ಕೆವಿ ತಿರುಮಲೇಶ್; ಹೊರನಾಡಿನ ಪರಮ ಕವಿ

By Kannadaprabha News  |  First Published Feb 5, 2023, 12:26 PM IST

- ಯಾವ ಕಳ್ಳಬೆಕ್ಕು ಅವರಿಗೆ ಮುಖಾಮುಖಿಯಾಯಿತೋ ಎಂದು ಅಚ್ಚರಿಪಡುವಂತೆ ಮೌನವಾಗಿದ್ದಾರೆ ತಿರುಮಲೇಶ್‌.

- ತಿರುಮಲೇಶರ ಪದ್ಯ ಓದಿದಂದಿನಿಂದ ನಾವು ಅದರ ಪ್ರೀತಿಯಲ್ಲಿ, ಅವರು ನಮ್ಮ ರೀತಿಯಲ್ಲಿ.....


- ಜೋಗಿ

ಕೊನೆಕೊನೆಯ ದಿನಗಳಲ್ಲಿ ಕನ್ನಡ ಸಾಹಿತ್ಯಲೋಕ ತನ್ನನ್ನು ಕಡೆಗಣಿಸುತ್ತಿದೆ ಎಂಬ ವಿಷಾದದಲ್ಲಿದ್ದರು ತಿರುಮಲೇಶ್‌. ತಾನು ಬರೆದ ಎರಡು ನಾಟಕಗಳನ್ನು ಯಾರೂ ಓದಿಯೇ ಇಲ್ಲ, ಅರಬ್ಬಿ ಕಾವ್ಯ ಮತ್ತು ಅಕ್ಷಯ ಕಾವ್ಯ ಚರ್ಚೆಯಾಗಲಿಲ್ಲ, ಅನುವಾದಗಳ ಬಗ್ಗೆ ಯಾರೂ ಮಾತಾಡುತ್ತಿಲ್ಲ ಎಂದು ಬೇಸರ ಮಾಡಿಕೊಳ್ಳುತ್ತಿದ್ದರು. ಅದರ ಮರುಕ್ಷಣವೇ, ಯಾರೂ ಓದಿಲ್ಲ ಅಂತ ನಾನೇಕೆ ಬೇಜಾರು ಮಾಡಿಕೊಳ್ಳಲಿ, ಬೇಸರ ಆಗಬೇಕಾದದ್ದು ಓದದವರಿಗೇ ಅಲ್ಲವೇ? ನನ್ನ ಕೃತಿ ನನಗೆ ಕೊಡಬೇಕಾದ ಸಂತೋಷವನ್ನು ಬರೆಯುವಾಗಲೇ ಕೊಟ್ಟಾಗಿದೆ ಎಂದು ಲವಲವಿಕೆಯಿಂದ ಮಾತಾಡುತ್ತಿದ್ದರು. ಕಣ್ಣು ಮಂಜಾಗಿ, ಓದುವುದು ಸಾಧ್ಯವಾಗದ ದಿನಗಳಲ್ಲೂ, ಕಂಪ್ಯೂಟರಿನಲ್ಲಿ ಅಕ್ಷರ ದೊಡ್ಡದು ಮಾಡಿಕೊಂಡು ಓದುತ್ತಾ, ಬರೆಯುತ್ತಾ ಇದ್ದ ಕೆವಿ ತಿರುಮಲೇಶ್‌ ವಿಶ್ವಕವಿ.

Latest Videos

undefined

ಕನ್ನಡದ ಕೆಲಸವನ್ನು ಸದ್ದಿಲ್ಲದೆ ಮಾಡಿಕೊಂಡು ಬರುತ್ತಿರುವ ಅನೇಕರು ಎಷ್ಟೋ ಸಾರಿ ಮುಂಚೂಣಿಗೆ ಬರುವುದೇ ಇಲ್ಲ. ಎಲ್ಲೋ ಕುಳಿತುಕೊಂಡು ತಮ್ಮ ಪಾಡಿಗೆ ತಮಗೆ

ಅನ್ನಿಸಿದ್ದನ್ನು ಬರೆಯುತ್ತಾ ಇದ್ದುಬಿಡುತ್ತಾರೆ. ಅಂಥ ಪಂಡಿತರನ್ನು ಸಾಹಿತ್ಯಲೋಕ ಗುರುತಿಸುತ್ತದೋ ಇಲ್ಲವೋ ಗೊತ್ತಿಲ್ಲ, ಆದರೆ ಓದುಗರ ಪಾಲಿಗೆ ಅವರು ಅಷ್ಟಾಗಿ ಒದಗಿಬರುವುದಿಲ್ಲ. ಅಂಥವರ ಪೈಕಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದವರು ಕೆ.ವಿ ತಿರುಮಲೇಶ್‌.

ಸುಮಾರು ಇಪ್ಪತ್ತೆರಡು ವರ್ಷಗಳ ಹಿಂದಿನ ಮಾತು. ನಾವೆಲ್ಲ ಬಳ್ಳಾರಿಯಲ್ಲಿ ನಡೆದ ಸಣ್ಣಕಥಾ ಕಮ್ಮಟಕ್ಕೆ ಹೋಗಿದ್ದೆವು. ಆಗೆಲ್ಲ ಸಣ್ಣಕಥಾ ಕಮ್ಮಟಗಳಿಗೆ ಒಂಥರದ ಗಮ್ಮತ್ತಿತ್ತು. ಆ ಸಣ್ಣಕಥಾ ಕಮ್ಮಟದ ನಿರ್ದೇಶಕರಾಗಿದ್ದವರು ಜಿ.ಎಸ್‌. ಸದಾಶಿವ ಮತ್ತು ರಾಜಶೇಖರ ನೀರಮಾನ್ವಿ. ಅಲ್ಲಿಗೆ ವಿಶೇಷ ಉಪನ್ಯಾಸ ನೀಡಲು ಬರುತ್ತಿದ್ದವರು ಕುಂ.ವೀ.,

ಎಂ.ಪಿ. ಪ್ರಕಾಶ್‌, ಶಂಕರ್‌ನಾಗ್‌ ಮುಂತಾದವರು. ಅವರೆಲ್ಲ ಬಂದಾಗ ಸಹಜವಾಗಿಯೇ ನಮ್ಮ ಉತ್ಸಾಹ ಹೆಚ್ಚಾಗುತ್ತಿತ್ತು. ನಾವು ಕತೆಗಳ ಬಗ್ಗೆ ಕೇಳಿಸಿಕೊಳ್ಳುತ್ತಾ, ರಾತ್ರಿ ಹೊತ್ತಲ್ಲಿ ನಮಗೆ ತೋಚಿದ ಕತೆಗಳನ್ನು ಬರೆಯುತ್ತಾ ದೊಡ್ಡ ಕತೆಗಾರರಾಗುವ ಹುಮ್ಮಸ್ಸಿನಲ್ಲಿದ್ದೆವು. ಹೀಗಿದ್ದಾಗ ಒಂದು ಮಟ ಮಟ ಮಧ್ಯಾಹ್ನ ಅಲ್ಲಿಗೆ ಬುಲ್ಗೇನಿಯನ್‌ ಗಡ್ಡದ, ಜುಬ್ಬಾ ತೊಟ್ಟುಕೊಂಡ ಚೂಪುಕಣ್ಣಿನ ವ್ಯಕ್ತಿಯೊಬ್ಬರು ಬಂದರು. ಅವರನ್ನು ಜಿ.ಎಸ್‌ ಸದಾಶಿವ ಪರಿಚಯಿಸಿದಾಗ ನಮಗೆಲ್ಲ ವಿಚಿತ್ರ ಖುಷಿ. ಆಗಷ್ಟೇ ಅವರ ಒಂದಷ್ಟುಕತೆಗಳನ್ನು ಓದಿಕೊಂಡಾಗಿತ್ತು. ತಿರುಮಲೇಶ್ವರ ಭಟ್ಟಎಂಬ ಹೆಸರಿನ ಅವರು ಕಾಸರಗೋಡಿನವರು ಎಂಬುದು ಗೊತ್ತಿತ್ತು. ಆದರೆ ಅವರನ್ನು ಕಣ್ಣಾರೆ ನೋಡಿರಲಿಲ್ಲ.

ನಾವು ಉತ್ಸಾಹದಿಂದ ಅವರಿಗೆ ನಾವು ಬರೆದ ಕತೆಗಳನ್ನು ತೋರಿಸಿದೆವು. ಅವುಗಳ ಮೇಲೆ ಕಣ್ಣಾಡಿಸಿ ಅವರು ಮೆಚ್ಚುಗೆಯ ನೋಟ ಬೀರುತ್ತಿದ್ದರು. ಕೊನೆಗೆ ಎಲ್ಲರ ಕತೆಗಳನ್ನೂ ಉದ್ದೇಶಿಸಿ ನಾಲ್ಕು ಮಾತಾಡಿದರು. ಆಗ ಅವರು ಹೇಳಿದ ಮಾತೊಂದು ಇವತ್ತಿಗೂ ಕತೆ ಬರೆಯುವ ಹೊತ್ತಿಗೆ ನೆನಪಾಗುತ್ತಲೇ ಇರುತ್ತದೆ:

‘ಕತೆಯೆಂದರೆ ಕತೆಯಲ್ಲ ಅಂದುಕೊಂಡು ಬರೀರಿ. ಹಾಗಂತ ಅದು ವರದಿ ಕೂಡ ಅಲ್ಲ. ಒಂದು ಕ್ಷಣವನ್ನು ಹಿಡಿದಿಡುವ ಪ್ರಯತ್ನ ಅದು. ಇಡೀ ಕತೆ ಓದಿದ ನಂತರ ನಮಗೆ ಆ ಒಂದು ಕ್ಷಣದ ತಲ್ಲಣ ಮನಸ್ಸಿನಲ್ಲಿ ಉಳಿದುಬಿಡಬೇಕು. ಅಂಥ ಒಂದು ಸಂದಿಗ್ಧ ಅಲ್ಲಿ ಎದುರಾಗಬೇಕು’.

ಅಂಥ ಸಂದಿಗ್ಧವನ್ನು ನಾನು ಕಂಡದ್ದು ಅವರ ‘ಇನ್ನೊಬ್ಬ’ ಕತೆಯಲ್ಲಿ. ಅಲ್ಲಿ ಮುಷ್ಟಿಯಲ್ಲಿ ಒಂದು ನೊಣವನ್ನು ಹಿಡಿದುಕೊಂಡು ಸ್ವಾಮೀಜಿ ಕೇಳುತ್ತಾರೆ; ಈ ನೊಣ ಬದುಕಿದೆಯೋ ಸತ್ತಿದೆಯೋ ಹೇಳು. ಉತ್ತರಿಸಬೇಕಾದವನಿಗೆ ಸ್ವಾಮೀಜಿಯ ತಂತ್ರ ಗೊತ್ತು. ಸತ್ತಿದೆ ಅಂದರೆ ನೊಣವನ್ನು ಹಾರಲು ಬಿಡುತ್ತಾರೆ. ಬದುಕಿದೆ ಎಂದರೆ ಹಿಚುಕಿ ಸಾಯಿಸುತ್ತಾರೆ.

KV Tirumalesh Death : ಕನ್ನಡದ ಖ್ಯಾತ ಕವಿ ಕೆ.ವಿ ತಿರುಮಲೇಶ್‌ ವಿಧಿವಶ

ನಂತರದ ದಿನಗಳಲ್ಲಿ ಸೂಫಿ ಕತೆಗಳನ್ನು ಓದುತ್ತಿರಬೇಕಾದರೆ, ಅಲ್ಲೂ ಇಂಥದ್ದೊಂದು ಸಂದಿಗ್ಧ ಎದುರಾದದ್ದನ್ನು ನೋಡಿದ್ದೆ. ಗುರುವಿನ ಪ್ರಶ್ನೆಗೆ ಅಲ್ಲಿ ಶಿಷ್ಯ ಉತ್ತರಿಸುತ್ತಾನೆ : ಅದು ನಿನ್ನ ಕೈಯಲ್ಲಿದೆ. ಇದನ್ನು ಓದುವ ತನಕ ಇಂಥದ್ದೊಂದು ಉತ್ತರ ಹೊಳೆದಿರಲೂ ಇಲ್ಲ.

ಹೀಗೆ ಅನೂಹ್ಯ ಸಂಗತಿಗಳನ್ನು ಥಟ್ಟನೆ ಎದುರಾಗಿಸಿ ನಮ್ಮ ಅರಿವನ್ನು ಹೆಚ್ಚಿಸುತ್ತಾ ಬಂದವರು ತಿರುಮಲೇಶ್‌. ಅದಾಗಿ ಆರೇಳು ವರ್ಷಗಳ ನಂತರ ಅವರ ‘ಅವಧ’ ಸಂಕಲನ ಓದಿ ಪ್ರೇರಿತನಾಗಿ ಅದರ ಮೇಲೊಂದು ವಿಮರ್ಶೆ ಬರೆಯುತ್ತೇನೆ. ಪುಸ್ತಕ ಕಳಿಸಿಕೊಡಿ. ನಾನು ಕೊಂಚ ಸೋಮಾರಿ ಎಂದೇನೇನೋ ಕೊಂಚ ಉಡಾಫೆಯಿಂದಲೇ ಅವರಿಗೆ ಪತ್ರ ಬರೆದಿದ್ದೆ. ಅದಕ್ಕೆ ಅವರು ಎರಡೇ ಸಾಲಿನ ಮಾರೋಲೆ ಬರೆದಿದ್ದರು: ಸಾಹಿತಿಗೆ ಸೋಮಾರಿತನ ಶತ್ರು.

ತಿರುಮಲೇಶ್‌ ಎಂದೂ ಸೋಮಾರಿಯಾಗಿರಲೇ ಇಲ್ಲ ಅನ್ನುವುದು ಈಗ ಹೊಳೆಯುತ್ತಿದೆ. ಏನೇನನ್ನೋ ಬರೆಯುತ್ತಾ ಹೊಸದೇನಾದರೂ ನೀಡಬೇಕು ಎಂದು ನಿರ್ಧರಿಸಿದವರಂತೆ ನಮ್ಮನ್ನು ಮತ್ತೊಂದು ಜಗತ್ತಿಗೆ ಕರೆದೊಯ್ಯುತ್ತಿದ್ದವರು ಅವರು. ಅವರ ಕವಿತೆಗಳಲ್ಲಿ ಕಾಣಿಸುವ ಇತಿಹಾಸ ಪ್ರಜ್ಞೆ ಮತ್ತು ಕಳೆದುಹೋದ ಜಗತ್ತಿನಲ್ಲಿ ಕಳೆದುಹೋಗಿ ಬಿಡುವ, ಅಲ್ಲಿಂದೇನನ್ನೋ ಹುಡುಕಿಕೊಂಡು ಬರುವ ಪ್ರತಿಭೆ ಬಹುಶಃ ಎ.ಕೆ. ರಾಮಾನುಜನ್‌ ಒಬ್ಬರಲ್ಲಿ ಮಾತ್ರ ಇತ್ತೆಂದು ನನ್ನ ನಂಬಿಕೆ. ಪ್ರತಿಯೊಂದು ಅಕ್ಷರವನ್ನು ಮೂಡಿಸುವ ಹೊತ್ತಿಗೂ, ಅದು ಮತ್ತೇನನ್ನೋ ಧ್ವನಿಸುತ್ತಿರಬೇಕು ಎಂಬ ಆಸೆ, ಭಾಷೆಗಿರುವ ವಿಚಿತ್ರ ಲಯವನ್ನು ಹಿಡಿಯುವ ಅದಮ್ಯ ಬಯಕೆ ಮತ್ತು ಅದರಿಂದ ಹೊಸ ಅರ್ಥ ಸೃಷ್ಟಿಯಾದೀತು ಎಂಬ

ಭರವಸೆಯಲ್ಲಿ ಬರೆಯುವ ಕವಿ ತಿರುಮಲೇಶ್‌. ಭಾಷಾಶಾಸ್ತ್ರಜ್ಞರು ಸಾಮಾನ್ಯವಾಗಿ ಒಣ ಭಾಷೆಯಲ್ಲಿ ಬರೆಯುತ್ತಾರೆ ಎಂಬ ನಂಬಿಕೆಯನ್ನೂ ಸುಳ್ಳಾಗಿಸಿದವರು ತಿರುಮಲೇಶ್‌. ಅವರ ಅಂಕಣಗಳಲ್ಲೂ ಇಂಥ ಹುಡುಕಾಟವನ್ನು ನಾವು ಕಾಣಬಹುದು. ಶಂಕರ ಬಟ್ಟರು ಕನ್ನಡದ ‘ನುಡಿಗಟ್ಟ’ನ್ನು ಬದಲಾಯಿಸಲು ಹೊರಟಾಗ ಅದನ್ನು ವೈಜ್ಞಾನಿಕವಾಗಿ ತಾರ್ಕಿಕವಾಗಿ ವಿರೋಧಿಸಿದವರು ತಿರುಮಲೇಶ್‌. ಅವರ ಪಾಂಡಿತ್ಯಕ್ಕೆ ಅದು ಮತ್ತೊಂದು ಸಾಕ್ಷಿ.

ಅಳೆಯುವವರ ಕಥೆ ಬೆಳಕಿಗೆ ತರುತ್ತಿರುವೆ : ಗಜಾನನ ಶರ್ಮಾ

ಒಮ್ಮೆ ಬೆಳ್ಳಂಬೆಳಗ್ಗೆ ತಿರುಮಲೇಶ್‌ ಹೇಳದೇ ಕೇಳದೇ ವೈಯೆನ್ಕೆ ಮನೆಗೆ ಬಂದು ಬಿಟ್ಟಿದ್ದರು. ಆವತ್ತು ವೈಯೆನ್ಕೆಗೆ ಸಣ್ಣಗೆ ಜ್ವರ, ಜೋರು ನೆಗಡಿ. ಬಾಗಿಲು ತೆರೆಯುತ್ತಿದ್ದಂತೆ ವೈಯೆನ್ಕೆ ಕೆಂಪು ಮೂಗು, ನೀರು ತುಂಬಿಕೊಂಡ ಕಣ್ಣು ನೋಡಿದ ತಿರುಮಲೇಶ್‌ ಗಾಬರಿಬಿದ್ದು ‘ಏನ್‌ ವೈಯೆನ್ಕೆ, ಹೀಗಾಗಿಬಿಟ್ಟಿದ್ದೀರಿ, ಹುಷಾರಿಲ್ವೇ?’ ಎಂದು ಆತಂಕದಿಂದ ಕೇಳಿದ್ದರು. ವೈಯೆನ್ಕೆಗೆ ಆರೋಗ್ಯ ಕೆಟ್ಟರಂತೂ ವಿಪರೀತ ಭಯ. ಅದರ ಬಗ್ಗೆ ಮಾತಾಡಿದರೆ ರಣಕೋಪ. ತಿರುಮಲೇಶ್‌ ಹಾಗೆ ಕೇಳಿದ್ದೇ ತಡ ‘ಏನ್ರೀ ಆಗಿದೆ ನಂಗೆ. ಏನಾಗಿದೆ..ಹುಷಾರಿಲ್ಲ, ನೀವು ಔಷಧಿ ಕೊಡ್ತೀರಾ.. ಹೋಗ್ರೀ ಸುಮ್ನೆ’ ಎಂದು ಅವರನ್ನು ಒಳಗೂ ಕರೆಯದೇ ಹಾಗೇ ಕಳಿಸಿಬಿಟ್ಟಿದ್ದರು. ಅದಾಗಿ ಕೆಲವು ದಿನಗಳ ನಂತರ ‘ಜಾಸ್ತಿ ಬೈದೆ ಅಲ್ವಾ.. ಹೆದರಿಸಿಬಿಟ್ಟಿದ್ದ, ಪೂರ್ತಿ ಹೆದರಿಸಿಬಿಟ್ಟಿದ್ದ, ಘಾ.. ಘಾ’ ಎಂದು ಹೇಳಿಕೊಂಡು ಪಶ್ಚಾತ್ತಾಪ ಮಿಶ್ರಿತ ಸಂತೋಷದಿಂದ ಅಡ್ಡಾಡುತ್ತಿದ್ದರು. ಕೊನೆಗೆ ತಾವೇ ಅವರಿಗೆ ಫೋನ್‌ ಮಾಡಿ ಏನಾದರೂ ಬರೆದುಕೊಡುವಂತೆ ಕೇಳಿಕೊಂಡಿದ್ದರು.

***

ನವೋದಯದಿಂದ ಕಾವ್ಯ ನವ್ಯಕ್ಕೆ ದಾಟಿಕೊಂಡ ಸಂಕ್ರಮಣ ಕಾಲದಲ್ಲಿ ಬರೆಯಲು ಆರಂಭಿಸಿದವರೆಲ್ಲ ಅಡಿಗರ ಹಾಗೆ ಬರೆಯಲು ಶತಪ್ರಯತ್ನ ಮಾಡುತ್ತಿದ್ದರು. ಹೀಗಾಗಿಯೇ ಒಂದು ಕವಿತೆಯನ್ನು ಓದಿದ ತಕ್ಷಣವೇ ಇದು ನವ್ಯ ಕವಿತೆ ಎಂದು ಅದರ ಶೈಲಿ, ಲಯ ಮತ್ತು ವಸ್ತುವಿನ ಆಯ್ಕೆಯಿಂದಲೇ ಆಗಷ್ಟೇ ಓದಲು ಆರಂಭಿಸಿದವನಿಗೂ ಗೊತ್ತಾಗುತ್ತಿತ್ತು. ಕನ್ನಡದಲ್ಲಿ ಈ ಸಿದ್ಧಶೈಲಿಯನ್ನು ಮೀರಲು ಯತ್ನಿಸಿದವರು ಎ.ಕೆ. ರಾಮಾನುಜನ್‌ ಮತ್ತು ತಿರುಮಲೇಶ್‌. ಎ.ಕೆ. ರಾಮಾನುಜನ್‌ ಅದನ್ನು ಪ್ರಜ್ಞಾಪೂರ್ವಕವಾಗಿ ಮಾಡಿದರೆ, ತಿರುಮಲೇಶ್‌ ತೀರ ಸಹಜವೆಂಬಂತೆ ಬರೆಯತೊಡಗಿದರು.

ತಿರುಮಲೇಶರ ಕವಿತೆಗಳನ್ನು ನೋಡುತ್ತಾ ಹೋಗೋಣ :

ಮಸಾಲೆ ಕಡ್ಲೆ ಜಗಿಯುತ್ತಾ

ಸೌತೆ ಚೂರು ಮೆಲ್ಲುತ್ತಾ

ಕಾಲೆಳೆಯುತ್ತಾ ಉಸುಕಿನಲ್ಲಿ

ಮೂರು ಸಂಜೆಯ ಬೆಳಕಿನಲ್ಲಿ

ಕವಿಯಿದ್ದಾನೆ ಎಲ್ಲರ ಹಾಗೆ

ಕವಿಗಳಿರೋದೇ ಹಾಗೆ

ಹೀಗೆ ಸರಳವಾಗಿ ಬರೆಯುವಲ್ಲಿ ತಿರುಮಲೇಶ್‌ ಇನ್ನೇನೋ ಹೇಳುತ್ತಿದ್ದಾರೆ ಅನ್ನಿಸುತ್ತದೆ. ಮೂರು ಸಂಜೆಯ ಬೆಳಕಿನಲ್ಲಿ ಎಂದಾಗ ನಮಗೆ ಕೆ.ಎಸ್‌. ನರಸಿಂಹಸ್ವಾಮಿಯವರ ‘ತೆರೆದ ಬಾಗಿಲು’ ನೆನಪಾಗುತ್ತದೆ. ಅಲ್ಲಿ ಮೂರು ಕಾಲಗಳಂತೆ, ಮೂರು ಬೆಂಕಿಗಳಂತೆ ಬಂದ ಆಗಂತುಕರು ನೆನಪಾಗುತ್ತಾರೆ. ಮೂರು ಸಂಜೆ ಮುಸ್ಸಂಜೆಯೂ ಹೌದು. ಮೂರು ಬೇರೆ ಬೇರೆ ಸಂಜೆಗಳೂ ಇರಬಾರದೇಕೆ ಅನ್ನಿಸುತ್ತದೆ.

ಮುಖವಾಡ, ವಠಾರ, ಮಹಾಪ್ರಸ್ಥಾನ, ಮುಖಾಮುಖಿ, ಅವಧ, ಪಾಪಿಯೂ ಹೀಗೆ ಆರೋ ಏಳೋ ಕವಿತಾ ಸಂಕಲನಗಳನ್ನೂ ಒಂದೆರಡು ಕಥಾ ಸಂಕಲನಗಳನ್ನೂ ಬರೆದು ನಂತರ ಕತೆ ಕವಿತೆ ಸಾಕು ಎಂದು ನಿಟ್ಟುಸಿರಿಟ್ಟವರಂತೆ ಸುಮ್ಮನಾಗಿದ್ದಾರೆ ತಿರುಮಲೇಶ್‌. ಯಾವ ಕಳ್ಳಬೆಕ್ಕು ಅವರಿಗೆ ಮುಖಾಮುಖಿಯಾಯಿತೋ ಎಂದು ಅಚ್ಚರಿಪಡುವಂತೆ ಮೌನವಾಗಿದ್ದಾರೆ. ‘ಮುಖಾಮುಖಿ’ ಕವಿತೆಯಲ್ಲಿ ಬರುವ ಸಾಲುಗಳನ್ನು ಗಮನಿಸಿ. ಇದ್ದಕ್ಕಿದ್ದಂತೆ ಅವರಿಗೆ ಒಂದು ಬೆಕ್ಕು ಮುಖಾಮುಖಿಯಾಗುತ್ತದೆ. ಬೆಕ್ಕೂ ಕವಿಯೂ ಪರಸ್ಪರ ದಿಟ್ಟಿಸಿ ನೋಡುತ್ತಾರೆ. ಯಾರೂ ಕಣ್ಣು ಕೀಲಿಸುವುದಿಲ್ಲ. ಆ ಕ್ಷಣಕಾಲದ ಮುಖಾಮುಖಿಗೆ ಮೂರು ಭಾವಗಳನ್ನು ಕೊಡುತ್ತಾರೆ ತಿರುಮಲೇಶ್‌:

ತತ್ವಜ್ಞಾನವೆಲ್ಲ ಬೊಗಳೆ, ಉಪದೇಶಗಳೆಲ್ಲ ರಗಳೆ ಎನ್ನುತ್ತಿದ್ದ ಯೂಜಿ ಒಬ್ಬ ಗುರೂಜಿ!

ಒಂದು ಬೆಕ್ಕಿನ ಕಣ್ಣುಗಳು ಇಷ್ಟುನಿಶ್ಚಲವಾಗಿರುತ್ತವೆ

ಎಂದು ನನಗೆ ಗೊತ್ತಿರಲಿಲ್ಲ

ಒಂದು ಬೆಕ್ಕಿನ ಕಣ್ಣುಗಳು ಇಷ್ಟುಅನಾಥವಾಗಿರುತ್ತವೆ

ಎಂದು ನನಗೆ ಗೊತ್ತಿರಲಿಲ್ಲ

ಒಂದು ಬೆಕ್ಕಿನ ಕಣ್ಣುಗಳಲ್ಲಿ ಇಷ್ಟೊಂದು ವಿಷಾದವಿರುತ್ತದೆ

ಎಂದು ನನಗೆ ಗೊತ್ತಿರಲಿಲ್ಲ

ತಿರುಮಲೇಶ್‌ ಕನ್ನಡನಾಡಿನಿಂದ ತುಂಬ ದೂರವೇ ಉಳಿದುಬಿಟ್ಟವರು. ಈಗ ಅದ್ಯಾವುದೋ ಕೇಳರಿಯದ ದೇಶದಲ್ಲಿದ್ದಾರೆ ಎಂದಷ್ಟೇ ಗೊತ್ತು. ಈಗಲೂ ಅಲ್ಲಿ ಮಕ್ಕಳಿಗೆ ಪಾಠ ಹೇಳುತ್ತಾ, ವಾರ ವಾರ ಅಂಕಣ ಬರೆಯುತ್ತಾ, ಹುಮ್ಮಸ್ಸು ಬಂದರೆ ತಮಗಿಷ್ಟವಾದ ಕಾದಂಬರಿ ಅನುವಾದಿಸುತ್ತಾ ಇದ್ದುಬಿಡುತ್ತಾರೆ. ತನ್ನದೇ ಆದ ವಠಾರವೊಂದಿಲ್ಲದೇ, ಕವಿ ಇರುವುದು ಕಷ್ಟ. ಕನ್ನಡನಾಡು ಅವರಿಗೆ ‘ಅವಧ’ದ ಥರ ಕಾಣಿಸುತ್ತಿದ್ದಿರಬಹುದು.

ಒಮ್ಮೆ ಕೂಗಿದ ಸದ್ದು ಕೇಳಿಸುವುದು ಅನೇಕ ದಿನಗಳವರೆಗೆ

ಎದ್ದ ಸ್ವಂತದ ನೆರಳೆ ಕವಿಯುವುದು ಕತ್ತಲ ಹಾಗೆ

ಪ್ರತಿಯೊಬ್ಬರೂ ಹುಡುಕುವರು ತಮ್ಮ ಕಾಣದ ವಿಧಿಯ

ಯಾವ ಬಾಗಿಲೋ ಮುಚ್ಚಿಟ್ಟಬೆಳಕಿನ ನಿಧಿಯ

ಗೆದ್ದರೆ ಗೆಲ್ಲಬೇಕು ಬಿಟ್ಟುಕೊಡುವುದರಿಂದ ಎಂಬ ಸಾಲು ಅವರ ‘ಮುಖಾಮುಖಿ’ ಕವಿತೆಯಲ್ಲಿ ಬರುತ್ತದೆ. ತುಂಬ ನಿರ್ಲಕ್ಷ್ಯಕ್ಕೆ ಒಳಗಾದ ತಿರುಮಲೇಶ್‌ ಹಾಗೆ ಬಿಟ್ಟುಕೊಟ್ಟು ಗೆದ್ದರು ಎಂದು ಖುಷಿಯಾಗುತ್ತದೆ. ಅದೇ ಹೊತ್ತಿಗೆ ಒಬ್ಬ ಕವಿಯ ಕಣ್ಣುಗಳಲ್ಲಿ ಇಷ್ಟೊಂದು ವಿಷಾದವಿರುತ್ತದೆ ಎಂದು ನನಗೆ ಗೊತ್ತಿರಲಿಲ್ಲ ಎಂದೂ ಅನ್ನಿಸುತ್ತದೆ.

ಇವತ್ತಿಗೂ ನೆನಪಾಗುವುದು, ಮತ್ತೆ ಮತ್ತೆ ಓದಬೇಕು ಅನ್ನಿಸುವುದು ಅವರ ‘ಪಾಪಿಯೂ’ ಸಂಕಲನದ ಕತೆಗಳು. ಅವುಗಳ ಗಮ್ಮತ್ತೇ ಬೇರೆ. ಸುಮ್ಮನೆ ಆ ಸಾಲುಗಳನ್ನು ಓದುತ್ತಾ ಸುಖಿಸಿ :

ಸಂತೆಯಿಂದ ಯೂಸುಫನ

ಕೊಂಡುತಂದ ದಿನದಿಂದ

ಜುಲೇಖ ಅವನ ಪ್ರೀತಿಯಲ್ಲಿ

ನಾವು ಅವಳ ರೀತಿಯಲ್ಲಿ..

ತಿರುಮಲೇಶರ ಪದ್ಯಗಳೂ ಹಾಗೆಯೇ. ಅವರ ಪದ್ಯ ಓದಿದಂದಿನಿಂದ ನಾವು ಅದರ ಪ್ರೀತಿಯಲ್ಲಿ, ಅವರು ನಮ್ಮ ರೀತಿಯಲ್ಲಿ.....

click me!