ಕಡೆಗೂ ಮೆತ್ತಗಾದ ಟ್ವೀಟರ್‌:ಕಾಯಂ ಅಧಿಕಾರಿಗಳ ನೇಮಕ!

By Suvarna NewsFirst Published Aug 7, 2021, 8:22 AM IST
Highlights

* ಸರ್ಕಾರದ ಐಟಿ ನಿಯಮ ಪಾಲಿಸಿದ ಕಂಪನಿ

* ಕಡೆಗೂ ಮೆತ್ತಗಾದ ಟ್ವೀಟರ್‌:ಕಾಯಂ ಅಧಿಕಾರಿಗಳ ನೇಮಕ

* ದೆಹಲಿ ಹೈಕೋರ್ಟ್‌ಗೆ ಮಾಹಿತಿ ಸಲ್ಲಿಸಿದ ಸಂಸ್ಥೆ

* ಕೋರ್ಟ್‌, ಕೇಂದ್ರದ ಚಾಟಿಗೆ ಮಣಿದ ಟ್ವೀಟರ್‌

ನವದೆಹಲಿ(ಆ.07): ಸುಳ್ಳು ಸುದ್ದಿ ಪ್ರಸಾರ ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೊಳಿಸಿದ ಮಾಹಿತಿ ತಂತ್ರಜ್ಞಾನ ನಿಯಮಗಳನ್ನು ಪಾಲಿಸದೆ ಉದ್ಧಟತನ ಮೆರೆದಿದ್ದ ಜಗತ್ಪ್ರಸಿದ್ಧ ಸಾಮಾಜಿಕ ಜಾಲತಾಣ ಟ್ವೀಟರ್‌ ಈಗ ಮೆತ್ತಗಾಗಿದೆ. ಕೇಂದ್ರ ಸರ್ಕಾರದ ಚಾಟಿ ಹಾಗೂ ದೆಹಲಿ ಹೈಕೋರ್ಟ್‌ ತಪರಾಕಿಗಳ ಬಳಿಕ ಐಟಿ ನಿಯಮಗಳ ರೀತ್ಯ ಮೂವರು ಕಾಯಂ ಅಧಿಕಾರಿಗಳನ್ನು ನೇಮಕ ಮಾಡಿರುವುದಾಗಿ ತಿಳಿಸಿದೆ.

ಮುಖ್ಯ ಪಾಲನಾ ಅಧಿಕಾರಿ, ದೂರು ಇತ್ಯರ್ಥ ಅಧಿಕಾರಿ ಹಾಗೂ ನೋಡಲ್‌ ಸಂಪರ್ಕ ಅಧಿಕಾರಿ ಹುದ್ದೆಗಳನ್ನು ಐಟಿ ನಿಯಮಗಳಿಗೆ ಅನುಗುಣವಾಗಿ ಕಾಯಂ ಆಗಿ ನೇಮಕ ಮಾಡಲಾಗಿದೆ ಎಂದು ದೆಹಲಿ ಹೈಕೋರ್ಟ್‌ಗೆ ಶುಕ್ರವಾರ ಪ್ರಮಾಣ ಪತ್ರ ಸಲ್ಲಿಸಿದೆ.

ಈ ಪ್ರತಿಗಳನ್ನು ಕೇಂದ್ರ ಸರ್ಕಾರದ ವಕೀಲರು ಸೇರಿದಂತೆ ಪ್ರತಿವಾದಿಗಳಿಗೆ ನೀಡಲಾಗುವುದು. ಸರ್ಕಾರದ ಸೂಚನೆಯನ್ನು ಪಡೆದು ಆ.10ರಂದು ಸರ್ಕಾರಿ ವಕೀಲರು ಹಾಜರಾಗಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿತು.

ಆ.4ರಂದೇ ಮೂವರೂ ಕಾಯಂ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಟ್ವೀಟರ್‌ ಪರ ಹಿರಿಯ ವಕೀಲ ಸಜನ್‌ ಪೂವಯ್ಯ ನ್ಯಾಯಾಲಯದ ಗಮನಕ್ಕೆ ತಂದರು.

ಕಳೆದ ಫೆಬ್ರವರಿಯಲ್ಲಿ ಐಟಿ ನಿಯಮಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿತ್ತು. ಆ ಪ್ರಕಾರ ದೂರು ಸ್ವೀಕಾರ, ಇತ್ಯರ್ಥಕ್ಕೆ ಅಧಿಕಾರಿಗಳನ್ನು ಟ್ವೀಟರ್‌ ನೇಮಕ ಮಾಡಬೇಕಾಗಿತ್ತು. ಆದರೆ ಹಾಗೆ ಮಾಡದೇ ನಿರ್ಲಕ್ಷ್ಯ ವಹಿಸಿತ್ತು. ಈ ವಿಷಯ ನ್ಯಾಯಾಲಯದ ಮೆಟ್ಟಿಲೇರಿದಾಗ ಅಧಿಕಾರಿಯನ್ನು ನೇಮಕ ಮಾಡಿರುವುದಾಗಿ ತಿಳಿಸಿತ್ತು. ಆದರೆ ಆ ಅಧಿಕಾರಿ ಕಾಯಂ ಆಗಿರದೆ ಹಂಗಾಮಿ ಆಗಿದ್ದರು. ಅದೂ ಅಲ್ಲದೆ ಅವರು ಕೆಲಸ ಬಿಟ್ಟು ಹೋಗಿದ್ದರು. ಈ ವಿಷಯ ತಿಳಿದು ನ್ಯಾಯಾಲಯ ಕೆಂಡಾಮಂಡಲವಾಗಿತ್ತು.

ಒಂದು ವೇಳೆ ಐಟಿ ನಿಯಮಗಳ ರೀತ್ಯ ಟ್ವೀಟರ್‌ ಕಂಪನಿ ಅಧಿಕಾರಿಗಳನ್ನು ನೇಮಕ ಮಾಡದಿದ್ದರೆ, ಮಧ್ಯವರ್ತಿ ಎಂಬ ಪಟ್ಟವನ್ನು ಕಳೆದುಕೊಳ್ಳುತ್ತದೆ. ಇದರಿಂದಾಗಿ ಯಾರೇ ಆಕ್ಷೇಪಾರ್ಹ ಟ್ವೀಟ್‌ ಮಾಡಿದರೂ ಟ್ವೀಟರ್‌ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬಹುದಾಗಿರುತ್ತದೆ. ಮಧ್ಯವರ್ತಿ ಎಂದು ಕರೆಸಿಕೊಂಡರೆ ಈ ಕ್ರಮದಿಂದ ರಕ್ಷಣೆ ಇರುತ್ತದೆ.

click me!