ಚೀನಾದ ಫೋನು ಕೊಳ್ಳುವುದೋ ಬೇಡವೋ ಎಂಬ ಚರ್ಚೆ ಶುರುವಾಗಿದೆ. ಅದರ ಜೊತೆಗೇ ಕೊರೋನಾ ಕೂಡ ಹೊಸ ಫೋನುಗಳ ಪಾಲಿಗೆ ಶತ್ರುವಿನಂತೆ ತೋರುತ್ತಿದೆ. ಇಂಥ ಹೊತ್ತಲ್ಲಿ 1 ಪ್ಲಸ್ 8 ತನ್ನ ಗಮನ ಸೆಳೆಯುವ ವಿನ್ಯಾಸ ಮತ್ತು ಆಕರ್ಷಕ ಬೆಲೆಯೊಂದಿಗೆ ಮಾರುಕಟ್ಟೆಯಲ್ಲಿ ಹಾಜರಾಗಿದೆ.
ನವದೆಹಲಿ, (ಜೂನ್.13): ಕೊರೋನಾ ಹೊತ್ತಲ್ಲಿ 1 ಪ್ಲಸ್ 8 ತನ್ನ ಗಮನ ಸೆಳೆಯುವ ವಿನ್ಯಾಸ ಮತ್ತು ಆಕರ್ಷಕ ಬೆಲೆಯೊಂದಿಗೆ ಮಾರುಕಟ್ಟೆಯಲ್ಲಿ ಲಗ್ಗೆ ಇಟ್ಟಿದೆ. ಬಹುಶಃ ವನ್ ಪ್ಲಸ್ ಸರಣಿಯಲ್ಲಿಯೇ ಇದು ಸೊಗಸಾದ ವಿನ್ಯಾಸ ಹೊಂದಿರುವ ಫೋನ್ ಎನ್ನಬಹುದು.
ಕೈಯೊಳಗೆ ಆರಾಮವಾಗಿ ಹುದುಗುವ, ಫಕ್ಕನೆ ಹಿಡಿತ ತಪ್ಪದ ಒನ್ ಪ್ಲಸ್ 8, ತನ್ನ ಪೂರ್ವಜರ ಎಲ್ಲಾ ಸದ್ಗುಣಗಳ ಜೊತೆಗೇ ಹೊಸ ಸ್ಕಿಲ್ಲುಗಳನ್ನೂ ಕಲಿತುಕೊಂಡು ಮಾರುಕಟ್ಟೆಗೆ ಕಾಲಿಟ್ಟಿದೆ. ಜೂನ್ 15ರಿಂದ ಈ ಫೋನು ಫೋನ್ ಅಂಗಡಿಗಳಲ್ಲೂ ಸಿಗಲಿವೆ.
ಒನ್‌ಪ್ಲಸ್ ಇಟ್ ಈಕ್ವಲ್ ಟು 8 ಲೆಕ್ಕಾಚಾರ ಶುರು!
ಮೊದಲ ಫೋನಿನಿಂದ ಈಗ ಬಂದಿರುವ ಎಂಟನೆಯ ಬಂಟನ ತನಕ, ವನ್ ಪ್ಲಸ್ ನಿಧಾನವಾಗಿ ಬದಲಾಗುತ್ತಾ ಸಾಗಿದ್ದನ್ನು ಗಮನಿಸಬಹುದು. ವನ್ ಪ್ಲಸ್ ತಾನು ಆ್ಯಪಲ್ ಫೋನ್ ಆಗಲು ಹವಣಿಸುತ್ತಿರುವ ಹೊತ್ತಿಗೇ, ಆ್ಯಪಲ್ ತಾನು ಒನ್ ಪ್ಲಸ್ ಜಾತಿಗೆ ಸೇರಿದ್ದಲ್ಲ ಎಂದು ಸಾಬೀತು ಮಾಡಲು ಹೆಣಗಾಡುತ್ತಿರುವುದನ್ನೂ ಕಾಣಬಹುದು.
ಒನ್ ಪ್ಲಸ್ 8ನ ವಿಶೇಷತೆಗಳು
ಹಾಗೆ ನೋಡಿದರೆ ಒನ್ ಪ್ಲಸ್, ಸ್ಯಾಮ್ಸಂಗ್‌ಗಳೆಲ್ಲ ಅಳವಡಿಸಿಕೊಂಡ ಎಷ್ಟೋ ಅನುಕೂಲಗಳನ್ನು ಆ್ಯಪಲ್ ನಿರಾಕರಿಸುತ್ತಾ ಬಂದು, ಇತ್ತೀಚೆಗಷ್ಟೇ ಬೆಲೆಯನ್ನೂ ಇಳಿಸಿಕೊಂಡಿದೆ. ಇದೀಗ ಒನ್ ಪ್ಲಸ್ ಬರೋಬ್ಬರಿ 49,999 ರುಪಾಯಿಗೆ ತನ್ನ ಹೊಸ ನಿರಾಭರಣ ನಿರ್ಮಿತಿಯನ್ನು ಗ್ರಾಹಕರ ಕೈಗಿಟ್ಟಿದೆ. ವನ್ ಪ್ಲಸ್ 7 ಪ್ರೋಗಿಂತ ಸಾಕಷ್ಟುಸುಧಾರಿತ ತಳಿ ಇದು. ವಿನ್ಯಾಸ ಬದಲಾಗಿದೆ. 865 ಕ್ವಾಲ್‌ಕಾಮ್ ಸ್ನಾಪ್ ಡ್ರಾಗನ್ ಪ್ರೊಸೆಸರ್ ಇದರಲ್ಲಿದೆ. ಇದು ಎಲ್ಲಾ ಬೆಂಚ್‌ಮಾರ್ಕ್ಗಳಲ್ಲೂ ಮೊದಲನೆಯ ಸ್ಥಾನದಲ್ಲಿ ಗೆದ್ದುಬಂದ ಪ್ರಾಸೆಸರ್. ಇದರ ಜೊತೆ 5ಜಿ ಕೂಡ ಲಭ್ಯ. ಸದ್ಯಕ್ಕೆ ಅದರಿಂದೇನೂ ಉಪಯೋಗ ಇಲ್ಲದೇ ಹೋದರೆ ಬಿಟ್ಟಿಬಂದರೆ ಬಿದ್ದಿರಲಿ ಬಿಡಿ!
48 ಮೆಗಾಫಿಕ್ಸೆಲ್‌ನ ಮೂರು ಕೆಮರಾ ಉಂಟು
ಈ ಫೋನಿನ ರಿಫ್ರೆಷ್ ರೇಟ್ ಅಸಾಮಾನ್ಯ. 90ಹರ್ಟ್‌ಜ ರಿಫ್ರೆಷ್ ರೇಟ್‌ನಿಂದಾಗಿ ಸ್ಕ್ರಾಲಿಂಗ್, ಸ್ವೈಪಿಂಗ್ ಮತ್ತು ನೇವಿಗೇಟಿಂಗ್ ವೇಗ ಇಮ್ಮಡಿಗೊಂಡಿದೆ. ಇದನ್ನು ಒನ್ ಪ್ಲಸ್ 8 ಚಲಿಸುವ ಕಾವ್ಯ ಎಂದು ಕರೆದು ಸಂಭ್ರಮಿಸಿದೆ. ತೆಳ್ಳಗಿನ, ಸ್ಲೀಕ್ ಆದ ಫೋನ್, ಅದರ ಸೊಗಸಾದ ಕವ್‌ರ್ ಇರುವ ಮೈಮಾಟದ ಜೊತೆಗೇ 48 ಮೆಗಾಫಿಕ್ಸೆಲ್‌ನ ಮೂರು ಕೆಮರಾಗಳಿವೆ. ಫೋಟೋಗ್ರಫಿಗಿದು ಹೇಳಿ ಮಾಡಿಸಿದ ಫೋನು.
ಕ್ಲೋಸಪ್ ಮೋಡ್ ಜೊತೆಗೇ ಹಲವಾರು ಹೊಸ ಸೌಲಭ್ಯಗಳನ್ನೂ ಕೊಟ್ಟಿದೆ. ಪ್ರಾಣಿಗಳನ್ನು ಗುರುತಿಸಿ, ಅದರ ಫೋಟೋ ತೆಗೆಯಲು ತಕ್ಕಂತೆ ಬದಲಾಗುವುದಕ್ಕೆ ಪೆಟ್ ಡಿಟೆಕ್ಷನ್ ಮೋಡ್ ಇದೆ. ಕ್ಲೋಸಪ್ ಜೊತೆಗೇ ವೈಡ್ ಆ್ಯಂಗಲ್ ಕೂಡ ಉಂಟು. ವನ್ ಪ್ಲಸ್ ಸರಣಿಯ ಫೋನುಗಳ ಹೆಚ್ಚುಗಾರಿಕೆಯೆಂದರೆ ಢಾಳಾದ ಡಿಸ್‌ಪ್ಲೇ. ಇಲ್ಲೂ ಅದು ಮುಂದುವರಿದಿದೆ. ಡಿಸ್‌ಪ್ಲೇ ಮೇಟ್ ಇದಕ್ಕೆ ಎ ಪ್ಲಸ್ ರೇಟಿಂಗ್ ಕೊಟ್ಟಿದೆ. ಹಾಗೆಯೇ ಎಸ್‌ಜಿಎಸ್ ಐ ಕೇರ್ ಡಿಸ್‌ಪ್ಲೇ ಸರ್ಟಿಫಿಕೇಟನ್ನೂ ಪಡೆದಿದೆ.
ಬ್ಯಾಟರಿಯ ಬಗ್ಗೆ ಮಾತಾಡುವಂತಿಲ್ಲ
ಹೌದು...ಬ್ಯಾಟರಿಯ ಬಗ್ಗೆ ಮಾತಾಡುವಂತಿಲ್ಲ. ನಾವು ಫೋಟೋ ಮತ್ತು ಸಂಗೀತ ಕೇಳಲು ಮಾತ್ರ ಬಳಸಿದಾಗ ಈ ಫೋನ್ ಬ್ಯಾಟರಿ 4 ದಿನಗಳ ಕಾಲ ಬಾಳಿಕೆ ಬಂತು. 22 ನಿಮಿಷಗಳಲ್ಲಿ 50 ಪರ್ಸೆಂಟ್ ಬ್ಯಾಟರಿ ಚಾರ್ಜರ್ ಆಗುವ ವಾಪ್‌ರ್ ಚಾರ್ಜರ್ ಜೊತೆಗಿದೆ. 4300 ಎಂಎಎಚ್ ಬ್ಯಾಟರಿಯೂ ಇದೆ.
ಒನ್ ಪ್ಲಸ್ 7ನಲ್ಲಿ ಏನಿದೆಯೋ ಅದೇ ಇಲ್ಲಿಯೂ ಉಂಟು
ಇದರಾಚೆಗೆ ಏನಿದೆ ಅಂತ ಕೇಳಿದರೆ ಒನ್ ಪ್ಲಸ್ 7ನಲ್ಲಿ ಏನಿದೆಯೋ ಅದೇ ಇಲ್ಲಿಯೂ ಉಂಟು. ಅದಕ್ಕಿಂತ ಇದರಲ್ಲಿ ಮಹಾನ್ ಸುಧಾರಣೆಯೇನೂ ಆದಂತಿಲ್ಲ. ಈ ಫೋನಿಗೆ 50000 ಕೊಡುವುದೋ, ಇನ್ನೊಂದೈದು ತಿಂಗಳಲ್ಲಿ ಬರಲಿರುವ ಒನ್ ಪ್ಲಸ್ 8Tಗೆ ಕಾಯುವುದೋ ಎಂಬ ದ್ವಂದ್ವ ನಿಮ್ಮನ್ನು ಕಾಡಿದರೆ, ಅದು ಸಹಜ ಮತ್ತು ಲಾಭದಾಯಕ.