'ನಾಡಿ'ಗೆ ನಮಸ್ಕಾರ

By Kannadaprabha News  |  First Published Jan 28, 2024, 11:48 AM IST

 ಜಾತಿ, ಮತ, ಧರ್ಮಗಳ ಬೇಧವಿಲ್ಲದೆ ಎಲ್ಲರೊಳಗೊಂದಾಗಿ ಬೆರೆತು ಸರಳಾತಿಸರಳರಾಗಿ ಬದುಕಿ ಬಾಳಿದವರು, ಬರೆದು ಖ್ಯಾತರಾದವರು ನಾ ಡಿಸೋಜಾ.


ಗಜಾನನ ಶರ್ಮಾ

ಹೌದು, ಹಿರಿಯ, ಸಜ್ಜನ, ಸಮಾಜಮುಖೀ ಸಾಹಿತಿ, ನಾರ್ಬರ್ಟ್ ಡಿಸೋಜಾ ನಮ್ಮ ಶರಾವತಿ ಕಣಿವೆ ಕುಟುಂಬದವರು, ಮುಳುಗಡೆಯ ಸಂವೇದನೆಯನ್ನು ಸಾಹಿತ್ಯದ ವಿಷಯವಾಗಿಸಿದ ಮಹಾನುಭಾವರು, ಮುಳುಗಡೆಗೆ ಒಳಪಟ್ಟವರ ಕುರಿತು ಅಪಾರ ಅನುಕಂಪ ತೋರಿದವರು, ಮುಳುಗಡೆಯ ನೋವು ನಲಿವಿನ ಕುರಿತು ಆಪ್ತವಾಗಿ ಬರೆದವರು... ಶರಾವತಿ ಕಣಿವೆಯ ಕಾರ್ಗಲ್ ಕಾಲೋನಿಯಲ್ಲಿ ಕೆ ಪಿ ಸಿಯಲ್ಲಿ ಉದ್ಯೋಗದಲ್ಲಿದ್ದು ಬಹುಕಾಲ ಅಲ್ಲಿದ್ದವರು. ಜಾತಿ, ಮತ, ಧರ್ಮಗಳ ಬೇಧವಿಲ್ಲದೆ ಎಲ್ಲರೊಳಗೊಂದಾಗಿ ಬೆರೆತು ಸರಳಾತಿಸರಳರಾಗಿ ಬದುಕಿ ಬಾಳಿದವರು, ಬರೆದು ಖ್ಯಾತರಾದವರು.

Latest Videos

undefined

ಅದು ಅರವತ್ತರ ದಶಕದ ಕೊನೆ ಕೊನೆಯ ವರ್ಷಗಳು. ನಾವು ನಮ್ಮೂರು ಹುಕ್ಕಲಿನಿಂದ ಆರು ಕಿಲೋಮೀಟರ್ ದೂರದ ಕಾರ್ಗಲ್ ಮಾಧ್ಯಮಿಕ ಶಾಲೆ ಮತ್ತು ಜೋಗದ ಪ್ರೌಢಶಾಲೆಗೆ ಕಾರ್ಗಲ್ ತನಕ ನಡೆದುಕೊಂಡು ಬರುತ್ತಿದ್ದೆವು. ಸಂಜೆ ಶಾಲೆಯಿಂದ ಮರಳುವಾಗ ಒಬ್ಬರು ಉದ್ದದ, ನಸುಗೆಂಪು ಬಣ್ಣದ, ನಗುಮುಖದ ವ್ಯಕ್ತಿಯೊಬ್ಬರು ತಮ್ಮ ಗೆಳೆಯರೊಡನೆ ವಾಯುಸೇವನೆಗೆಂದು ಕಾರ್ಗಲ್ಲಿನಿಂದ ಎರಡು ಮೈಲು ದೂರದ ಮೂಲೆಮನೆ ಕಾಡಿನಂಚಿನವರೆಗೂ ನಡೆದು ಬರುತ್ತಿದ್ದರು. ಆಗೆಲ್ಲ ಸ್ಕೂಲ್ ಬಸ್ಸಿನಲ್ಲಿ ಮೊದಲೆರಡು ಟ್ರಿಪ್ಪು ಕಾಲೋನಿ ಹುಡುಗರಿಗೆ ಮೀಸಲು. ಮೂರನೆಯ ಟ್ರಿಪ್ಪಷ್ಟೇ ಮುಳುಗಡೆ ಹಳ್ಳಿ ಮಕ್ಕಳಿಗೆ. ನಾವು ಮೂರನೇ ಟ್ರಿಪ್ ಬಸ್ಸಿಳಿದು ಹಳ್ಳಿಗೆ ನಡೆದು ಹೋಗುವಾಗ ತಮ್ಮ ಗೆಳೆಯ ಪ್ರಕಾಶಕ, ಮುದ್ರಕ ವೈ ಎ ದಂತಿ ಮುಂತಾದವರೊಟ್ಟಿಗೆ ಆ ಉದ್ದದ ವ್ಯಕ್ತಿಯೂ ವಾಕಿಂಗ್ ಹೋಗಿ ಹಿಂತಿರುಗುತ್ತಿದ್ದರು. ನಮಗೆ ಅವರು ಲೇಖಕರೆಂದು ತಿಳಿದಾಗ ಅವರ ಕುರಿತು ಕುತೂಹಲ, ಗೌರವ. ಅವರನ್ನು ಮಾತನಾಡಿಸಬೇಕೆಂಬ ಉಮೇದು. ಅವರು ಹತ್ತಿರ ಬರುತ್ತಿದ್ದಂತೆ ಕೈ ಮುಗಿದು ''ನಮಸ್ಕಾರ್ ಸರ್'' ಎಂದರೆ ಅವರೂ ಮುಗಳ್ನಗುತ್ತ ಕೈ ಮುಗಿದು ನಮಸ್ಕಾರ ಎನ್ನುತ್ತಿದ್ದರು. ಒಮ್ಮೊಮ್ಮೆ ''ಶಾಲೆ ಮುಗೀತಾ?'' ಎಂದು ಮೃದುವಾಗಿ ಕೇಳುತ್ತಿದ್ದರು. ಕೆಲವು ಸಲ ಯಾವೂರು ಎಂದು ಕೇಳುತ್ತಿದ್ದರು. ನಮಗೆ ಅವರು ಮಾತನಾಡಿಸಿದರೆಂದರೆ ಎಲ್ಲಿಲ್ಲದ ಹಿಗ್ಗು. ಸಾಹಿತಿಯೊಬ್ಬರನ್ನು ಮಾತನಾಡಿಸಿದ ಹೆಮ್ಮೆ, ರೋಮಾಂಚನ!

ನಮಗೆ ಏಳನೇ ತರಗತಿಯಲ್ಲಿ ನಮ್ಮ ಉಪಾಧ್ಯಾಯರು ಇವರು ಬರೆದ ನಾಟಕ ಆಡಿಸಿದ್ದರು. ಆಗಂತೂ ನಮಗೆ, ಅವರು ಆ ನಾಟಕ ಹೇಗೆ ಬರೆದರೆಂದು ಕೇಳಬೇಕೆಂಬ ಕುತೂಹಲ, ಜೊತೆಗೆ ಕಿರು ಸಂಕೋಚ. ದೊಡ್ಡ ಲೇಖಕರೆಂಬ ಅಂಜಿಕೆ. ಮುಂದೆ ಪ್ರೌಢಶಾಲೆಗೆ ಹೋದ ಮೇಲೆ ಅಲ್ಲಿ ವಾಚನಾಲಯದಲ್ಲಿದ್ದ ವಾರಪತ್ರಿಕೆ, ಮಾಸ ಪತ್ರಿಕೆಗಳಲ್ಲಿ ಅವರ ಹೆಸರು ಕಂಡರೆ ಆ ಕತೆಯನ್ನು ಓದದೇ ಬಿಡುತ್ತಿರಲಿಲ್ಲ. ಅದರಲ್ಲಿ ನಮ್ಮೂರಿನ ಹೆಸರುಗಳು, ಬಿದರೂರು, ಹುಕ್ಕಲು, ಇಂದ್ರೋಡಿ, ಸಂಪ, ಐತುಮನೆ ಕಾಳಮಂಜಿ ಅಂತೆಲ್ಲ ಇದ್ದರಂತೂ ನಮಗೆ ಜಗತ್ತನ್ನೇ ಗೆದ್ದ ಸಂಭ್ರಮ. ನಮ್ಮೂರಿನ ಹೆಸರನ್ನು ಪತ್ರಿಕೆಯಲ್ಲಿ ಬರೆದ ಅವರ ಕುರಿತು ಪೂಜ್ಯಭಾವ. ನಮಗೆ ಹತ್ತಿರದ ನೆಂಟರೆಂಬ ಆತ್ಮೀಯ ಸ್ಪಂದ...

ಒಮ್ಮೊಮ್ಮೆ ಅವರು ಮುಖ್ಯ ಅತಿಥಿಗಳಾಗಿ ಶಾಲೆಗೆ ಬರುತ್ತಿದ್ದರು. ಆಗೆಲ್ಲ ನಮಗೆ ಆದಷ್ಟೂ ಮುಂದೆ ಕುಳಿತು ಅವರ ಮಾತನ್ನು ಕೇಳಿಸಿಕೊಳ್ಳುವ ತವಕ. ಅವರು ನಮ್ಮ ಮುಖ ನೋಡಿ ನಗಲೆಂಬ ನಿರೀಕ್ಷೆ. ನಕ್ಕರಂತೂ ಸ್ವರ್ಗಕ್ಕೆ ಮೂರೇ ಗೇಣು. ಮುಂದೆ ಅವರು ಬರೆದ ಒಡ್ಡು, ಮುಳುಗಡೆ, ದ್ವೀಪ, ಮಂಜಿನಕಾನು ಮುಂತಾದ ನಮ್ಮೂರಿನ ಬಗೆಗಿನ ಕಾದಂಬರಿಗಳನ್ನು ಓದಿ ಪಟ್ಟ ಆನಂದ ಅಷ್ಟಿಷ್ಟಲ್ಲ. ಒಂದರ್ಥದಲ್ಲಿ ನಮ್ಮನ್ನು ಅಕ್ಷರ ಜಗತ್ತಿಗೆ ಕೈ ಹಿಡಿದು ಕರೆದೊಯ್ದ ದ್ರೋಣಾಚಾರ್ಯರೇ ಅವರೆಂದರೆ ತಪ್ಪಾಗಲಾರದು. ಮುಳುಗಡೆ ಎಂಬುದು ಸಾಹಿತ್ಯಕ್ಕೆ ಸಂವೇದನೆ ಒದಗಿಸಬಲ್ಲ ವಿಷಯವೆಂದು ಮನಗಂಡು ಆ ಕುರಿತು ಗಟ್ಟಿಯಾಗಿ, ಕಳಕಳಿಯಿಂದ, ಕನ್ನಡದ ಮಟ್ಟಿಗೆ ಮೊದಲಿಗೆ ಬರೆದ ಲೇಖಕರು ನಾ ಡಿಸೋಜ. ಮುಳುಗಡೆಯ ನೋವು, ಸಂಕಟ, ಬೇರಿನಿಂದ ಬೇರ್ಪಟ್ಟು ಊರು ತೊರೆಯುವ ಮರುಕವನ್ನು ಅವರಂತೆ ಚಿತ್ರಿಸಿದವರು ಇನ್ನೊಬ್ಬರಿಲ್ಲ. ಜಾತಿ, ಜನಾಂಗದ ಬೇಧವಿಲ್ಲದೆ ಮುಳುಗಡೆಯಾದವರ ಒಡಲಾಳದ ವ್ಯಥೆಗಳನ್ನು ಚಿತ್ರಿಸಿದ ಅವರ ಕಾದಂಬರಿಗಳು, ಕತೆಗಳು ನಮಗೆಲ್ಲ ನಮ್ಮ ಆತ್ಮಕತೆಗಳಂತೆ ಭಾಸವಾಗುತ್ತಿದ್ದವು. ಜಲಾಶಯದ ಹಿನ್ನೀರಿನಲ್ಲಿ, ಹುಟ್ಟಿದೂರಲ್ಲೇ ನಿರಾಶ್ರಿತರಾದವರ ಕಣ್ಣೀರೂ ಬೆರೆತಿದೆ ಎಂಬ ಸತ್ಯವನ್ನು ಸಮಾಜದ ಎದಿರು ತೆರೆದಿಟ್ಟವರು ನಾ ಡಿಸೋಜಾ. ಅಭಿವೃದ್ಧಿಯ ಅಮಲಿನಲ್ಲಿ ನಿಸರ್ಗವನ್ನು ನಿರ್ದಯವಾಗಿ ಶೋಷಿಸುವ ಪ್ರಭುತ್ವ ಮತ್ತು ತಂತ್ರಜ್ಞರ ಕಠೋರ ಹುನ್ನಾರಗಳನ್ನು ಮುಚ್ಚುಮರೆಯಿಲ್ಲದಂತೆ ಅತ್ಯಂತ ಸರಳವಾಗಿ, ಆರ್ದ್ರವಾಗಿ ಬರೆದವರು ಅವರು.

ಕೆಲಸವಿಲ್ಲದಿದ್ದರೆ ಕೂಲಿ ಮಾಡಿಯಾದ್ರೂ ಪತ್ನಿಗೆ ಜೀವನಾಂಶ ಕೊಡಿ: ಅಲಹಾಬಾದ್ ಹೈಕೋರ್ಟ್

ಸಾಗರದಲ್ಲಿ ಹುಟ್ಟಿ, ಸಾಗರ ತಾಲ್ಲೂಕಿನ ಕಾರ್ಗಲ್ಲಿನಲ್ಲಿ ವೃತ್ತಿಜೀವನ ನಡೆಸಿ ಮತ್ತೆ ಸಾಗರಕ್ಕೇ ಬಂದು ನೆಲೆಸಿದ ನಾ ಡಿಸೋಜ ಪ್ರಪಂಚ ಸುತ್ತಿದವರಲ್ಲ.‌ ಆದರೆ ತಾವಿರುವ ತಾಣದಿಂದಲೇ ಪ್ರಪಂಚವನ್ನು ಕಂಡವರು. ವಿಶ್ವವಿದ್ಯಾನಿಲಯಗಳ ಅಕಡೆಮಿಕ್ ಓದಿಗೆ ತೆರೆದುಕೊಂಡವರಲ್ಲ. ಆದರೆ ವಿಶ್ವವಿದ್ಯಾನಿಲಯಗಳೇ ಅಧ್ಯಯನ ನಡೆಸಲಾಗದಷ್ಟು ಆಳವಾಗಿ ಮತ್ತು ಸೂಕ್ಷ್ಮವಾಗಿ ಪ್ರಗತಿಗೆ ಹಪಹಪಿಸುವ ಮನುಷ್ಯ ಜನಾಂಗದ ಕ್ರೌರ್ಯ ಮತ್ತು ಸ್ವಾರ್ಥಗಳ ಕುರಿತು ಬರೆದವರು.

ನಾಡಿಯವರ ಬದುಕಿನ ವಿಶೇಷ ಸಂಗತಿಯೆಂದರೆ ಅವರು ಸಾಗರವನ್ನು ಆ ಮೂಲಕ ಮಲೆನಾಡನ್ನು ಹಚ್ಚಿಕೊಂಡ ಬಗೆ. ಸ್ಥಳೀಯ ಸಮಸ್ಯೆಗಳಿಗೆ ಅವರು ಸ್ಪಂದಿಸಿದ ರೀತಿ ಅಪರೂಪದ್ದು. ಅದು ತಾಳಗುಪ್ಪಕ್ಕೆ ಬ್ರಾಡಗೇಜ್ ರೈಲು ತರುವ ಹೋರಾಟವಿರಬಹುದು, ಅರಣ್ಯ ಇಲಾಖೆಯ ಅತಿರೇಕಗಳ ವಿರುದ್ದದ ಹೋರಾಟವಿರಬಹುದು, ಅಂಬಾರಗುಡ್ಡದ ಗಣಿಗಾರಿಕೆಯ ವಿರುದ್ದ ಹೋರಾಟವಿರಬಹುದು, ಶರಾವತಿ ನೀರನ್ನು ಬೆಂಗಳೂರಿಗೆ ಒಯದಯುವ ಹುನ್ನಾರದ ವಿರುದ್ದವಿರಬಹುದು ಅವರು ಸಾಗರದ ಸಾಮಾನ್ಯ ಜನರ ಧ್ವನಿಗೆಧ್ವನಿಗೂಡಿಸಿ ಹೋರಾಡಿದವರು. ಮಲೆನಾಡಿನ ಪರಿಸರವನ್ನು ಅವರಷ್ಟು ಆಪ್ತರಾಗಿ ಪ್ರೀತಿಸಿ, ಅದನ್ನು ಸಂರಕ್ಷಿಸಲು ಧ್ವನಿ ಎತ್ತಿದವರು ಅಪರೂಪ ಎಂಬುದು ಉತ್ಪ್ರೇಕ್ಷೆಯ ಸಂಗತಿಯಲ್ಲ.

ಅವರದೇ ಕಾದಂಬರಿ ಆಧರಿಸಿ ಗಿರೀಶ್ ಕಾಸರವಳ್ಳಿ ನಿರ್ದೇಶಿಸಿದ "ದ್ವೀಪ" ಚಲನ ಚಿತ್ರಕ್ಕೆ ಸಂಭಾಷಣೆ ಬರೆಯುವ ಅವಕಾಶ ಸಿಕ್ಕಾಗ ನನಗಾದ ಆನಂದ ಅಷ್ಟಿಷ್ಟಲ್ಲ. ತೊಂಬತ್ತರ ದಶಕದಲ್ಲಿ ನಾನು ಮುಳುಗಡೆಯ ಕುರಿತು ಬರೆದ "ಬೆಳ್ಳಿ ಬೆಳಕಿನ ಹಿಂದೆ" ನಾಟಕ ರಚನೆಗೆ ಉಡುಪಿಯ ರಂಗಭೂಮಿ ಸಂಸ್ಥೆಯಿಂದ ಪ್ರಥಮ ಬಹುಮಾನ ಬಂದಾಗ ಅವರು ಅತೀವ ಸಂತಸ ವ್ಯಕ್ತಪಡಿಸಿ, ಬೆನ್ನುತಟ್ಟಿ ಪ್ರೋತ್ಸಾಹಿಸಿದ ಬಗೆಯನ್ನು ಹೇಳತೀರದು. ಅದನ್ನು ಸಾಗರದ ಉದಯ ಕಲಾವಿದರು ಅಭಿನಯಿಸಿದಾಗ ನೋಡಿ, ಮೆಚ್ಚಿ ನನ್ನನ್ನು ಅಭಿನಂದಿಸಿದ ಹೃದಯ ವೈಶಾಲ್ಯ ಅವರದು. ನಮ್ಮ ರಾಜ್ಯದ ವಿದ್ಯುತ್ ಚರಿತ್ರೆಯ ಕುರಿತು ನಾನು ಬರೆದ "ಬೆಳಕಾಯಿತು ಕರ್ನಾಟಕ" ಕೃತಿಯನ್ನು ಶ್ಲಾಘಿಸಿ, ಬೆನ್ನುತಟ್ಟಿದ್ದರು. ಮುಳುಗಡೆಯ ಕುರಿತು ನಾನು ಬರೆದ ಕಾದಂಬರಿ ಪುನರ್ವಸು ಕಾದಂಬರಿಯ ಕುರಿತೂ ಅವರು ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ನನ್ನಂತಹ ಹಲವು ಕಿರಿಯ ಲೇಖಕರನ್ನು ಪ್ರೋತ್ಸಾಹಿಸಿದ ಗುಣಗ್ರಾಹಿಗಳು ಈ ಹಿರಿಯರು. ಅವರ ಮನೆಗೆ ಹೋದಾಗಲೆಲ್ಲ ಅವರು ಮತ್ತು ಅವರ ಶ್ರೀಮತಿಯವರು ತೋರುವ ಆದರ, ಆತಿಥ್ಯಗಳ ಪರಿ ಹೇಳತೀರದು. ಮೊನ್ನೆ ಪ್ರಶಸ್ತಿ ಬಂದಿದ್ದಕ್ಕೆ ಅಭಿನಂದಿಸಿ ಫೋನ್ ಮಾಡಿದಾಗಲೂ, '' ಸಾಗರಕ್ಕೆ ಯಾವಾಗ ಬರುತ್ತೀರಿ, ಮನೆಗೆ ಬನ್ನೀ'' ಎಂದು ಆತ್ಮೀಯವಾಗಿ ಕರೆದರು. ಅವರ ಮಾತಿನ ಮೃದುತ್ವ, ನಗುಮುಖ, ವ್ಯಕ್ತಪಡಿಸುವ ಪ್ರೀತಿ ಅನ್ಯಾದೃಶ. ನಾವೆಲ್ಲ ಅವರಿಗೆ ಸ್ವಂತ ಶಿಷ್ಯರಂತೆ. ಕರೆದು ಬೆನ್ನುತಟ್ಟಿ ಪ್ರೋತ್ಸಾಹಿಸಿದ ಇಂತಹ ಹಿರಿಯರನ್ನು ನೆನೆಯುವುದೇ ಒಂದು ಪುಳಕ.

ಶರಾವತಿ ಮತ್ತು ಜೋಗದ ಕುರಿತು ಅವರೊಂದಿಗೆ ಮಾತನಾಡುತ್ತಿದ್ದರೆ ಹೊತ್ತು ಹೋಗುವುದೇ ತಿಳಿಯದು. ನಮ್ಮ ಜೋಗದ ಮಿತ್ರಮಂಡಳಿಯ ಕುರಿತು ಅವರಿಗೆ ಅಪಾರ ಅಕ್ಕರೆ. ಅವರು ಅದರ ಆಜೀವ ಗೌರವ ಸದಸ್ಯರು. ನಮ್ಮ ಬಹುತೇಕ ನಾಟಕೋತ್ಸವಗಳಿಗೆ ಒಂದೋ ಅವರು ಅತಿಥಿ, ಇಲ್ಲವೇ ತೀರ್ಪುಗಾರರು. ಎರಡೂ ಅಲ್ಲವಾದರೆ ಬಹುಮಾನ ವಿತರಕರು. ನಾವು ಒಟ್ಟಿಗೇ ಕುಳಿತು ಜೋಗದ ಕುರಿತು ಗಂಟೆಗಟ್ಟಲೇ ಚರ್ಚಿಸಿದ್ದಿದೆ. ಜೀರ್ಣವಾಗಿ ಹೋಗಿದ್ದ ಹಳೆಯ ಪ್ರವಾಸಿಗಳ ಕುರಿತು ಬರೆಯಲ್ಪಟ್ಟ ದಾಖಲೆಯೊಂದು ನನಗೆ ಸಿಕ್ಕಿ ಅದನ್ನು ಅವರಿಗೆ ಕೊಟ್ಟ ನೆನಪು ಈಗಲೂ ದಟ್ಟವಾಗಿದೆ. ಅದನ್ನು ಆಧರಿಸಿ ಅವರೊಂದು ಕೃತಿಯನ್ನು ರಚಿಸಿದ್ದರು. ಹೀಗೆ ಆತ್ಮೀಯ ಮತ್ತು ಗಾಢ ಸಂಬಂಧವುಳ್ಳ, ನನ್ನಂತಹ ಅನೇಕ ಮುಳುಗಡೆಯ ಕುಟುಂಬದ ಸದಸ್ಯರು, ಸದಾ ಹೃತ್ಪೂರ್ವಕವಾಗಿ ನೆನೆಸುವ, ಗೌರವಿಸುವ ನಾ ಡಿಸೋಜ ಕನ್ನಡದ ನಾಡಿ ಎಂದೇ ಖ್ಯಾತರಾದವರು. ನನ್ನಂತಹ ಅನೇಕರಿಗೆ ಸಾಹಿತ್ಯ ಲೋಕದ ಬಾಗಿಲು ತೆರೆದು ಒಳಗೆ ಕರೆದ ನಾಡಿಯವರಂತಹ ಹಿರಿಯರಿಗೆ ಈ ವರ್ಷದ ಪಂಪ ಪ್ರಶಸ್ತಿ ಬಂದಿರುವುದು, ನನಗಂತೂ ಹತ್ತಿರ ಕರೆದು ನೆತ್ತಿ ನೇವರಿಸಿದ ನಮ್ಮದೇ ಕುಟುಂಬದ ಹಿರಿಯರಿಗೆ ಪ್ರಶಸ್ತಿ ಸಿಕ್ಕ ಮಧುರ ಭಾವವನ್ನು ಹುಟ್ಟಿಸಿ, ಅಪಾರ ಸಂತಸ ನೀಡಿದೆ.

ವ್ಯಾಲೆಂಟೈನ್ಸ್ ವೀಕ್‌ಗೆ ಇನ್ನೊಂದೇ ವಾರ ಬಾಕಿ; ರೋಸ್ ಡೇಯಿಂದ ಕಿಸ್ ಡೇ ತನಕ ಇಲ್ಲಿದೆ ಪಟ್ಟಿ

ಈಗ ತುಂಬು ಕುಟುಂಬ ಸೌಖ್ಯದೊಂದಿಗೆ ಎಂಬತ್ತೇಳರ ಅಂಚಿನಲ್ಲಿ ನಾಡು ನುಡಿಗಾಗಿ ಮಿಡಿಯುತ್ತಿರುವ ಕನ್ನಡದ ಜೀವನಾಡಿ ಶತಮಾನ ದಾಟಿ ಮಿಡಿಯುತ್ತಿರಲಿ. ಇಂದಿಗೂ ಸಾಗರದ ನೆಹರೂ ನಗರದ ಹಳೆಯ ಹಂಚಿನಮನೆಯಲ್ಲಿ ಋಜು ಜೀವನ ನಡೆಸುತ್ತಿರುವ ಸಾತ್ವಿಕ ಬದುಕು ಅವರದು.

ಹಲವು ಹತ್ತು ಪ್ರಶಸ್ತಿಗಳಿಗೆ ಭಾಜನರಾಗಿರುವ ತಮಗೆ ಪಂಪ ಪ್ರಶಸ್ತಿಗಾಗಿ ಅಭಿನಂದನೆಗಳು ಮತ್ತು ಅಭಿವಂದನೆಗಳು. ದೇವರು ಆರೋಗ್ಯ ಮತ್ತು ನೆಮ್ಮದಿಗಳೊಂದಿಗೆ ತಮ್ಮನ್ನು ನೂರ್ಕಾಲ ಸುಖವಾಗಿರಿಸಲಿ. ಈ ನಿಷ್ಕಳಂಕ ನಗುಮುಖ ಸದಾ ಹೀಗೇ ನಳನಳಿಸುತ್ತಿರಲಿ. ನಮಸ್ಕಾರ, ಸರ್.

click me!