ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ, ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಹೀಗೆ ಹಲವು ಮಹತ್ವದ ಸ್ಥಾನಗಳಲ್ಲಿ ಗುರುತರ ಕೆಲಸಗಳಿಂದ ಪ್ರಸಿದ್ಧರಾದವರು ಮಲ್ಲೇಪುರಂ ಜಿ ವೆಂಕಟೇಶ್. ಅವರಿಗೀಗ 70 ತುಂಬುತ್ತಿದೆ. ಅಭಿನಂದನಾ ಗ್ರಂಥ 'ಸಮಾಹಿತ' ಹೊರಬರುತ್ತಿದೆ. ಅದರಲ್ಲಿ ಮಲ್ಲೇಪುರಂ ಅವರ ಕುರಿತು ಹಿರಿಯ ಸಾಹಿತಿ ಕಮಲಾ ಹಂಪನಾ ಬರೆದ ಲೇಖನ ಇಲ್ಲಿದೆ.
- ಕಮಲಾ ಹಂಪನಾ
ನಮ್ಮ ಮಲ್ಲೇಪುರಂ ಎಂದು ಹೇಳುವುದರಲ್ಲಿಯೇ ನನ್ನಲ್ಲಿ ಉದ್ಭವವಾಗುವ ಪ್ರೀತಿ-ವಾತ್ಸಲ್ಯ ಅಳತೆಗೆ ಸಿಗದು. ಕೆಲವರ ಹೆಸರಿನಲ್ಲಿಯೇ ಒಂದು ರೀತಿಯ ಆತ್ಮೀಯತೆ, ಬಂಧುತ್ವ ಗೌರವ ಭಾವನೆ, ಬೆರಗು ಹೀಗೆ ಅನೇಕ ರೀತಿಯ ಭಾವನೆಗಳು ಸ್ಥಾಯಿಭಾವವನ್ನು ಹೊಂದುತ್ತವೆ. ‘ಅಜಾತಶತ್ರು’ ಯಾರಾದರೂ ಇದ್ದಾರೆಯೇ? ಎಂದು ನೆನೆದ ಒಡನೆ ನನ್ನ ಕಣ್ಣು-ಮನದ ಮುಂದೆ ಆಜಾನುಬಾಹು ವ್ಯಕ್ತಿತ್ವ, ಸೌಮ್ಯ ಹಾಗೂ ಗಂಭೀರ ಮುಖ ಮುದ್ರೆಯ ವ್ಯಕ್ತಿಯೊಬ್ಬರು ನಿಲ್ಲುತ್ತಾರೆ; ಅವರೆಂದರೆ ಪಂಡಿತ ಮಹಾಶಯ ಡಾ.ಮಲ್ಲೇಪುರಂ ಜಿ.ವೆಂಕಟೇಶ ಅವರು.
undefined
ಕೆಲವು ದಶಕಗಳ ಹಿಂದಿನ ಮಾತು. ಕರ್ನಾಟಕ ಲೋಕಸೇವಾ ಆಯೋಗ ಕಾಲೇಜಿನ ಕನ್ನಡ ಅಧ್ಯಾಪಕರ ಸಂದರ್ಶನಕ್ಕೆ ಕರೆ ನೀಡಿತ್ತು. ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕಿಯಾಗಿದ್ದ ನನ್ನನ್ನು ವಿಷಯ ತಜ್ಞೆಯಾಗಿ ನೇಮಿಸಿತ್ತು. ಸಂದರ್ಶನ ನಿಗದಿಯಾದ ದಿವಸ ಸಮಯಕ್ಕೆ ಸರಿಯಾಗಿ ಲೋಕಸೇವಾ ಆಯೋಗದ ಕಛೇರಿಯಲ್ಲಿ ನಾನೂ ಹಾಗೂ ಸಂದರ್ಶನಕ್ಕೆ ಸಂಬಂಧಿಸಿದ ಕೆಲವು ಸದಸ್ಯರು ಹಾಜರಿ ಇದ್ದೆವು. ಬೆಳಿಗ್ಗೆ ಪ್ರಾರಂಭವಾದ ಸಂದರ್ಶನ ಸುಮಾರು ಹೊತ್ತು ನಡೆಯಿತು. ಬಂದ ಅಭ್ಯರ್ಥಿಗಳಲ್ಲಿ ಕೆಲವರು ತುಂಬ ಹೆದರುತ್ತಿದ್ದರು. ಮತ್ತೆ ಕೆಲವರಲ್ಲಿ ಸ್ವಲ್ಪ ಭಯಮಿಶ್ರಿತ ಮುಖಭಾವ ಇರುತ್ತಿತ್ತು.
ಪುಸ್ತಕಕ್ಕೂ ಸ್ಟಾರ್ ಪಟ್ಟ: ವೀರಲೋಕ ಸಂಸ್ಥೆಯ ಹೊಸ ಯೋಜನೆ
ಮತ್ತೊಬ್ಬ ಅಭ್ಯರ್ಥಿಯನ್ನು ಕರೆಯಲಾಯಿತು. ಒಳ್ಳೆ ಹರೆಯದ ಅಭ್ಯರ್ಥಿ ಬಂದರು. ನೋಡಲು ನೀಳವಾದ ಎತ್ತರದ ದೇಹ, ಗಂಭೀರ ಮುಖಮುದ್ರೆ, ಅದರಲ್ಲಿ ಯಾವ
ಭಯ-ಆತಂಕದ ಭಾವವೂ ಇರಲಿಲ್ಲ. ಅಭ್ಯರ್ಥಿಯನ್ನು ಕುಳಿತುಕೊಳ್ಳಲು ಹೇಳಿದೆವು. ನೀರು ನೀಡಿದೆವು. ಅಭ್ಯರ್ಥಿ ನೀರನ್ನೇನೂ ಕುಡಿಯಲಿಲ್ಲ. ಆತನ ಮುಖದಲ್ಲಿದ್ದ ಸ್ಥಿರತೆ ನನಗೆ ಪ್ರಿಯವಾಯಿತು. ಪ್ರಶ್ನೆಗಳನ್ನು ಕೇಳಿದ್ದಾಯಿತು. ಎಲ್ಲಕ್ಕೂ ಖಚಿತವಾದ ಉತ್ತರ, ಉತ್ತರಗಳಲ್ಲಿ ಗೊಂದಲವಿರಲಿಲ್ಲ. ಹಿರಿಯ ಸಂಶೋಧಕರು, ಶಾಸನ ತಜ್ಞರೂ ಆದ ಶಂಭಾ ಜೋಶಿಯವರ ಬಗೆಗೆ ಆಸಕ್ತಿಯಿಂದ ಅಧ್ಯಯನ ಮಾಡಿರುವುದನ್ನು ಅಭ್ಯರ್ಥಿ ತಿಳಿಸಿದರು. ಶಂಭಾ ಅವರ ಬಗೆಗೆ ಕೆಲವು ಪ್ರಶ್ನೆಗಳನ್ನು ಕೇಳಿದಾಗ ಕೊಟ್ಟಉತ್ತರ
ಬೆರಗುಗೊಳಿಸುವಂತಿತ್ತು. ಅತನಿಗೆ ಉತ್ತಮ ಅಂಕಗಳು ದೊರೆತವು. ಆತ ಕಾಲೇಜಿನ ಕನ್ನಡ ಅಧ್ಯಾಪಕನಾಗಿ ಆಯ್ಕೆಯಾಗಿ ನೇಮಕಗೊಂಡರು. ಆ ಅಭ್ಯರ್ಥಿ ಮತ್ಯಾರೂ ಅಲ್ಲ, ನಮ್ಮ ಈಗಿನ ಘನ ವಿದ್ವಾಂಸರಾದ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ ಅವರು.
ಅನೇಕ ವರುಷಗಳ ನಂತರ ಮಲ್ಲೇಪುರಂ ಅವರೇ ನನಗೆ ಹೀಗೆ ಹೇಳಿದರು. ‘ಕೆ.ಪಿ.ಎಸ್.ಸಿ ಸಂದರ್ಶನ ಮುಗಿದ ಮಾರನೆಯ ದಿವಸಕ್ಕೆ ನನಗೆ ವಯೋಮಿತಿ ಮೀರುತ್ತಿತ್ತು. ನನ್ನ ಆಯ್ಕೆ ಮಾಡಿ ನನಗೆ ಸರ್ಕಾರಿ ಕೆಲಸ ಸಿಗುವಂತೆ ಮಾಡಿದಿರಿ’ ಎಂದು. ನನ್ನ ಜಾಗದಲ್ಲಿ ಯಾರೇ ಇದ್ದರೂ ಮಲ್ಲೇಪುರಂ ಅವರನ್ನು ಆಯ್ಕೆ ಮಾಡುತ್ತಿದ್ದರು. ಆದರೆ, ಅವರ ಸೌಜನ್ಯ ದೊಡ್ಡದು. ಅವರು ಹಾಗೆ ಹೇಳಿ ಸಾರ್ಥಕ ಭಾವವನ್ನು ಮೂಡಿಸಿದರು. ಅನಂತರ ವಿದ್ಯಾಕ್ಷೇತ್ರದಲ್ಲಿ, ಸಾಹಿತ್ಯವಲಯದಲ್ಲಿ ಮಲ್ಲೇಪುರಂ ಬೆಳೆದದ್ದು ತ್ರಿವಿಕ್ರಮನಾಗಿ. ‘ಎಂದೋ ಬರುವುದು ಇಂದೇ ಬರಲಿ, ಇಂದು ಬರುವುದು ಈಗಲೇ ಬರಲಿ’ ಎಂದು ಭಕ್ತಿಭಂಡಾರಿ ಬಸವಣ್ಣನವರು ಒಂದು ಕಡೆ ಹೇಳಿದ್ದಾರೆ. ಆದರೆ, ಮಲ್ಲೇಪುರಂ ವೆಂಕಟೇಶ ಅವರು ಪದವಿಗಳನ್ನು ಆ ರೀತಿ ಬಯಸಿದವರಲ್ಲ. ಆದರೆ, ಅವರನ್ನು ಅರಸಿಕೊಂಡು ಉನ್ನತ ಅಧಿಕಾರಗಳು, ಪದವಿಗಳು ಬಂದವು, ದೊರೆತವು.
ಬಾಳಲ್ಲಿ ಜೈಸಬೇಕಾ? ಹಾಗಿದ್ರೆ ಪೂಲ್‌ನಲ್ಲಿ ಈಸಬೇಕು!
ಒಂದೆರಡು ಸಂಗತಿಗಳನ್ನು ಮಾತ್ರ ಪ್ರಸ್ತಾಪಿಸಲು ಬಯಸುವೆ. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿತ್ತು. ಅಂದು ಮಲ್ಲೇಪುರಂ ಆ ಅಧಿಕಾರವನ್ನು ಸ್ವೀಕರಿಸಿದರು. ಅನೇಕ ಮೌಲಿಕ ಪುಸ್ತಕಗಳನ್ನು ಪ್ರಕಟಿಸಿದರು. ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ಹೊಸಜೀವ ಹೊಸಕಳೆಯನ್ನು ತುಂಬಿದರು. ಆ ಸಂದರ್ಭದಲ್ಲಿ ನನ್ನ ಒಂದು ಸಂಶೋಧನ ಬೃಹತ್ ಗ್ರಂಥವನ್ನು ಪ್ರೊ.ಮಲ್ಲೇಪುರಂ ಪುಸ್ತಕ ಪ್ರಾಧಿಕಾರದಿಂದ ಪ್ರಕಟಿಸಿದರು. ಆ ಗ್ರಂಥ ಸಂಪೂರ್ಣವಾಗಿ ಸಂಶೋಧನೆ ಹಾಗೂ ವಿಮರ್ಶೆಗೆ
ಸಂಬಂಧಪಟ್ಟದ್ದು. ಡೆಮಿ 1/8ನಲ್ಲಿ 480 ಪುಟಗಳ ದೊಡ್ಡ ಗ್ರಂಥ. ಆ ಗ್ರಂಥದ ಬಿಡುಗಡೆಯ ವಿಶೇಷತೆಯನ್ನು ನಾನು ಪ್ರಸ್ತುತ ಪಡಿಸಲೇಬೇಕು.
ಆ ಗ್ರಂಥ ಬಿಡುಗಡೆಗೆ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ.ಮಲ್ಲೇಪುರಂ ಅವರೇ ಅಂದಿನ ಘನ ವಿದ್ವಾಂಸರೂ, ವಿಮರ್ಶಕರೂ ಚಿಂತಕರೂ ಮಹಾನ್ ಶಾಸ್ತ್ರಜ್ಞರೂ ಆಗಿದ್ದ ಪ್ರೊ.ಎಸ್.ಕೆ.ರಾಮಚಂದ್ರರಾವ್ ಅವರನ್ನು ಒಪ್ಪಿಸಿದರು. ಆ ಕಾರ್ಯಕ್ರಮದಲ್ಲಿ ಆ ಗ್ರಂಥವನ್ನು ರಾಮಚಂದ್ರರಾಯರು ಲೋಕಾರ್ಪಣೆ ಮಾಡಿದರು. ಪುಸ್ತಕವನ್ನು ಮಲ್ಲೇಪುರಂ ಅವರು ರಾಮಚಂದ್ರರಾಯರಿಗೆ ಮೊದಲೇ ಕೊಟ್ಟಿದ್ದರು. ರಾಮಚಂದ್ರರಾಯರು ಆ ಗ್ರಂಥವನ್ನು ಶ್ರದ್ಧೆಯಿಂದ, ಪ್ರೀತಿಯಿಂದ ಓದಿಕೊಂಡು ಬಂದಿದ್ದರು. ಗ್ರಂಥದ ಕಟ್ಟನ್ನು ಬಿಚ್ಚಿದ ಒಡನೆಯೇ ರಾಮಚಂದ್ರ ರಾಯರು ಗ್ರಂಥವನ್ನು ತಮ್ಮ ತಲೆಯ ಮೇಲೆ ಇಟ್ಟುಕೊಂಡು, ‘ಈ ಗ್ರಂಥದ ಮೌಲಿಕತೆ ಇದೇ’ ಎಂದರು. ನನ್ನ ಕಣ್ಣುಗಳಲ್ಲಿ ನೀರು ಧಾರಾಕಾರವಾಗಿ ಹರಿಯಿತು. ಅಂಥ ಗ್ರಂಥವನ್ನು ಪ್ರಕಟಿಸಿದ ಧನ್ಯತಾ ಭಾವ ಮಲ್ಲೇಪುರಂ ಅವರ ಮುಖದಲ್ಲಿ ತಾಂಡವವಾಡಿತು. ಅನಂತರ ಅರ್ಧಗಂಟೆ ಕೃತಿಯನ್ನು ಕುರಿತು ರಾಮಚಂದ್ರರಾಯರು ಮಾತನಾಡಿದರು. ಬಹುಶಃ ಅದು 2002ನೇ ಇಸವಿ ಇರಬಹುದು. ಆ ಘಟನೆ, ರಾಯರ ಮೌಲಿಕ ಮಾತುಗಳು ನನಗೆ ಸಂದ ಅತ್ಯಂತ ಶ್ರೇಷ್ಠ ಗೌರವವೆಂದು ಭಾವಿಸಿದ್ದೇನೆ. ರಾಮಚಂದ್ರರಾಯರು ಏನನ್ನೇ ಕುರಿತು, ಯಾರನ್ನೇ ಕುರಿತು ಮಾತನಾಡಿದರೂ ಹಗುರವಾಗಿ ಮಾತನಾಡುವವರಲ್ಲ. ಅವರ ಮಾತುಗಳು ಅತ್ಯಂತ ಗೌರವಯುತವಾದವು, ಮೌಲಿಕವಾದುವು. ಅಂದು ಬಿಡುಗಡೆಯಾದ ಸಂಶೋಧನ ಕೃತಿಯ ಹೆಸರು ‘ಬದ್ದವಣ’ ಎಂದು.
ಟಿ ಎಸ್ ಛಾಯಾಪತಿ ಎಂಬ ಸ್ನೇಹಶೀಲ ಪ್ರಕಾಶಕ!
2003ನೇ ಇಸವಿಯಲ್ಲಿ ದಕ್ಷಿಣಕನ್ನಡ ಜಿಲ್ಲೆ ಮೂಡಬಿದರೆಯಲ್ಲಿ 31ನೇಯ ‘ಅಖಿಲ ಭಾರತ ಕನ್ನಡ ಸಾಹಿತ್ಯಸಮ್ಮೇಳನ’ ಏರ್ಪಾಡಾಯಿತು. ಆ ಸಮ್ಮೇಳನಕ್ಕೆ ನನ್ನನ್ನು ಸರ್ವಾಧ್ಯಕ್ಷಳಾಗಿ ಕನ್ನಡ ಸಾಹಿತ್ಯ ಪರಿಷತ್ತು ಆರಿಸಿತು. ಆ ಸನ್ನಿವೇಶದಲ್ಲಿ ಕೆಲವು ಪತ್ರಿಕೆಗಳು, ದೂರದರ್ಶನದ ಕೆಲವು ಚಾನಲ್‌ಗಳು ನನ್ನನ್ನು ಸಂದರ್ಶನ ಮಾಡಿ ಸಂದರ್ಶನ ಲೇಖನಗಳನ್ನು ಪ್ರಕಟಿಸಿದವು. ಸುಧಾ, ತರಂಗ ಇನ್ನೂ ಕೆಲವು ವಾರಪತ್ರಿಕೆಗಳು ಮುಖಪುಟಗಳಲ್ಲಿ ನನ್ನ ಭಾವಚಿತ್ರ ಹಾಕಿ ನನ್ನ ಬಗ್ಗೆ ಲೇಖನಗಳು ಬರುವಂತೆ ಮಾಡಿದವು. ನನಗೆ ನೆನಪಿರುವ ಹಾಗೆ ‘ಕನ್ನಡಪ್ರಭ’ ದಿನಪತ್ರಿಕೆಯವರು ನನ್ನ ಸಂದರ್ಶನವನ್ನು ಬಯಸಿದರು ಮತ್ತು ‘ಸಂದರ್ಶನಕ್ಕೆ ಸೂಕ್ತ ವ್ಯಕ್ತಿಯನ್ನು ನೀವೇ ಆರಿಸಿಕೊಳ್ಳಿ ಮೇಡಂ’ ಎಂದರು. ನಾನು ಒಡನೆಯೇ, ‘ಮಲ್ಲೇಪುರಂ ಜಿ.ವೆಂಕಟೇಶ ಅವರು ನಡೆಸಿಕೊಡಲಿ’ ಎಂದೆ. ಆಗ ಮಲ್ಲೇಪುರಂ ಅವರು ಸಂತೋಷದಿಂದ ಒಪ್ಪಿಕೊಂಡು ಸಂದರ್ಶನ ನಡೆಸಿದರು. ಅತ್ಯಂತ ಮೌಲಿಕವಾದ ಪ್ರಶ್ನೆಗಳನ್ನು ಅವರು ತಯಾರಿಸಿಕೊಂಡು ಬಂದಿದ್ದರು. ಅಲ್ಲಿಯವರೆಗೂ ಬಂದಿದ್ದ ನನ್ನ ಸುಮಾರು ಕೃತಿಗಳನ್ನು ಅಧ್ಯಯನ ಮಾಡಿದ ಪ್ರಶ್ನೆಗಳಾಗಿದ್ದವು. ಅವುಗಳಲ್ಲಿ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಇತಿಹಾಸಕ್ಕೂ ಸಂಬಂಧಿಸಿದ ಪ್ರಶ್ನೆಗಳಿದ್ದವು. ಆ ಸಂದರ್ಶನ ‘ಕನ್ನಡಪ್ರಭ’ ಪತ್ರಿಕೆಯಲ್ಲಿ ಪ್ರಕಟವಾದಾಗ ನನಗೆ ಸಂತೋಷದ ಜೊತೆಗೆ ಹೆಮ್ಮೆ ಎನಿಸಿತು. ಮಲ್ಲೇಪುರಂ ಅವರು ‘ಇದು ನನಗೆ ಗೌರವವನ್ನು ತಂದ ಸಂದರ್ಶನ’ ಎಂದು ಸಂತೋಷಿಸಿದರು.
ಹಂಪಿ, ಕನ್ನಡ ವಿಶ್ವವಿದ್ಯಾಲಯ ಮಲ್ಲೇಪುರಂ ಅವರನ್ನು ಪ್ರೊಫೆಸರ್ ಹುದ್ದೆ ನೀಡಿ ಗೌರವಿಸಿತು. ಅಲ್ಲಿ ಅವರು ಉತ್ತಮ ಕಾರ್ಯಗಳನ್ನು ಮಾಡಿ ಒಳ್ಳೆಯ ಹೆಸರು ಪಡೆದು
ಕೀರ್ತಿವಂತರಾದರು. ಸಂಸ್ಕೃತ-ಪ್ರಾಕೃತ-ಪಾಲಿಭಾಷೆಯಲ್ಲಿಯೂ ಪಂಡಿತರೂ, ವಿದ್ವಾಂಸರೂ ಆಗಿದ್ದ ಪ್ರೊ.ಮಲ್ಲೇಪುರಂ ಅವರನ್ನು ಸಂಸ್ಕೃತ ವಿಶ್ವವಿದ್ಯಾನಿಲಯದ ಪ್ರಥಮ ಕುಲಪತಿಯಾಗಿ ನೇಮಕ ಮಾಡಿತು. ಆದಿಕವಿ, ಅಗ್ರಕವಿ, ಮಹಾಕವಿ ಪಂಪ ಒಂದು ಕಡೆ ‘ನಿಡಿಯರ್ಗಂ ನಿಡಿಯರ್ ಒಳರ್’ ಎಂದು ಹೇಳಿದ್ದಾನೆ. ಹಾಗೆ ಮಲ್ಲೇಪುರಂ ಅವರು ನಿಡಿಯರ್ಗಂ ನಿಡಿಯರಾಗಿ ಬೆಳೆದಿದ್ದಾರೆ. ಪ್ರಥಮ ಕುಲಪತಿಗೆ ಸವಾಲುಗಳು ಜಾಸ್ತಿ ಇರುತ್ತವೆ. ಅವೆಲ್ಲವನ್ನು ಪರಿಹರಿಸಿಕೊಳ್ಳುತ್ತಾ ವಿಶ್ವವಿದ್ಯಾಲಯದ ಪ್ರಗತಿಗೆ ತ್ರಿಕರಣ ಪೂರ್ವಕವಾಗಿ ದುಡಿದವರು ಮಲ್ಲೇಪುರಂ. ಅವರು ಆಡಳಿತ ನಡೆಸುತ್ತಲೇ ಸಾಹಿತ್ಯ ರಚನೆ, ಅನುವಾದ ಕಾರ್ಯಗಳನ್ನು ಮಾಡುತ್ತಾ ಕೆಲವು ಮೌಲಿಕ ಗ್ರಂಥಗಳನ್ನು ವೈಯಕ್ತಿಕವಾಗಿ ಹಾಗೂ ವಿಶ್ವವಿದ್ಯಾಲಯದ ವತಿಯಿಂದ ಪ್ರಕಟಿಸಿದರು.
ಮಲ್ಲೇಪುರಂ ಅವರು ಅಧಿಕಾರಿ ಹುದ್ದೆಯಿಂದ ನಿವೃತ್ತರಾದರೂ ಬರವಣಿಗೆಯಿಂದ ಎಂದೂ ನಿವೃತ್ತರಾಗಿಲ್ಲ. ಈಗಲೂ ನಿರಂತರ ಅಧ್ಯಯನ, ಉಪನ್ಯಾಸ, ಮೌಲಿಕ ಗ್ರಂಥಗಳ ರಚನೆಯಲ್ಲಿ ತೊಡಗಿದ್ದಾರೆ. ಅವರ ಸಾಹಿತ್ಯಕ ಕೆಲಸಕ್ಕೆ ನಿವೃತ್ತಿಯಿಲ್ಲ. ‘ಸುಧಾ’ ವಾರಪತ್ರಿಕೆಯನ್ನು ತಿರುವಿ ಹಾಕಿದರೆ ಅಲ್ಲಿ ಅಂಕಣ ಬರಹದಲ್ಲಿ ಮಲ್ಲೇಪುರಂ ಜಿ.ವೆಂಕಟೇಶ ಅವರು ಹಾಜರಾಗಿರುತ್ತಾರೆ. ‘ಪುರಂಜೀವಿ’ ಎನ್ನುವ ಕಾವ್ಯನಾಮದಲ್ಲಿ ಮೌಲಿಕ ಬರೆಹಗಳು ಕಾಣಿಸಿಕೊಳ್ಳುತ್ತಿವೆ. ಮಲ್ಲೇಪುರಂ ಎನ್ನುವ ಪದದಲ್ಲಿ ‘ಪುರಂ’ ಪದವನ್ನು ಆರಿಸಿಕೊಂಡಿದ್ದಾರೆ. ಜಿ.ವೆಂಕಟೇಶ್ ಎನ್ನುವಲ್ಲಿ ‘ವೇ’ಗೆ ಬದಲಾಗಿ ಇಂಗ್ಲಿಷಿನ ‘ವಿ’ಯನ್ನು ತಂದಿದ್ದಾರೆ. ಇವೆಲ್ಲವನ್ನೂ ಸೇರಿಸಿ ‘ಪುರಂಜೀವಿ’ ಕಾವ್ಯನಾಮವನ್ನು ಮಾಡಿಕೊಂಡು ಅದರಲ್ಲಿಯೂ ಒಂದು ನವೀನತೆಯನ್ನು ಮೆರೆದಿದ್ದಾರೆ. ‘ಸುಧಾ’ದಲ್ಲಿ ಪ್ರಕಟವಾಗುವ ಲೇಖನಗಳು ಚಿಕ್ಕವಾದರೂ ಅರ್ಥಗರ್ಭಿತ. ವಿಷಯ ಗರ್ಭಿತವಾಗಿರುತ್ತವೆ. ಕಿರಿದರಲ್ಲಿ ಹಿರಿದು ಅರ್ಥ ತುಂಬಿದ ಲೇಖನಗಳು ಅವು. ‘ಸುಧಾ’ ವಾರಪತ್ರಿಕೆ ಅಂಥ ಲೇಖನಗಳನ್ನು ಪ್ರಕಟಿಸುವುದರಿಂದ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿದೆ. ಇವರ ಅಂಕಣ ಬರೆಹಗಳಲ್ಲಿ ಉಪನಿಷತ್ತು
ಶ್ರುತಿಪುರಾಣಗಳಿಂದ ಆಯ್ದ ವಿಷಯಗಳಿದ್ದರೂ, ಅವು ಇಂದಿನ ಹಾಗೂ ಮುಂದಿನ ಸಮಾಜಕ್ಕೆ ಹೇಗೆ ಪ್ರಸ್ತುತವಾಗುತ್ತವೆ ಎನ್ನುವುದನ್ನು ತಿಳಿಸಿಕೊಡುತ್ತವೆ.
ವಿಶ್ರಾಂತ ಕುಲಪತಿಗಳಾಗಿ ದಣಿವರಿಯದಂತೆ ದುಡಿಯುತ್ತಿದ್ದಾರೆ. ಬೆಳೆಯುವವರಿಗೆ ಆಕಾಶವೇ ಗುರಿ. ಅಂಥ ಮಲ್ಲೇಪುರಂ ಅವರು ಚಿರಾಯುವಾಗಲಿ, ದೀರ್ಘಕಾಲ ಬೆಳೆಯಲಿ, ವಿದ್ವತ್ ಕ್ಷೇತ್ರಕ್ಕೆ ನಿರಂತರ ದೇಣಿಗೆ ನೀಡುತ್ತಿರಲಿ.
(ಪ್ರೊ. ಮಲ್ಲೇಪುರಂ 70ರ ಅಭಿನಂದನಾ ಗ್ರಂಥ ‘ಸಮಾಹಿತ’ದಿಂದ ಆಯ್ದ ಒಂದು ಲೇಖನ.)