ಸಜ್ಜನಿಕೆಯ ಸಾಹಿತ್ಯಗಿರಿ ಅಕ್ಷರ ಸಾಲಿನ ಬೆಳಕು ಪ್ರೊ.ಎಲ್‌.ಎಸ್‌. ಶೇಷಗಿರಿ ರಾವ್‌

By Suvarna News  |  First Published Dec 22, 2019, 3:03 PM IST

ಎಲ್ ಎಸ್ ಶೇಷಗಿರಿ ರಾವ್‌ ಅವರು ನವೋದಯ ಸಾಹಿತ್ಯದ ಜೊತೆ ಬೆಳೆಯುತ್ತಾ ಪ್ರಗತಿಶೀಲವನ್ನು ಅರಿತವರು. ನವ್ಯ ಸಾಹಿತ್ಯ ಚಳವಳಿ ಕಾಲದಲ್ಲೂ ತಮ್ಮ ವಿಮರ್ಶೆಯನ್ನು ಸತತವಾಗಿ ಬರೆಯುತ್ತಾ ಬಂದವರು. ಆದರೆ ಅವರು ಯಾವುದೇ ಸಾಹಿತ್ಯ ಚಳುವಳಿಯ ತಾತ್ವಿಕತೆಗೆ ತಮ್ಮನ್ನು ಸಂಪೂರ್ಣ ತೆತ್ತುಕೊಂಡವರಲ್ಲ. 


ಪ್ರೊ.ಎಲ್‌.ಎಸ್‌. ಶೇಷಗಿರಿ ರಾವ್‌(1925-2019) ತಮ್ಮ ಆತ್ಮಕಥನದಲ್ಲಿ ಹೇಳಿಕೊಂಡಿರುವಂತೆ ‘ಸಾಹಿತ್ಯವು ಬಹಳ ದೊಡ್ಡದು, ಬದುಕಿನ ವರಗಳಲ್ಲೊಂದು. ಆದರೂ ಬದುಕು ಅದಕ್ಕಿಂತ ದೊಡ್ಡದು’ ಎಂಬ ನಿಲುವನ್ನು ಹೊಂದಿದ್ದವರು. ಸಾಹಿತ್ಯವು ತನ್ನನ್ನು ಆಕರ್ಷಿಸಿದ್ದು ಅದು ವ್ಯಕ್ತಿಯ ಬದುಕಿನ ಅನುಭವವನ್ನು ವಿಸ್ತಾರಗೊಳಿಸುತ್ತದೆ ಎಂಬ ಕಾರಣಕ್ಕಾಗಿ ಎಂದು ಅವರೇ ತಮ್ಮ ಜೀವನ ಕತೆಯಲ್ಲಿ ಹೇಳಿಕೊಂಡಿದ್ದಾರೆ.

ತಮ್ಮ 94 ವರ್ಷಗಳ ಜೀವಿತ ಕಾಲದಲ್ಲಿ ಅವರು ನಿರಂತರವಾಗಿ ಸಾಹಿತ್ಯವನ್ನು ಉಸಿರಾಡಿದರು. 24 ಸಾಹಿತ್ಯ ವಿಮರ್ಶೆ ಕೃತಿಗಳು, 4 ಸಣ್ಣ ಕತೆಗಳ ಸಂಕಲನಗಳು, 2 ನಾಟಕಗಳು, 15 ಮಕ್ಕಳ ಸಾಹಿತ್ಯ ಕೃತಿಗಳು, ಇಂಗ್ಲಿಷ್‌ನಲ್ಲಿ 31 ಕೃತಿಗಳು, ಮಹಾಭಾರತ ಸೇರಿ ಹಲವು ಅನುವಾದಗಳು, ಐಬಿಎಚ್‌ ನವರ ಕನ್ನಡ-ಕನ್ನಡ-ಇಂಗ್ಲಿಷ್‌ ನಿಘಂಟು ಸೇರಿ 6 ಅರ್ಥಕೋಶಗಳು, ಸಂಪಾದಿತ ಕೃತಿಗಳು, ಕನ್ನಡ-ಇಂಗ್ಲಿಷ್‌ ಹಾಗೂ ಇಂಗ್ಲಿಷ್‌-ಕನ್ನಡ ಅನುವಾದಗಳು, ಮಾಸ್ತಿ, ತರಾಸು, ಟಿ.ಪಿ ಕೈಲಾಸಂ ಮೊದಲಾದವರ ಕುರಿತಾದ ಪುಸ್ತಕಗಳೂ ಸೇರಿದಂತೆ ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಅವರು ರಚಿಸಿದ್ದಾರೆ.

Latest Videos

undefined

ಸಿಂಹಳೀಯರ ನಾಡಲ್ಲಿ ಭಾರತೀಯ ಪತ್ರಕರ್ತರು!

ಮಕ್ಕಳಿಗಾಗಿ ಇನ್ನೂ ಹಲವಾರು ಕೃತಿಗಳ ಮಾಲಿಕೆಯ ಸಂಪಾದಕರಾಗಿದ್ದರು. 75ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಪುಸ್ತಕ ಪ್ರಾಧಿಕಾರದ ಮೊದಲ ಅಧ್ಯಕ್ಷ, ಸಾಹಿತ್ಯ ಪರಿಷತ್ತಿನ ಕಾರ್ಯಾಧ್ಯಕ್ಷ, ಮುಖ್ಯಮಂತ್ರಿಗಳ ಪತ್ರಿಕಾ ಕಾರ್ಯದರ್ಶಿ ಹೀಗೆ ಹಲವು ಸಾರ್ವಜನಿಕ ಹುದ್ದೆಗಳಲ್ಲಿ ಕೆಲಸ ಮಾಡಿದ್ದರು.

ಅವರು ತೀರಿಕೊಂಡ ಸುದ್ದಿ ಬಂದಾಗ ಇವೆಲ್ಲಾ ನೆನಪಾಗಿ ತಮ್ಮ ಜೀವಮಾನದಲ್ಲಿ ವ್ಯಕ್ತಿಯೊಬ್ಬರು ಇಷ್ಟೆಲ್ಲಾ ಸಾಧಿಸಲು ಹೇಗೆ ಸಾಧ್ಯ ಎಂಬ ಆಶ್ಚರ್ಯ ತನ್ನಿಂದ ತಾನೆ ಉಂಟಾಯಿತು.

ಸಮಕಾಲೀನ ಲೇಖಕ

ಎಂತಹ ಶ್ರೇಷ್ಠ ಲೇಖಕನಾಗಲಿ ತನ್ನ ಯುಗದ ಪ್ರಭಾವವನ್ನು ಸಂಪೂರ್ಣವಾಗಿ ತಪ್ಪಿಸಿಕೊಳ್ಳಲಾರ. ಅವನನ್ನು ಅವನ ಕಾಲದ ಸಂದರ್ಭಗಳಲ್ಲಿ ನೋಡಬೇಕು. ಅನಂತರ ಅವನ ಸೃಷ್ಟಿಯಲ್ಲಿ ಸಾರ್ವಕಾಲಿಕವಾದದ್ದೇನು ಎಂದು ವಿಶ್ಲೇಷಿಸಬೇಕು ಎಂಬ ವಿಚಾರದಿಂದ ಅವರ ವಿಲಿಯಂ ಷೇಕ್ಸ್‌ಪಿಯರ್‌ ಕೃತಿ ಪ್ರಾರಂಭವಾಗುತ್ತದೆ. ತಾತ್ವಿಕವಾಗಿ ಅವರ ವಿಮರ್ಶೆ ಈ ನಿಲುವನ್ನು ಎಲ್ಲಾ ಕಡೆ ಅನ್ವಯಿಸಿಕೊಂಡಿದೆ. ಬೆಂಗಳೂರು ವಿಶ್ವವಿದ್ಯಾನಿಲಯ ಪ್ರಕಟಿಸಿದ ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ ಮಾಲೆಯಲ್ಲಿ ಹತ್ತನೆಯ ಸಂಪುಟವಾದ ‘ಹೊಸಗನ್ನಡ ಸಾಹಿತ್ಯ’ ಎಂಬ ಪುಸ್ತಕ ಅವರ ಈ ನಿಲುವಿಗೆ ಇನ್ನೂ ಉತ್ತಮ ಸಾಕ್ಷ್ಯ ನೀಡುತ್ತದೆ.

ಅವರ ನಿರಂತರವಾದ ಸಮಕಾಲೀನ ಓದಿಗೂ ಆ ಕೃತಿ ಉತ್ತಮ ಉದಾಹರಣೆ. ವಿಮರ್ಶಕನೊಬ್ಬನಿಗೆ ಅತಿ ಮಹತ್ವದ ಕೃತಿಗಳ ಅಧ್ಯಯನದ ಆಸಕ್ತಿ ಅನಿವಾರ್ಯವಾಗಿ ಹೆಚ್ಚಾಗುತ್ತಾ ಹೋಗುತ್ತದೆ. ಅಂತಹ ಸಂದರ್ಭದಲ್ಲಿ ಸತತವಾಗಿ ಸಮಕಾಲೀನ ಸಾಹಿತ್ಯವನ್ನು ಓದುತ್ತಾ ಅವುಗಳ ಬಗ್ಗೆ ಸಮಂಜಸ ತಿಳುವಳಿಕೆ ಹೊಂದುವುದು ಸುಲಭದ ವಿಚಾರವಲ್ಲ.

ವಿಮರ್ಶೆ ಮೂಲಕ ಮೌಲ್ಯ ತೋರಿದವರು

ಲಕ್ಷ್ಮೇಶ್ವರ ಸ್ವಾಮಿರಾವ್‌ ಶೇಷಗಿರಿ ರಾವ್‌ ಅವರು ನವೋದಯ ಸಾಹಿತ್ಯದ ಜೊತೆ ಬೆಳೆಯುತ್ತಾ ಪ್ರಗತಿಶೀಲವನ್ನು ಅರಿತವರು. ನವ್ಯ ಸಾಹಿತ್ಯ ಚಳವಳಿ ಕಾಲದಲ್ಲೂ ತಮ್ಮ ವಿಮರ್ಶೆಯನ್ನು ಸತತವಾಗಿ ಬರೆಯುತ್ತಾ ಬಂದವರು. ಆದರೆ ಅವರು ಯಾವುದೇ ಸಾಹಿತ್ಯ ಚಳುವಳಿಯ ತಾತ್ವಿಕತೆಗೆ ತಮ್ಮನ್ನು ಸಂಪೂರ್ಣ ತೆತ್ತುಕೊಂಡವರಲ್ಲ. ನವೋದಯದ ಸಹೃದಯತೆ ಅವರ ಮೇಲೆ ಪ್ರಭಾವ ಬೀರಿದೆ. ವಿಮರ್ಶಾ ಬರಹಗಳಲ್ಲಿ ಸಾಹಿತ್ಯ ಮೌಲ್ಯಗಳನ್ನು ಎತ್ತಿ ತೋರಿಸುವುದು ಅವರ ವಿಮರ್ಶಾ ಕ್ರಮ.

ಇಂಗ್ಲಿಷ್‌ ಅಥವಾ ಕನ್ನಡ ಯಾವುದೇ ಸಾಹಿತ್ಯದ ಬಗೆಗೆ ಬರೆಯುವಾಗಲೂ ಕತೆಗಳನ್ನು ನಿರೂಪಿಸುತ್ತಾ ಅವರು ಕೃತಿ ಕಾಣಿಸುವ ಜೀವನ ಮೌಲ್ಯವನ್ನು ವಿವರಿಸುತ್ತಾರೆ. ಮ್ಯಾಥ್ಯೂ ಅರ್ನಾಲ್ಡನ ‘ಡೋವರ್‌ ಬೀಚ್‌’ ಕವನವನ್ನು ವಿವರಿಸುತ್ತಾ ಅವರು, ಆ ಸಮುದ್ರದಲ್ಲಿ ನಡೆದ ಇಂಗ್ಲಿಷ್‌ ಫ್ರೆಂಚ್‌ ಸೈನ್ಯದ ನಾವಿಕ ಪಡೆಯ ಸೈನಿಕರ ಯುದ್ಧವನ್ನು ನೆನಪಿಸಿಕೊಳ್ಳುತ್ತಾ ಸಮುದ್ರದ ದಡದಲ್ಲಿ ಕುಳಿತಿರುವ ನಲ್ಲ, ನಲ್ಲೆಯರ ಮೂಲಕ ಮಾನವ ಪ್ರೇಮದಲ್ಲಿ ಕಾಣಬಹುದಾದ ನೆಮ್ಮದಿಯನ್ನು ಸೂಚಿಸುತ್ತಾರೆ. ಶೇಷಗಿರಿರಾಯರಿಗೆ ಅಂತಹ ಮೌಲ್ಯಗಳನ್ನು ವಿವರಿಸಿ ತಿಳಿಸುವುದು ವಿಮರ್ಶೆ ಮಾಡಬೇಕಾದ ಕೆಲಸ ಅನ್ನಿಸುತ್ತದೆ.

ಕನ್ನಡಪ್ರಭ ಅಂಕಣಕಾರರಾಗಿದ್ದರು

‘ಕನ್ನಡಪ್ರಭ’ ದಿನ ಪತ್ರಿಕೆಗಾಗಿ ಅವರು ‘ಪಾಶ್ಚಾತ್ಯ ಸಾಹಿತ್ಯ ವಿಹಾರ’ ಎಂಬ ಅಂಕಣವನ್ನು ಬರೆದು ಕನ್ನಡ ಓದುಗರಿಗೆ ಸಮಗ್ರವಾಗಿ ಪಾಶ್ಚಾತ್ಯ ಸಾಹಿತ್ಯವನ್ನು ಪರಿಚಯಿಸಿದರು. ಅವರ ‘ಇಂಗ್ಲಿಷ್‌ ಸಾಹಿತ್ಯ ಚರಿತ್ರೆ’ ಎಂಬ ಕನ್ನಡ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ ಎಂಬುದು ಅವರು ಮಾಡಿದ ಕೆಲಸದ ಪ್ರಾಮುಖ್ಯತೆಯನ್ನು ಹೇಳುತ್ತದೆ. ಅವರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಸಂದರ್ಭದಲ್ಲಿ ಸಾಹಿತ್ಯ ಪರಿಷತ್ತು ಶ್ರೀ ಎನ್‌.ಎಸ್‌. ಶ್ರೀಧರ ಮೂರ್ತಿ ಅವರು ಬರೆದ ಪ್ರೊ. ಎಲ್‌.ಎಸ್‌. ಶೇಷಗಿರಿರಾವ್‌ ಬದುಕು ಮತ್ತು ಸಾಹಿತ್ಯ ಎಂಬ ಕೃತಿಯನ್ನು ಪ್ರಕಟಿಸಿತ್ತು.

ಮೋನೋಗ್ರಾಫ್‌ ರೂಪದ ಆ ಪುಸ್ತಕದಲ್ಲಿ ಸ್ವತಃ ಪತ್ರಿಕೋದ್ಯಮಿಯಾಗಿದ್ದ ಶ್ರೀಧರ ಮೂರ್ತಿ ಅವರು ಶೇಷಗಿರಿ ರಾವ್‌ ಅವರು ಸಂವಹನಕ್ಕೆ ನೀಡಿದ ಪ್ರಾಮುಖ್ಯತೆ ಹಾಗೂ ಅವರ ಪತ್ರಿಕಾ ಅಂಕಣಗಳ ಸಾಹಿತ್ಯ-ಸಾಂಸ್ಕೃತಿಕ ಮಹತ್ವವನ್ನು ಚರ್ಚಿಸಿದ್ದಾರೆ. ವಿಮರ್ಶಾ ಸಂವಹನದ ದೃಷ್ಟಿಯಿಂದ ಅವರ ಅಂಕಣ ಬರಹಗಳಿಗೆ ವಿಶೇಷ ಮಹತ್ವವಿದೆ.

ಭಾರತದಿಂದ ಕಾಂಬೋಡಿಯಾಕ್ಕೆ ಕಾರಲ್ಲಿ ಹೋಗಿ ಬಂದವರ ಸಾಹಸಗಾಥೆಯಿದು!

ಎಲ್‌.ಎಸ್‌.ಶೇಷಗಿರಿರಾವ್‌ ಅವರು ಬರವಣಿಗೆಯಲ್ಲಿ ಸುಲಭ, ಸಂವಹನ, ಸೋಪಜ್ಞತೆ ಹಾಗೂ ಸಮತೋಲನಗಳಿಗೆ ಪ್ರಾಶಸ್ತ್ಯ ನೀಡಿದರು. ಆದುದರಿಂದಲೇ ಪತ್ರಿಕೆಗಳ ಅಂಕಣಗಳ ಮೂಲಕ ಅವರು ಸಾಕಷ್ಟುವಿಮರ್ಶಾ ಲೇಖನಗಳನ್ನು ಬರೆದರು. ಮಾಸ್ತಿಯವರು ಸಂಪಾದಕರಾಗಿ ಹೊರತರುತ್ತಿದ್ದ ‘ಜೀವನ’ ಪತ್ರಿಕೆಯಿಂದಲೇ ಅವರ ಸಾಹಿತ್ಯ, ಪತ್ರಿಕಾ ಬರಹಗಳು, ಅಂಕಣಗಳು ಪ್ರಾರಂಭವಾಗುತ್ತವೆ. ಆ ಬಳಿಕ ಅವರು ‘ಪ್ರಜಾಮತ’ ವಾರ ಪತ್ರಿಕೆಯಲ್ಲಿ ಸಹಚಿಂತನ ಹಾಗೂ ‘ತುಷಾರ’ ಮಾಸ ಪತ್ರಿಕೆಯಲ್ಲಿ ಸಾಹಿತ್ಯ ಚಿಂತನ ಅಂಕಣಗಳನ್ನು ಬರೆದರು.

ಪ್ರಗತಿಶೀಲ ಸಾಹಿತ್ಯದಲ್ಲೂ ತೊಡಗಿದ್ದರು

ಶೇಷಗಿರಿರಾವ್‌ ಅವರು ತಮ್ಮ ವಿಮರ್ಶಾ ಬರಹಗಳಲ್ಲಿ ಆಕೃತಿ ಕೇಂದ್ರಿತ ಚರ್ಚೆಯನ್ನಾಗಲೀ, ಯಾವುದೋ ಒಂದು ತಾತ್ವಿಕತೆ ಪರವಾದ ನಿಲುವನ್ನಾಗಲೀ ತಾಳದೆ ಇರಬಹುದು. ಆದರೆ ಅವರು ಎಲ್ಲವನ್ನೂ ಮೆಚ್ಚುವ ಅಥವಾ ಹೊಗಳುವ ನೆಲೆಗೂ ಹೋಗುವುದಿಲ್ಲ. ಬೆಂಗಳೂರು ವಿವಿಯ ‘ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ’ ಮಾಲೆಯಲ್ಲಿ ಪ್ರಕಟವಾದ ಅವರ ‘ಹೊಸಗನ್ನಡ ಸಾಹಿತ್ಯ’ ಕೃತಿಯಲ್ಲಿರುವ ಪ್ರಗತಿಶೀಲರ ಬಗೆಗಿನ ಬರಹ ಇದಕ್ಕೊಂದು ಉತ್ತಮ ಉದಾಹರಣೆ.

ಅವವರು ಪ್ರಗತಿಶೀಲರ ಸಮಕಾಲೀನರಾಗಿ, ಆ ಕಾಲದ ಸಾಹಿತ್ಯದಲ್ಲಿ ಸಕ್ರಿಯವಾಗಿದ್ದವರು. ಆದರೂ ಅವರು ‘ಪ್ರಗತಿಶೀಲ ಸಾಹಿತ್ಯದ ಸಾಧನೆಗೆ ಮಿತಿಯನ್ನು ಕಲ್ಪಿಸಿದ ಎರಡು ಅಂಶಗಳೆಂದರೆ ಕಾಲ ಸೃಷ್ಟಿಯ ಅಂತರದ ನಷ್ಟಮತ್ತು ಅನುಭವದ ಸರಳೀಕರಣ’ ಎಂಬ ಅಂಶವನ್ನು ಉದಾಹರಣೆಗಳೊಂದಿಗೆ ವಿವರಿಸಿ ವಿಶದೀಕರಿಸುತ್ತಾರೆ.

ಎಲ್‌ಎಸ್‌ಎಸ್‌ ಕನ್ನಡದಲ್ಲಿ ಬರೆಯಲು ಬಿಎಂಶ್ರೀ ಕಾರಣ

ಶೇಷಗಿರಿರಾಯರು ಕನ್ನಡ ಬರೆಯಲು ಪ್ರಾರಂಭಿಸಿದ ಹಿನ್ನೆಲೆಯಲ್ಲೊಂದು ಕತೆಯಿದೆ. ಅವರು ಸೆಂಟ್ರಲ್‌ ಕಾಲೇಜಿನಲ್ಲಿ ಬಿ.ಎ ಆನ​ರ್‍ಸ್ ಇಂಗ್ಲಿಷ್‌ ಸಾಹಿತ್ಯದಲ್ಲಿ ಓದಲು ಬಯಸಿದರು. ಆಗ ಅವರಿಗೆ ಬಿಎಸ್ಸಿ ಹಾಗೂ ಇನ್ನಿತರ ಅಧ್ಯಯನಗಳಿಗೆ ಸೀಟು ಸಿಕ್ಕಿತ್ತು. ವಿದ್ಯಾರ್ಥಿ ಸಂದರ್ಶನದಲ್ಲಿ ಇಂಗ್ಲಿಷ್‌ ಆನ​ರ್‍ಸ್ ಮಾಡಲು ಸೀಟು ಪಡೆಯುವ ಬಗ್ಗೆ ಬಿ.ಎಂ.ಶ್ರೀಕಂಠಯ್ಯನವರಲ್ಲಿ ಮಾತನಾಡುತ್ತಿದ್ದಾಗ ಬಿ.ಎಂ.ಶ್ರೀ ಇಂಗ್ಲಿಷ್‌ ಆನ​ರ್‍ಸ್ ಮಾಡುವ ಉದ್ದೇಶವೇನೆಂದು ಶೇಷಗಿರಿರಾಯರನ್ನು ಕೇಳಿದರು.

ಆಗ ಎಲ್‌ಎಸ್‌ಎಸ್‌ ಅವರು ಇಂಗ್ಲಿಷ್‌ ಅಧ್ಯಾಪಕರಾಗಿ ಉದ್ಯೋಗಕ್ಕೆ ಸೇರುವುದು ಎಂದರಂತೆ. ಆಗ ಬಿ.ಎಂ.ಶ್ರೀ ಕನ್ನಡಕ್ಕೆ ನಿನ್ನ ಕೊಡುಗೆ ಏನೆಂಬುದನ್ನು ಯೋಚಿಸು, ನೀನು ಕನ್ನಡದಲ್ಲಿ ಬರೆದರೆ ಉಪಯೋಗವಾಗುತ್ತದೆ, ನಿನ್ನ ಇಂಗ್ಲಿಷ್‌ ಬರಹಗಳು ಅಲ್ಲಿನ ಜನಕ್ಕೆ ಬೇಕಾಗಿಲ್ಲ. ಕನ್ನಡದಲ್ಲಿ ಬರೆದರೆ ಇಲ್ಲಿನ ಜನಕ್ಕೆ ಉಪಯೋಗವಾಗಿ ಅವರು ಕೃತಜ್ಞರಾಗಿರುತ್ತಾರೆ ಎಂದರಂತೆ. ಅಂದಿನಿಂದ ಎಲ್‌ಎಸ್‌ಎಸ್‌ ಅವರು ತಮ್ಮ ಕೊನೆ ದಿನದ ವರೆಗೂ ಸತತವಾಗಿ ಇಂಗ್ಲಿಷ್‌-ಕನ್ನಡ ಸಾಹಿತ್ಯದಲ್ಲಿ ತೊಡಗಿಸಿಕೊಂಡರು.

ತೀನಂಶ್ರೀ ಪುಸ್ತಕ ಬರೆಸಿದ್ದರು

1985ರಲ್ಲಿ ತೀ.ನಂ.ಶ್ರೀ ಅವರು ಮಡಿಕೇರಿಗೆ ಹೋಗಿದ್ದಾಗ ಅಲ್ಲಿನ ಕಾಲೇಜಿನಲ್ಲಿ ಪಾಠ ಮಾಡುತ್ತಿದ್ದ ಶೇಷಗಿರಿರಾಯರಿಗೆ ‘ಇಂಗ್ಲಿಷ್‌ ಭಾಷೆಯಲ್ಲಿರುವ ಆಧುನಿಕ ಸಾಹಿತ್ಯ ವಿಮರ್ಶೆಯನ್ನು ಪರಿಚಯ ಮಾಡಿಕೊಡುವಂತಹ ಪುಸ್ತಕವನ್ನು ಕನ್ನಡದಲ್ಲಿ ನೀವು ಬರೆಯಬಾರದೇಕೆ?’ ಎಂದು ಕೇಳಿದ್ದರಂತೆ.

ಅವರ ‘ಇಂಗ್ಲಿಷ್‌ ಭಾಷೆಯಲ್ಲಿ ಆಧುನಿಕ ಸಾಹಿತ್ಯ ವಿಮರ್ಶೆ’ ಎಂಬ ಪುಸ್ತಕದಲ್ಲಿ ಶೇಷಗಿರಿರಾವ್‌ ಅವರು ಈ ಮಾತುಗಳನ್ನು ನೆನಪಿಸಿಕೊಂಡಿದ್ದಾರೆ. ಎಲ್ಲಾ ರೀತಿಯಿಂದ ಜ್ಞಾನ, ವಿಚಾರಗಳನ್ನು ಕನ್ನಡಕ್ಕೆ ಹರಿಸುವ ಕೆಲಸವನ್ನು ಅವವರು ಕೊನೆವರೆಗೂ ಕೈಗೊಂಡರು.

ನನ್ನ ಮೇಜಿನ ಮೇಲಿದೆ ನಿಘಂಟು

ಐಬಿಎಚ್‌ ಪ್ರಕಟಿಸಿದ ಎಲ್‌ಎಸ್‌ಎಸ್‌ ಅವರ ಇಂಗ್ಲಿಷ್‌-ಕನ್ನಡ ನಿಘಂಟು ಮೂಲಕ ಅವರು ನನಗೆ ವಯಕ್ತಿಕವಾಗಿ ನಿತ್ಯ ಕಾಣುತ್ತಿರುತ್ತಾರೆ. ನನ್ನ ಅಧ್ಯಯನದ ಮೇಜಿನ ಮೇಲೆ ಅವರ ಈ ನಿಘಂಟು ಇತರ ಕೆಲವು ನಿಘಂಟುಗಳೊಡನೆ ಸದಾ ಇರುತ್ತದೆ. ಇಂಗ್ಲಿಷ್‌-ಕನ್ನಡ ಪದಗಳನ್ನು ನೆನಪಿಸಿಕೊಳ್ಳಲು ಅದು ಸಹಕರಿಸುತ್ತದೆ. ಕಳೆದ ವರುಷ ಬಿ.ಎಂ.ಶ್ರೀ ಪ್ರತಿಷ್ಠಾನ ನೀಡುವ ಎಲ್‌ಎಸ್‌ ಶೇಷಗಿರಿರಾವ್‌ ವಿಮರ್ಶಾ ಪ್ರಶಸ್ತಿಗೆ ಆಯ್ಕೆ ಸಮಿತಿಯಲ್ಲಿ ನಾನೂ ಇದ್ದೆ.

ಆ ಒಂದು ಸಂದರ್ಭದಲ್ಲಿ ಎಲ್‌.ಎಸ್‌.ಎಸ್‌ ಅವರ ಪ್ರಮುಖ ಸಾಹಿತ್ಯ ಕೃತಿಗಳನ್ನು ಆ ನೆಪದಲ್ಲಿ ಇನ್ನೊಮ್ಮೆ ಓದುವಂತಾಯಿತು. ಅವರು ತಮ್ಮ ಸಮಕಾಲೀನ ಹಾಗೂ ಕಿರಿಯ ಬರಹಗಾರರ ಪುಸ್ತಕಗಳಿಗೆ ಬರೆದ ಮುನ್ನುಡಿಗಳೇ ದೊಡ್ಡ ಪ್ರಮಾಣದಲ್ಲಿವೆ. ಕಳೆದ ಬಾರಿ ಎಲ್‌ಎಸ್‌ಎಸ್‌ ವಿಮರ್ಶಾ ಪ್ರಶಸ್ತಿ ಪಡೆದ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ದೊಡ್ಡವರ ಹೆಸರಿನಲ್ಲಿ ಪಡೆಯುವ ಪ್ರಶಸ್ತಿಗಾಗಿ ಸಂತೋಷ ವ್ಯಕ್ತಪಡಿಸಿದ್ದರು. ಹಳೆ ಮೈಸೂರಿನ ಹಲವು ಭಾಗಗಳಲ್ಲಿ ಕಾಲೇಜು ಅಧ್ಯಾಪಕರಾಗಿ ಕೆಲಸ ಮಾಡಿದ್ದ ಎಲ್‌ಎಸ್‌ಎಸ ಅವರು 1985ರಲ್ಲಿ ಬೆಂಗಳೂರು ವಿವಿಯಲ್ಲಿ ಅಧ್ಯಾಪಕರಾಗಿ ನಿವೃತ್ತರಾದರು.

ಎಚ್‌ಎಸ್‌ವಿ ಸುನೀತದಲ್ಲಿ

‘ಸುನೀತ ಭಾವ’ ಎಂಬ ತಮ್ಮ ಸಂಕಲನದಲ್ಲಿ ಡಾ. ಎಚ್‌.ಎಸ್‌. ವೆಂಕಟೇಶಮೂರ್ತಿ ಅವರು ಎಲ್‌ಎಸ್‌ಎಸ್‌ ಬಗ್ಗೆ ಬರೆದ ಸುನೀತದಲ್ಲಿ ‘ಸೂರ್ಯ ತೆರಳಿದ ಮೇಲೂ ತಂಗಿರುವ ತೀರದ ಬೆಳಕು. ಇರುಳಲ್ಲೂ ಚಲಿಸುವಕ್ಷರ ಸಾಲು’ ಎಂದು ಹೇಳುತ್ತಾರೆ. ಅವರ ಬರಹಗಳು ಅವರು ಹೋದ ಬಳಿಕವೂ ತಂಗಿರುವ ತೀರದ ಬೆಳಕು.

ಹಾ.ಮಾ. ನಾಯಕರು ತಮ್ಮ ಒಂದು ಬರಹದಲ್ಲಿ ಎಲ್‌ಎಸ್‌ಎಸ್‌ ಬಗ್ಗೆ ‘ಶೇಷಗಿರಿರಾವ್‌ ಅವರು ಎಂದೊಡನೆಯೇ ಅವರ ದೈತ್ಯ ಶಕ್ತಿ ನನ್ನ ಮನಸ್ಸಿಗೆ ಬರುತ್ತದೆ. ಓದು ಬರಹಗಳನ್ನು ಉಸಿರಾಟದಷ್ಟೇ ಸಹಜವಾಗಿ ಮಾಡಿಕೊಂಡ ಅವರಂತಹ ಇನ್ನೊಬ್ಬರನ್ನು ನಾನು ಅರಿಯೆ. ಇಷ್ಟೊಂದು ಕೆಲಸವನ್ನು ಅವರು ಹೇಗೆ ಮಾಡಬಲ್ಲರು ಎಂಬುದು ನನಗೆ ಬಗೆ ಹರಿಯದ ಒಗಟು’ ಎಂದು ಹೇಳುತ್ತಾರೆ. ಹಾ.ಮಾ. ನಾಯಕರು ವಿವರಿಸಿದ ಈ ದೈತ್ಯ ಶಕ್ತಿಯ ಬರಹಗಾರ ನೋಡಲು ಕುಳ್ಳ ದೇಹ ಪ್ರಕೃತಿಯವರು ಎಂಬುದು ನೋಡಿದವರಿಗೆ ತಿಳಿದಿರುತ್ತದೆ.

ಮೃದು ಮಾತಿನ ಸಹೃದಯ ಮಾನವ ಪ್ರೀತಿಯ ಅವರು ನಿರಂತರವಾಗಿ ಕನ್ನಡ ಸಾಹಿತ್ಯದ ಎಲ್ಲಾ ಕೆಲಸಗಳಲ್ಲೂ ತೊಡಗಿಸಿಕೊಂಡರು. ಅವರು ಇನ್ನು ನಮಗೆ ನೆನಪು. ಮುಂದಿನ ಸಾಹಿತ್ಯ ವಿದ್ಯಾರ್ಥಿಗಳ ಅಧ್ಯಯನಕ್ಕೆ, ಕನ್ನಡದ ಓದುಗರಿಗೆ ಅವರ ಬರಹಗಳು ನಿರಂತರವಾದುದೊಂದು ಆಕರ.

- ಎಸ್‌.ಆರ್‌. ವಿಜಯಶಂಕರ

click me!