ಹೇಗಿದೆ ’ಧರ್ಮಸ್ಯ’ : ಇಲ್ಲಿದೆ ಚಿತ್ರ ವಿಮರ್ಶೆ

By Web Desk  |  First Published Mar 30, 2019, 4:39 PM IST

ಈ ವಾರ ಧರ್ಮಸ್ಯ ಸಿನಿಮಾ ಬಿಡುಗಡೆಯಾಗಿದೆ. ವಿಜಯ್ ರಾಘವೇಂದ್ರ, ಸಾಯಿಕುಮಾರ್, ಪ್ರಜ್ವಲ್ ದೇವರಾಜ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಹೇಗಿದೆ ಈ ಸಿನಿಮಾ? ಇಲ್ಲಿದೆ ವಿಮರ್ಶೆ. 


ಐದಾರು ಫೈಟು, ಮೂರ್ನಾಲ್ಕು ಸಾಂಗ್, ಲವ್ವ, ಕಾಮಿಡಿ, ಸಂದೇಶ, ಮತ್ತೊಂದು ಸಣ್ಣ ಫ್ಯಾಮಿಲಿ ಸೆಂಟಿಮೆಂಟ್ ಇದ್ರೆ ಚಿತ್ರ ಗೆಲ್ಲಬಹುದು ಅನ್ನುವ ಲೆಕ್ಕಾಚಾರದಲ್ಲಿ ನಿರ್ಮಿಸಿದಂತಿದೆ ‘ಧರ್ಮಸ್ಯ’. ಇದರಲ್ಲಿ ಅವೆಲ್ಲವೂ ಇದೆ, ಆದರೆ ಮುಖ್ಯವಾಗಿ ಇರಬೇಕಾದ ‘ಆತ್ಮ’ವೇ ಮಿಸ್ಸಿಂಗ್! ಧರ್ಮ, ಅಧರ್ಮದ ನಡುವಿನ ಹೋರಾಟದಲ್ಲಿ ಧರ್ಮವೇ ಗೆಲ್ಲೋದು ಅನ್ನುವ ಸಿನಿಮಾ ವನ್‌ಲೈನ್‌ಅನ್ನು ಟೈಟಲ್ ನೋಡಿಯೇ
ಗೆಸ್ ಮಾಡಬಹುದು.

ಹೇಗಿದೆ ’ರಗಡ್’ ಸದ್ದು? ಇಲ್ಲಿದೆ ಚಿತ್ರ ವಿಮರ್ಶೆ

Tap to resize

Latest Videos

ಬೇರೇನಾದ್ರೂ ಇರಬಹುದಾ ಅನ್ನೋ ಅನಗತ್ಯ ಕುತೂಹಲ ಬೇಡ. ಸಿನಿಮಾದ ಹೀರೋ ಧರ್ಮ. ಅವನ ಚಡ್ಡಿ ದೋಸ್ತ್ ಜೀವ. ಚಿಕ್ಕ ವಯಸ್ಸಿನಲ್ಲಿ ಇವರಿಬ್ಬರನ್ನೂ ಬೇರ್ಪಡಿಸಿದ್ದು ‘ಹಸಿವು’. ಒಂದು ಹಂತದಲ್ಲಿ ಅವರಿಬ್ಬರೂ ಒಟ್ಟಾಗುತ್ತಾರೆ. ದಾರಿಯೂ ಒಂದೇ ಆಗುತ್ತೆ. ಮುಂದೆ ಇವರಿಬ್ಬರು ಸೇರಿ ಮುಳ್ಳಿಂದಲೇ ಮುಳ್ಳು ತೆಗೆಯೋ ಕತೆ. ಮೊದಲ ನೋಟದಲ್ಲೇ ಹೀರೋಗೂ ವಿಲನ್‌ಗೂ ವೈರ ಹತ್ಕೊಳೋದ್ಯಾಕೆ ಅಂತೆಲ್ಲ ಕೇಳೋಹಾಗಿಲ್ಲ, ಮುಂದಿನ ಸೀನ್‌ಗೆ ಕಾಯ್ಬೇಕಷ್ಟೇ. ಆದರೆ ಗೆಳೆಯನ ತಂಗಿಗೆ ಅವನ ಮೇಲೆ ಲವ್ವಾಗೋದಕ್ಕೆ ಬೇಡ ಬೇಡ ಅಂದ್ರೂ ಕಾರಣ ಸಿಗುತ್ತೆ.

ಲಂಡನ್‌ನಲ್ಲಿ ಲಂಬೋದರ: ಇಲ್ಲಿದೆ ಚಿತ್ರ ವಿಮರ್ಶೆ

ಬಿಗ್‌ಬಾಸ್ ಪ್ರಥಮ್, ಹೀರೋಯಿನ್ ಹಿಂದೆ ಬಿದ್ದು ಹೀರೋನಿಂದ ಒದೆಸಿಕೊಳ್ಳುವ ಹುಡುಗರೆಲ್ಲ ಬಂದು ಹೋಗುತ್ತಾರೆ. ಕೊನೆಗೆ ಒಂದು ವಜ್ರದ ಕಾರಣಕ್ಕಾಗಿ ಇಡೀ ಸ್ಟೋರಿ ತಿರುವು ಪಡೆದುಕೊಳ್ಳುತ್ತೆ. ಕೊನೆಗೂ ಆ ವಜ್ರ ಎಲ್ಲಿ ಸೇರುತ್ತೆ ಅನ್ನೋದು ಮಿಸ್ಟರಿ. ಇನ್ನೊಂದು ಮಿಸ್ಟರಿ ಅಂದರೆ ಇದರಲ್ಲಿ ಬರೋ ಕಾಮಿಡಿ ಸೀನ್‌ಗಳದ್ದು. ಅದನ್ನೆಲ್ಲ ಬರೆಯೋದು ಕಷ್ಟ. ನೋಡಿಯೇ ತಿಳೀಬೇಕು. ನಗಿಸದೇ ಅಸಹ್ಯ ಹುಟ್ಟಿಸಿದ್ರೆ ಅದಕ್ಕೇನೂ ಮಾಡಲಿಕ್ಕಾಗಲ್ಲ.

ಲೈಂಗಿಕ ಅಲ್ಪಸಂಖ್ಯಾತರನ್ನು ಹರ್ಟ್ ಮಾಡುವಂಥ ಸೀನ್ ಗಳಿವೆ. ಅವರಿಗೆ ಬೇಜಾರಾಗದಿರಲಿ. ‘ಒಂಟಿಯಾಗಿ ಬರ‌್ಬೇಕು. ಬರೋಕೆ ಒಬ್ರೇ ಹೆರಬೇಕು, ಆದರೆ ಹೋಗುವಾಗ ಮಾತ್ರ ನಾಲ್ಕು ಜನ ಹೊರಬೇಕು, ಮಗಿಳ್ಚಿ’ ಇಂಥ ಡೈಲಾಗ್ ಹೊಡೆದು ಹುರುಪು ಹೆಚ್ಚಿಸೋದು ವಿಲನ್ ಸಾಯಿ ಕುಮಾರ್. ಸೌಮ್ಯ ನಿಲುವಿನ ವಿಜಯ ರಾಘವೇಂದ್ರ ಅವರನ್ನು ರೋಷಾವೇಶದಲ್ಲಿ ನೋಡೋದು ಮಜಾನೇ. ಶ್ರಾವ್ಯಾ ಸಖತ್ ಗ್ಲಾಮರಸ್ ಆಗಿ ಕಾಣ್ತಾರೆ. ಇಷ್ಟೆಲ್ಲ ಹೇಳಿ ಈ ಸಿನಿಮಾ ಯಾಕ್ ನೋಡಬೇಕು ಅನ್ನೋ ಪ್ರಶ್ನೆಗೆಲ್ಲ ಉತ್ತರ ಸಿಗಲ್ಲ. ಸಿನಿಮಾ ನೋಡ್ಬೇಕು ಅಂತಿದ್ರೆ ನೋಡ್ಬೇಕು ಅಷ್ಟೇ. 

- ಚಿತ್ರ: ಧರ್ಮಸ್ಯ

ತಾರಾಗಣ: ವಿಜಯ ರಾಘವೇಂದ್ರ, ಸಾಯಿಕುಮಾರ್, ಶ್ರಾವ್ಯ, ಪ್ರಜ್ವಲ್ ದೇವರಾಜ್

ನಿರ್ದೇಶನ: ವಿರಾಜ್ ನಿರ್ಮಾಣ: ಅಕ್ಷರ್ ತಿವಾರಿ ಸಂಗೀತ: ಜ್ಯೂಡ ಸ್ಯಾಂಡಿ ಛಾಯಾಗ್ರಾಹಣ: ಶಂಕರ್
ರೇಟಿಂಗ್: **

click me!