ಕಡಿಮೆ ಬೆಲೆಯ ಬಡವರ ಬಂಧು, ಒನ್‌ ಪ್ಲಸ್‌ ನಾರ್ಡ್‌ 2 5ಜಿ ಫೋನ್!

By Kannadaprabha NewsFirst Published Sep 14, 2021, 3:28 PM IST
Highlights
  • ನಾರ್ಡ್‌ ಸಿಇ ಎಂಬ ಕೋರ್‌ ಎಡಿಷನ್‌ ಫೋನನ್ನು ಮಾರುಕಟ್ಟೆ
  • ಆರಂಭಿಕ ಬೆಲೆ 27,999 ರುಪಾಯಿ, 6ಜಿಬಿ ರಾಮ್‌, 128 ಜಿಬಿ ಸ್ಟೋರೇಜ್
  • ಒಳ್ಳೆಯ ಕ್ಯಾಮರಾ, ಹಿತವಾದ ಅನುಭವಕ್ಕೆ ಬೆಸ್ಟ್ ಫೋನ್
     

ಬೆಂಗಳೂರು(ಸೆ.14):  ಒನ್‌ ಪ್ಲಸ್‌ ಕೊಳ್ಳಬೇಕು, ಆದರೆ ಜೇಬಿಗೆ ಹೊರೆ ಆಗಬಾರದು ಅಂತ ಆಸೆಪಡುತ್ತಿದ್ದ ಗ್ರಾಹಕರನ್ನು ಮೆಚ್ಚಿಸಲು ಸರಿಸುಮಾರು ವರುಷದ ಹಿಂದೆ ವನ್‌ ಪ್ಲಸ್‌ ನಾರ್ಡ್‌ ಎಂಬ ಫೋನನ್ನು ಮಾರುಕಟ್ಟೆಗೆ ಬಿಟ್ಟಿತು. ಅದು ಜನಪ್ರಿಯವಾಯಿತೋ ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಿಲ್ಲ. ಅದರ ಬೆಲೆ ಅದು ಕೊಡುವ ಸೌಲಭ್ಯಗಳಿಗೆ ಕೊಂಚ ದುಬಾರಿ ಅನ್ನಿಸಿತೇನೋ ಎಂದು ಗ್ರಾಹಕ ಅದನ್ನು ಕೊಳ್ಳಲು ಕೊಂಚ ಹಿಂಜರಿದ.

ಭಾರತೀಯ ಮಾರುಕಟ್ಟೆಗೆ OnePlus TV U1S ಟಿವಿ ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

ಅಂಥ ಗ್ರಾಹಕರನ್ನು ಒಳಗೊಳ್ಳಲೆಂದೇ ವನ್‌ ಪ್ಲಸ್‌ ಇದೇ ವರುಷದ ಜೂನ್‌ ತಿಂಗಳಲ್ಲಿ ನಾರ್ಡ್‌ ಸಿಇ ಎಂಬ ಕೋರ್‌ ಎಡಿಷನ್‌ ಫೋನನ್ನು ಮಾರುಕಟ್ಟೆಗೆ ತಂದಿತು. ಈ ಕೋರ್‌ ಎಡಿಷನ್‌ ಬೆಲೆ ಕೈಗೆಟುಕುವಂತೆ ಇತ್ತು. ಹಾಗೂ ಫೋನ್‌ ಕೂಡ ನೋಡುವುದಕ್ಕೂ ಗುಣಮಟ್ಟದಲ್ಲೂ ದಕ್ಷತೆಯಲ್ಲೂ ನಾರ್ಡ್‌ ಮೂಲ ಫೋನನ್ನೇ ಹೋಲುತ್ತಿತ್ತು. ಅಷ್ಟಾಗಿ ದಿಟ್ಟಿಯಿಟ್ಟು ಗಮನಿಸದ ಗ್ರಾಹಕರಿಗೆ ವೇಗದಲ್ಲಾಗಲೀ, ದಕ್ಷತೆಯಲ್ಲಾಗಲೀ ಅಂಥ ವ್ಯತ್ಯಾಸ ಕಾಣಲು ಸಾಧ್ಯವೇ ಇರಲಿಲ್ಲ. ಹೀಗಾಗಿ ನಾರ್ಡ್‌ ಸಿಇ ಜನಪ್ರಿಯವೂ ಆಯಿತು.

ಈಗ ಮೂರನೆಯದಾಗಿ, ಒಂದೇ ತಿಂಗಳ ಅಂತರದಲ್ಲಿ ನಾರ್ಡ್‌ 2 ಎಂಬ ಮತ್ತೊಂದು ವರ್ಷನ್ನನ್ನು ವನ್‌ ಪ್ಲಸ್‌ ಹೊರತಂದಿದೆ. ಇದು ಕೂಡ ಫೈವ್‌ಜಿ ಫೋನ್‌ ಮತ್ತು ಇದರ ಬೆಲೆ ಕೋರ್‌ ಎಡಿಷನ್‌ಗಿಂತ ಜಾಸ್ತಿ. ಆದರೆ ಗ್ರಾಹಕ ಇದನ್ನು ಕೊಳ್ಳುವುದಕ್ಕೆ ಸಕಾರಣಗಳೂ ಇವೆ.

ಭಾರತದಲ್ಲಿ ಒನ್ ಪ್ಲಸ್ ಸ್ಮಾರ್ಟ್ ವಾಚ್ ಬಿಡುಗಡೆ!

ಇದರ ಕೆಮರಾ ರೆಸಲ್ಯೂಷನ್‌ ಜಾಸ್ತಿಯಿದೆ, 5ಜಿ ಕನೆಕ್ಟಿವಿಟಿಯಿದೆ, ಸ್ಟೀರಿಯೋ ಸ್ಪೀಕರುಗಳಿವೆ. ಅದೆಲ್ಲ ಸರಿ, ಅಂದರೆ ಬೆಲೆಯೂ ಜಾಸ್ತಿಯಿರಬೇಕಲ್ಲ ಅಂತ ಕೇಳಿದರೆ ಅನುಮಾನವೇ ಬೇಕಿಲ್ಲ. ಇದರ ಆರಂಭಿಕ ಬೆಲೆ 27,999 ರುಪಾಯಿ. ಈ ಬೆಲೆಗೆ ನಿಮಗೆ 6ಜಿಬಿ ರಾಮ್‌, 128 ಜಿಬಿ ಸ್ಟೋರೇಜಿನ ಫೋನು ಸಿಗುತ್ತದೆ. ಎರಡು ಸಾವಿರ ಜಾಸ್ತಿ ಕೊಟ್ಟರೆ 8 ಜಿಬಿ ರಾಮ್‌ ಬರುತ್ತದೆ. ಮತ್ತೂ ಐದು ಸಾವಿರ ಹೆಚ್ಚಿಗಿಟ್ಟರೆ 256 ಜಿಬಿ ಸ್ಟೋರೇಜಿನ ಜೊತೆಗೆ 12 ಜಿಬಿ ರಾಮ್‌ ನಿಮ್ಮದಾಗುತ್ತದೆ. ಮೂರು ವರ್ಣಗಳಲ್ಲಿ ಆಯ್ಕೆಯೂ ಇದೆ. ನಮ್ಮ ಫೇವರಿಟ್‌ ಗ್ರೀನ್‌ ವುಡ್‌.

ಇಲ್ಲಿ ಪವರ್‌ ಬಟನ್‌ ಬಲಬದಿಯಲ್ಲೂ ವಾಲ್ಯೂಮ್‌ ಬಟನ್‌ ಎಡದಲ್ಲೂ ಇದೆ. ಇದು ಐಫೋನ್‌ ಮಾದರಿ. ಎಡಗೈಯಲ್ಲಿ ಫೋನ್‌ ಹಿಡಕೊಂಡು ಬಳಸುವವರಿಗೆ ಇದು ಅನುಕೂಲಕರ. ಈ ಬದಲಾವಣೆಯನ್ನು ವನ್‌ ಪ್ಲಸ್‌ ಗ್ರಾಹಕರು ಸ್ವಾಗತಿಸಬಹುದು. ಮಿಕ್ಕಂತೆ ಒಂದು ಚುಕ್ಕಿಯಷ್ಟುಚಿಕ್ಕ ಕೆಮರಾದಿಂದಾಗಿ ಡಿಸ್‌-ಪ್ಲೇ ಜಾಗ ಹೆಚ್ಚಾಗಿದೆ. ಸಿನಿಮಾ ನೋಡುವುದಕ್ಕಿದು ಹೇಳಿ ಮಾಡಿಸಿದ ಫೋನು. ಬೇಗನೇ ಬಿಸಿಯಾಗುವುದಿಲ್ಲ ಅನ್ನೋದು ಹೆಚ್ಚುಗಾರಿಕೆ. ಆದರೆ ಹೆಚ್ಚು ಹೊತ್ತು ಫೋನು ಕೈಯಲ್ಲಿದ್ದರೆ ಮಿಕ್ಕವರ ತಲೆ ಬಿಸಿಯಾಗಬಹುದು, ಅದಕ್ಕೆ ಸಂಸ್ಥೆ ಹೊಣೆಯಲ್ಲ.

ಆದರೆ 35,000 ರುಪಾಯಿ ಕೊಟ್ಟು ಫೋನ್‌ ಕೊಂಡುಕೊಂಡರೂ ನೀವು ಸಂಗೀತ ಕೇಳುವುದು ಕಷ್ಟ. ಅದರಲ್ಲಿ ಮಾಮೂಲಾಗಿ ಎಲ್ಲದರಲ್ಲೂ ಕಂಡುಬರುವ 3.5ಎಂಎಂ ಹೆಡ್‌ ಫೋನ್‌ ಜ್ಯಾಕ್‌ ಇಲ್ಲ. ಅದೇ ನಾರ್ಡ್‌ ಸಿಇ 5ಜಿಯಲ್ಲಿ ಅದು ಲಭ್ಯವಿದೆ. ಇಲ್ಲಿ ಸಂಗೀತ ಕೇಳಬೇಕಿದ್ದರೆ ನೀವು ಮತ್ತಷ್ಟುದುಡ್ಡು ತೆತ್ತು ಹೆಡ್‌ ಫೋನ್‌ ಕೊಳ್ಳಬೇಕು. ಬೇಕಾಗಿಲ್ಲ, ಇಲ್ಲಿ ಸ್ಟೀರಿಯೋ ಸ್ಪೀಕರ್‌ ಇದೆ ಅಂತ ಹೇಳಬಹುದು, ಆದರೆ ಗುಟ್ಟಾದ ಸಂದೇಶಗಳನ್ನು ಕಿವಿ ಮಾತ್ರ ಕೇಳಬೇಕು ಅನ್ನುವವರಿಗೆ ಅದರಿಂದ ಲಾಭವಿಲ್ಲ.

ಹಿತಾನುಭವ ಕೊಡುವ ಈ ಫೋನಿನ ಬ್ಯಾಟರಿ 4500 ಎಂಎಎಚ್‌. 50 ಮೆಗಾ ಪಿಕ್ಸೆಲ್‌ನ ಸೋನಿ ಕ್ಯಾಮರಾ ಇಲ್ಲುಂಟು. ಅದು ವನ್‌ ಪ್ಲಸ್‌ 9ಲ್ಲೂ ಇತ್ತು. ವನ್‌ ಪ್ಲಸ್‌ ಹೊಸ ಮಾಡೆಲ್‌ ಬೆಲೆ ಎಷ್ಟಿರುತ್ತದೋ ಯಾರಿಗೆ ಗೊತ್ತು? ಈ ಫೋನಿನ ವಿಚಾರದಲ್ಲಿ ಕೊಡುವ ದುಡ್ಡಿಗೆ ಮೋಸವಿಲ್ಲ. ಹೀಗಾಗಿ ಒಳ್ಳೆಯ ಕ್ಯಾಮರಾ, ಹಿತವಾದ ಅನುಭವ ಬೇಕೆನ್ನುವವರು ಇದನ್ನು ಕಣ್ಮುಚ್ಚಿ ಕೊಳ್ಳಬಹುದು.

click me!