ನಿಮ್ಮ ಸ್ಮಾರ್ಟ್‌ಫೋನ್ ಸ್ಕ್ರೀನ್ ಗಾರ್ಡ್‌ಗೆ ಕಾದಿದೆ ದೊಡ್ಡ ಕಂಟಕ! 2027ರ ಏಪ್ರಿಲ್ 1ರಿಂದ ಈ ನಿಯಮ ಅನ್ವಯ

Published : Sep 23, 2026, 09:59 AM IST
Smartphone

ಸಾರಾಂಶ

ಕೇಂದ್ರ ಸರ್ಕಾರವು 2027ರ ಏಪ್ರಿಲ್ 1ರಿಂದ ಕಳಪೆ ಗುಣಮಟ್ಟದ ಸ್ಮಾರ್ಟ್‌ಫೋನ್ ಸ್ಕ್ರೀನ್ ಗಾರ್ಡ್‌ಗಳನ್ನು ನಿಷೇಧಿಸಲು ನಿರ್ಧರಿಸಿದೆ. ಇನ್ನು ಮುಂದೆ ಸ್ಕ್ರೀನ್ ಗಾರ್ಡ್‌ಗಳು ಕಡ್ಡಾಯವಾಗಿ ಬಿಐಎಸ್ (BIS) ಮಾನದಂಡಗಳನ್ನು ಪಾಲಿಸಬೇಕಾಗುತ್ತದೆ. ಇದರಿಂದ ಮಾರುಕಟ್ಟೆಯಲ್ಲಿ ಸ್ಕ್ರೀನ್ ಗಾರ್ಡ್‌ಗಳ ಬೆಲೆ ಹೆಚ್ಚಾಗುವ ಸಾಧ್ಯತೆಯಿದೆ.

ನವದೆಹಲಿ: ನಿಗದಿತ ಗುಣಮಟ್ಟದ ಮಾನದಂಡಗಳನ್ನು ಪೂರೈಸದ ಕಳಪೆ ಸ್ಮಾರ್ಟ್‌ಫೋನ್ ಸ್ಕ್ರೀನ್ ಗಾರ್ಡ್‌ಗಳನ್ನು 2027ರ ಏ.1ರಿಂದ ನಿಷೇಧಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಸ್ಕ್ರೀನ್ ಗಾರ್ಡ್‌ಅನ್ನು ‘ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್’ ನೋಂದಣಿ ಚೌಕಟ್ಟಿನ ವ್ಯಾಪ್ತಿಗೆ ತಂದಿದೆ. ಹೀಗಾಗಿ ಅಂತಹ ಉತ್ಪನ್ನಗಳು 2027ರ ಏ.1ರಿಂದ ಭಾರತೀಯ ಮಾನದಂಡವನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತವೆ.

ಸೋಮವಾರ ಈ ಬಗ್ಗೆ ಹೊರಡಿಸಲಾಗಿರುವ ಅಧಿಸೂಚನೆಯಲ್ಲಿ, ಕಳಪೆ ಸ್ಟ್ರೀನ್‌ ಪ್ರೊಟೆಕ್ಟರ್‌ಗಳನ್ನು ತಕ್ಷಣದಿಂದ ನಿಷೇಧಿಸುವ ಬಗ್ಗೆ ಘೋಷಿಸಲಾಗಿಲ್ಲ. ಬದಲಿಗೆ, ಮಾನದಂಡಗಳಿಗೆ ಹೊಂದಿಕೆಯಾಗುವಂತೆ ತಮ್ಮ ಉತ್ಪನ್ನಗಳ ಗುಣಮಟ್ಟ ಇರುವಂತೆ ಮಾಡಲು ಮುಂದಿನ ವರ್ಷದ ಏಪ್ರಿಲ್‌ ವರೆಗೆ ಉತ್ಪಾದಕರಿಗೆ ಹಾಗೂ ಆಮದುದಾರರಿಗೆ ಸಮಯಾವಕಾಶ ನೀಡಲಾಗಿದೆ. ಆ ಬಳಿಕ ಸ್ಕ್ರೀನ್‌ಗಾರ್ಡ್‌ಗೆ ‘IS 19348:2025’ ಮಾನದಂಡ ಅನುಸರಣೆ ಕಡ್ಡಾಯವಾಗಲಿದೆ.

ಬೆಲೆ ಹೆಚ್ಚಳ?:

ಈಗ ಸ್ಕ್ರೀನ್‌ ಗಾರ್ಡ್‌ಗಳು ಎಲ್ಲೆಂದರಲ್ಲಿ ಸಿಗುತ್ತಿವೆ. ಆದರೆ ಮಾನದಂಡ ಕಡ್ಡಾಯದ ಬಳಿಕ ಅವುಗಳ ಲಭ್ಯತೆ ಕಮ್ಮಿ ಆಗಬಹುದು. ಇದರಿಂದ ಸ್ಕ್ರೀನ್‌ ಗಾರ್ಡ್‌ಗಳ ಬೆಲೆ ಹೆಚ್ಚಲಿದೆ ಎನ್ನಲಾಗಿದೆ.

ಹೊಸ ಮಾರ್ಗಸೂಚಿಯಲ್ಲಿ ಏನಿದೆ?:

ಹೊಸ ಮಾನದಂಡಗಳ ಅಡಿಯಲ್ಲಿ ಗಾಜಿನ ಗುಣಮಟ್ಟ, ಸ್ಪಷ್ಟತೆ, ಒಡೆಯದಂತಹ ಫಿಲ್ಮ್, ಒಲಿಯೊಫೋಬಿಕ್ ಲೇಪನ, ಪ್ರಜ್ವಲಿಸುವಿಕೆ ನಿರೋಧಕ, ನೀಲಿ ಬೆಳಕಿನ ಫಿಲ್ಟರ್‌ ಮತ್ತು ಗೌಪ್ಯತೆ ಫಿಲ್ಮ್‌ಗಳು ಇರುವುದು ಕಡ್ಡಾಯ. ಜತೆಗೆ, ಉತ್ಪಾದಕರ ಮಾಹಿತಿ, ಬ್ಯಾಚ್‌ ಸಂಖ್ಯೆ ಸೇರಿದಂತೆ ಅದಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಪ್ಯಾಕೆಟ್‌ನ ಹೊರಗೆ ಮುದ್ರಿಸಬೇಕಾಗುವುದು.

ಹೊಸ ಮಾರ್ಗಸೂಚಿ ಹಾಗೂ ಗುಣಮಟ್ಟದ ಷರತ್ತುಗಳು

ಹೊಸ ನಿಯಮಾವಳಿಗಳ ಪ್ರಕಾರ, ಮಾರುಕಟ್ಟೆಯಲ್ಲಿ ಲಭ್ಯವಿರುವ ಪ್ರತಿಯೊಂದು ಸ್ಕ್ರೀನ್‌ಗಾರ್ಡ್‌ ಕೆಳಗಿನ ತಾಂತ್ರಿಕ ಮಾನದಂಡಗಳನ್ನು ಪೂರೈಸುವುದು ಕಡ್ಡಾಯವಾಗಿರುತ್ತದೆ:

ಗಾಜಿನ ಸ್ಪಷ್ಟತೆ ಹಾಗೂ ಗುಣಮಟ್ಟ: ಸ್ಕ್ರೀನ್‌ಗಾರ್ಡ್‌ನಲ್ಲಿ ಬಳಸುವ ಗ್ಲಾಸ್ ಉನ್ನತ ಮಟ್ಟದ ದೃಶ್ಯ ಸ್ಪಷ್ಟತೆ (Optical Clarity) ಹೊಂದಿರಬೇಕು.

ಒಡೆಯದಂತಹ ಫಿಲ್ಮ್ (Shatterproof Film): ಫೋನ್ ಬಿದ್ದಾಗ ಗ್ಲಾಸ್ ಚೂರುಚೂರಾಗಿ ಹಾರದೆ, ಗಾಯಗಳನ್ನು ತಡೆಯುವಂತಹ ಸುರಕ್ಷತಾ ಫಿಲ್ಮ್ ಇರಬೇಕು.

ವಿಶೇಷ ಲೇಪನ ಹಾಗೂ ಫಿಲ್ಟರ್‌ಗಳು: ಕೈಬೆರಳ ಅಚ್ಚುಗಳನ್ನು ತಡೆಯುವ ಒಲಿಯೊಫೋಬಿಕ್ ಲೇಪನ (Oleophobic coating), ಕಣ್ಣಿಗೆ ಬೆಳಕಿನ ಪ್ರಖರತೆ ತಾಕದಂತೆ ತಡೆಯುವ ಪ್ರಜ್ವಲಿಸುವಿಕೆ ನಿರೋಧಕ (Anti-glare), ಹಾನಿಕಾರಕ ನೀಲಿ ಬೆಳಕಿನ ಫಿಲ್ಟರ್ (Blue Light Filter) ಹಾಗೂ ಗೌಪ್ಯತೆ ಫಿಲ್ಮ್ (Privacy Filter) ಮಾನದಂಡಗಳು ಇರಬೇಕು.

ಪ್ಯಾಕೇಜಿಂಗ್ ಮಾಹಿತಿ: ಪ್ರತಿಯೊಂದು ಸ್ಕ್ರೀನ್‌ಗಾರ್ಡ್ ಪ್ಯಾಕೆಟ್‌ನ ಹೊರಭಾಗದಲ್ಲಿ ಉತ್ಪಾದಕರ ಹೆಸರು, ವಿಳಾಸ, ಬ್ಯಾಚ್ ಸಂಖ್ಯೆ ಮತ್ತು ಸಂಬಂಧಿತ ತಾಂತ್ರಿಕ ವಿವರಗಳನ್ನು ಸ್ಪಷ್ಟವಾಗಿ ಮುದ್ರಿಸುವುದು ಕಡ್ಡಾಯ.

ಗ್ರಾಹಕರ ಮೇಲಾಗುವ ಪರಿಣಾಮ

ಪ್ರಸ್ತುತ ಮಾರುಕಟ್ಟೆಯಲ್ಲಿ ಹಾಗೂ ರಸ್ತೆಬದಿಯ ಅಂಗಡಿಗಳಲ್ಲಿ ಅಗ್ಗದ ದರದಲ್ಲಿ ಯಾವುದೇ ತಪಾಸಣೆ ಇಲ್ಲದೆ ಸ್ಕ್ರೀನ್‌ಗಾರ್ಡ್‌ಗಳು ಲಭ್ಯವಿವೆ. ಆದರೆ ಬಿಐಎಸ್ (BIS) ನಿಯಮ ಕಡ್ಡಾಯಗೊಂಡ ಬಳಿಕ, ನಿಯಮ ಪಾಲಿಸದ ಅಸಂಘಟಿತ ಸಂಸ್ಥೆಗಳ ಕಳಪೆ ಉತ್ಪನ್ನಗಳ ಲಭ್ಯತೆ ಗಣನೀಯವಾಗಿ ಕಡಿಮೆಯಾಗಲಿದೆ.

ತಾಂತ್ರಿಕ ತಪಾಸಣೆ ಹಾಗೂ ಪರೀಕ್ಷಿತ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕಿರುವುದರಿಂದ, ಉತ್ಪಾದನಾ ವೆಚ್ಚ ಹೆಚ್ಚಾಗಲಿದ್ದು, ಭವಿಷ್ಯದಲ್ಲಿ ಸ್ಕ್ರೀನ್‌ಗಾರ್ಡ್‌ಗಳ ಚಿಲ್ಲರೆ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದಾಗ್ಯೂ, ಇದು ಗ್ರಾಹಕರ ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಭದ್ರತೆ ಮತ್ತು ಕಣ್ಣಿನ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಸೂಕ್ತ ಹಾಗೂ ಸುರಕ್ಷಿತ ಹೆಜ್ಜೆಯಾಗಿದೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಬಿಗ್ ರಿಲೀಫ್! 'ನೆಟ್ಟು ಗಿಟ್ಟು ಬೇಕಾಗಿಲ್ಲ' ಜಸ್ಟ್ ಮಾತಾಡೋಕೆ ರೀಚಾರ್ಜ್ ಬೇಕು ಅನ್ನೋರಿಗೆ ಗುಡ್‌ನ್ಯೂಸ್
OnePlus N6 5G ಫೋನ್ ಬೆಲೆಯಲ್ಲಿ ₹6000 ಕಡಿತ, ಅಮೇಜಾನ್ ಬಿಗ್ ಸೇಲ್‌ಗೂ ಮುನ್ನ ಧಮಾಕಾ ಆಫರ್