
ಶಿಯೋಮಿ ಕಂಪನಿ ರೆಡ್‌ಮಿ ಸರಣಿಯಲ್ಲಿ ಹೊಸ ಸ್ಮಾರ್ಟ್‌ಫೋನ್ ಪರಿಚಯಿಸಿದೆ. ರೆಡ್‌ಮಿ 17C 5G ಫೋನ್ ಅನ್ನು ಭಾರತದ ಮಾರುಕಟ್ಟೆಗೆ ಲಾಂಚ್ ಮಾಡಿದೆ. ಕಳೆದ ಡಿಸೆಂಬರ್‌ನಲ್ಲಿ ಬಂದಿದ್ದ ರೆಡ್‌ಮಿ 15C ಫೋನಿನ ಮುಂದುವರಿದ ಆವೃತ್ತಿಯಾಗಿ ಈ ಹೊಸ ಫೋನ್ ಎಂಟ್ರಿ ಕೊಟ್ಟಿದೆ. ದೊಡ್ಡ ಡಿಸ್‌ಪ್ಲೇ, ಪವರ್‌ಫುಲ್ ಬ್ಯಾಟರಿ ಹಾಗೂ 5G ಕನೆಕ್ಟಿವಿಟಿ ಇದರ ಪ್ರಮುಖ ಆಕರ್ಷಣೆ. ಮೀಡಿಯಾಟೆಕ್ ಡೈಮೆನ್ಸಿಟಿ 6300 ಚಿಪ್‌ಸೆಟ್‌ನೊಂದಿಗೆ ಈ ಫೋನ್ ಕೆಲಸ ಮಾಡುತ್ತದೆ. ಶಿಯೋಮಿಯ ಹೈಪರ್‌ಓಎಸ್ 3 ಆಪರೇಟಿಂಗ್ ಸಿಸ್ಟಮ್ ಇದರಲ್ಲಿದೆ. ಅಕ್ಟೋಬರ್ 7 ರಿಂದ ಭಾರತದಲ್ಲಿ ಈ ಫೋನ್ ಖರೀದಿಗೆ ಸಿಗಲಿದೆ.
ರೆಡ್‌ಮಿ 17C 5G ಫೋನಿನಲ್ಲಿ 6.9 ಇಂಚಿನ HD+ LCD ಡಿಸ್‌ಪ್ಲೇಯನ್ನು ಕಂಪನಿ ನೀಡಿದೆ. ಇದು 120Hz ರಿಫ್ರೆಶ್ ರೇಟ್ ಹಾಗೂ HBM ಮೋಡ್‌ನಲ್ಲಿ 810 ನಿಟ್ಸ್ ಬ್ರೈಟ್‌ನೆಸ್ ಸಪೋರ್ಟ್ ಮಾಡುತ್ತದೆ. ಸ್ಕ್ರೋಲ್ ಮಾಡುವಾಗ, ವಿಡಿಯೋ ನೋಡುವಾಗ ಮತ್ತು ವೆಬ್ ಬ್ರೌಸ್ ಮಾಡುವಾಗ ಅತ್ಯುತ್ತಮ ಅನುಭವ ನೀಡುವಂತೆ ಕಂಪನಿ ಈ ಡಿಸ್‌ಪ್ಲೇಯನ್ನು ವಿನ್ಯಾಸಗೊಳಿಸಿದೆ. ಕಣ್ಣಿನ ರಕ್ಷಣೆಗೆ ಕಡಿಮೆ ಬ್ಲೂ ಲೈಟ್, ಫ್ಲಿಕರ್ ಫ್ರೀ ಹಾಗೂ ಸರ್ಕಾಡಿಯನ್ ಫ್ರೆಂಡ್ಲಿ ಫೀಚರ್ಸ್ ಜೊತೆಗೆ TUV ರೈನ್‌ಲ್ಯಾಂಡ್ ಸರ್ಟಿಫಿಕೇಶನ್ ಕೂಡ ಈ ಡಿಸ್‌ಪ್ಲೇಗಿದೆ.
ಮೀಡಿಯಾಟೆಕ್ ಡೈಮೆನ್ಸಿಟಿ 6300 ಮೊಬೈಲ್ ಪ್ಲಾಟ್‌ಫಾರ್ಮ್‌ನಲ್ಲಿ ರೆಡ್‌ಮಿ 17C 5G ಫೋನ್ ಕಾರ್ಯನಿರ್ವಹಿಸುತ್ತದೆ. ಮೆಮೊರಿ ಎಕ್ಸ್‌ಟೆನ್ಶನ್ ಫೀಚರ್ ಮೂಲಕ ನೀವು 12GB ವರೆಗೆ RAM ವಿಸ್ತರಿಸಬಹುದು. ಆದರೆ, ಮಾರುಕಟ್ಟೆಯಲ್ಲಿ ಗರಿಷ್ಠ 6GB ಫಿಸಿಕಲ್ RAM ಇರುವ ವೇರಿಯಂಟ್‌ಗಳು ಮಾತ್ರ ಲಭ್ಯವಿವೆ.
ಕಂಪನಿಯು ಫೋಟೋಗ್ರಫಿಗಾಗಿ 50 ಮೆಗಾಪಿಕ್ಸೆಲ್ AI ರಿಯರ್ ಕ್ಯಾಮೆರಾವನ್ನು ಈ ಫೋನಿನಲ್ಲಿ ನೀಡಿದೆ. ಅಲ್ಟ್ರಾ HD, ಪೋರ್ಟ್ರೇಟ್ ಹಾಗೂ ನೈಟ್ ಮೋಡ್‌ನಂತಹ ಕ್ಯಾಮೆರಾ ಫೀಚರ್ಸ್ ಇದರಲ್ಲಿವೆ. ಸೆಲ್ಫಿ ಹಾಗೂ ವಿಡಿಯೋ ಕಾಲಿಂಗ್‌ಗಾಗಿ ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಕ್ಯಾಮೆರಾ ಅಳವಡಿಸಿದೆ.
6,000mAh ಸಾಮರ್ಥ್ಯದ ಬ್ಯಾಟರಿ ರೆಡ್‌ಮಿ 17C 5G ಫೋನಿನ ಮತ್ತೊಂದು ಪ್ರಮುಖ ಹೈಲೈಟ್. ಇದು 33W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ. 1,000 ಬಾರಿ ಪೂರ್ಣ ಚಾರ್ಜಿಂಗ್ ಸೈಕಲ್ ಮುಗಿದ ಮೇಲೂ ಬ್ಯಾಟರಿಯ ಶೇ.80 ರಷ್ಟು ಸಾಮರ್ಥ್ಯ ಹಾಗೆಯೇ ಉಳಿಯುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಕಂಪನಿಯು ಈ ಫೋನಿಗೆ IP64 ರೇಟಿಂಗ್ ನೀಡಿದೆ. ಅಂದರೆ, ಧೂಳು ಮತ್ತು ನೀರಿನ ಹನಿಗಳಿಂದ ಫೋನ್ ಸುರಕ್ಷಿತವಾಗಿರುತ್ತದೆ. ಬೆರಳುಗಳಲ್ಲಿ ತೇವಾಂಶ, ಎಣ್ಣೆ ಅಥವಾ ಸೋಪು ಇದ್ದರೂ ಟಚ್ ಸ್ಕ್ರೀನ್ ಕೆಲಸ ಮಾಡಲು ವೆಟ್ ಟಚ್ ಟೆಕ್ನಾಲಜಿ 2.0 ಅನ್ನು ಫೋನಿನಲ್ಲಿ ಅಳವಡಿಸಿದೆ.
ಆಂಡ್ರಾಯ್ಡ್ 16 ಆಧಾರಿತ ಶಿಯೋಮಿ ಹೈಪರ್‌ಓಎಸ್ 3 ನಲ್ಲಿ ರೆಡ್‌ಮಿ 17C 5G ಫೋನ್ ರನ್ ಆಗುತ್ತದೆ. ಗೂಗಲ್ ಜೆಮಿನಿ, ಸರ್ಕಲ್ ಟು ಸರ್ಚ್‌ನಂತಹ ಫೀಚರ್ಸ್ ಕೂಡ ಸಿಗಲಿವೆ. ಆದರೆ, ಪ್ರದೇಶ ಮತ್ತು ಸಾಧನಕ್ಕೆ ಅನುಗುಣವಾಗಿ ಇವುಗಳ ಲಭ್ಯತೆ ಬದಲಾಗಬಹುದು. ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಹಾಗೂ 200% ವಾಲ್ಯೂಮ್ ಬೂಸ್ಟ್ ಇದರ ಇತರ ವಿಶೇಷತೆಗಳು.
4GB RAM ಮತ್ತು 128GB ಸ್ಟೋರೇಜ್ ಮಾಡೆಲ್ ಬೆಲೆ 20,999 ರೂಪಾಯಿ. 6GB RAM ಮತ್ತು 128GB ಸ್ಟೋರೇಜ್ ವೇರಿಯಂಟ್ ಖರೀದಿಸಲು 22,999 ರೂಪಾಯಿ ನೀಡಬೇಕು. ಡಾರ್ಕ್ ನೈಟ್, ಕಾಫಿ ಬ್ರೂ ಹಾಗೂ ಪರ್ಪಲ್ ಡಾನ್ ಎಂಬ 3 ಬಣ್ಣಗಳಲ್ಲಿ ಈ ಫೋನ್ ಲಭ್ಯವಿದೆ. ಅಕ್ಟೋಬರ್ 7 ರಿಂದ Mi.com, ಅಮೆಜಾನ್ ಇಂಡಿಯಾ ಹಾಗೂ ಶಿಯೋಮಿ ರಿಟೇಲ್ ಸ್ಟೋರ್‌ಗಳ ಮೂಲಕ ರೆಡ್‌ಮಿ 17C 5G ಸೇಲ್ ಶುರುವಾಗಲಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.