ಹೀರಾಮಂಡಿ ವೆಬ್ ಸೀರಿಸ್: ವೇಶ್ಯೆಯರೂ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಜೀವ ತೆತ್ತಿದ್ದು ಸುಳ್ಳಲ್ಲ!

By Suvarna NewsFirst Published May 13, 2024, 5:36 PM IST
Highlights

ಸಂಜಯ್ ಲೀಲಾ ಬನ್ಸಾಲಿಯ ಬಹು ನಿರೀಕ್ಷಿತ ಹೀರಾಮಂಡಿ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಪರ ವಿರೋಧ ಚರ್ಚೆಗಳು ನಡೆಯುತ್ತಲೇ ಇವೆ. ಇಲ್ಲಿ ಯಾಕೆ ಈ ವೆಬ್ ಸೀರೀಸ್ ನೋಡಬೇಕೆನ್ನುವುದು ಇಲ್ಲಿದೆ. 

ವೀಣಾ ರಾವ್, ಕನ್ನಡಪ್ರಭ

ವೆಬ್ ಸೀರಿಸ್: ಹೀರಾಮಂಡಿ
ಒಟಿಟಿ: Netflix
ತಾರಾಗಣ: ಮನೀಷಾ ಕೋಯಿರಾಲ, ಸೋನಾಕ್ಷಿ ಸಿನ್ಹ, ಅದಿತಿ ಹೈದರ್, ರಿಚಾಚಡ್ಡಾ, ಶರ್ಮಿನ್ ಸೆಗಲ್, ಫರೀದಾ ಜಲಾಲ್, ಶೇಖರ್ ಸುಮನ್ ಇತರರು.‌
ಎಪಿಸೋಡ್: 8

ಸಂಜಯ್ ಲೀಲಾ ಬನ್ಸಾಲಿ ಅಂದರೆ ಏನೋ ನಿರೀಕ್ಷೆ. ವೈಭವದ ಸೆಟ್ಸ್, ರಾಜಮನೆತನದ ಆಭರಣಗಳು, ದುಬಾರಿ ದಿರುಸು, ಖಡಕ್ ಡೈಲಾಗ್ಸ್ ಆ ಮಟ್ಟಕ್ಕೆ ಬನ್ಸಾಲಿ ಹೀರಾಮಂಡಿಯಲ್ಲಿ ನಿರಾಶೆ ಮಾಡಿಲ್ಲ.‌ ಎಂಟು ಎಪಿಸೋಡಿನ ವೈಭವದ ಹೀರಾಮಂಡಿ ನಮ್ಮಲ್ಲಿ ವಿವಿಧ ಭಾವನೆಗಳನ್ನು ಮೂಡಿಸುತ್ತದೆ. ಹೀರಾಮಂಡಿಯ ವಿಭಿನ್ನ ಅಭಿಪ್ರಾಯಗಳನ್ನು ಓದಿದ್ದೆ.‌ ಅದನ್ನು ಓದಿದ ನಾನು ಕೊಂಚ ಕುತೂಹಲದ ಭಾವನೆಯಲ್ಲೇ ಎರಡು ಎಪಿಸೋಡ್ ನೋಡಿದೆ.‌ ಕತೆ ಒಮ್ಮೆ ಮನಸ್ಸಿಗೆ ಹಿಡಿದರೆ ಆಯ್ತು ಅದರ ಪಾಡಿಗೆ ಅದು ನೋಡಿಸಿಕೊಂಡು ಹೋಗುತ್ತದೆ. ಹೀರಾಮಂಡಿ ಬರೀ ಹೀರಾಮಂಡಿಯ ವೈಶ್ಯೆಯರ ಕತೆ ಅಲ್ಲ. ಅವರ ಮೈಮಾರಿಕೊಂಡ ಹಣಕ್ಕಾಗಿ ಹಪಹಪಿಸುವ ಕತೆಯಲ್ಲ. ಅದರಲ್ಲಿ ಒಂದು ನವಿರಾದ ಪ್ರೇಮಕತೆ ಅಡಗಿದೆ. ಭಾರತದ ಸ್ವಾತಂತ್ರ್ಯ ಹೋರಾಟದ ಕಿಚ್ಚು ಅಡಗಿದೆ.

Latest Videos

ಹಿರಾಮಂಡಿ 1920 ಯಲ್ಲಿ ಲಾಹೋರಿನಲ್ಲಿ ಇದ್ದ ವೈಭವದ ವೇಶ್ಯಾಗೃಹ.‌ ಹೀರಾಮಂಡಿಯಲ್ಲಿದ್ದ ಒಂದೊಂದು ಮಹಲೂ ಇಡೀ ಲಾಹೋರ್‌ ಅನ್ನೇ ಕೊಂಡುಕೊಳ್ಳುವಷ್ಡು ಶ್ರೀಮಂತ ವೇಶ್ಯೆಯರಿದ್ದ ಕೋಠಿಗಳು.‌ ಒಂದೊಂದು‌ ಮನೆಯೂ‌ ಮಹಲ್. ಒಂದೊಂದು‌ ಮಹಲಿನಲ್ಲಿ ಇರುವ ಮುಖ್ಯಸ್ಥೆ ಹುಜೂರ್ ಅಂದರೆ ಯಜಮಾನತಿ.‌ ಅವಳ ಕಣ್ಣ ಇಶಾರದಲ್ಲಿ ಎಲ್ಲ ಆಡಳಿತ ನಡೆಸುವ ಹೆಣ್ಣುಗಳು.‌  ಆಗೆಲ್ಲ ನವಾಬರ ಕಾಲ. ಒಬ್ಬೊಬ್ಬ ನವಾಬನೂ ಅತ್ಯಂತ ಶ್ರೀಮಂತ.‌  ನವಾಬರು ಈ ಹೀರಾಮಂಡಿ ವೇಶ್ಯೆಯ ದಾಸಾನುದಾಸರು.‌ ಈ ನವಾಬರು ಹೀರಾಮಂಡಿಗೆ ಕೊಡುವ ಕಾಣಿಕೆಗಳಿಗೇ ಹೀರಾಮಂಡಿಯಲ್ಲಿ ಒಂದೊಂದು ಕೋಣೆ ಇರುತ್ತದೆ. ಕೋಣೆಯ ತುಂಬಾ ವಜ್ರ ವೈಡೂರ್ಯಗಳು, ಮುತ್ತು ರತ್ನಗಳು ತುಂಬಿ ತುಳುಕುತ್ತಿರುತ್ತದೆ. ಅಭಿನಯ ಎಲ್ಲರದೂ ಅತ್ಯುತ್ತಮ.‌ ಹೀರಾಮಂಡಿಯ ಶಾಹಿಮಹಲ್ ನ ಚಕ್ರವರ್ತಿನಿ ಮಲ್ಲಿಕಾ ಜಾನ್ ಆಗಿ ಮನಿಷಾಳ ಅಭಿನಯ ಅದ್ಭುತ. ಆ ಪಾತ್ರಕ್ಕೆ ಬೇಕಾದ ಗತ್ತು ಗರ್ವ ಚಾಣಾಕ್ಷತೆ ಹರಿತವಾದ ಮಾತುಗಳು ಅವಳ ಸೌಂದರ್ಯ ವಾಹ್ ಲಾಜವಾಬ್.

ಅದೇ ಹೀರಾಂಮಡಿಯ ಇನ್ನೊಂದು ಮಹಲಿನ ರಾಣಿಯಾಗಿ ಫರೀದನ್ ಜಹಾನ್ ಆಗಿ ಸೋನಾಕ್ಷಿಯ ಅಭಿನಯ ಕೂಡ ಮೆಚ್ಚುವಂತದ್ದು. ವೇಶ್ಯೆಯರ ಬಳಿ ಇರುವ ಸಹಜ ಮತ್ಸರ, ಕೊಂಕುಮಾತು, ತಮ್ಮ ಕೆಲಸ ಆಗಬೇಕಾದರೆ ಶತಾಯ ಗತಾಯ ಮಾಡುವ ಪ್ರಯತ್ನ ಒನಪು ವಯ್ಯಾರ ನಾಗಿಣಿಯಂತೆ ಫೂತ್ಕರಿಸುವ ರೋಷ amazing!! 

ಕಣ್ಣು ಕುಕ್ಕುತ್ತೆ ಹೀರಾಮಂಡಿಯ ಫರೀದನ್, ಸೋನಾಕ್ಷಿಯ 14 ಕೋಟಿಯ ಮುಂಬೈ ಮನೆಯ ಅದ್ಧೂರಿತನ

ಇನ್ನು ಅದಿತಿ ಹೈದರಿ ತನ್ನ ಅನುಪಮ ಸೌಂದರ್ಯದಿಂದ ಕಂಗೊಳಿಸುತ್ತಾಳೆ, ನಮ್ಮನ್ನು  ಮೂಕಳನ್ನಾಗಿಸುತ್ತಾಳೆ.‌ ಅವಳ ಕಣ್ಣಿನ ಭಾವಗಳೇ ಸಾವಿರ ಮಾತಾಡುತ್ತದೆ. ನಾಟ್ಯದ ಗತಿಗೆ ಸರಿಯಾಗಿ ಚಲಿಸುವ ಅವಳ ದೇಹ ಸೌಷ್ಟವ superb. ಅವಳ ಕಣ್ಣಿನ ಮಿಂಚು ತುಟಿಯ ಕೊಂಕು ಹುಬ್ಬಿನ ಚಲನೆ ಮಾದಕ‌ ನಗು ನಮ್ಮನ್ನು ಹುಚ್ಚರನ್ನಾಗಿಸುತ್ತದೆ. ಅದಿತಿಯ ಒಂದೊಂದು ನೃತ್ಯವೂ ವಾಹ್ ಎನಿಸುತ್ತದೆ. ಆಲಂಜೇಬ್ ಆಗಿ ಮಲ್ಲಿಕಾ ಜಾನ್‌ಳ ಎರಡನೆಯ ಮಗಳಾಗಿ ಶರ್ಮಿನ್ ಸೆಗಲ್ ತನ್ನ ಸರಳ ಸೌಂದರ್ಯ ಹಾಗು ಮುಗ್ಧತೆಯಿಂದ ಗಮನ ಸೆಳೆಯುತ್ತಾಳೆ.

ಮಲ್ಲಿಕಾಜನ್ ಸಾಕು ಮಗಳು ಲಜ್ಜೋ ಲಾಜವಂತಿ ( ರಿಚಾ ಚಡ್ಡಾ,)ಳ ಭಗ್ನ ಪ್ರೇಮ ಅವಳ ಆತ್ಮಹತ್ಯೆ ಹೀರಾಮಂಡಿಯಲ್ಲಿ ಹೆಣ್ಣಿನ  ದೇಹಕ್ಕೆ ಮಾತ್ರವೇ ಬೆಲೆ,  ಮನಸ್ಸಿಗಲ್ಲ ಎನಿಸುತ್ತದೆ. ಅವಳ ಸಾವು ಮನಸ್ಸನ್ನು ಭಾರವಾಗಿಸುವುದಂತೂ ಸತ್ಯ

ಏಕ್ ಬಾರ್ ದೇಖನೇ ದೀಜಿಯೇ
ದೀವಾನಾ ಬನಾ ದೀಜಿಯೇ
ಜಲ್ ನೇಕೋ ಹೈ ತಯ್ಯಾರ್ ಹಮ್ 
ಪರವಾನ ಬನಾ ದೀಜಿಯೇ

ಹೀರಾಮಂಡಿಯ ಒಂದು ನವಿರಾದ ಪ್ರೇಮಕಥೆ/ ಭಗ್ನಪ್ರೇಮಕತೆಯ ಸಾಲುಗಳಿವು. ತೆರೆ ಮೇಲೆ ಈ ಸಾಲುಗಳನ್ನು ಕೇಳಿದಾಗಲೆಲ್ಲ ಆಲಂಜೇಬಳ ಪ್ರೇಮದ ಪರಾಕಾಷ್ಠೆಯಲ್ಲಿ ನಾವೂ ಕರಗಿ ಹೋಗುತ್ತೇವೆ. ನಂತರ ಅದೇ ಸಾಲುಗಳು ಮರುಕಳಿಸಿದಾಗ ಅವರಿಬ್ಬರ ಭಗ್ನ ಪ್ರೇಮಕ್ಕೆ ನಮ್ಮ ಕಣ್ಣಿಂದಲೂ ಅಶ್ರುಗಳು ಸುರಿದರೆ ಅತಿಶಯೋಕ್ತಿ‌ಅಲ್ಲ.
 
ಆಲಂಜೇಬ್ ಮತ್ತು ನವಾಬ್ ತಾಜ್‌ದಾರ್‌ನ ನವಿರಾದ ಪ್ರೇಮ ನಮ್ಮ ಮನಸ್ಸನ್ನು ಬೆಚ್ಚಗಾಗಿಸುತ್ತದೆ. ಶಾಯರಿ‌ಪ್ರಿಯೆ ಆಲಂಜೇಬ್ ತನ್ನ ಪ್ರಿಯತಮನಿಗಾಗಿ ರಚಿಸುವ ಶಾಯರಿಗಳು ಅವನನ್ನು ಮದುವೆಯಾಗಿ ಹೀರಾಮಂಡಿಯ ವೇಶ್ಯಾ ಸಂಸ್ಕೃತಿಯನ್ನು ಕೊನೆಗಾಣಿಸಬೇಕೆನ್ನುವ ಅವಳ ಮನೋಭಾವ, ಉಪವಾಸ ಇದ್ದಪೂ ಸರಿ. ನಾನು ಎಲ್ಲರಂತೆ ನಾಚನೇವಾಲಿ ಆಗುವುದಿಲ್ಲ ಎಂಬ ಹಠ, ಅದಕ್ಕೆ ತಕ್ಕಂತೆ ನವಾಬ್ ತಾಜ್ ದಾರ್ ಅವನ ಅಪ್ಪನ ವಿರೋಧವನ್ನೂ ಲೆಕ್ಕಿಸದೆ ಆಲಂಜೇಬಳನ್ನು ಮದುವೆಯಾಗಲು ಹಾತೊರೆಯುವುದು, ಅದಕ್ಕೆ ಅವನ ಅಜ್ಜಿ ಕುದ್ಸಿಯಾ ಬೇಗಂ (ಫರೀದಾ ಜಲಾಲ್) ಳ ಬೆಂಬಲ ಎಲ್ಲವೂ ನಮ್ಮ ಹೃದಯವನ್ನು ಪ್ರಸನ್ನತೆಯಲ್ಲಿ ಮುಳುಗಿಸುತ್ತದೆ. ನೋಡುವವರಿಗೂ ಪ್ರೇಮದ ಹಾಲ್ಗಡಲಿನಲ್ಲಿ ಮಿಂದಂತಾ ಅನುಭವ. ಆ ಹದಿ ಹರೆಯದ ಮುಗ್ಧ ಪ್ರೇಮ ನಮ್ಮ ಹೃದಯದಲ್ಲೂ‌ ಕಚಗುಳಿ ಇಡುತ್ತದೆ. ತಾಜ್‌ದಾರ್‌ನನ್ನು ಕರೆದುಕೊಂಡು ಹೀರಾಮಂಡಿಗೆ ಬರುವ ಅವನ‌ ಅಜ್ಜಿ,  ಮಲ್ಲಿಕಾಜಾನ್‌ಳ ಬೆಂಬಲ ಮಗಳನ್ನು ತನ್ನ ಮಗನಿಗೆ ವಧುವಾಗಿ ಕೇಳುವುದಂತೂ ಪ್ರಪಂಚದಲ್ಲಿ ಹೀಗೂ ನಡೆಯುವುದುಂಟೇ ಎನಿಸುತ್ತದೆ. ಆದರೆ ಇಲ್ಲಿ ಎಲ್ಲಿಯು ಅತಿಶಯದ ನಟನೆಯಾಗಲೀ  ಅತಿಶಯದ ಸಂಗತಿಯಾಗಲಿ ಇಲ್ಲ. ಪ್ರೇಮ ಎಂಬ ದೇವರಿಗೆ ಎಲ್ಲರೂ ತಲೆಬಾಗಬೇಕೆಂಬುದಷ್ಟೇ ಭಾವನೆ. ಮೊಮ್ಮಗ ಖುಷಿಯಾಗಿರಬೇಕು ಎಂದು ಬಯಸುವ ಅಜ್ಜಿ ಫರಿದಾಜಲಾಲ್ ಅಭಿನಯ ವಾಹ್. ಹೀರಾಮಂಡಿಯಿಂದ ಎಂದೂ ಡೋಲಿ ಹೊರಡುವುದಿಲ್ಲ ಆದರೆ ನಿಮ್ಮ ಔದಾರ್ಯದಿಂದ ಈಗ ನನ್ನ ಮಗಳ ಡೋಲಿ ಹೊರಡುತ್ತದೆ, ಎಂದರೆ ನಾನೇಕೆ ಬೇಡವೆನ್ನಲಿ ಎನ್ನುವ ಮಲ್ಲಿಕಾ ಜಾನ್ ಮದುವೆಗೆ ಒಪ್ಪಿಕೊಳ್ಳುತ್ತಾಳೆ. ಆದರೆ ತಾಜ್‌ದಾರ್ ತಂದೆಯ ವಿರೋಧ ಹಾಗೂ‌ ಕುತಂತ್ರದಿಂದ ಮದುವೆ ನಡೆಯುವುದಿಲ್ಲ ತಾಜ್ ದಾರ್ ಪೊಲೀಸರ ದೌರ್ಜಕ್ಕೆ ಸಿಕ್ಕು ಹೆಣವಾಗುತ್ತಾನೆ. 

ಸಂಜಯ್ ಲೀಲಾ ಬನ್ಸಾಲಿಯ ಚಿತ್ರಗಳಲ್ಲೆಲ್ಲ ವೇಶ್ಯಾವಾಟಿಕೆ ಇದ್ದೇ ಇರುತ್ತೆ ಏಕೆ?

ತಾಜ್‌ದಾರ್ ಸ್ವಾತಂತ್ರ್ಯ ಹೋರಾಟಗಾರ. ಆಲಂಜೇಬ್ ಅವನ ಹೋರಾಟಕ್ಕೆ ಬೆಂಬಲವಾಗಿರುತ್ತಾಳೆ. ಒಮ್ಮೆ ಆಲಂಜೇಬ್ ಯಾವುದೋ ದಾಖಲೆಗಳ ಸಮೇತ ಪೊಲೀಸರಿಗೆ ಸಿಕ್ಕಿ ಬೀಳುತ್ತಾಳೆ. ಆಗ ಅವಳನ್ನು ಬಿಡಿಸಿಕೊಳ್ಳಲು ಮಲ್ಲಿಕಾಜಾನ್ ತಾನೇ ಖುದ್ದು ಪೊಲೀಸ್ ಠಾಣೆಗೆ ಹೋಗುತ್ತಾಳೆ. ಅವಳು ಠಾಣೆಗೆ ಹೋಗುವಂತೆ ಫರದೀನ್ ಜಹಾನಳ ಪಿತೂರಿಯೂ ಕಾರಣವಾಗುತ್ತದೆ. ಮಗಳನ್ನು ಬಿಡಿಸಿಕೊಳ್ಳಲು ಬದಲಿಯಾಗಿ ಮಲ್ಲಿಕಾಜಾನ್‌ಳ ಮೇಲೆ ನಾಲ್ವರು ಪೊಲೀಸ್ ಆಫೀಸರ್ಸ್ ಅತ್ಯಾಚಾರ ಮಾಡುತ್ತಾರೆ.‌ ಮಗಳಿಗಾಗಿ ಸಹಿಸಿಕೊಳ್ಳುತ್ತಾಳೆ. 'ಮಲ್ಲಿಕಾಜಾನ್ ಲೋಹೇಸೆ ಬನಾಯಿ ಹೈ ಇತ್ನೆ ಆಸಾನಿಸೆ ಟೂಟತೀ ನಹೀ' ಎಂಬ ಅವಳ ಕಹಿಯಾದ ನಗುವಿನೊಂದಿಗಿನ‌ ಮಾತು ನೋಡುವವರ ಕಣ್ಣಲ್ಲಿ ನೀರಿಳಿಸುತ್ತದೆ.

ಬಿಬ್ಬೋಜಾನ್ (ಅದಿತಿ) ಗುಪ್ತವಾಗಿ ಸ್ವಾತಂತ್ರ್ಯ ಹೋರಾಟಗಾರರಿಗೆ ಸಹಾಯ ಮಾಡುತ್ತಿರುತ್ತಾಳೆ. ನವಾಬರ ಜೊತೆ ಇಷ್ಕ್ ಮಾಡುತ್ತಲೇ ಅವರು ಹೋರಾಟಗಾರರ ವಿರುದ್ಧ ನಡೆಸುವ ಷಡ್ಯಂತ್ರಗಳನ್ನು ಅರಿತು ಅದನ್ನು ಹೋರಾಟಗಾರರಿಗೆ ತಲುಪಿಸುವ ಕೆಲಸ ಮಾಡುತ್ತಿರುತ್ತಾಳೆ. ಒಮ್ಮೆ ಪೊಲೀಸರಿಗೆ ಸಿಕ್ಕಿ ಬೀಳುತ್ತಾಳೆ. ಅವಳಿಗೆ ಫಾಸಿ ಶಿಕ್ಷೆ ವಿಧಿಸುತ್ತಾರೆ. ಆಗ ಹೀರಾಮಂಡಿಯ ಎಲ್ಲ ಹೆಂಗಸರೂ ಅವಳಿಗೆ ಬೆಂಬಲವಾಗಿ ನಿಲ್ಲಬೇಕು, ಅವಳ ಪರವಾಗಿ ಘೋಷಣೆ ಕೂಗುತ್ತಾ ಅವಳನ್ನು ಬೆಂಬಲಿಸಬೇಕು ಎಂದು ತೀರ್ಮಾನಿಸುತ್ತಾರೆ. ಹೀರಾಮಂಡಿಯಿಂದ ಡೋಲಿ ಹೊರಡಲಿಲ್ಲ. ಆದರೇನು ಸ್ವಾತಂತ್ರ್ಯ ದ ಕಿಚ್ಚು ಇಲ್ಲೂ ಇದೆ ಎಂದು ತೋರಿಸೋಣ. ಅಜಾದಿಕೆ ಲಿಯೆ  ಹಮ್ ಬಿ ಬಲಿದಾನ್ ದೇ ಸಕ್ತೇ ಹೈ ಎನ್ನುವ ಮಲ್ಲಿಕಾಜಾನ್‌ಳ ವೀರೋಚಿತ ಘರ್ಜನೆ ನಮ್ಮನ್ನೂ ರೋಮಾಂಚನ ಗೊಳಿಸುತ್ತದೆ. ಬಿಬ್ಬೋಜಾನ್‌ಳನ್ನು ಪೊಲೀಸರು ಗುಂಡು ಹೊಡೆದು ಸಾಯಿಸುತ್ತಾರೆ. ಹೀರಾಮಂಡಿಯ ಹೆಂಗಳೆಯರ ಇಂಕ್ವಿಲಾಬ್ ಜಿಂದಾಬಾದ್ ಘೋಷಣೆ ಮುಗಿಲು ‌ಮುಟ್ಟುತ್ತದೆ. 

ಹೀರಾಮಂಡಿ, ಶೈತಾನ್; ನೆಟ್‌ಫ್ಲಿಕ್ಸ್‌ನಲ್ಲಿ ಈ ತಿಂಗಳು ಬಿಡುಗಡೆಯಾಗೋ ಚಿತ್ರಗಳ ಸಂಪೂರ್ಣ ಪಟ್ಟಿ

ಹೀರಾಮಂಡಿಯ ಮಹಲುಗಳ ಆಡಂಬರ ವೈಭವ ಅವರ ಐಶ್ವರ್ಯ ಎಲ್ಲವೂ ಸ್ವಾತಂತ್ರ್ಯ ಹೋರಾಟದ ಕಿಚ್ವಿನಲ್ಲಿ ಬೆರೆತು ಶುದ್ಧ ಚಿನ್ನವಾಗುತ್ತದೆ. ಅವರ ನರ್ತನದ ಧೀ ತಕಿಟ ಆ ಗೆಜ್ಜೆಗಳ ಗುಂಜಾರವ ಸ್ವಾತಂತ್ರ್ಯ ಹೋರಾಟದ ರಕ್ತದೋಕುಳಿಯಲ್ಲಿ ಬೆರೆತು ಹೋಗುತ್ತದೆ. ಚರಿತ್ರೆಯ ಪುಟಗಳಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಈ ವೀರಮಹಿಳೆಯರ ದಾಖಲೆ ಇಲ್ಲ. ಆದರೆ ಎಷ್ಟೋ ಜನ ಅಜ್ಞಾತವಾಗಿ ಈ ಹೋರಾಟದ ಅಗ್ನಿಕುಂಡದಲ್ಲಿ ತಮ್ಮ ಜೀವ ತೆತ್ತಿದ್ದಾರೆ,  ಆಜ್ಯವಾಗಿದ್ದಾರೆ ಸ್ವಾತಂತ್ರ್ಯ ಭಾರತಕ್ಕೆ ಲಭಿಸಿದರೂ ಈ ಹೆಣ್ಣಿನ ಹಕ್ಕಿಗಾಗಿ ಇನ್ನೂ ಹೋರಾಡುತ್ತಲೇ ಇದ್ದಾರೆ ಎನ್ನುವ ಬನ್ಸಾಲಿಯ ನುಡಿ ಚಿತ್ರದ ಕೊನೆಯಲ್ಲಿ ನಮ್ಮನ್ನು ಎದ್ದುನಿಲ್ಲುವಂತೆ ಮಾಡುತ್ತದೆ. 

ಜೈ ಸಂಜಯ್ ಲೀಲಾ ಬನ್ಸಾಲಿ ಅದ್ಭುತವೆಂಬುದನ್ನು ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ. 

click me!