ಮಕ್ಕಳ ದುಡ್ಡಲ್ಲಿ ಮಸಾಲೆ ದೋಸೆ

By Kannadaprabha NewsFirst Published Nov 21, 2021, 9:07 AM IST
Highlights

ಆ ಅಮೂಲ್ಯ ದುಡಿಮೆಯನ್ನು ಕನ್ನಡದ ಮಕ್ಕಳೆಲ್ಲಾ... ಹಾಡುತ್ತಿದ್ದ ಕ್ಲಾಸಿಗೆ ಸದಾ ಕಾಲವೂ ಚಕ್ಕರ್‌ ಹಾಕುತ್ತಿದ್ದ ಗೆಳೆಯನ ಬಳಿ ಕೊಟ್ಟು ಕಾಲೇಜಿಗೆ ಹೋಗುತ್ತಿದ್ದೆವು. ಸಂಜೆ ಆ ಹಾಡು ದುಡ್ಡನ್ನು ಸದ್ವಿನಿಯೋಗ ಮಾಡುವ ಸಲುವಾಗಿ ಬಡವರ ಬಂಧು ಪ್ರಸಾದ್‌ ಲಂಚ್‌ ಹೋಂಗೆ ಲಗ್ಗೆ ಹಾಕುತ್ತಿದ್ದೆವು. ಅಂದು ಮಾಮೂಲಿ ಖಾಲಿ ದೋಸೆಗೆ ಬದಲು ಮಸಾಲೆ ದೋಸೆಗೆ ಆರ್ಡರ್‌ ಮಾಡಿ ಸುಸಂದರ್ಭಕ್ಕಾಗಿ ಕಾಯುತ್ತಾ ಗುನುಗುತ್ತಿದ್ದೆವು

- ಪ್ರೊ. ಕೃಷ್ಣಮೂರ್ತಿ ಬಿ.ಆರ್‌.

ನಾನು ನಮ್ಮೂರಿನಲ್ಲಿ ಹೈಸ್ಕೂಲ್‌(Highschool) ಓದುತ್ತಿದ್ದಾಗಲೇ ವಿಚಿತ್ರ ಹಾಡುಗಾರನೆಂದು ಅಪಕೀರ್ತಿಗೆ ಗುರಿಯಾಗಿದ್ದೆ. ನಾನು ಹಾಡುತ್ತಿದ್ದ ಒಂದು ಹಾಡು ಇದಕ್ಕೆ ಕಾರಣವಾಗಿತ್ತು. ಸ್ನೇಹದ ಕಡಲಲ್ಲಿ, ನೆನಪಿನ ದೋಣಿಯಲಿ, ಪಯಣಿಗ ನಾನಮ್ಮ ಎಂಬ ‘ಶುಭ ಮಂಗಳ’ ಸಿನೆಮಾದ ಹಾಡನ್ನು ಹಿಂದು ಮುಂದಾಗಿ ಹಾಡುತ್ತಿದ್ದೆ, ಎಲ್ಲರೂ ಕೇಳಿ ಚಪ್ಪಾಳೆ ಹೊಡೆಯುತ್ತಿದ್ದರು. ಈ ಹಾಡನ್ನು ಹಾಡಲು ಒತ್ತಾಯಿಸುತ್ತಿದ್ದವರೇ ಆಡಿಕೊಂಡು ನಗುತ್ತಿದ್ದರು. ಟೀಚರ್‌ಗಳೂ ಇದಕ್ಕೆ ಹೊರತಾಗಿರಲಿಲ್ಲ. ಪಠ್ಯಗಳಲ್ಲಿರುತ್ತಿದ್ದ ಕನ್ನಡ ಹಿಂದಿ ಇಂಗ್ಲೀಷ್‌ ಪದ್ಯಗಳನ್ನು ಹಾಡಿಸುವ ಸ್ಪರ್ಧೆಗಳಲ್ಲಿ, ಜನಪದ ಗೀತೆ ಭಾವ ಗೀತೆ ಚಿತ್ರ ಗೀತೆ ಸ್ಪರ್ಧೆಗಳಲ್ಲಿ ತಪ್ಪದೆ ಭಾಗವಹಿಸಿತ್ತಿದ್ದುದರಿಂದ ಹಾಡ್ತಾ ಹಾಡ್ತಾ ರಾಗವಾಯಿತು. ಕಬ್ಬಣ ಕೈಗಡಗ, ಓ ನನ್ನ ಚೇತನ, ಚೋಟಿ ಚೋಟಿ ಪ್ಯಾರಿ ಪ್ಯಾರಿ, ಟೈಗರ್‌ ಟೈಗರ್‌ ಬರ್ನಿಂಗ್‌ ಬ್ರೈಟ್‌ ಮುಂತಾದ ಪದ್ಯಗಳು ಎಲ್ಲೆಂದರಲ್ಲಿ ನನ್ನನ್ನು ಧೈರ್ಯವಾಗಿ ಹಾಡುವ ಶಕ್ತಿ ತುಂಬಿದವು. ಇದೇ ಧೈರ್ಯದಿಂದಲೇ ನಾನೀಗ ಏಕತಾರಿ ಹಿಡಿದು ತತ್ವಪದಗಳನ್ನು ಹಾಡುತ್ತಿರುವುದು. ಹೀಗೆ ಹಾಡುವ ನನ್ನ ಹುಚ್ಚು, ಹೊಲ ತೋಟ ಗದ್ದೆ ಬದುಗಳಲ್ಲಿ ಪದ್ಯಗಳನ್ನು ಇನ್ನಿತರ ಪಾಠಗಳನ್ನು ಬೈಹಾರ್ಟ್‌ ಮಾಡುವಂತೆ ಮಾಡಿ ಪಾಸು ಮಾಡಿತು.

ನೂರಾರು ಸ್ಪರ್ಧೆಗಳ ರೋಮಾಂಚನದ ಗುಂಗಿನಲ್ಲೆ ತುಮಕೂರಿನ ಖಾಸಗಿ ಕಾಲೇಜಿಗೆ ಬಂದರೆ ಇಲ್ಲಿ ನನ್ನ ಹಾಡಿಗೆ ಜಾಗವೇ ಇರಲಿಲ್ಲ, ಈ ಕಾಲೇಜು ತನ್ನ ಗತ ವೈಭವವನ್ನು ಮುಗಿಸಿ, ಮುಪ್ಪಿನತ್ತ ಸಾಗಿದ್ದರಿಂದಲೋ ಏನೋ ಅಲ್ಲಿ ಯಾವ ಜೀವಂತಿಕೆಯೂ ಇರಲಿಲ್ಲ. ಸಾಂಸ್ಕೃತಿಕ ಕಾರ್ಯಕ್ರಮಗಳ ಬರ ನನ್ನನ್ನು ಕಾಡತೊಡಗಿತು. ಹಾಡುವ ಅವಕಾಶಗಳೇ ಇಲ್ಲದೆ ನಾನು ಬಡವಾದೆ. ನನ್ನ ಪಾಡಿಗೆ ನಾನು ಇದಕ್ಕೇನಾದರೂ ಪರಿಹಾರ ಕಂಡುಕೊಳ್ಳಬೇಕಲ್ಲ ಎಂದುಕೊಂಡು, ಕೈಗೊಂಡ ಯೋಜನೆಯೇ ಸ್ಕೂಲು ಮಕ್ಕಳಿಗೆ ಆರ್ಕೆಸ್ಟ್ರಾ ಪ್ಲಾನ್‌.

ನಿಜವಾಗಿಯೂ ಅದು ಆರ್ಕೆಸ್ಟ್ರಾ ಏನಲ್ಲ, ನನಗೆ ಬರುತ್ತಿದ್ದ ಹಾಡುಗಳನ್ನು ಕಂಜರಾ, ದಮಡಿ ಮತ್ತು ಟೇಬಲನ್ನೇ ತಬಲವಾಗಿ ಬಳಸಿ ಸ್ಕೂಲು ಮಕ್ಕಳಿಗೆ ನನಗೆ ಬರುತ್ತಿದ್ದ ಹಾಡುಗಳನ್ನು ಹೇಳಿಕೊಡುತ್ತಿದ್ದೆ. ಅದಕ್ಕೆ ನನ್ನ ಗೆಳೆಯರು ಜೊತೆಯಾಗುತ್ತಿದ್ದರು. ಪ್ರತಿ ಶನಿವಾರ ಮಿಡ್ಲ್‌ ಸ್ಕೂಲ್‌ ಅಥವಾ ಹೈಸ್ಕೂಲ್‌ ಹುಡುಕಿ ಹೊರಡುತ್ತಿದ್ದೆವು. ಬೆಳಗ್ಗೆ ಎಂಟರಿಂದ ಒಂಬತ್ತಕ್ಕೆ ಕಾರ್ಯಕ್ರಮ ಮುಗಿಸಿಕೊಂಡು ಕಾಲೇಜಿಗೆ ಹೋಗಲು ಅನುವಾಗುತ್ತಿದ್ದೆವು.

Lifestyle; ನಿಮ್ಮನೆ ಶ್ವಾನ ಮಂಕಾಗಿದೆಯಾ.. ಪರಿಹಾರಕ್ಕೆ ಈ ವಾಹಿನಿ ತೋರಿಸಿ!

ನೀಟಾಗಿ ತಲೆ ಬಾಚಿಕೊಂಡು, ಪಾಂಡ್ಸ್‌ ಪೌಡರ್‌ ಹಾಕಿಕೊಂಡು ಎಲ್ಲಾ ತಯಾರಿಯೊಂದಿಗೆ ಹೋಗಿ ಹೆಡ್‌ ಮಾಸ್ಟರ್‌ ಭೇಟಿಯಾಗಿ ನಾವು ಡಿಗ್ರಿ ವಿದ್ಯಾರ್ಥಿಗಳೆಂದು ಪರಿಚಯಿಸಿಕೊಳ್ಳತ್ತಿದ್ದೆವು. ನಮ್ಮ ಪ್ರತಿಭೆಯ ಬಗೆಗೆ ನಾವೇ ಹೇಳಿಕೊಂಡು, ಮಕ್ಕಳಿಗೆ ಈಗಿನಿಂದಲೇ ಸಾಂಸ್ಕೃತಿಕ ಚಟುವಟಿಕೆಗಳ ಬಗೆಗೆ ಆಸಕ್ತಿ ಮೂಡಿಸುವುದು ನಮ್ಮ ಉದ್ದೇಶವೆಂದೂ ಮುಂದೆ ಮಕ್ಕಳು ತಮ್ಮ ಪ್ರತಿಭಗೆ ತಕ್ಕಂತೆ ಬೆಳೆಯಲು ಸಾಧ್ಯವಾಗುತ್ತದೆಯೆಂದೂ ಅವರನ್ನು ನಂಬಿಸುತ್ತಿದ್ದೆವು. ಇದೇನು ವಿಚಿತ್ರವೆಂದು ಅವರು ಮುಖಮುಖ ನೋಡಿಕೊಂಡು ನಮಗೆ ಅನುಮತಿ ಕೊಡುತ್ತಿದ್ದರು. ಕೆಲವರು ನಮ್ಮ ಈ ಉದ್ದೇಶವನ್ನು ನಂಬದೆ ಅದರ ಅಗತ್ಯವಿಲ್ಲವೆಂದು ಮುಲಾಜಿಲ್ಲದೆ ಹೇಳಿ ಹೊರದಬ್ಬುತ್ತಿದ್ದರು. ಇದು ನನಗೆ ರೂಢಿಯಾಗಿ ಮುಂದೆ ಇದೇ ಧೈರ್ಯದ ಮೇಲೆ ಯಾವ ಅವಮಾನ ಬಹುಮಾನಗಳ ಹಂಗೂ ಇಲ್ಲದೆ ಪುಸ್ತಕಗಳನ್ನು ಮಾರುವ ಚಾಳಿಯನ್ನು ಕರಗತ ಮಾಡಿಕೊಂಡದ್ದೀಗ ಇತಿಹಾಸ.

ಸಾಮಾನ್ಯವಾಗಿ ನಾವು ಮಕ್ಕಳ ಹಾಡುಗಳನ್ನು ಹೇಳಿಕೊಡುತ್ತಿದ್ದೆವು. ಮಿಡ್ಲ್‌ ಸ್ಕೂಲ್‌ ಆದರೆ ಬಣ್ಣದ ತಗಡಿನ ತುತ್ತೂರಿ. ನಾಗರಹಾವೇ ಹಾವೊಳು ಹೂವೆ, ಅಂಚೆಯ ಅಣ್ಣ ಬಂದಿಹೆ ಚಿನ್ನ, ನಾಯಿಮರಿ ನಾಯಿಮರಿ ತಿಂಡಿ ಬೇಕೆ, ಅಂಚೆಯ ಅಣ್ಣ ಮುಂತಾದ ಹಾಡುಗಳನ್ನೂ, ಹೈಸ್ಕೂಲ್‌ಗಳಾದರೆ ಕಬ್ಬಣ ಕೈಗಡಗ ಕುಣಿಗೋಲು ಕೂದಲು, ಓ ನನ್ನ ಚೇತನಾ, ಎಲ್ಲೋ ಹುಡುಕಿದೆ, ತನುವು ನಿನ್ನದು ಮನವು ನಿನ್ನದು, ಚೆಲ್ಲಿದರೂ ಮಲ್ಲಿಗೆಯ, ನಾನು ಕೋಳಿಕೆ ರಂಗ, ಎದೆ ತುಂಬಿ ಹಾಡಿದೆನು, ಆಶಾಡ ಮಾಸ ಬಂದಿತಮ್ಮ, ಮೂಡಲ್‌ ಕುಣಿಗಲ್‌ ಕೆರೆ ಮತ್ತು ನಾನು ಹಿಂದೆ ಬೈಹಾರ್ಟ್‌ ಮಾಡಿದ್ದ ಪದ್ಯಗಳನ್ನು ವಿಶೇಷ ಗತ್ತಿನಿಂದ ಹೇಳಿಕೊಡುತ್ತಿದ್ದೆ. ಹೆಚ್ಚು ಸಮಯ ನಾನೇ ಹಾಡಬೇಕಾಗಿತ್ತು.

ಒಮ್ಮೊಮ್ಮೆ ಮಾತ್ರ ಒಬ್ಬ ಗೆಳೆಯ ಹಾಡುತ್ತಿದ್ದ, ಅವನು ಹಾಡುತ್ತಿದ್ದ ಏಕೈಕ ಹಾಡು ‘ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ’. ಮಿಕ್ಕ ಗೆಳೆಯರು ದಮಡಿ, ಕಂಜರಾಗಳ ವಾದ್ಯದೊಂದಿಗೆ ಕೋರಸ್‌ ಕೊಡುತ್ತಿದ್ದರು, ಒಮ್ಮೊಮ್ಮೆ ನಮಗೇ ಆಶ್ಚರ್ಯವಾಗುವಂತೆ ಕಾರ್ಯಕ್ರಮ ಕಳೆಗಟ್ಟುತ್ತಿತ್ತು. ಮಕ್ಕಳ ಉತ್ಸಾಹ ಮುಗಿಲು ಮುಟ್ಟುತ್ತಿತ್ತು. ಹೆಂಚಿನ ಛಾವಣಿ ನಡುಗುವಂತೆ ಹಾಡುತ್ತಿದ್ದರೆ ಸುತ್ತಣ ವಾತಾವರಣ ಗಂಭೀರ ಸ್ವರೂಪ ಪಡೆಯುತ್ತಿತ್ತು. ಆಗಲೆ ನಮ್ಮದು ಯಾವ ಆರ್ಕೆಸ್ಟ್ರಾಗಿಂತಾ ಕಡಿಮೆ ಎನಿಸುತ್ತಿದ್ದುದು. ಭಾವಗೀತೆ, ಜನಪದ ಗೀತೆ ಕೆಲವೊಮ್ಮೆ ಚಿತ್ರಗೀತೆಗಳನ್ನು ಹಾಡುತ್ತಿದ್ದೆ. ಅದ್ಯಾಕೊ ಏನೋ ಹೆಡ್‌ ಮಾಸ್ಟರ್‌ ಅಥವಾ ಇತರ ಟೀಚರ್‌ಗಳು ನಮ್ಮ ಈ ಕಾರ್ಯಕ್ರಮಕ್ಕೆ ಗೈರು ಹಾಜರಾಗುತ್ತಿದ್ದರು. ಅದ್ಯಾವುದೋ ಗಹನ ಚರ್ಚೆಯಲ್ಲಿ ತೊಡಗಿ ನಮ್ಮ ಕಾರ್ಯಕ್ರಮವನ್ನು ಕಡೆಗಣಿಸುತ್ತಿದ್ದರು. ಅವರ ಆ ಔದಾಸೀನ್ಯ ನಮಗೆ ಒಳ್ಳೆಯದಾಗಿಯೇ ಪರಿಣಮಿಸುತ್ತಿತ್ತು. ನಮ್ಮ ಯೋಗ್ಯತಾನುಸಾರ ಯಾವ ಮುಜುಗರವೂ ಇಲ್ಲದೆ ಹಾಡಲು ಸಲೀಸು ವಾತಾವರಣಕ್ಕೆ ವೇದಿಕಯಾಗುತ್ತಿತ್ತು. ಸಾಮಾನ್ಯವಾಗಿ ನಾವು ಸರ್ಕಾರಿ ಶಾಲೆ, ಹೈಸ್ಕೂಲ್‌ಗಳಿಗೆ ಈ ಬಗೆಯ ಕಾರ್ಯಕ್ರಮ ಕೊಡುತ್ತಿದ್ದೆವು. ಆಗ ಈ ಶಾಲೆಗಳದೇ ದರ್ಬಾರು. ಇವು ಮಕ್ಕಳಿಂದ ತುಂಬಿ ತುಳುಕುತ್ತಿದ್ದವು. ಅಗಿನ್ನೂ ಖಾಸಗಿ ಶಾಲೆಗಳು ತಮ್ಮ ಆರ್ಭಟ ಆರಂಭಿಸಿರಲಿಲ್ಲ.

ಹೀಗಿರುತ್ತಿರಲಾಗಿ ನಮ್ಮ ಕಾರ್ಯಕ್ರಮವು ವಿವಿಧ ವಿನೋದಾವಳಿಯ ಸ್ವರೂಪ ಪಡೆದು ಮಕ್ಕಳು ಸಂತೋಷಗೊಂಡದ್ದು ಗೊತ್ತಾಗಿ ನಿಲ್ಲಿಸುತ್ತಿದ್ದೆವು. ಆಗ ಅಲ್ಲಿಗೆ ಟೀಚರ್‌ಗಳ ಬಾಹೋಣವಾಗುತ್ತಿತ್ತು. ಗೆಳೆಯನೊಬ್ಬ ಅವನು ಸದಾ ಧರಿಸುತ್ತಿದ್ದ ಟೋಪಿಯಲ್ಲಿ ನಮ್ಮದೇ ಒಂದಿಷ್ಟುಚಿಲ್ಲರೆಯನ್ನು ಅದರೊಳಗೆ ಹಾಕಿಕೊಂಡು ಅಲ್ಲಾಡಿಸುತ್ತಾ ಮಕ್ಕಳ ಬಳಿ ಹೋಗುತ್ತಿದ್ದ. ಉದಾರಿ ಮಕ್ಕಳು ತಮ್ಮ ಬಳಿ ಇರುತ್ತಿದ್ದ ಐದು ಹತ್ತು ಪೈಸೆಗಳನ್ನು ಅದರೊಳಗೆ ಹಿಂದೂ ಮುಂದು ನೋಡದೆ ಹಾಕುತ್ತಿದ್ದರು. ನಾಲ್ಕಣೆ ಎಂಟಾಣೆಗಳು ಅಪರೂಪಕ್ಕೆ ಬೀಳುತ್ತಿದ್ದವು. ನೋಟು ಎಂಬಂತ ವಸ್ತುವನ್ನು ಕಲ್ಪಿಸಿಕೊಳ್ಳುವುದೂ ಸಾಧ್ಯವಿರಲಿಲ್ಲ. ಅದ್ಯಾಕೊ ಏನೋ ಗಂಡು ಟೀಚರ್‌ಗಳು ಮಾತ್ರ ದುಡ್ಡು ಬಿಚ್ಚುತ್ತಿರಲಿಲ್ಲ. ಹೆಣ್ಣು ಟೀಚರ್‌ಗಳು ತಾವು ಕೊಡದಿದ್ದರೂ ಮಕ್ಕಳಿಂದ ಸಂಗ್ರಹಿಸಿ ಕೊಡುವಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿದ್ದುದು ನಮಗೆ ಎಲ್ಲಿಲ್ಲದ ಉತ್ಸಾಹ ಉಕ್ಕಿಸುತ್ತಿತ್ತು. ಕೆಲವು ಟೀಚರ್‌ಗಳಂತೂ ನಮ್ಮನ್ನು ಭಿಕ್ಷುಕರಿಗಿಂತಲು ಕಡೆಯಾಗಿ ನೋಡುತ್ತಿದ್ದುದು ನಮ್ಮನ್ನೇನು ಧೃತಿಗೆಡಿಸುತ್ತಿರಲಿಲ್ಲ. ನಾವೇನು ಅವರನ್ನು ಗೌರವಧನಕ್ಕಾಗಿ ಒತ್ತಾಯಿಸುತ್ತಿರಲಿಲ್ಲ. ಆ ಮಾತು ಬೇರೆ. ಸಂಗ್ರಹವಾದ ಹಣವನ್ನು ಎಂದು ಆ ಟೀಚರ್‌ಗಳ ಮುಂದೆ ಎಣಿಸುತ್ತಿರಲಿಲ್ಲ.

Love and Cheating : ನೀವು ಪ್ರೀತಿಸುತ್ತಿರುವ ವ್ಯಕ್ತಿ ನಂಬಿಕೆಗೆ ಅರ್ಹನೇ?

ಎಷ್ಟೇ ಕಳಪೆಯೆಂದರೂ ಎಂಟರಿಂದ ಹತ್ತು ರೂಪಾಯಿ ಸಂಗ್ರಹವಾಗುತ್ತಿತ್ತು. ಮೊದಮೊದಲು ಆಡಿಕೊಂಡು ನಗುತ್ತಿದ್ದ ಗೆಳೆಯರು ಇದರ ರುಚಿ ಕಂಡ ಮೇಲೆ ತಾವೇ ಮುನ್ನುಗ್ಗಿ ಸ್ಕೂಲುಗಳಲ್ಲಿ ಮುಂಗಡವಾಗಿ ಕಾರ್ಯಕ್ರಮ ಬುಕ್‌ ಮಾಡತೊಡಗಿದರು, ಮತ್ತು ಅದರಲ್ಲಿ ಇದ್ದು ತಾವು ಹಾಡುವುದನ್ನು ಕತೆ ಹೇಳುವುದನ್ನು ರೂಢಿ ಮಾಡಿಕೊಂಡರು. ಕಾರ್ಯಕ್ರಮ ಮುಗಿದು ಗೌರವಧನ ಸಂಗ್ರಹಣೆಯ ನಂತರ ಎಲ್ಲರ ಸಮ್ಮುಖದಲ್ಲಿ ರೂಮಿನೊಳಗೆ ಆ ಸಂಪತ್ತು ಎಣಿಕೆಯಾಗುತ್ತಿತ್ತು. ಆ ಚಿಲ್ಲರೆ ಹಣ ನಮಗೆ ದೊಡ್ಡ ನಿಧಿಯಂತೆ ತೋರುತ್ತಿತ್ತು. ಅದು ನಾವು ನಮ್ಮ ಸಾಂಸ್ಕೃತಿಕ ಶಕ್ತಿಯಿಂದ ಸಂಪಾದಿಸಿದ ದುಡಿಮೆ ಹಣವೆಂದು ಗಾಢವಾಗಿ ನಂಬತೊಡಗಿದೆವು. ಇದು ಭಿಕ್ಷೆಯ ಹಣದಂತೆ ಭಾಸವಾದಾಗಲೆಲ್ಲ ನಮ್ಮ ಚರ್ಚೆಯ ನಂತರ ಈ ನಿಲುವಿಗೆ ಬಂದು ನಿಲ್ಲುತ್ತಿದ್ದೆವು.

ಆ ಅಮೂಲ್ಯ ದುಡಿಮೆಯನ್ನು ಕನ್ನಡದ ಮಕ್ಕಳೆಲ್ಲಾ... ಹಾಡುತ್ತಿದ್ದ ಕ್ಲಾಸಿಗೆ ಸದಾ ಕಾಲವೂ ಚಕ್ಕರ್‌ ಹಾಕುತ್ತಿದ್ದ ಗೆಳೆಯನ ಬಳಿ ಕೊಟ್ಟು ಕಾಲೇಜಿಗೆ ಹೋಗುತ್ತಿದ್ದೆವು. ಸಂಜೆ ಆ ಹಾಡು ದುಡ್ಡನ್ನು ಸದ್ವಿನಿಯೋಗ ಮಾಡುವ ಸಲುವಾಗಿ ಬಡವರ ಬಂಧು ಪ್ರಸಾದ್‌ ಲಂಚ್‌ ಹೋಂಗೆ ಲಗ್ಗೆ ಹಾಕುತ್ತಿದ್ದೆವು. ಅಂದು ಮಾಮೂಲಿ ಖಾಲಿ ದೋಸೆಗೆ ಬದಲು ಮಸಾಲೆ ದೋಸೆಗೆ ಆರ್ಡರ್‌ ಮಾಡಿ ಸುಸಂದರ್ಭಕ್ಕಾಗಿ ಕಾಯುತ್ತಾ ಗುನುಗುತ್ತಿದ್ದೆವು. ಆಗ ಮಸಾಲೆ ದೋಸೆಯ ಬೆಲೆ ಒಂದೂವರೆ ರೂಪಾಯಿ. ನಮ್ಮಲ್ಲಿನ್ನೂ ಹಣ ಉಳಿಯುತ್ತಿತ್ತು. ಅಲ್ಲಿಂದ ಎದ್ದು ಎಂಜಿ ರೋಡಿನಲ್ಲಿಯೇ ಇದ್ದ ಸುಧಾ ಟೀ ಹೌಸ್‌ಗೆ ಹೋಗಿ ಇಪ್ಪತ್ತನಾಲ್ಕು, ಅಂದರೆ ಎರಡರಲ್ಲಿ ನಾಲ್ಕು ಟೀ ಕುಡಿದು ರೂಂ ಸೇರಿಕೊಳ್ಳುತ್ತಿದ್ದೆವು.

ಹಲವರು ಅಂದುಕೊಳ್ಳಬಹುದು, ‘ಮಕ್ಕಳ ಬಳಿಯಲ್ಲಿನ ಬಿಡಿಗಾಸನ್ನು ಗೌರವ ಧನದಲ್ಲಿ ಕಿತ್ತುಕೊಂಡದ್ದೇ ಮಹಾಪರಾಧ, ಅಂತಹದರಲ್ಲಿ ಹೋಗಿ ಮಸಾಲೆ ದೋಸೆ ತಿನ್ನುತ್ತಿದ್ದುದು ಘೋರ ಪಾತಕ, ಕೊನೆ ಪಕ್ಷ ಪುಸ್ತಕ ಕೊಂಡಿದ್ದರೆ ಅದಕ್ಕೊಂದು ಅರ್ಥವಾದರೂ ಬರುತ್ತಿತ್ತು ಎಂದು’ ಅದಕ್ಕೆ ನನ್ನ ಉತ್ತರ ‘ಅನ್ನ ದೇವರ ಮುಂದೆ ಇನ್ನು ದೇವರು ಉಂಟೆ’ ಎಂಬುದಷ್ಟೆ.

click me!