
ರಾಜೇಶ್
ಒಂದು ಹಳ್ಳಿ. ಅಲ್ಲೊಬ್ಬ ಬಲಶಾಲಿ ಯುವಕ. ಅವನಿಗೊಬ್ಬಳು ಬಾಲ್ಯ ಸ್ನೇಹಿತೆ. ಅವಳು ಓದಿಗೆಂದು ಬೇರೆ ಊರಿಗೆ ಹೋಗುತ್ತಾಳೆ ಮತ್ತು ಅವನನ್ನು ಕುಸ್ತಿ ಅಖಾಡಕ್ಕೆ ಇಳಿಸಲಾಗುತ್ತದೆ ಎಂಬಲ್ಲಿಗೆ ಕತೆ ಶುರುವಾಗುತ್ತದೆ. ನಿರ್ದೇಶಕರು ತನ್ನ ಬರವಣಿಗೆ ಮೇಲೆ ನಂಬಿಕೆ ಇಟ್ಟು ಸಾಕಷ್ಟು ಅಂಶಗಳನ್ನು ತಂದಿದ್ದಾರೆ. ಇಲ್ಲಿ ಸ್ನೇಹವಿದೆ, ಪ್ರೇಮವಿದೆ, ಕುಸ್ತಿ ಇದೆ, ದುಷ್ಟ ದುರುಳರ ವಿರುದ್ಧದ ಹೋರಾಟ ಇದೆ, ಮನಸ್ಸು ತಂಪಾಗಿಸಲು ಹಾಡುಗಳಿವೆ, ಕಿಚ್ಚು ಹಬ್ಬಿಸಲು ಫೈಟುಗಳಿವೆ. ಇವೆಲ್ಲಾ ಅಂಶಗಳು ಸೇರಿರುವುದರಿಂದ ವೇಗವಾಗಿ ಒಂದರಹಿಂದೊಂದು ಘಟನೆಗಳು ಜರುಗುತ್ತಾ ಹೋಗುತ್ತವೆ.
ಮೊದಲಾರ್ಧದಲ್ಲಿ ಕುಸ್ತಿಯೇ ಕತೆಯ ಕೇಂದ್ರವಾದರೆ ಆಮೇಲಾಮೇಲೆ ನಾಯಕನ ವ್ಯಕ್ತಿತ್ವ ಮೇಲಾಗುತ್ತದೆ. ಅವನ ದಾರಿ ಅವನಿಗೆ ಸ್ಪಷ್ಟವಾಗುತ್ತದೆ. ಈ ಮಧ್ಯೆ ಮತ್ತೊಬ್ಬ ಪ್ರಮುಖ ಪಾತ್ರಧಾರಿ, ಖಳನಾಯಕನ ಆಗಮನವಾಗಿ ಕತೆಗೆ ತೀವ್ರತೆ ದೊರಕುತ್ತದೆ. ಬಲಶಾಲಿ ತರುಣನ ಪಾತ್ರವನ್ನು ಜೀವಿಸಿರುವ ರಾಜವರ್ಧನ್ ಸ್ಕ್ರೀನ್‌ಗೆ ಕಳೆ ತಂದಿದ್ದಾರೆ. ಅವರು ರೋಷಾವೇಶದ ಸಂದರ್ಭದಲ್ಲಿ ಮತ್ತಷ್ಟು ಮಿಂಚುತ್ತಾರೆ. ದೀಪಕ್ ಸ್ಕ್ರೀನ್ ಪ್ರೆಸೆನ್ಸ್ ಉತ್ತಮವಾಗಿದೆ. ಶರತ್ ಲೋಹಿತಾಶ್ವ ಅವರ ಧ್ವನಿ, ನಟನೆ ಮೂಲಕ ಅವರ ಪಾತ್ರದ ಘನತೆ ಹೆಚ್ಚಿಸಿದ್ದಾರೆ.
ಚಿತ್ರ: ಗಜರಾಮ
ನಿರ್ದೇಶನ: ಸುನೀಲ್ ಕುಮಾರ್
ತಾರಾಗಣ: ರಾಜವರ್ಧನ್, ತಪಸ್ವಿನಿ, ದೀಪಕ್, ಕಬೀರ್ ಸಿಂಗ್, ಶರತ್ ಲೋಹಿತಾಶ್ವ, ತುಕಾಲಿ ಸಂತು
ರೇಟಿಂಗ್: 3
ಆ್ಯಕ್ಷನ್ ಪ್ರಿಯರಿಗೆ ರಾಜವರ್ಧನ್ ಸಂತೋಷಪಡಿಸಿದರೆ ರಾಗಿಣಿ ಒಂದು ಹಾಡಿನಲ್ಲಿ ಕಾಣಿಸಿಕೊಂಡು ರಂಜಿಸುತ್ತಾರೆ. ನಿರ್ದೇಶಕರು ಇಲ್ಲಿ ತ್ಯಾಗದ ಕತೆಯನ್ನು ಹೇಳಿದ್ದಾರೆ. ಅದನ್ನು ರುಚಿಕಟ್ಟಾಗಿ ಹೇಳಲು ಕಮರ್ಷಿಯಲ್ ಸಿನಿಮಾದಲ್ಲಿ ಇರಬಹುದಾದ ಎಲ್ಲಾ ಅಂಶಗಳನ್ನೂ ತಂದಿದ್ದಾರೆ. ಅದರಲ್ಲಿ ಕೆಲವು ಅಂಶಗಳು ತಾತ್ವಿಕ ಅಂತ್ಯ ಕಂಡುಕೊಳ್ಳಲು ಸೋತರೂ ತ್ಯಾಗದ ವಿಷಾದವನ್ನು ದಾಟಿಸಲು ಯಶಸ್ವಿಯಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.