ಹೇಗಿದೆ ’ರಗಡ್’ ಸದ್ದು? ಇಲ್ಲಿದೆ ಚಿತ್ರ ವಿಮರ್ಶೆ

By Web Desk  |  First Published Mar 30, 2019, 9:45 AM IST

ವಿನೋದ್ ಪ್ರಭಾಕರ್ ಅಭಿನಯದ ’ರಗಡ್’ ಚಿತ್ರ ಬಿಡುಗಡೆಯಾಗಿದೆ. ಹೇಗಿದೆ ಈ ಚಿತ್ರ? ಇಲ್ಲಿದೆ ಚಿತ್ರ ವಿಮರ್ಶೆ. 


ನಿಮ್ದು ಸಿಕ್ಸ್ ಪ್ಯಾಕ್ ಆದ್ರೆ, ನಮ್ ಹುಡುಗನದ್ದು ಎಂಟು ಪ್ಯಾಕ್, ತಾಕತ್ತಿದ್ದರೆ ಮೈ ಮುಟ್ಟಿ ನೋಡಿ....! - ಲಾಂಗು, ಮಚ್ಚುಗಳ ಮೂಲಕ ದಾಳಿ ಮಾಡಲು ಬಂದ ರೌಡಿಗಳೆದರೂ ಮದಗಜದಂತೆ ನಿಂತ ನಾಯಕನ ಕಟ್ಟು ಮಸ್ತು ದೇಹವನ್ನು ನಾಯಕಿ ಹೀಗೆ ಬಣ್ಣಿಸಿ, ಆತನ ಶರ್ಟ್ ಎಳೆದು ಹಾಕುತ್ತಾಳೆ.

ನಟ ವಿನೋದ್ ಪ್ರಭಾಕರ್ ಅವರ ಹುರಿಗಟ್ಟಿದ ಎಂಟು ಪ್ಯಾಕ್‌ಗಳ ದೇಹ ಪ್ರದರ್ಶನಕ್ಕೆ ರೌಡಿಗಳು ಬೆಚ್ಚಿ ಬೀಳುತ್ತಾರೆ. ಆ ಮಟ್ಟಿಗೆ ಇದು ನಟ ವಿನೋದ್ ಪ್ರಭಾಕರ್ ಫ್ಯಾನ್ಸ್‌ಗಾಗಿಯೇ ಮಾಡಿದ ಸಿನಿಮಾ. ನಿರ್ದೇಶಕರು ಕತೆ, ಚಿತ್ರಕತೆಗೆ ಹೆಚ್ಚು ಆದ್ಯತೆ ನೀಡುವ ಬದಲಿಗೆ ವಿನೋದ್ ಪ್ರಭಾಕರ್ ಅವರ ಎಂಟು ಪ್ಯಾಕ್‌ಗಳ ದೇಹದ ಪ್ರದರ್ಶನಕ್ಕೆ ಫೋಕಸ್
ಮಾಡಿದ್ದಾರೆ.

Tap to resize

Latest Videos

ಅರಣ್ಯವಾಸಿಗಳ ಎತ್ತಂಗಡಿ ಮೂಲಕ ಚಿತ್ರದ ಕತೆ ತೆರೆದುಕೊಳ್ಳುತ್ತದೆ. ಅರಣ್ಯ ಇಲಾಖೆ ಅಧಿಕಾರಿಗಳ ಕುತಂತ್ರದಿಂದ ಒಂದಷ್ಟು ಆದಿವಾಸಿ ಕುಟುಂಬಗಳು ಮೂಲ ನೆಲೆ ಕಳೆದುಕೊಂಡು ಬೀದಿಪಾಲು ಆಗುತ್ತವೆ. ಆ ಕುಟುಂಬಗಳಿಂದ ನಗರಕ್ಕೆ ಕೆಲಸ ಅರಸಿ ಬಂದ ನಾಲ್ಕೈದು ಯುವಕರ ಪೈಕಿ ಶಿವು ಕೂಡ ಒಬ್ಬ. ಮುಂದೆ ಆತ ರೌಡಿ ಗ್ಯಾಂಗ್ ಸೇರಿ, ದರೋಡೆ ಕೋರನಾಗಿ, ಕಳ್ಳನಾಗಿ ಕಾಣಿಸಿಕೊಳ್ಳುತ್ತಾನೆ.

ಹಾಗೆಯೇ ಲವರ್ ಬಾಯ್ ಆಗಿಯೂ ರಂಜಿಸುತ್ತಾನೆ. ಆದರೆ ತಾನು ಪ್ರೀತಿಸಿದ ಹುಡುಗಿಗೆ ತಾನೊಬ್ಬ ದರೋಡೆಕೋರ, ಕಳ್ಳ ಎನ್ನುವುದು ಗೊತ್ತಾದ ನಂತರ ಮುಂದೇನಾಗುತ್ತೆ ಎನ್ನುವುದು ಚಿತ್ರದ ಒನ್‌ಲೈನ್ ಸ್ಟೋರಿ. 2007 ರಲ್ಲಿ ನಡೆದ ದರೋಡೆಯ ನೈಜ ಘಟನೆ ಈ ಕತೆಗೆ ಸ್ಫೂರ್ತಿ. ಕತೆಯಲ್ಲಾಗಲಿ, ನಿರೂಪಣೆಯ ಶೈಲಿಯಲ್ಲಾಗಲಿ ಹೊಸತನವೇ ಕಾಣದು. ಚಿತ್ರದ ಕತೆ, ಚಿತ್ರಕತೆ, ನಿರೂಪಣೆ ಹಾಗೂ ಛಾಯಾಗ್ರಹಣದಲ್ಲಿ ಸಾಕಷ್ಟು ದೋಷಗಳಿವೆ.

ಕಲಾವಿದರ ವಿಚಾರಕ್ಕೆ ಬಂದರೆ ನಟನೆ ಜತೆಗೆ ಆ್ಯಕ್ಷನ್ ನಲ್ಲೂ ರಂಜಿಸುವ ವಿನೋದ್ ಪ್ರಭಾಕರ್, ಎಂಟು ಪ್ಯಾಕ್ ಪ್ರದರ್ಶನದಿಂದಲೇ ಭರ್ಜರಿ ಶಿಳ್ಳೆ ಗಿಟ್ಟಿಸಿಕೊಳ್ಳುತ್ತಾರೆನ್ನುವುದಷ್ಟೇ ಸಮಾಧಾನ. ನಟಿ ಚೈತ್ರಾ ರೆಡ್ಡಿ ಅವರಿಗೆ ಇದು ಮೊದಲ ಚಿತ್ರವಾದರೂ ಅವರ ನಟನೆ ಇಷ್ಟವಾಗುತ್ತೆ. ಆದರೆ ಮಾತುಗಳಲ್ಲಿ ಒಮ್ಮೆ, ಹುಬ್ಬಳ್ಳಿ, ಮಗದೊಮ್ಮೆ ಮಂಡ್ಯಕ್ಕೆ ತಂದು ನಿಲ್ಲಿಸುತ್ತಾರೆ. ಜೈ ಆನಂದ್ ಛಾಯಾಗ್ರಹಣ ಅಷ್ಟಕಷ್ಟೇ ಎನ್ನುವಂತಿದೆ. ಸಂಗೀತ ನಿರ್ದೇಶಕ ಅಭಿಮಾನ್ ರಾಯ್ ಎರಡು ಹಾಡುಗಳಲ್ಲಿ ಆಪ್ತ. 

- ದೇಶಾದ್ರಿ ಹೊಸ್ಮನೆ 

ಚಿತ್ರ: ರಗಡ್

ತಾರಾಗಣ: ವಿನೋದ್ ಪ್ರಭಾಕರ್, ಚೈತ್ರಾ ರೆಡ್ಡಿ, ರಾಜೇಶ್ ನಟರಂಗ, ದೀಪಕ್ ಶೆಟ್ಟಿ, ಡ್ಯಾನಿ ಕುಟ್ಟಪ್ಪ
ನಿರ್ದೇಶನ: ಶ್ರೀ ಮಹೇಶ್ ಗೌಡ
ಛಾಯಾಗ್ರಹಣ: ಜೈ ಆನಂದ್
ಸಂಗೀತ : ಅಭಿಮಾನ್ ರಾಯ್
ರೇಟಿಂಗ್: **

click me!