ಶ್...ಎಂಬ ಚಿತ್ರದ ಶಿರ್ಷಿಕೆಯೇ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸದ್ದು ಮಾಡಿದ್ದು. ಅದೇ ದಾಟಿಯ ನಿಶ್ಯಬ್ಧ ಎಂಬ ಚಿತ್ರ Can You Hear It ಎಂಬ ಶಿರ್ಷಿಕೆಯೊಂದಿಗೆ ಬಿಡುಗಡೆಯಾಗಿದ್ದು, ಓಟಿಟಿಯಲ್ಲಿ ಸದ್ದು ಮಾಡುತ್ತಿದೆ.
ಚಿತ್ರ: ಸೈಲೆನ್ಸ್.....ಕ್ಯಾನ್ ಯು ಹಿಯರ್ ಇಟ್?
ನಿರ್ದೇಶನ: ಅಬಾನ್ ಭರೂಚ
undefined
ತಾರಾವರ್ಗ: ಮನೋಜ್ ಬಾಜಪೇಯಿ, ಅರ್ಜುನ್ ಮಾಥುರ್, ಪ್ರಾಚಿ ದೇಸಾಯಿ, ಬರ್ಖಾ ಸಿಂಗ್, ಶಿಶಿರ್.
ಬಿಡುಗಡೆಯಾದ ವರ್ಷ: 2021
ಒಟಿಟಿ: ಝೀ 5
ವೀಣಾ ರಾವ್, ಕನ್ನಡಪ್ರಭ
ಬೆಂಗಳೂರು(ಏ.10): ನಿಶ್ಯಬ್ಧ..... ನಿಮಗೆ ಕೇಳಿಸುತ್ತದೆಯೇ? ಎಂಬ ಅರ್ಥದ ಈ ಚಿತ್ರದ ಶೀರ್ಷಿಕೆ ಓದುವಾಗಲೇ ಕುತೂಹಲ ಮೂಡಿಸುತ್ತದೆ. ಒಂದು ಕೊಲೆಯ ಸುತ್ತ ಹೆಣೆದಿರುವ ಈ ಕಥೆಯನ್ನು ನಿರ್ದೇಶಕರು ಸಾಕಷ್ಟು ರೋಚಕವಾಗಿ ಕಟ್ಟಿಕೊಟ್ಟಿದ್ದಾರೆ. ಮನೋಜ್ ಬಾಜಪೇಯಿ ಇರುವ ಚಿತ್ರಗಳೆಂದರೆ ರೋಚಕತೆಗೇನೂ ಕೊರತೆಯಿಲ್ಲ. ಅವರ ಅಭಿನಯವೂ ಚಿತ್ರ ರಸಿಕರಿಗೆ ಆಕರ್ಷಕವಾಗಿರುತ್ತದೆ. ಅದರಲ್ಲೂ ಮನೋಜ್ ರಾ ಅಥವಾ ಪೊಲೀಸ್ ಅಧಿಕಾರಿಯಾಗಿ ಅಭಿನಯಿಸಿದ್ದರೆ, ಆ ಚಿತ್ರ ಪ್ರೇಕ್ಷಕರ ಮನ ಗೆಲ್ಲುವುದರಲ್ಲಿ ಸಂದೇಹವಿಲ್ಲ. ಈಗಾಗಲೇ ಫ್ಯಾಮಿಲಿ ಮ್ಯಾನ್ ಎಂಬ ಎರಡು ಸೀರೀಸ್, ಹಾಗೂ ಅಯ್ಯಾರೆ, ನಾಮ್ ಶಬಾನ ಸಿರ್ಫ್ಏಕ್ ಬಂದಾ ಕಾಫಿ ಹೈ, ಗ್ಯಾಂಗ್ಸ್ ಆಫ್ ವಸಾಯ್ ಪುರ್ (ಸೀರೀಸ್) ಎಂಬಿತ್ಯಾದಿ ಸಸ್ಪೆನ್ಸ್/ಥ್ರಿಲ್ಲರ್ ಚಿತ್ರಗಳಲ್ಲಿ ಅಭಿನಯಿಸಿ ಗೆದ್ದಿರುವ ಮನೋಜ್ ಇಲ್ಲಿಯೂ ಪ್ರೇಕ್ಷಕರ ಮನ ಗೆಲ್ಲುತ್ತಾರೆ. ಈ ಚಿತ್ರ ಬಿಡುಗಡೆಯಾದದ್ದು 2021 ಆದರೂ ಈಗ ಇದರ ಬಗ್ಗೆ ಬರೆಯುತ್ತಿರುವ ಕಾರಣ ಇದೇ 2024 ಏಪ್ರಿಲ್ 16 ರಂದು ಸೈಲೆನ್ಸ್ 2 ಬಿಡುಗಡೆಯಾಗುತ್ತಿರುವುದರಿಂದ ಸೈಲೆನ್ಸ್ 1 ಪರಿಚಯ ಮಾಡಿಕೊಡುವುದು ಪ್ರಸ್ತುತವಾಗುತ್ತದೆ.
ಕಾಲೇಜಿನಲ್ಲಿ ಓದುವ ಐದಾರು ಹುಡುಗರು ಟ್ರೆಕ್ಕಿಂಗ್ ಹೋಗಿರುತ್ತಾರೆ. ಅವರು ಮುಟ್ಟ ಬೇಕಾದ ಸ್ಥಳವನ್ನು ಮುಟ್ಟಿ ಅಲ್ಲಿ ಹಾಗೆಯೇ ಲೋಕಾಭಿರಾಮದ ಹದಿವಯಸ್ಸಿನ ತುಂಟಾಟದ ಮಾತುಗಳು ಶುರುವಾಗುತ್ತದೆ. ಅಷ್ಟರಲ್ಲಿ ಫೋನ್ ರಿಂಗಾಗುತ್ತದೆ. ಒಬ್ಬ ಹೇಳುತ್ತಾನೆ 'ಇಲ್ಲಿ ನೆಟ್ವರ್ಕೇ ಇಲ್ಲ ಯಾರ ಫೋನ್ ಅದು' ಇನ್ನೊಬ್ಬ ಹೇಳುತ್ತಾನೆ 'ನಮ್ಮ ಯಾರ ಫೋನ್ ಅಲ್ಲ ಇಲ್ಲೇ ಎಲ್ಲೋ ಹತ್ತಿರದಿಂದ ಫೋನ್ ರಿಂಗಾಗುತ್ತಿದೆ.' ಸರಿ ಕುತೂಹಲದಿಂದ ಫೋನ್ ಶಬ್ದದ ಜಾಡು ಹಿಡಿದು ಹುಡುಕುತ್ತಾರೆ. ಅಲ್ಲಿ ಒಂದು ಆಘಾತಕರ ದೃಶ್ಯ ಇವರನ್ನು ಸ್ವಾಗತಿಸುತ್ತದೆ. 28/29ರ ಹರೆಯದ ಯುವತಿ ಅಲ್ಲಿ ಹೆಣವಾಗಿ ಬಿದ್ದಿರುತ್ತಾಳೆ. ಅವಳ ಕೈಚೀಲದಿಂದ ಫೋನ್ ರಿಂಗಾಗುತ್ತಿರುತ್ತದೆ. ಈ ಹುಡುಗರಿಗೆ ಅತೀವ ಭಯವಾಗಿ ಒಬ್ಬ ಮುಗ್ಗರಿಸಿ ಕುಸಿದುಬಿದ್ದರೆ ಮತ್ತೊಬ್ಬ ಆ ಶವದ ವಾಸನೆಗೆ ವಾಂತಿ ಮಾಡಿಕೊಳ್ಳುತ್ತಾನೆ. ಮತ್ತೊಬ್ಬ ಆ ಫೋನನ್ನು ತೆಗೆದು ಆಫ್ ಮಾಡುತ್ತಾನೆ. ನಂತರ ಧೈರ್ಯ ತೆಗೆದುಕೊಂಡ ಅವರು ಪೊಲೀಸರಿಗೆ ದೂರು ನೀಡುತ್ತಾರೆ.
Sharukh Khan's Dunki Movie Review: ಡಂಕಿ ಎಂಬ ಕಳ್ಳದಾರಿ
ಪೊಲೀಸರು ಬರುತ್ತಾರೆ, ಮಹಜರು ಪರೀಕ್ಷೆ ನಡೆಯುತ್ತದೆ. ಕೇಸು ದಾಖಲಾಗುತ್ತದೆ. ಆ ಯುವತಿ ನಗರದ ಪ್ರಖ್ಯಾತ ನ್ಯಾಯಾಧೀಶರ ಮಗಳು ಪೂಜಾ ಚೌಧರಿ ಎಂದು ತಿಳಿಯುತ್ತದೆ. ತಲೆಗೆ ಬಲವಾಗಿ ಬಿದ್ದ ಹೊಡೆತದಿಂದ ಮರಣ ಸಂಭವಿಸಿದೆ ಎಂಬುದು ಪೋಸ್ಟ್ ಮಾರ್ಟಂ ವರದಿಯಿಂದ ತಿಳಿಯುತ್ತದೆ. ಸುಂದರಿಯಾದ ಸಿರಿವಂತೆ, ಅವಿವಾಹಿತೆ ತಂದೆತಾಯಿಯ ಒಬ್ಬಳೇ ಮುದ್ದಿನ ಮಗಳಾದ ಪೂಜಾಳ ಕೊಲೆಯಾಗಲು ಕಾರಣಗಳೇನು? ಇದು ಈ ಚಿತ್ರದ ಕುತೂಹಲಕಾರಿ ಘಟ್ಟ. ಪೂಜಾಳ ತಂದೆಗೆ ತನ್ನ ಮಗಳ ಕೊಲೆಗಾರ ಯಾರಾದರೂ ಸರಿ ಅವನನ್ನು ಕಂಡು ಹಿಡಿದು ಶಿಕ್ಷೆ ಕೊಡಿಸಲೇ ಬೇಕು ಎಂಬ ದೃಢ ನಿರ್ಧಾರ. ಅವರ ಮನಸ್ಸಿಗೆ ಬಂದದ್ದು ಖಡಕ್ ಪೊಲೀಸ್ ಆಫೀಸರ್ ಎಸಿಪಿ ಅವಿನಾಶ್ ವರ್ಮ. ಅಪರಾಧಿಗಳನ್ನು ಹಿಡಿಯುವಾಗ ತನಗೇ ಅಪಾಯವಾದರೂ ಲೆಕ್ಕಿಸದ ಹಾಗೂ ಪೊಲೀಸ್ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರುವ ಖಡಕ್ ಪೊಲೀಸ್ ಆಫೀಸರ್ ಅವಿನಾಶ್ ವರ್ಮ. ಅವಿನಾಶ್ ಬಗ್ಗೆ ಅವನ ಹಿರಿಯ ಅಧಿಕಾರಿಗಳಿಗೆ ಕೊಂಚ ಅವಗಣನೆ ಇದ್ದರೂ, ಇದು ಹೈ ಪ್ರೊಫೈಲ್ ಕೇಸಾದ್ದರಿಂದ ಅವನನ್ನೇ ಈ ಕೊಲೆ ಕಂಡುಹಿಡಿಯಲು ನಿಯೋಜಿಸುತ್ತಾರೆ. ಅವಿನಾಶ್ ತನ್ನ ನಾಲ್ಕು ಜನ ಸಹಾಯಕ ಪೊಲೀಸ್ ಅಧಿಕಾರಿಗಳೋಂದಿಗೆ ಕಾರ್ಯಪ್ರವೃತ್ತನಾಗುತ್ತಾನೆ.
ಪೂಜಾಳ ಮನೆಯಲ್ಲಿ ಅವಳ ತಂದೆ ತಾಯಿ, ಅವಳ ಕಸಿನ್ ಹಾಗೂ ಅವಳ ಭಾವಿ ಪತಿ ಮತ್ತು ಪೂಜಾಳ ತಂದೆಯ ಸ್ನೇಹಿತ ಮತ್ತು ಆ ಭಾಗದ ಶಾಸಕ ರವಿ ಖನ್ನಾ ಇಷ್ಟೂ ಜನರನ್ನೂ ವಿಚಾರಣೆ ಮಾಡುತ್ತಾರೆ. ಅವಿನಾಶನಿಗೆ ಶಾಸಕ ರವಿ ಖನ್ನಾ ಮೇಲೆ ಒಂದು ಗುಮಾನಿ ಹುಟ್ಟುತ್ತದೆ. ಏಕೆಂದರೆ ರವಿ ಖನ್ನಾನ ಹೆಂಡತಿ ಕವಿತಾ ಖನ್ನಾ ಮತ್ತು ಪೂಜಾ ಇಬ್ಬರೂ ಅತ್ಯಾಪ್ತ ಸ್ನೇಹಿತೆಯರು. ಒಬ್ಬರ ಮನೆಯಲ್ಲಿ ಇನ್ನೊಬ್ಬರು ಇರುವುದು ಅವರಿಗೆ ಸಾಮಾನ್ಯ ವಿಷಯ. ಪೂಜಾ ಕೊಲೆಯಾದ ಹಿಂದಿನ ದಿನ ಅವಳು ಕವಿತಾ ಮನೆಯಲ್ಲಿ ಉಳಿದಿರುತ್ತಾಳೆ. ಹಾಗೆ ಹಿಂದಿನ ಸಂಜೆ ಹೊರಟ ಪೂಜಾ ಮತ್ತೆ ಮನೆಗೆ ಮರಳಿ ಬಂದಿರುವುದಿಲ್ಲ. ರವಿ ಖನ್ನಾನನ್ನು ಈ ಬಗ್ಗೆ ವಿಚಾರಣೆ ಮಾಡಿದಾಗ ಪೂಜಾ ಬಂದಿದ್ದು ನಿಜವಾದರೂ, ಕವಿತಾ ಪೂನಾದಲ್ಲಿದ್ದ ಕಾರಣ ಮಾರನೇ ದಿನ ಬೆಳಗ್ಗೆ ಪೂಜಾ ಸಹ ಕವಿತಾಳನ್ನು ಭೇಟಿಮಾಡಲು ಪೂನಾಗೆ ಹೊರಟು ಬಿಟ್ಟಳು ಎನ್ನುತ್ತಾನೆ. ಆದರೆ ಪೂಜಾ ಕೊಲೆಯಾದ ದಿನವೇ ಕವಿತಾ ಪೂನಾದಿಂದ ವಾಪಸ್ಸು ಬಂದಿರುತ್ತಾಳೆ. ತನ್ನ ಮನೆಯ ಮೆಟ್ಟಿಲುಗಳಿಂದ ಜಾರಿಬಿದ್ದು ತಲೆಗೆ ಪೆಟ್ಟಾಗಿ ಕೋಮಾಕ್ಕೆ ಹೋಗಿ ಬಿಟ್ಟಿರುತ್ತಾಳೆ. ಅವಳು ಮೆಟ್ಟಿಲುಗಳೀಂದ ಜಾರಿ ಬೀಳುವ ಮೊದಲು ಏನನ್ನೋ ನೋಡಬಾರದ್ದನ್ನು ನೋಡಿರುತ್ತಾಳೆ. ಆ ಆಘಾತದಿಂದಲೇ ಅವಳು ಮೆಟ್ಟಿಲುಗಳಿಂದ ಜಾರಿ ಅಪಘಾತ ಆಗಿರುತ್ತದೆ. ಆ ಕ್ಷಣಕ್ಕೆ ಕವಿತಾ ಖನ್ನಾಳ ವಿಚಾರಣೆ ಅವಳು ಕೋಮಾದಲ್ಲಿ ಇದ್ದ ಕಾರಣ ಸಾಧ್ಯವಾಗುವುದಿಲ್ಲ.
Sukhee Movie Reveiw: ಆಕರ್ಷಕ ಹಾಗೂ ತುಂಟತನದ ಸುಖೀ ನಿಮ್ಮನ್ನು ಆವರಿಸುತ್ತಾಳೆ!
ಎಸಿಪಿ ಅವಿನಾಶನ ಯೋಚನೆ ಈ ಘಟನೆಯ ಸುತ್ತಲೇ ಗಿರಕಿ ಹೊಡೆಯುತ್ತಿರುತ್ತದೆ. ಅವನಿಗೆ ಶಾಸಕ ರವಿ ಖನ್ನಾನನ್ನು ವಿಚಾರಣೆ ಮಾಡಿದ್ದು, ಸಮಾಧಾನ ಕೊಡುವುದೇ ಇಲ್ಲ. ರವಿ ಖನ್ನಾ ಏನನ್ನೋ ಮುಚ್ಚಿಡುತ್ತಿದ್ದಾನೆ ಎಂಬ ಭಾವ ಗಟ್ಟಿಯಾಗಿ ಬೇರೂರುತ್ತದೆ. ಪೂಜಾ ಕವಿತಾಳ ಮನೆಯಲ್ಲಿ ಇದ್ದ ಸಮಯ, ಕವಿತಾ ಪೂನಾದಿಂದ ಬಂದ ಸಮಯ ರವಿ ಖನ್ನಾ ಹೊರಗೆ ಹೋದ ಸಮಯ ಇವು ಯಾವುದೂ ಒಂದಕ್ಕೊಂದು ತಾಳೆಯಾಗುತ್ತಿರಲಿಲ್ಲ. ಆದರೆ ಪೂಜಾಳ ಮೇಲೆ ಅತ್ಯಾಚಾರ ಆಗಿಲ್ಲ, ಬರೀ ಕೊಲೆ ಆಗಿದೆ. ರವಿ ಖನ್ನಾನ ಮನೆಯ ಸಹಾಯಕ ದಾದೂನನ್ನು ವಿಚಾರಣೆ ಮಾಡಿದರೂ ಈ ಬಗ್ಗೆ ಎಲ್ಲೋ ಮಿಸ್ ಹೊಡೀತಾ ಇದೆ ಎಂದೇ ಅನಿಸುತ್ತದೆ. ಎಲ್ಲರ ಫೋನ್ ಲಿಸ್ಟ್ ತರಿಸಿ ಚೆಕ್ ಮಾಡಿದರೂ, ಸಮಸ್ಯೆ ಬಗೆ ಹರಿಯುವುದಿಲ್ಲ. ಕೋಮಾದಲ್ಲಿ ಇರುವ ಕವಿತಾಳನ್ನು ಸಹ ವಿಶೇಷ ಒಪ್ಪಿಗೆ ಪಡೆದು ವಿಶೇಷ ರೀತಿಯಲ್ಲಿ ವಿಚಾರಣೆ ಮಾಡುತ್ತಾರೆ. ಇದರಿಂದ ರವಿ ಖನ್ನಾ ಕೋಪೋದ್ರಿಕ್ತನಾಗಿ ಪೊಲೀಸರನ್ನು ಬಾಯಿಗೆ ಬಂದ ಹಾಗೆ ಬೈಯುತ್ತಾನೆ. ಕವಿತಾಳನ್ನು ವಿಚಾರಣೆ ಮಾಡುವುದು ರವಿ ಖನ್ನಾಗೆ ಇಷ್ಟವಿಲ್ಲದ್ದನ್ನು ಗಮನಿಸಿದ ಅವಿನಾಶ್‌ಗೆ ಅವನ ಮೇಲೇ ಗುಮಾನಿ ಹೆಚ್ಚಾಗುತ್ತದೆ. ಆದರೂ ತಕ್ಕಂತ ಆಧಾರಗಳು ದೊರೆಯುವುದಿಲ್ಲ. ಆದರೆ ಒಂದು ಪಬ್ಲಿಕ್ ಟೆಲಿಫೋನ್ ಬೂತಿನಿಂದ ರವಿ ಖನ್ನಾ ಮನೆಗೆ ಬಂದ ಒಂದು ಕಾಲ್ ಜಾಡು ಹಿಡಿದು ಹೋದಾಗ ಬೆಚ್ಚಿ ಬೀಳಿಸುವ ಅನೇಕ ಸತ್ಯಗಳು ಅನಾವರಣಗೊಳ್ಳುತ್ತವೆ. ಕೊನೆಗೂ ಕೊಲೆಗಾರ ಸಿಗುತ್ತಾನೆ. ಯಾರು ಅವನು? ಚಿತ್ರ ನೋಡಿದರೆ ರೋಚಕ ಅನುಭವದೊಂದಿಗೆ ತಿಳಿಯುತ್ತದೆ. ಕೊಲೆಗಾರ ಕಣ್ಣೆದುರಿಗೇ ಇದ್ದರೂ ಗೊತ್ತಾಗದಂತೆ ಕೊನೆಯವರೆಗೂ ಕುತೂಹಲ ಉಳಿಸಿಕೊಡುವಲ್ಲಿ ನಿರ್ದೇಶಕರು ಗೆದ್ದಿದ್ದಾರೆ.
ಆದರೆ ಈ ಕೊಲೆಗಾರನನ್ನು ಹಿಡಿಯುವ ಈ ಪ್ರೊಸೀಜರ್ ಅತ್ಯಂತ ರೋಚಕ ಅನುಭವ ಕೊಡುತ್ತದೆ. ಎಸಿಪಿ ಅವಿನಾಶನಾಗಿ ಮನೋಜ್ ಅಭಿನಯ ಅಮೋಘ. ಅವನ ಖಡಕ್ ಮಾತು ನಟನೆ, ಫೈಟ್ ಎಲ್ಲವೂ ಮನಸ್ಸನ್ನು ಹಿಡಿದಿಟ್ಟುಕೊಳ್ಳುತ್ತದೆ. ಅವನೇ ಚಿತ್ರದ ಕೇಂದ್ರ ಬಿಂದು. ಇನ್ನು ಸಹಪಾತ್ರಗಳಾದ ಪ್ರಾಚಿ ದೇಸಾಯಿ, ಶಿಶಿರ್, ಅರ್ಜುನ್ ಮಾಥುರ್ ಎಲ್ಲರೂ ಚೊಕ್ಕವಾಗಿ ಅಭಿನಯಿಸಿದ್ದಾರೆ. ಇಲ್ಲಿ ಕವಿತಾ ಖನ್ನಾ ಪಾತ್ರದಲ್ಲಿ ನಮ್ಮ ಕನ್ನಡದ ಹುಡುಗಿ ಹಿತಾ ಚಂದ್ರಶೇಖರ್ (ಸಿಹಿಕಹಿ ಚಂದ್ರು-ಗೀತಾ ಅವರ ಮಗಳು) ಅಭಿನಯಿಸಿದ್ದಾರೆ ಎಂಬುದೊಂದು ಹೆಗ್ಗಳಿಕೆ.