ಚಿತ್ರ ವಿಮರ್ಶೆ: ಬಬ್ರೂ

By Kannadaprabha News  |  First Published Dec 7, 2019, 2:20 PM IST

ಹಣ, ಡ್ರಗ್ಸ್, ಕೊಲೆ, ಸೈಕೋ ಕಿಲ್ಲರ್, ಜತೆಗೊಂದು ಪ್ರೀತಿ ಈ ಎಲ್ಲವೂ ಸೇರಿದರೆ ‘ಬಬ್ರೂ’.ಹಾಗೆ ನೋಡಿದರೆ ಈ ಎಲ್ಲ ಅಂಶಗಳು ತೆರೆದುಕೊಳ್ಳುವುದು ಪ್ರಯಾಣದ ನೆರಳಿನಲ್ಲಿ. ಸಾಮಾನ್ಯವಾಗಿ ಜರ್ನಿ ಎನ್ನುವುದೇ ಒಂದು ರೋಚಕ, ನೆನಪಿನ ಬುತ್ತಿ, ಹೊಸ ಬದುಕಿನ ದಿಕ್ಕಿನ ಹುಡುಕಾಟ. ಇಂಥ ಪ್ರಯಾಣಕ್ಕೊಂದು ಕತೆ ಸೇರಿಕೊಂಡರೆ ಹೇಗಿರುತ್ತದೆಂಬುದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಆದರೆ, ಸಾಧಾರಣ ರಸ್ತೆ ಪ್ರಯಾಣವನ್ನು ರೋಚಕಗೊಳಿಸುವ ನಿಟ್ಟಿನಲ್ಲಿ ನಿರ್ದೇಶಕ ಸುಜಯ್ ರಾಮಯ್ಯ ಹರಸಾಹಸ ಪಟ್ಟಿರುವುದು ರಸ್ತೆ ಉದ್ದಕ್ಕೂ ಕಾಣುತ್ತದೆ.


ಆರ್ ಕೇಶವಮೂರ್ತಿ

ಇದಕ್ಕೆ ಅವರು ಪ್ರೇಮ ಕತೆಯ ಮೊರೆ ಹೋಗುತ್ತಾರೆ. ಡ್ರಗ್ಸ್ ಮಾಫಿಯಾ ತರುತ್ತಾರೆ. ಒಂದಿಷ್ಟು ಸಂಬಂಧ ವಿಲ್ಲದ ದೃಶ್ಯ- ಕತೆಗಳನ್ನು ಸೇರಿಸುತ್ತಾರೆ. ಒಂದು ಕಾರು, ಮೂವರು ಪ್ರಯಾಣಿಕರ ಮೂಲಕ ನಿರ್ದೇಶಕರು ಮಾಡಿದ ಈ ಸಾಹಸ ತೆರೆ ಮೇಲೆ ಗಿಟ್ಟಿದೆಯೇ ಎಂದು ತಿಳಿಯಲು ನೀವು ಬಿಡುವು ಮಾಡಿಕೊಂಡು ಸಿನಿಮಾ ನೋಡುವ ಮನಸ್ಸು ಮಾಡಬೇಕು!

Tap to resize

Latest Videos

 ಆದರೆ, ಪ್ರಯಾಣದಲ್ಲಿ ಸಿಗುವ ಸಣ್ಣ ಸಣ್ಣ ತಿರುವುಗಳನ್ನೇ ನಂಬಿಕೊಂಡು ಸಿನಿಮಾ ನೋಡಲು ಕೂತರೆ ‘ಬಬ್ರೂ’ ಬೇಸರ ಮೂಡಿಸಲ್ಲ. ಹಾಗಾದರೆ ಆಯಾಸವಾಗಿ ಸಾಗುವ ಈ ಪ್ರಯಾಣದ ರಸ್ತೆಯಲ್ಲಿ ಏನಿದೆ, ಬಬ್ರೂ ಹೆಸರಿನ ಕಾರನ್ನು ತೆಗೆದುಕೊಂಡು ಬೇರೊಂದು ದೇಶದಲ್ಲಿರುವ ತನ್ನ ಪ್ರೇಯಸಿಗೆ ಪ್ರೇಮ ನಿವೇದನೆಗೆ ಹೊರಟ ಯುವಕ. ಆ ಕಾರು ಆಗಲೇ ಬುಕ್ ಮಾಡಿಕೊಂಡು ಕೂತಿರುವ ನಡು ವಯಸ್ಸಿನ ಮಹಿಳೆ. ಆಕೆಯೂ ಈತ ಹೋಗುತ್ತಿರುವ ದೇಶಕ್ಕೆ ಹೊರಡಬೇಕು. ಮುಂದೆ ಕಾರಿನ ಚಕ್ರ ರಿಪೇರಿ ಆಗುತ್ತದೆ. ಸರಿ ಮಾಡಲು ಬರುವವ ಇದೇ ಕಾರಿನಲ್ಲಿ ಡ್ರಾಪ್ ಕೊಡುವಂತೆ ಕೇಳುತ್ತಾನೆ. ಹಾಗೆ ಡ್ರಾಪ್ ನೆಪದಲ್ಲಿ ಹತ್ತಿಕೊಂಡವ ಯಾರು? ಮತ್ತೊಂದು ಕಡೆ ಗ್ಯಾಂಗ್ ಒಂದು ಗುಪ್ತವಾಗಿ ಸಂಚು ರೂಪಿಸಿದೆ. ಒಬ್ಬ ಸೈಕೋ ಕಿಲ್ಲರ್ ಇದೇ ಬಬ್ರೂ ಕಾರಿನ ಹಿಂದೆ ಬಿದ್ದಾನೆ. ಯಾಕೆ? ಇನ್ನೊಂದು ಕಡೆ ಹುಡುಗಿಯೊಬ್ಬಳನ್ನು ನಂಬಿಸಿ ಆಕೆಯನ್ನು ಅಪಹರಿಸಲಾಗಿದೆ. ಆಕೆ ಬೇಕು ಎಂದರೆ ಆ ಸೈಕೋ ಕಿಲ್ಲರ್ ಬಬ್ರೂ ಕಾರು ತಂದು ಕೊಡಬೇಕು. ಆ ಗ್ಯಾಂಗ್‌ಗೆ ಈ ಕಾರಿನ ಅಗತ್ಯವೇನು? ಈ ಎಲ್ಲ ಕುತೂಹಲದ ತಿರುವುಗಳು ಡ್ರಗ್ಸ್‌ನಲ್ಲಿ ಮುಕ್ತಾಯವಾಗುವ ಹೊತ್ತಿಗೆ ಪ್ರೀತಿ ಹೇಳಿಕೊಳ್ಳುವ ಯುವಕನ ಕನಸು ದಾರಿ ಮಧ್ಯ ಕಳೆದು ಹೋಗಿರುತ್ತದೆ. ಬ್ಯಾಗು ತುಂಬಾ ಹಣ ಕೊಟ್ಟ ಆ ಮಹಿಳೆ ಏನೂ ಹೇಳದೆ ಹೊರಟುತ್ತಾಳೆ.

ಹೀಗೆ ಯಾವುದಕ್ಕೂ ಯಾವ ಹಿನ್ನೆಲೆಯೂ ಇಲ್ಲದೆ ಬರುವ ಘಟನೆಗಳಿಂದ ಗೊಂದಲಗಳು ಸೃಷ್ಟಿಯಾಗುತ್ತವೆ. ಇಷ್ಟೂ ಅಂಶಗಳ ನಡುವೆ ಈ ಚಿತ್ರ ಕೊಡುವ ಮತ್ತೊಂದು ಬೋನಸ್ ಪಾಯಿಂಟ್, ಅಮೆರಿಕ ಲ್ಯಾಂಡ್ ಸ್ಕೆಪ್‌ಗಳು, ರಸ್ತೆಗಳು ಹೇಗಿರುತ್ತವೆಂಬುದನ್ನು ತೋರಿಸುತ್ತದೆ. ಅಲ್ಲದೆ ನಟಿ ಸುಮನ್ ನಗರ್‌ಕರ್ ಅವರು ನಟನೆ ಜತೆಗೆ ನಿರ್ಮಾಪಕರಾಗಿಯೂ ಮತ್ತೊಮ್ಮೆ ಕನ್ನಡಕ್ಕೆ ಮರಳುವ ಪ್ರಯತ್ನ ಮಾಡಿದ್ದಾರೆ ಎಂಬುದೇ ಈ ಚಿತ್ರದ ಹೈಲೈಟ್. ಉಳಿದಂತೆ ಅಮೆರಿಕ ರಸ್ತೆಯಲ್ಲಿ ಕತೆ ಎಂಬುದು ಸುಸ್ತಾಗಿ ನಿಲ್ಲುತ್ತದೆ. ತಾಂತ್ರಿಕವಾಗಿ ಪೂರ್ಣ ಚಂದ್ರತೇಜಸ್ವಿ ಅವರು ಮತ್ತೊಮ್ಮೆ ತಮ್ಮ ಸೃಜನಶೀಲತೆ ಮರೆದಿದ್ದಾರೆ.

"

click me!