಾಯಿಕುಮಾರ್ ನಟನೆಯ ‘ಶಂಭಾಲ’.
ಆದಿ ಸಾಯಿಕುಮಾರ್ ವೃತ್ತಿಜೀವನದ ಸ್ಪೆಷಲ್ ಸಿನಿಮಾ!
‘ಶಂಭಾಲ’ ಒಂದು ಹಾರರ್ ಫ್ಯಾಂಟಸಿ ಮಿಸ್ಟಿಕಲ್ ಥ್ರಿಲ್ಲರ್. ಯುಗಂಧರ್ ಮುನಿ ನಿರ್ದೇಶನದ ಈ ಚಿತ್ರದಲ್ಲಿ ಆದಿ ಸಾಯಿಕುಮಾರ್ ನಾಯಕನಾಗಿ ಕಾಣಿಸಿಕೊಂಡಿದ್ದು, ಅರ್ಚನಾ ಅಯ್ಯರ್ ನಾಯಕಿಯಾಗಿ ನಟಿಸಿದ್ದಾರೆ. ಸ್ವಸಿಕಾ, ಮಧುನಂದನ್, ರವಿವರ್ಮ, ರಾಮರಾಜು, ಹರ್ಷವರ್ಧನ್, ಅನ್ನಪೂರ್ಣ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಕಥೆ, ವಾತಾವರಣ ಮತ್ತು ನಿಗೂಢ ಘಟನೆಗಳು ಪ್ರೇಕ್ಷಕರ ಕುತೂಹಲವನ್ನು ಆರಂಭದಿಂದ ಕೊನೆಯವರೆಗೂ ಹಿಡಿದಿಟ್ಟುಕೊಳ್ಳುತ್ತವೆ.
ಆ ಊರಿಗೆ ಆಕಾಶದಿಂದ ಬಿದ್ದಿದ್ದೇನು?
ಕಥೆ ಸಾಗುವುದು 1980ರ ದಶಕದ ಹಿನ್ನೆಲೆಯಲ್ಲಿರುವ ಶಂಭಾಲ ಎಂಬ ಊರಿನಲ್ಲಿ. ಒಂದು ದಿನ ಆಕಾಶದಿಂದ ನಿಗೂಢವಾದ ಉಲ್ಕೆಯೊಂದು ಊರಿನ ಮೇಲೆ ಬಂದು ಬೀಳುತ್ತದೆ. ಅದಾದ ಬಳಿಕ ಗ್ರಾಮದಲ್ಲಿ ಒಂದರ ಹಿಂದೆ ಒಂದರಂತೆ ವಿಚಿತ್ರ ಘಟನೆಗಳು ನಡೆಯಲು ಆರಂಭಿಸುತ್ತವೆ. ಜನರಲ್ಲಿ ಭಯ ಶುರುವಾಗುತ್ತದೆ. ಆಕಾಶದಿಂದ ಬಿದ್ದಿರುವ ವಸ್ತುವೇ ತಮ್ಮ ಊರಿಗೆ ದುರಂತ ತಂದಿದೆ ಎಂದು ನಂಬುವ ಗ್ರಾಮಸ್ಥರು, ಅದನ್ನು ಅಶುಭದ ಸೂಚನೆ ಎಂದು ಭಾವಿಸುತ್ತಾರೆ. ಇದರ ನಡುವೆ ಊರಿನಲ್ಲಿ ಸಾವುಗಳ ಸರಣಿಯೂ ಆರಂಭವಾಗುತ್ತದೆ.
ಅಸಲಿಗೆ ಆ ಊರಲ್ಲಿ ನಡೆಯುತ್ತಿರುವುದೇನು?
ಈ ನಿಗೂಢ ಘಟನೆಗಳ ಹಿಂದಿರುವ ಸತ್ಯವನ್ನು ತಿಳಿದುಕೊಳ್ಳಲು ಒಬ್ಬ ವಿಜ್ಞಾನಿ ಊರಿಗೆ ಬರುತ್ತಾನೆ. ಆ ಪಾತ್ರದಲ್ಲಿ ಆದಿ ಸಾಯಿಕುಮಾರ್ ಕಾಣಿಸಿಕೊಂಡಿದ್ದಾರೆ. ತನಿಖೆ ಮುಂದುವರಿದಂತೆ ಅವನ ಮುಂದೆ ಒಂದೊಂದೇ ರಹಸ್ಯ ಬಯಲಾಗುತ್ತಾ ಹೋಗುತ್ತದೆ. ಈ ಸಂದರ್ಭದಲ್ಲಿ ದೇವಿ ಎಂಬ ಪಾತ್ರದಲ್ಲಿ ಅರ್ಚನಾ ಅಯ್ಯರ್ ವಿಜ್ಞಾನಿಗೆ ಹೇಗೆ ನೆರವಾಗುತ್ತಾರೆ? ಆಕಾಶದಿಂದ ಬಿದ್ದ ವಸ್ತುವಿಗೂ ಊರಿನಲ್ಲಿ ನಡೆಯುತ್ತಿರುವ ವಿಚಿತ್ರ ಘಟನೆಗಳಿಗೂ ಏನು ಸಂಬಂಧ? ಅಸಲಿಗೆ ಶಂಭಾಲ ಗ್ರಾಮದಲ್ಲಿ ನಡೆದಿದ್ದೇನು? ಎಂಬ ಪ್ರಶ್ನೆಗಳಿಗೆ ಸಿನಿಮಾ ಉತ್ತರ ನೀಡುತ್ತದೆ.
ಸಾಮಾನ್ಯ ಹಾರರ್ ಸಿನಿಮಾಗಳಂತೆ ಕೇವಲ ಹೆದರಿಸುವ ದೃಶ್ಯಗಳಿಗೆ ಸೀಮಿತವಾಗದೆ, ಮಿಸ್ಟರಿ, ಫ್ಯಾಂಟಸಿ ಮತ್ತು ಥ್ರಿಲ್ಲರ್ ಅಂಶಗಳನ್ನು ಕಥೆಯೊಂದಿಗೆ ಬೆರೆಸಿರುವುದು ‘ಶಂಭಾಲ’ದ ವಿಶೇಷತೆ. ಸಿನಿಮಾ ನೋಡುತ್ತಿರುವಂತೆ ಮುಂದೇನು ಎಂಬ ಕುತೂಹಲ ಹೆಚ್ಚುತ್ತಲೇ ಹೋಗುತ್ತದೆ. ಸದ್ಯ ಈ ಸಿನಿಮಾ OTTಯಲ್ಲಿ ಮತ್ತೆ ಟ್ರೆಂಡಿಂಗ್‌ನಲ್ಲಿದ್ದು, ಹಾರರ್ ಮತ್ತು ಮಿಸ್ಟರಿ ಸಿನಿಮಾಗಳನ್ನು ಇಷ್ಟಪಡುವ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಧೈರ್ಯ ಇದ್ದರೆ ರಾತ್ರಿ ಒಮ್ಮೆ ‘ಶಂಭಾಲ’ ನೋಡಿ... ಸಿನಿಮಾ ಮುಗಿದ ಮೇಲೂ ಅದರ ಕಥೆ ನಿಮ್ಮ ತಲೆಯಿಂದ ಇಳಿಯದೇ ಇರಬಹುದು!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.