
ಇತ್ತೀಚಿನ ದಿನಗಳಲ್ಲಿ ಹೊಸ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್ ಅಥವಾ ಇನ್ಯಾವುದೇ ಗ್ಯಾಜೆಟ್ ಖರೀದಿಸಲು ಅಂಗಡಿಗಳಿಗೆ ಹೋಗುವ ಅಗತ್ಯವಿಲ್ಲ. ಮನೆಯಲ್ಲೇ ಕುಳಿತು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದರೆ ಕೆಲವೇ ದಿನಗಳಲ್ಲಿ ವಸ್ತು ನಿಮ್ಮ ಮನೆ ಬಾಗಿಲಿಗೆ ಬಂದು ತಲುಪುತ್ತದೆ. ಆದರೆ ಡೆಲಿವರಿ ಪಡೆದ ಬಳಿಕ ಕೆಲವೊಮ್ಮೆ ಅನಿರೀಕ್ಷಿತ ಸಮಸ್ಯೆಗಳು ಎದುರಾಗಬಹುದು. ಉದಾಹರಣೆಗೆ, ಬಾಕ್ಸ್‌ನಲ್ಲಿ ಹಾಳಾದ ಫೋನ್ ಇರುವುದು, ಸ್ಕ್ರೀನ್ ಒಡೆದಿರುವುದು ಅಥವಾ ಆರ್ಡರ್ ಮಾಡಿದ ಉತ್ಪನ್ನದ ಬದಲಿಗೆ ಬೇರೆ ವಸ್ತು ಬಂದಿರುವುದು. ಇಂತಹ ಸಂದರ್ಭದಲ್ಲಿ ಗ್ರಾಹಕರು ರಿಟರ್ನ್ ಅಥವಾ ರಿಪ್ಲೇಸ್‌ಮೆಂಟ್‌ಗಾಗಿ ದೂರು ನೀಡಿದಾಗ ಕಂಪನಿಗಳು ಸಾಕ್ಷ್ಯ ಕೇಳಬಹುದು. ಹೀಗಾಗಿ ಹೊಸ ಗ್ಯಾಜೆಟ್ ಕೈಗೆ ಸಿಕ್ಕ ತಕ್ಷಣ ಸಂಭ್ರಮದಲ್ಲಿ ಬಾಕ್ಸ್ ತೆರೆಯುವ ಅಥವಾ ಬಳಕೆ ಮಾಡಲು ಆರಂಭಿಸುವ ಆತುರ ಬೇಡ. ಬದಲಾಗಿ, Unboxing Video ಮಾಡುವಾಗ ಈ ಮೂರು ಪ್ರಮುಖ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಿ. ಮುಂದೆ ರಿಟರ್ನ್ ಅಥವಾ ರಿಫಂಡ್ ಸಮಸ್ಯೆ ಎದುರಾದರೆ ಇದೇ ವಿಡಿಯೋ ನಿಮಗೆ ಸಾಕ್ಷ್ಯವಾಗಿ ನೆರವಾಗಬಹುದು.
ಹೊಸ ಫೋನ್ ಅಥವಾ ಲ್ಯಾಪ್‌ಟಾಪ್ ಡೆಲಿವರಿ ಆದ ತಕ್ಷಣ ಬಾಕ್ಸ್ ತೆರೆಯುವ ಆತುರ ಮಾಡಬೇಡಿ. ಮೊದಲಿಗೆ ಕೊರಿಯರ್ ಪ್ಯಾಕೆಟ್ ಕ್ಯಾಮೆರಾದಲ್ಲಿ ತೋರಿಸುವ ಮೂಲಕ ಅನ್ ಬಾಕ್ಸಿಂಗ್ ವಿಡಿಯೋ ಆರಂಭಿಸಿ. ಪ್ಯಾಕೆಟ್‌ನ ನಾಲ್ಕೂ ಬದಿಗಳು ಮತ್ತು ಆರು ಮೂಲೆಗಳನ್ನು ಸ್ಪಷ್ಟವಾಗಿ ರೆಕಾರ್ಡ್ ಮಾಡಿ. ಇದರಿಂದ ಡೆಲಿವರಿ ಸಮಯದಲ್ಲಿ ಪ್ಯಾಕೆಟ್ ಎಲ್ಲಾದರೂ ಹರಿದಿದೆಯೇ, ಹಾಳಾಗಿದೆಯೇ ಎಂಬುದನ್ನು ತಿಳಿಯಲು ಸಹಾಯವಾಗುತ್ತದೆ. ನಂತರ ಪ್ಯಾಕೆಟ್ ಮೇಲಿರುವ ಶಿಪ್ಪಿಂಗ್ ಲೇಬಲ್ ಅನ್ನು ಕ್ಯಾಮೆರಾ ಮುಂದೆ ತೋರಿಸಿ. ಅದರಲ್ಲಿ ನಿಮ್ಮ ಹೆಸರು, ಆರ್ಡರ್ ಐಡಿ ಮತ್ತು ಟ್ರ್ಯಾಕಿಂಗ್ ನಂಬರ್ ಸ್ಪಷ್ಟವಾಗಿ ಕಾಣುವಂತೆ ನೋಡಿಕೊಳ್ಳಿ. ಪ್ಯಾಕೆಟ್‌ನಿಂದ ಮೊಬೈಲ್ ಅಥವಾ ಲ್ಯಾಪ್‌ಟಾಪ್ ಬಾಕ್ಸ್ ಹೊರತೆಗೆದಾಗ ಅದರ ಮೇಲಿರುವ ಬ್ರ್ಯಾಂಡ್ ಸೀಲ್ ಅನ್ನೂ ವಿಡಿಯೋದಲ್ಲಿ ಸೆರೆಹಿಡಿಯಿರಿ. ಲ್ಲದೆ, ಬಾಕ್ಸ್‌ನ ಹಿಂಭಾಗದಲ್ಲಿ ನಮೂದಿಸಿರುವ IMEI ನಂಬರ್ ಅಥವಾ ಸೀರಿಯಲ್ ನಂಬರ್ ಅನ್ನೂ ರೆಕಾರ್ಡ್ ಮಾಡಿ. ಒಂದು ವೇಳೆ ಕಂಪನಿಯ ಸೀಲ್ ಮೊದಲೇ ಹರಿದಿದ್ದರೆ ಅಥವಾ ಬಾಕ್ಸ್ ತೆರೆದ ಸ್ಥಿತಿಯಲ್ಲಿದ್ದರೆ ಅದನ್ನೂ ವಿಡಿಯೋದಲ್ಲಿ ತೋರಿಸುವುದು ಬಹಳ ಮುಖ್ಯ.
ಹೊಸ ಫೋನ್ ಅಥವಾ ಲ್ಯಾಪ್‌ಟಾಪ್ ನೋಡಿದ ತಕ್ಷಣ ಅದನ್ನು ಆನ್ ಮಾಡಲು ಅನೇಕರು ಮುಂದಾಗುತ್ತಾರೆ. ಆದರೆ ಅದಕ್ಕೂ ಮೊದಲು ಸಾಧನವನ್ನು ಸಂಪೂರ್ಣವಾಗಿ ಪರಿಶೀಲಿಸುವುದು ಅಗತ್ಯ. ಬಾಕ್ಸ್ ತೆರೆದ ಬಳಿಕ ಮೊದಲಿಗೆ ಡಿವೈಸ್‌ನ ಸ್ಕ್ರೀನ್, ಹೊರಭಾಗ, ಕ್ಯಾಮೆರಾ ಲೆನ್ಸ್ ಮತ್ತು ಚಾರ್ಜಿಂಗ್ ಪೋರ್ಟ್‌ಗಳನ್ನು ಸೂಕ್ಷ್ಮವಾಗಿ ಗಮನಿಸಿ. ಡೆಲಿವರಿ ಸಮಯದಲ್ಲಿ ವಸ್ತುವಿನ ಮೇಲೆ ಒತ್ತಡ ಬಿದ್ದಿದ್ದರೆ ಸ್ಕ್ರೀನ್ ಒಡೆದಿರಬಹುದು ಅಥವಾ ಹೊರಭಾಗದಲ್ಲಿ ಗೀರುಗಳು ಕಾಣಿಸಿಕೊಳ್ಳಬಹುದು. ಇಂತಹ ಯಾವುದೇ ಸಮಸ್ಯೆ ಕಂಡುಬಂದರೆ ಅದನ್ನು ವಿಡಿಯೋದಲ್ಲಿ ಸ್ಪಷ್ಟವಾಗಿ ದಾಖಲಿಸಿ. ನಂತರ ಬಾಕ್ಸ್‌ನಲ್ಲಿರುವ ಚಾರ್ಜರ್, ಕೇಬಲ್ ಮತ್ತು ಇತರ ಆಕ್ಸೆಸರೀಸ್‌ಗಳನ್ನು ಒಂದೊಂದಾಗಿ ಹೊರತೆಗೆದು ಕ್ಯಾಮೆರಾದಲ್ಲಿ ತೋರಿಸಿ. ಕೆಲವೊಮ್ಮೆ ಬಾಕ್ಸ್‌ನಲ್ಲಿ ಕೆಲವು ವಸ್ತುಗಳು ಕಾಣೆಯಾಗಿರಬಹುದು ಅಥವಾ ಮೂಲ ಆಕ್ಸೆಸರೀಸ್‌ಗಳ ಬದಲಿಗೆ ಬೇರೆ ವಸ್ತುಗಳನ್ನು ಇಟ್ಟಿರಬಹುದು. ಹೀಗಾಗಿ ಬಾಕ್ಸ್‌ನಲ್ಲಿ ಏನೇನು ವಸ್ತುಗಳಿವೆ ಎಂಬುದನ್ನು ಒಂದೊಂದಾಗಿ ರೆಕಾರ್ಡ್ ಮಾಡುವುದು ಉತ್ತಮ. ಮುಂದೆ ರಿಟರ್ನ್ ಅಥವಾ ರಿಪ್ಲೇಸ್‌ಮೆಂಟ್‌ಗಾಗಿ ದೂರು ನೀಡಬೇಕಾದ ಪರಿಸ್ಥಿತಿ ಬಂದರೆ ಈ ವಿಡಿಯೋ ನಿಮಗೆ ಸಾಕ್ಷ್ಯವಾಗಿ ಸಹಾಯ ಮಾಡಬಹುದು.
ಅನ್ಬಾಕ್ಸಿಂಗ್ ವಿಡಿಯೋವನ್ನು ಮಧ್ಯದಲ್ಲಿ ನಿಲ್ಲಿಸಬೇಡಿ
ಅನ್ಬಾಕ್ಸಿಂಗ್ ವಿಡಿಯೋ ಮಾಡುವಾಗ ಅತ್ಯಂತ ಮುಖ್ಯವಾದ ವಿಷಯವೆಂದರೆ ರೆಕಾರ್ಡಿಂಗ್ ನಿರಂತರವಾಗಿ ನಡೆಯಬೇಕು. ಮಧ್ಯದಲ್ಲಿ ವಿಡಿಯೋ ನಿಲ್ಲಿಸುವುದು, ಎಡಿಟ್ ಮಾಡುವುದು ಅಥವಾ ಡಿವೈಸ್ ಅನ್ನು ಸ್ವಲ್ಪ ಸಮಯ ಕ್ಯಾಮೆರಾದಿಂದ ಹೊರಗಿಡುವುದು ನಿಮ್ಮ ಸಾಕ್ಷ್ಯದ ವಿಶ್ವಾಸಾರ್ಹತೆಯನ್ನು ಕಡಿಮೆ ಮಾಡಬಹುದು. ಆದ್ದರಿಂದ ಮೊಬೈಲ್ ಅನ್ನು ಸ್ಟ್ಯಾಂಡ್‌ನಲ್ಲಿ ಇರಿಸಿಕೊಂಡು ವಿಡಿಯೋ ಮಾಡಿ ಅಥವಾ ಬೇರೆಯವರ ಸಹಾಯ ಪಡೆಯಿರಿ. ಡಿವೈಸ್‌ನ ಆರಂಭಿಕ ಪರಿಶೀಲನೆ ಮುಗಿದ ಬಳಿಕವೂ ಕ್ಯಾಮೆರಾ ಎದುರಿನಲ್ಲೇ ಅದನ್ನು ಆನ್ ಮಾಡಿ.
ಒಂದು ವೇಳೆ ಫೋನ್ ಆನ್ ಆಗದಿದ್ದರೆ, ಸ್ಕ್ರೀನ್ ಮೇಲೆ ಹಸಿರು ಅಥವಾ ಹಳದಿ ಗೆರೆಗಳು ಕಾಣಿಸಿಕೊಂಡರೆ ಅಥವಾ ಬೇರೆ ಯಾವುದೇ ತಾಂತ್ರಿಕ ದೋಷ ಕಂಡುಬಂದರೆ ಅದನ್ನೂ ವಿಡಿಯೋದಲ್ಲಿ ದಾಖಲಿಸಿ. ಸ್ಕ್ರೀನ್ ಸಂಪೂರ್ಣವಾಗಿ ಆನ್ ಆಗಿ ಹೋಮ್ ಸ್ಕ್ರೀನ್ ಅಥವಾ ಸೆಟಪ್ ಪೇಜ್ ಕಾಣಿಸಿಕೊಂಡ ನಂತರವೇ ರೆಕಾರ್ಡಿಂಗ್ ನಿಲ್ಲಿಸಿ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.