ಹಳೆಯ ರೇಡಿಯೋಗೆ ಐದು ಲಕ್ಷ ಕೊಡ್ತೀವಿ!

By Kannadaprabha News  |  First Published Jun 14, 2020, 1:45 PM IST

ಮೊನ್ನೆ ಮಧ್ಯಾಹ್ನ ಒಂದು ಕರೆ ಬಂತು ಅಪ್ಪನಿಗೆ.

‘ಅಣ್ಣಾ...ಈಗೊಂದೈದಾರು ವರ್ಷದ ಹಿಂದೆ ನಿಮ್ಮ ಮನೆಗೆ ಬಂದಾಗ ನೀವೊಂದು ಹಳೆ ರೇಡಿಯೋದಲ್ಲಿ ಕೃಷಿರಂಗ ಕೇಳ್ತಾ ಕೂತಿದ್ರಿ. ಆ ರೇಡಿಯೋ ಈಗಲೂ ಇದೆಯಾ ಮನೆಯಲ್ಲಿ? ’


ನಂದಿನಿ ಹೆದ್ದುರ್ಗ

ಅಪ್ಪನಿಗೆ ಅಚ್ಚರಿ!

Tap to resize

Latest Videos

undefined

ನಾಕು ದಿನದ ಹಿಂದೆ ನೋಡಿದ್ದೇ ಮರೆತು ಹೋಗುವ ಈ ಲೋಕದಲ್ಲಿ ಐದಾರು ವರ್ಷಗಳ ಹಿಂದೆ ನೋಡಿದ ರೇಡಿಯೋ ನೆನಪಿಟ್ಟಿರಬೇಕೆಂದರೆ ಏನೋ ಇದೆ ಎನ್ನುತ್ತಾ ಗುಟ್ಟು ಬಿಟ್ಟುಕೊಡದೆ ‘ಯಾಕಪ್ಪ? ರೇಡಿಯೋ ಯಾಕೀಗ?’ಎಂದರು.

‘ಅಣ್ಣಾ..ನಿಂತ ಜಾಗದಲ್ಲಿ ಇಪ್ಪತ್ತು ಸಾವಿರ ಕೊಡ್ತಿನಿ..ಆ ರೇಡಿಯೋ ನನಗೆ ಕೊಡಿ ಅಣ್ಣಾ’ ಎನ್ನುತ್ತ ದುಂಬಾಲು ಬಿದ್ದ..

ಇಪ್ಪತ್ತು ಸಾವಿರ!

ಮುನ್ನೂರು ರೂಪಾಯಿ ರೇಡಿಯೋಗೆ ಇಪ್ಪತ್ತು ಸಾವಿರವೇ? ಹಣ ಎಳೆದರೂ ಅಪ್ಪ ವಸ್ತು ಮೋಹಿ. ಹಾಗಂತ ಮೆಟಿರಿಯಲಿಸ್ಟಿಕ್‌ ಅಲ್ಲ. ಎಮೋಷನಲ್‌ ಬಾಂಡಿಂಗು.

‘ಅದಾ? ಮಗ ಅವನ ಮನೆಗೆ ಬೇಕುಂತ ತಗೊಂಡುಹೋಗಿದ್ದಾನೆ.ಇಲ್ಲಿಲ್ಲ ಮಾರಾಯ’ ಅಂದರು.

ಮನೆಯ ಗೋಡೆಗೂಡಿನಲ್ಲಿ ಹಾಯಾಗಿ ಕುಳಿತಿದ್ದ ಅದೇ ಹಳೆಯ ರೇಡಿಯೋ ಆಯಸ್ಸು ಹೆಚ್ಚಾದ ಖುಷಿಯಲ್ಲಿ ಅಪ್ಪನಿಗೆ ಇನ್ನೇನೂ ಥ್ಯಾಂಕ್ಸ್‌ ಹೇಳಬೇಕು ಎನುವಾಗಲೇ ಅಲ್ಲೇ ಗಾರೆ ಕಲೆಸುತ್ತಿದ್ದ ಹುಡುಗ ‘ಅಣ್ಣಾ, ಹಳೆ ರೇಡಿಯೋ ಇದ್ರೆ ನಂಗ್‌ ಕೊಡಿ ಅಣ್ಣಾ. ಒಂದು ಲಕ್ಷ ಕೊಡಿಸ್ತೀನಿ’ ಅಂದದ್ದು ಕೇಳಿ ಅಪ್ಪ ಅವಾಕ್ಕು.

ಆರ್‌ಜೆ ನೇತ್ರಾ ಧ್ವನಿ ಕೇಳಿರುತ್ತೀರಿ, ಆದ್ರೆ ಅವ್ರು ಹೇಗಿದ್ದಾರೆ ನೋಡಿದ್ದೀರಾ?

ಅಚಾನಕ್ಕು ಕದತಟ್ಟಿದ ಲಕ್ಷ್ಮಿ ದೇವಿಯನ್ನು ಹೇಗೆ ಉಪಚರಿಸುವುದು ಅಂತ ತಿಳಿಯದೆ ಒದ್ದಾಡುವಾಗಲೇ ಮರಳು ತಂದ ಟ್ರ್ಯಾಕ್ಟರ್‌ ಚಾಲಕ ’ಅಣ್ಣಾ ಎರಡು ಲಕ್ಷ ಕೊಡ್ತೀನಿ. ಈಗಲೇ ಕ್ಯಾಷು’ ಅಂದಾಗ ಅಪ್ಪ ಬೆಸ್ತುಬಿದ್ದದ್ದು ಮಾತ್ರ ಕಣ್ಣಿಗೆ ಕಟ್ಟಿದಂತಿದೆ..

‘ಇದೆಂತಕ್ಕೋ ಮಾರಾಯ ಹಳೆ ರೇಡಿಯೊ?’ ಅಂತ ಕುತೂಹಲಕ್ಕೆ ಕೇಳಿದರೂ ಅಪ್ಪನಿಗೆ ಅದರ ಬೆಲೆ ಹತ್ತು ಲಕ್ಷ ಮೀರಬಹುದೆಂದು ತಕ್ಷಣ ಅನಿಸತೊಡಗಿತು.

ಸಾಮಾನ್ಯ ರಲ್ಲಿ ಸಾಮಾನ್ಯ ಮನಸ್ಥಿತಿ ಇದು. ಯಾವಾಗ ನೂರು ರೂಪಾಯಿ ಬೆಲೆ ಬಾಳದ ವಸ್ತುವಿಗೆ ಸಾವಿರಕ್ಕೆ ಗಿರಾಕಿ ಬರ್ತರೋ ಆಗ ಅದರ ಬೆಲೆಯನ್ನು ಲಕ್ಷಕ್ಕೆ ಏರಿಸಿ ಇತ್ತ ಸಾವಿರವೂ ಸಿಗದೆ ಲಕ್ಷದ ಕನಸು ಬೀಳುವುದು ನಿಲ್ಲದೆ ಕಾಸು ಕೇವಲ ಕನ್ನಡಿಯ ಕಜ್ಜಾಯ ಆಗಿಸಿಕೊಂಡವರ ಲೋಕದ ಜನರ ಪೈಕಿ ಅಪ್ಪನೂ ಒಬ್ಬರು. ಅದರೊಳಗೆ ವಜ್ರವೇನಾದರೂ ಇರಬಹುದೇ ಎನ್ನುವ ಬಲವಾದ ಅನುಮಾನ ಅಪ್ಪನ ಎದೆಯಲ್ಲಿ ಮೊಳಕೆ ಒಡೆದಾಗಿತ್ತು. ಹಾಗಾಗಿಯೇ ಲಕ್ಷ ಅಲ್ಲ , ಐದು ಲಕ್ಷ ಕೊಟ್ಟರೂ ಕೊಡಲ್ಲ ಅಂತ ಖಡಕ್ಕಾಗಿ ಹೇಳಿಬಿಟ್ಟರು.

ಚೀನಾದಲ್ಲಿ ವಿಶ್ವದ ಅತೀ ದೊಡ್ಡ ರೆಡಿಯೋ ಟೆಲಿಸ್ಕೋಪ್ ಕಾರ್ಯಾಚರಣೆ ಆರಂಭ! ...

ಗಾರೆ ಹುಡುಗ ಮಾತು ಮುಂದುವರಿಸಿ ‘ಹಳೆ ರೇಡಿಯೋ ಒಳಗೆ ಅದೆಂತದೋ ಟ್ಯೂಬಿರ್ತದಂತೆ ಅಣ್ಣಾ. ಅದರೊಳಗೆ ಒಂದು ಲಿಕ್ವಿಡ್ಡು ಇದೆಯಂತೆ. ಅದೀಗ ಕೊರೋನಾ ಔಷಧಿಗೆ ಬೇಕಾಗಿದೆಯಂತೆ. ಅದಕ್ಕೆ ಈ ಪಾಟಿ ಗಿರಾಕಿ ಹುಟ್ಟಿಕೊಂಡವ್ರೆ’ ಅಂದದ್ದು ಕೇಳಿ ಅದರೊಳಗೆ ವಜ್ರ ಇಲ್ಲ ಎಂಬುದು ಖಚಿತವಾಗಿ ‘ನೋಡೋಣಾ..ಮಗನ ಕೇಳ್ತೀನಿ’ ಅಂದರೂ ಬದುಕಿನ ಏರುಪೇರುಗಳಿಗೆ ಸಾಕ್ಷಿಯಾಗಿದ್ದ ರೇಡಿಯೋ ಮಾರಲು ಮನಸ್ಸಿರಲಿಲ್ಲ ಅವರಿಗೆ.

ನಾಳೆ ಕಾದದ್ದೇ ಬಂತು. ಇಪ್ಪತ್ತು ಸಾವಿರದವನೂ ಬರಲಿಲ್ಲ. ಲಕ್ಷ ಕೊಡುತ್ತೇನೆಂದವನ ವಿಳಾಸವೂ ಇಲ್ಲ.

ಇದೂ ಸಹ ಎರಡು ತಲೆ ಹಾವಿನ ಕಥೆ ಇರಬಹುದು ಅಂತ ಅಪ್ಪ ಸುಮ್ಮನಾದರೂ ಈಗ ಆ ಹಳೆ ರೇಡಿಯೋ ಮೇಲೆ ವಿಪರೀತ ಮೋಹ ಅವರಿಗೆ.

ಯಾಕೋ ಗೊತ್ತಿಲ್ಲ.

ಕಾಲಕಾಲಕ್ಕೆ ಲೋಕ ಇಂತಹ ಸುಳ್ಳುಸುದ್ದಿಗಳನ್ನು ಹಬ್ಬಿಸಿ ಪಾಪದ ಜನರಿಂದ ಪಾಪಕೃತ್ಯಗಳನ್ನು ಮಾಡಿಸುತ್ತಲೇ ಇರುತ್ತದೆ. ಇಂತಹ ಸುದ್ದಿಯ ಮೂಲ ಮಾತ್ರ ಕೊನೆವರೆಗೂ ತಿಳಿಯುವುದಿಲ್ಲ. ಎರಡು ತಲೆ ಹಾವಿಗೆ ಲಕ್ಷದವರೆಗೂ ಬೆಲೆಯೇರಿ ಖಾಲಿ ಕುಳಿತವರೂ, ಹುಮ್ಮಸ್ಸಿದ್ದವರೂ ಸಿಕ್ಕಸಿಕ್ಕ ಹುತ್ತಬಿಲಗಳನ್ನು ಕೆದಕಿ ನೋಡಿದ್ದಾಯ್ತು.

ಒಂದು ರೂಪಾಯಿ ನಾಣ್ಯದಲ್ಲಿ ಇಂದಿರಮ್ಮನ ಫೋಟೋ ಇದ್ದರೆ ಅದಕ್ಕೆ ಲಕ್ಷ ಕೊಡ್ತಾರೆ ಎನ್ನುವ ಸುದ್ದಿಯೂ ಹೀಗೆ. ನಿನ್ನೆ ಮೊನ್ನೆಯಲ್ಲಿ ಲಕ್ಷ್ಮಿ ನಾಣ್ಯಕ್ಕೆ ಇಪ್ಪತ್ತು ಸಾವಿರ ಕೊಡ್ತಾರೆ ಎನುವುದು. ಹಳೆಯ ಗ್ಯಾಸ್‌ ಲೈಟ್‌, ಒಂದು ಜಾತಿಯ ಗೂಬೆ, ಚಿಪ್ಪು ಹಂದಿ, ರೈಸ್‌ ಪುಲ್ಲಿಂಗ್‌ ಪಾತ್ರೆ- ಇವೆಲ್ಲವೂ ಲೋಕದ ಕಣ್ಣಿನಲ್ಲಿ ಒಂದಿಲ್ಲೊಂದು ಸರ್ತಿ ಹುಡುಕಾಡಿಸಿಕೊಂಡ ಸರಕುಗಳೇ. ಇನ್ನು ದೇವರ ಮೂರ್ತಿಗಳ ಅಡಿಯಲ್ಲಿ ನಿಧಿಯಿದೆಯೆಂಬ ಆಸೆಗೆ ಯಾವ ದೇವರ ಅಡಿಪಾಯವೂ ನೆಟ್ಟಗಿಲ್ಲ.

ನಾವು ಚಿಕ್ಕವರಿದ್ದಾಗ ಐದು ಲ್ಯಾಕ್ಟೋಕಿಂಗ್‌ ಚಾಕೊಲೇಟ್‌ ಸಿಪ್ಪೆ ಕೊಟ್ಟರೆ ಒಂದು ಚಾಕೊಲೇಟ್‌ ಕೊಡ್ತಾರೆ ಎನ್ನುವ ಸುದ್ದಿ ಸಿಕ್ಕಿ ಕಸದ ರಾಶಿಯನ್ನೆಲ್ಲಾ ಒಮ್ಮೆ ನಮ್ಮ ದೃಷ್ಟಿನೇವರಿಸಿಬರುತ್ತಿತ್ತೇ ಹೊರತು ಸಿಪ್ಪೆ ಕೊಟ್ಟು ಚಾಕಿ ಪಡೆಯಲೇ ಇಲ್ಲ. ಕಾಲಕಾಲಕ್ಕೆ ಇಂತಹ ಸುದ್ದಿಗಳಿಗೆ ಸರಕುಗಳು ಬದಲಾಗುವುದು, ಜನರು ಹುಬ್ಬೆರಿಸಿ ಅಬ್ಬಾ ಎನ್ನುವುದು, ಓಲ್ಡ್‌ ಈಸ್‌ ಗೋಲ್ಡ್‌ ಎನುವುದು ಎಷ್ಟುನಿಜ ಅಂತ ಮಾತಾಡಿಕೊಳುವುದು ಇದ್ದಿದ್ದೆ.

ಕನ್ನಡ-ತುಳು ಪಟಪಟ ಮಾತಾಡ್ತಾ ಜನರಿಗೆ ಮರಳು ಮಾಡೋ ಆರ್‌ಜೆ ಶ್ರದ್ಥಾ ಇವರೇ!

ಇಂತಹ ಸುದ್ದಿಗಳು ಇಲ್ಲದಿದ್ದರೆ ಲೋಕ ಸರಾಗವಾಗಿ ಚಲಿಸುವುದಿಲ್ಲ ಎನಿಸುತ್ತದಾದರೂ ಇಂತಹ ಅಡ್ಡ ಉದ್ದ ದಾರಿಗಳಿಂದ ಹಣ ಗಳಿಸಲು ಇಡೀ ಬದುಕನ್ನೇ ವ್ಯರ್ಥ ಮಾಡಿಕೊಂಡವರ ,ಪ್ರಾಣ ಕಳೆದುಕೊಂಡವರ ಸಂಖ್ಯೆಯೂ ಕಡಿಮೆಯೇನಿಲ್ಲ. ಸದ್ಯಕ್ಕೆ ಚಾಲ್ತಿಯಲ್ಲಿರುವ ರೇಡಿಯೋ ಸಂಗತಿ ಬಿಟ್ಟು ಮತ್ತಾವುದಕ್ಕೆ ನಾಳೆ ಬೆಲೆ ಬರಬಹುದು ಎನ್ನುವ ಅನುಮಾನದಲ್ಲಿ ಮನೆ ಗುಜರಿ ಅಂಗಡಿ ಆಗುವುದಂತೂ ಖಂಡಿತ.

click me!