Shokiwala Film Review: ಶೋಕಿಯಲ್ಲಿ ವೇಗವಿಲ್ಲ, ಕತೆಯಲ್ಲಿ ಪ್ರೇಮವಿಲ್ಲ

By Govindaraj SFirst Published Apr 30, 2022, 3:20 AM IST
Highlights

ಮೂಲತಃ ಇದೊಂದು ಪ್ರೇಮ ಕತೆಯ ಸಿನಿಮಾ. ಪ್ರೇಮಕ್ಕಿಂತ ಜಾಸ್ತಿ ಬದುಕಿನ ತಾಪತ್ರಯಗಳೇ ಹೆಚ್ಚು. ಅದರಲ್ಲೂ ಹೀರೋನ ಹುಡುಗಿ ಬೀಳಿಸುವ ಆಟ, ದಾಂಪತ್ಯ ತಳಮಳಗಳಿಂದಲೇ ಬಹುಪಾಲು ಮುಗಿದು ಹೋಗಿರುತ್ತದೆ.

ರಾಜೇಶ್‌ ಶೆಟ್ಟಿ

ಕೆಲಸ ಮಾಡದೆ ಕುಡಿದೇ ಬದುಕುವ, ಕುಡಿತಕ್ಕಾಗಿ ಮನೆಯಲ್ಲಿರುವ ಉಪಕರಣಗಳನ್ನು ಮಾರಾಟ ಮಾಡುವ ತಂದೆ. ದಿನವಿಡೀ ಕುಡಿಯುತ್ತಲೇ ಇರುವ, ಕುಡಿಯಲು ಹಣಕ್ಕಾಗಿ ತವರಿಗೆ ಬಂದು ಪೀಡಿಸುವ ಅಕ್ಕನ ಗಂಡ. ಯಾವುದೇ ಕೆಲಸ ಮಾಡದೆ, ಕಲರ್‌ ಕಲರ್‌ ಬಟ್ಟೆ ಧರಿಸಿಕೊಂಡು ಹುಡುಗಿಯರ ಹಿಂದೆ ಸುತ್ತುವ ಶೋಕಿಲಾಲ ಹೀರೋ. ಅವನ ಜೊತೆಗೇ ಸುತ್ತುವ ನಾಲ್ವರು ಗೆಳೆಯರು. ಹೀಗೆ ಒಂದೊಂದು ಪಾತ್ರಗಳೂ ಒಂದೊಂದು ರತ್ನಗಳು. ಇವರ ಮಧ್ಯೆ ಊರಲ್ಲೊಬ್ರು ಗೌಡ್ರು, ಅವರಿಗೊಬ್ಬಳು ಸುಂದರಿ ಮಗಳು. ಇಷ್ಟಿದ್ದ ಮೇಲೆ ಊರು ಅಲೆದಾಟ, ದಾರಿ ಸಾಗಲು ಲವ್ವು, ಲವ್ವಿನ ಮಧ್ಯೆ ಹೊಡೆದಾಟ, ಅಲ್ಲೊಂದು ಡ್ಯುಯೆಟ್ಟು, ಇನ್ನೊಂದು ಎಣ್ಣೆ ಸಾಂಗು ಮತ್ತಿತರ ಸಂಗತಿಗಳು ಜರುಗುತ್ತಿರುತ್ತವೆ. 

ಮೂಲತಃ ಇದೊಂದು ಪ್ರೇಮ ಕತೆಯ ಸಿನಿಮಾ. ಪ್ರೇಮಕ್ಕಿಂತ ಜಾಸ್ತಿ ಬದುಕಿನ ತಾಪತ್ರಯಗಳೇ ಹೆಚ್ಚು. ಅದರಲ್ಲೂ ಹೀರೋನ ಹುಡುಗಿ ಬೀಳಿಸುವ ಆಟ, ದಾಂಪತ್ಯ ತಳಮಳಗಳಿಂದಲೇ ಬಹುಪಾಲು ಮುಗಿದು ಹೋಗಿರುತ್ತದೆ. ಹಿಂದಿನ ಕಾಲದಲ್ಲಿ ಬರುತ್ತಿದ್ದ ಪ್ರೇಮಕತೆಯನ್ನು ಬೇಡವೆಂದರೂ ನೆನಪಿಸುವುದು ಈ ಸಿನಿಮಾದ ಹೆಗ್ಗಳಿಕೆ. ಬಡವ ಹೀರೋ, ಶ್ರೀಮಂತ ಹುಡುಗಿ, ಮೊದಲಿಗೆ ತಿರಸ್ಕಾರ, ಆಮೇಲೆ ಪುರಸ್ಕಾರ, ನಂತರ ಕಷ್ಟಗಳ ಸರಮಾಲೆ. ಅಷ್ಟುಹೊತ್ತಿಗೆ ನೋಡುಗನಿಗೂ ಜೀವನದಲ್ಲಿ ಎಲ್ಲಿಲ್ಲದ ಕಷ್ಟಗಳು ಮೈಮೇಲೆ ಬಂದಂತೆ ಭಾಸವಾಗುತ್ತದೆ. 

ಚಿತ್ರ: ಶೋಕಿವಾಲ

ತಾರಾಗಣ: ಅಜಯ್‌ ರಾವ್‌, ಸಂಜನಾ ಆನಂದ್‌, ಶರತ್‌ ಲೋಹಿತಾಶ್ವ

ನಿರ್ದೇಶನ: ಜಾಕಿ

ರೇಟಿಂಗ್‌: 2

ಅಷ್ಟರ ಮಟ್ಟಿಗೆ ಈ ಸಿನಿಮಾ ಪರಿಣಾಮಕಾರಿ. ಇಡೀ ಸಿನಿಮಾ ನಿಂತಿರುವುದು ಚಿತ್ರಕತೆಯ ಹೆಗಲ ಮೇಲೆ. ಕತೆಗೆ ಸ್ವಲ್ಪ ಮೈಲೇಜು ಕಡಿಮೆಯೇ. ಕಲಾವಿದರ ಲವಲವಿಕೆಯ ನಟನೆ, ಶ್ರೀಧರ್‌ ಸಂಭ್ರಮ್‌ ಅವರ ಉಲ್ಲಾಸಭರಿತ ಹಾಡುಗಳು ಕತೆಯನ್ನು ಮುಂದೆ ಕರೆದುಕೊಂಡು ಹೋಗುವ ಪ್ರಯತ್ನ ಮಾಡಿವೆ. ಛಾಯಾಗ್ರಹಣದಲ್ಲಿ ಕೊರತೆ ಇಲ್ಲ. ನಗುಭರಿತ ಫ್ಯಾಮಿಲಿ ಫೋಟೋದೊಂದಿಗೆ ಸಿನಿಮಾ ಮುಗಿದಾಗ ಒಂದು ಸುದೀರ್ಘ ನಿಟ್ಟುಸಿರು. ಬದುಕಿನಲ್ಲೇ ಆಗಲಿ, ಸಿನಿಮಾದಲ್ಲೇ ಆಗಲಿ ಲೆಕ್ಕಕ್ಕಿಂತ ಹೆಚ್ಚು ಶೋಕಿ ಮಾಡಬಾರದು ಅನ್ನುವುದು ಈ ಸಿನಿಮಾ ಹೇಳಿಕೊಟ್ಟ ಪಾಠ.

'ಶೋಕಿವಾಲ' ಪಕ್ಕಾ ಹಳ್ಳಿ ಸೊಗಡಿನ ಚಿತ್ರವಾಗಿದ್ದು, ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಲಾಂಛನದಲ್ಲಿ ಟಿ.ಆರ್.ಚಂದ್ರಶೇಖರ್ ಅವರು ನಿರ್ಮಿಸುತ್ತಿದ್ದಾರೆ. ಲಕ್ಕಿ, ಸಂತು ಸ್ಟ್ರೇಟ್ ಫಾರ್ವಡ್, ಕೆಜಿಎಫ್ ಸಿನಿಮಾಗಳಿಗೆ ಸಹ ನಿರ್ದೇಶಕರಾಗಿದ್ದ ಜಾಕಿ (Jocky) ಮೊದಲ ಬಾರಿಗೆ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. 'ನಿರ್ಮಾಪಕರಿಗೆ ನಾನು 50 ದಿನದಲ್ಲಿ ಚಿತ್ರದ ಚಿತ್ರೀಕರಣ ಮಾಡಿ ಮುಗಿಸುತ್ತೇನೆ ಎಂದು ಹೇಳಿದ್ದೆ, ತೊಂದರೆ ಇಲ್ಲ ನಿಮ್ಮ ಮೇಲೆ ತುಂಬ ನಂಬಿಕೆ ಇದೆ ಮಾಡಿ ಎಂದು ನಿರ್ಮಾಪಕರು ಹೇಳಿದರು. 45 ದಿನಕ್ಕೆ ಸಿನಿಮಾ ಶೂಟಿಂಗ್ ಮುಗಿಸಿದ್ದೇನೆ, ನಿರ್ಮಾಪಕರಿಗೆ ಖುಷಿಯಾಗಿದೆ. ನಿರ್ಮಾಪಕರ ನಿರ್ದೇಶಕ ನೀನು ಅಂತ ಟಿ.ಆರ್.ಚಂದ್ರಶೇಖರ್ ಅವರು ನನಗೆ ಹೇಳಿದ್ದಾರೆ' ಎಂದು ಚಿತ್ರದ ನಿರ್ದೇಶಕ ಜಾಕಿ ಈ ಹಿಂದೆ ತಿಳಿಸಿದ್ದಾರೆ. 

KGF 2 Film Review: ನೆತ್ತರಲ್ಲಿ ಬರೆದ ಸುವರ್ಣ ಯುಗದ ಚರಿತ್ರೆ

ಮೊದಲ ಬಾರಿಗೆ ಅಜಯ್ ರಾವ್ ಹಳ್ಳಿ ಹುಡುಗನಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಸಂಜನಾ ಆನಂದ್ ಅವರೂ ಕೂಡ ಹಳ್ಳಿ ಹುಡುಗಿಯಾಗಿ ಮಿಂಚಿದ್ದಾರೆ. ಇನ್ನು ಜಯಂತ್ ಕಾಯ್ಕಿಣಿ, ನಾಗೇಂದ್ರಪ್ರಸಾದ್, ಚೇತನ್ ಕುಮಾರ್ ಅವರ ಸಾಹಿತ್ಯ 'ಶೋಕಿವಾಲ' ಚಿತ್ರಕ್ಕಿದ್ದು, ನವೀನ್ ಕುಮಾರ್.ಎಸ್ ಕ್ಯಾಮರಾ ಕೈಚಳಕ, ಕೆ.ಎಂ. ಪ್ರಕಾಶ್ ಸಂಕಲನ , ಪ್ರಶಾಂತ್ ರಾಜಪ್ಪ ಸಂಭಾಷಣೆ, ಮೋಹನ್ ನೃತ್ಯ, ವಿಕ್ರಮ್ ಮೋರ್ ಸಾಹಸ ನಿರ್ದೇಶನ, ಮೈಸೂರು ರಘು ಅವರ ಕಲಾ ನಿರ್ದೇಶನ ಹಾಗೂ ಬಾಲು ಕುಮಟ ಅವರ ನಿರ್ಮಾಣ ಮೇಲ್ವಿಚಾರಣೆ‌ ಈ‌ ಚಿತ್ರಕ್ಕಿದೆ. ಶರತ್ ಲೋಹಿತಾಶ್ವ, ಗಿರೀಶ್ ಶಿವಣ್ಣ, ತಬಲಾ ನಾಣಿ, ಮುನಿರಾಜ್, ಪ್ರಮೋದ್ ಶೆಟ್ಟಿ, ಅರುಣ ಬಾಲರಾಜ್, ವಾಣಿ , ಚಂದನಾ , ಲಾಸ್ಯಾ, ನಾಗರಾಜ ಮೂರ್ತಿ ಸೇರಿದಂತೆ ಹಲವರು ಈ ಚಿತ್ರದ ತಾರಾಗಣದಲ್ಲಿದ್ದಾರೆ. 

click me!