ಜೈಪುರ ಎಂಬ ಅಕ್ಷರ ಪಾತ್ರೆಯಲ್ಲಿ..ಮನಸು ಮಾಯೆಯ ಮಾಟ

By Kannadaprabha News  |  First Published Feb 4, 2024, 3:01 PM IST

ಪಿಂಕ್ ಸಿಟಿಯೆಂದೇ ಎಲ್ಲರಿಗೂ ಪರಿಚಿತವಾಗಿರುವ ಜೈಪುರದಲ್ಲಿ ಪ್ರತಿ ವರ್ಷದ ಆರಂಭದಲ್ಲಿ ನಡೆಯುವ ಈ ಅಂತರಾಷ್ಟ್ರೀಯ ಖ್ಯಾತಿಯ ಲಿಟ್‌ ಫೆಸ್ಟ್‌ನಲ್ಲಿ ಭಾಗವಹಿಸಲು ವಲಸೆ ಬರುವ ಹಕ್ಕಿಗಳಂತೆ ಸಾಹಿತ್ಯಾಸಕ್ತ ಜನ ಪ್ರಪಂಚದ ಮೂಲೆ ಮೂಲೆಗಳಿಂದ ಬರುತ್ತಾರೆ. ಈ ಲಿಟ್ ಫೆಸ್ಟ್ ಬಗ್ಗೆ ಸಚಿನ್ ತೀರ್ಥಹಳ್ಳಿ ಬರೆದಿರೋ ಲೇಖನ ಇಲ್ಲಿದೆ.


- ಸಚಿನ್ ತೀರ್ಥಹಳ್ಳಿ

ಒಂದು ಆಟೋಗ್ರಾಫ್‌ಗಾಗಿ ನಲವತ್ತು ನಿಮಿಷಗಳ ಕಾಲ ನಿಂತು ಕಾಯುತ್ತಿದ್ದ ಹೆಚ್ಚು ಕಡಿಮೆ ಅರ್ಧ ಕಿಲೋಮೀಟರ್ ಉದ್ದದ ಸಾಲಿನ ಕಡೆಗೆ ಮೀಡಿಯಾದವರ ಗಡಿಬಿಡಿಯ ಮಧ್ಯೆ ನಾಲ್ಕಾರು ಬೌನ್ಸರ್‌ಗಳ ರಕ್ಷಣೆಯಲ್ಲಿ ಹಿರಿಯರೊಬ್ಬರು ನಡೆಯುತ್ತಾ ಬರುತ್ತಿದ್ದರೆ, ಅತ್ತಿಂದಿತ್ತ ಸುಮ್ಮನೆ ಸುತ್ತುತ್ತಿದ್ದ ಜೆನ್ ಜಿ ಯುವಕ, ಯುವತಿಯರು ಒಮ್ಮೆಲೆ ನಿಂತು ಆ ಹಿರಿಯರನ್ನು ಬೆರಗುಗಣ್ಣಿನಿಂದ ನೋಡುತ್ತಿದ್ದರು.

Tap to resize

Latest Videos

undefined

ಪುಡಿ ರಾಜಕಾರಣಿಗಳು, ಈಗಷ್ಟೆ ಕಣ್ಣು ಬಿಡುವ ಸಿನಿಮಾ ಸೆಲೆಬ್ರಿಟಿಗಳ ಸುತ್ತ ಬೌನ್ಸರ್‌ಗಳು ಸಾಮಾನ್ಯವಾಗಿರುತ್ತಾರೆ. ಆದರೆ ಬಿಳಿ ಬಣ್ಣದ ಜುಬ್ಬಾ ತೊಟ್ಟ, ನಿಧಾನವಾಗಿ ನಡೆಯುತ್ತಿದ್ದ, ಸುಮಾರು ತೊಂಬತ್ತು ವರ್ಷದ ಇವರ ಸುತ್ತ ಯಾಕೆ ಇಷ್ಟೊಂದು ಬೌನ್ಸರ್‌ಗಳಿದ್ದಾರೆ ಎಂಬ ಪ್ರಶ್ನೆ ಆ ಎಳೆಯರ ಕಣ್ಣಲ್ಲಿತ್ತು. ಸುತ್ತ ನಿಂತಿದ್ದ ಒಬ್ಬ ಮಧ್ಯವಯಸ್ಕ ಮಹಿಳೆಯ ಬಳಿ.

ಕೃತಕ ಬರಹಗಾರ; ಕಂಪ್ಯೂಟರ್‌ ಕೈ ಬರೆಯುತ್ತದೆ

‘ಯಾರಿವರು?’ ಎಂದು ಕೇಳಿದ್ದಕ್ಕೆ ಆಕೆ ‘ಅವರು ಗುಲ್ಜಾರ್, ಹಿ ಇಸ್ ಎ ಪೊಯೆಟ್’ ಎಂದರು. ಅವರನ್ನು ನೋಡುವ ಆಸೆಯಿಂದ ಅರ್ಧ ಕಿಲೋಮೀಟರ್ ಉದ್ದದ ಸಾಲಿಗೆ ಆ ಜೆನ್ ಜಿಗಳು ಸೇರಿಕೊಂಡರು. ಹೀಗೆ ಭಾರತದ ವಿಭಜನೆಯ ಕಾಲದಲ್ಲಿ ಕಾವ್ಯ ಬರೆಯಲು ಶುರು ಮಾಡಿದ ಒಬ್ಬ ಕವಿ ಮತ್ತು ಎಐ ಜಗತ್ತಿಗೆ ಒಂದು ಹೆಜ್ಜೆ ಆಗಲೇ ಇಟ್ಟಿರುವ ಒಂದು ತಲೆಮಾರಿನ ಸಮಾಗಮಕ್ಕೆ ಸಾಕ್ಷಿಯಾಗಿದ್ದು ಹದಿನೇಳನೆಯ ಆವೃತ್ತಿಯ ಜೈಪುರ ಲಿಟರೇಚರ್ ಫೆಸ್ಟಿವಲ್.

ಪಿಂಕ್ ಸಿಟಿಯೆಂದೇ ಎಲ್ಲರಿಗೂ ಪರಿಚಿತವಾಗಿರುವ ಜೈಪುರದಲ್ಲಿ ಪ್ರತಿ ವರ್ಷದ ಆರಂಭದಲ್ಲಿ ನಡೆಯುವ ಈ ಅಂತರಾಷ್ಟ್ರೀಯ ಖ್ಯಾತಿಯ ಲಿಟ್‌ ಫೆಸ್ಟ್‌ನಲ್ಲಿ ಭಾಗವಹಿಸಲು ವಲಸೆ ಬರುವ ಹಕ್ಕಿಗಳಂತೆ ಸಾಹಿತ್ಯಾಸಕ್ತ ಜನ ಪ್ರಪಂಚದ ಮೂಲೆ ಮೂಲೆಗಳಿಂದ ಬರುತ್ತಾರೆ. ಕಾರ್ಪೋರೆಟ್ ಸಹಯೋಗದಲ್ಲೇ ನಡೆಯುವ ಈ ಲಿಟ್‌ಫೆಸ್ಟ್ ಆ ಜಗತ್ತಿನ ಡ್ರೈನೆಸ್‌ನಿಂದ ಮಾತ್ರ ಮುಕ್ತವಾಗಿದೆ.

ಅಳೆಯುವವರ ಕಥೆ ಬೆಳಕಿಗೆ ತರುತ್ತಿರುವೆ : ಗಜಾನನ ಶರ್ಮಾ

ಎಷ್ಟರಮಟ್ಟಿಗೆ ಎಂದರೆ ಯಾವುದಾದರೂ ಗೋಷ್ಟಿಗಳಲ್ಲಿ ಭಾಗವಹಿಸಲು ಕೂತಿರುವಾಗ ನಾವು ಕೂತ ಕುರ್ಚಿಯ ಪಕ್ಕ ಹತ್ತು ಕುರ್ಚಿಗಳು ಖಾಲಿಯಿದ್ದರೂ, ನಮ್ಮ ಪಕ್ಕ ಕೂರುವವರು ನಿಮ್ಮ ಪಕ್ಕದ ಕುರ್ಚಿ ಖಾಲಿಯಿದೆಯೇ ಎಂದು ಎರಡೆರಡು ಸಲ ಕೇಳುತ್ತಾರೆ. ಅದೇ ಜನ ಗೋಷ್ಟಿಗಳ ಮಧ್ಯೆ ನಾವು ಫೋನಿನಲ್ಲಿ ಮಾತಾಡುತ್ತಿದ್ದರೆ, ‘ನಮಗೆ ಗೋಷ್ಟಿ ಕೇಳಲು ತೊಂದರೆಯಾಗುತ್ತದೆ. ನೀವು ಹೊರಗೆ ಹೋಗಿ ಮಾತಾಡಬಹುದೇ?’ ಎಂದು ಸೌಜನ್ಯದಿಂದಲೇ ಕೇಳುತ್ತಾರೆ.

‘ನಾನೊಂದು ಕಾದಂಬರಿ ಬರೆಯಬೇಕು, ನನಗೊಂದು ಸಲಹೆ ಕೊಡಿ’ ಎಂದು ಹದಿನೇಳು ವರ್ಷದ ಹುಡುಗಿ ಸಾವಿರ ಜನರ ಮಧ್ಯೆ ನಿಂತು ಕೇಳಿದಾಗ, ನಿಮಗೆ ಕತೆ ಪೂರ್ತಿಯಾಗಿ ಗೊತ್ತಿಲ್ಲದಿದ್ದರೂ ಪಾತ್ರಗಳು ಕಣ್ಮುಂದೆ ಸ್ಪಷ್ಟವಾಗಿ ತಿರುಗಾಡುತ್ತಿರಬೇಕು. ಬರವಣಿಗೆ ಮುಂದೆ ಸಾಗುತ್ತಿಲ್ಲ, ಕತೆ ನಿಂತ ನೀರಾಗಿದೆ ಎನ್ನಿಸುವಾಗ ಆ ಪಾತ್ರಗಳೇ ನಮ್ಮನ್ನು ಎಬ್ಬಿಸಿ ಬರೆಸಿಕೊಳ್ಳುತ್ತವೆ ಎಂಬಂತಹ ಉಪಯುಕ್ತ ಸಲಹೆಯನ್ನು ‘ಲೆಸೆನ್ಸ್ ಇನ್ ಕೆಮಿಸ್ಟ್ರಿ’ ಎಂಬ ಬೆಸ್ಟ್ ಸೆಲ್ಲಿಂಗ್ ಕಾದಂಬರಿ ಬರೆದ ಅಮೇರಿಕನ್ ಲೇಖಕಿ ಬೋನಿ ಗಾರ್ಮಸ್ ಸಲಹೆ ಕೊಡುತ್ತಾರೆ.

ಈ ಲಿಟ್ ಫೆಸ್ಟ್‌ನಲ್ಲಿ ನನಗೆ ವೈಯುಕ್ತಿಕವಾಗಿ ಇಷ್ಟವಾದ ಸಂಗತಿಗಳು ಎರಡು. ಒಂದು ಇಡೀ ಫೆಸ್ಟಿಗೆ ಒಂದು ವಿನೂತನ ವೈಬ್ ಕೊಡುವುದಕ್ಕೆ ಆಯೋಜಕರು ತೆಗೆದುಕೊಂಡ ವೈಯುಕ್ತಿಕ ಆಸಕ್ತಿ. ಒಂದು ವೇದಿಕೆಯನ್ನು ಡಿಸೈನ್ ಮಾಡುವಾಗ ಯಾವ ಬಣ್ಣದ ಕುರ್ಚಿಗಳಿರಬೇಕು, ಮುಂಭಾಗದಲ್ಲಿ ಕೂರುವ ಕೇಳುಗರು ಎಷ್ಟು ಅಂತರದಲ್ಲಿ ಕೂರಬೇಕು, ಪ್ರತಿಯೊಂದು ವೇದಿಕೆಯ ಚಾವಣಿಯನ್ನು ನೋಡುವಾಗಲೂ ಒಂದು ಅಚ್ಚುಕಟ್ಟುತನ ಕಾಣುತ್ತದೆ. ಐದು ವೇದಿಕೆಗಳಿದ್ದರೂ ಎಲ್ಲೂ ಅದದೇ ಬಣ್ಣ, ಬಾವುಟಗಳು, ಮುಖಗಳಿರುವ ಏಕತಾನತೆಯ ಕುರುಹು ಎಲ್ಲೂ ಕಾಣುವುದಿಲ್ಲ. ಇವೆಲ್ಲಾ ಸಣ್ಣ ಸಂಗತಿಗಳೆನಿಸಬಹುದು. ಆದರೆ ಇವೆಲ್ಲಾ ಕಲಾಸಕ್ತರ ಮನಸ್ಸನ್ನು ಅಪ್ರಜ್ಞಾಪೂರ್ವಕವಾಗಿ ಸೆಳೆಯುವ ವಿಷಯಗಳು.

ಎರಡನೆಯದು ವೈವಿಧ್ಯಮಯ ಗೋಷ್ಠಿಗಳು. ಒಂದು ವೇದಿಕೆಯಲ್ಲಿ ನ್ಯೂಕ್ಲಿಯರ್ ಬಾಂಬ್ ಕಂಡುಹಿಡಿದ ಓಪನ್‌ಹೈಮರ್ ಎಂಬ ಕಾಂಪ್ಲೆಕ್ಸ್ ವಿಜ್ಞಾನಿಯ ಬದುಕಿನ ವಿವರಗಳ ಬಗ್ಗೆ ಒಬ್ಬ ಲೇಖಕ ಮಾತಾಡುತ್ತಿರುವಂತೆ, ತುಸು ದೂರದಲ್ಲಿರುವ ಇನ್ನೊಂದು ವೇದಿಕೆಯಲ್ಲಿ ಡೇಟಿಂಗ್ ಆ್ಯಪ್‌ನಲ್ಲಿ ಪ್ರೀತಿ ಹುಡುಕಬಹುದೇ ಎಂದು ಯುವ ಲೇಖಕರು ಚರ್ಚಿಸುತ್ತಿರುತ್ತಾರೆ. ಮತ್ತೊಂದು ವೇದಿಕೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಮಧ್ಯೆ ನಡೆಯುವ ಹಗ್ಗಾಜಗ್ಗಾಟದ ಬಗ್ಗೆ ತುಂಬಾ ಸೀರಿಯಸ್ ಆದ ರಾಜಕೀಯ ಚರ್ಚೆ ನಡೆಯುತ್ತಿರುತ್ತದೆ. ತಮ್ಮ ಆಸಕ್ತಿಯ ವಿಷಯಗಳನ್ನು ಹುಡುಕಿಕೊಂಡು ಹೋಗುವ ಸ್ವಾತಂತ್ರ್ಯ ಇಲ್ಲಿ ಎಲ್ಲರಿಗೂ ಮುಕ್ತವಾಗಿದೆ. ಈ ವಿಷಯದಲ್ಲಿ ತಾಲೂಕು, ಜಿಲ್ಲಾ ಮಟ್ಟಗಳಲ್ಲಿ ಲಿಟ್ ಫೆಸ್ಟ್‌ಗಳನ್ನು ಆಯೋಜಿಸುವವರಿಗೂ ವಿಷಯಗಳ ಆಯ್ಕೆಯಲ್ಲಿ ಜೈಪುರ ಲಿಟ್ ಫೆಸ್ಟ್ ಖಂಡಿತವಾಗಿ ಒಂದು ಮಾದರಿ.

ಎಲ್ಲಾ ವರ್ಗದ ಜನರು ತಮ್ಮ ತಮ್ಮ ಸಂತೋಷಗಳನ್ನು, ನಾಳೆಗಾಗಿ ಕಾಯುವುದಕ್ಕೆ ಕಾರಣಗಳನ್ನು ಬೇರೆ ಬೇರೆ ರೀತಿಯಲ್ಲಿ ಕಂಡುಕೊಳ್ಳುತ್ತಾರೆ. ಸಂಪಾದನೆ ಮಾಡುವುದರಲ್ಲಿ, ಮಕ್ಕಳಿಗೆ ಮದುವೆ ಮಾಡುವುದರಲ್ಲಿ, ಮೊಮ್ಮಕ್ಕಳನ್ನು ಸಾಕುವುದರಲ್ಲಿ, ಸ್ಟಾಕ್ ಮಾರ್ಕೆಟಿನ ಬೆನ್ನು ಬೀಳುವುದರಲ್ಲಿ, ಸಿನಿಮಾ ನೋಡುವುದರಲ್ಲಿ, ಅಡಿಗೆ ಮಾಡಿ ಬಡಿಸುವುದರಲ್ಲಿ ಹೀಗೆ ಒಬ್ಬೊಬ್ಬರಿಗೆ ಒಂದೊಂದರಲ್ಲಿ ಸಂತೋಷ ಸಿಗುತ್ತದೆ. ಹಾಗೆಯೇ ಸಾಹಿತ್ಯವನ್ನು ಓದುವುದರಲ್ಲಿ, ಬರೆಯುವುದರಲ್ಲಿ ಕೆಲವರಿಗೆ ಸಂತೋಷ ಸಿಗುತ್ತದೆ. ಅಂತಹ ಜನರು ಹೆಚ್ಚಾಗಿ ತಮ್ಮ ಮಾತನ್ನು ಬರೆದದ್ದನ್ನು ಯಾರು ಕೇಳುವವರಿಲ್ಲ, ನಾನು ಬರೆದಿದ್ದನ್ನು ಯಾರಾದರೂ ಓದುವವರಿದ್ದಾರ? ನಾನು ಇಷ್ಟಪಟ್ಟು ಓದಿದ ಪುಸ್ತಕವನ್ನು ಮತ್ತೊಬ್ಬರು ಯಾರಾದರೂ ಅಷ್ಟೆ ತೀವ್ರವಾಗಿ ಮೆಚ್ಚಿದ್ದಾರ? ಎಂಬ ಅನುಮಾನಗಳಲ್ಲೇ ಬದುಕುತ್ತಿರುತ್ತಾರೆ. ಅಂತಹ ಬರಹಗಾರರು, ಓದುಗರು ಜೈಪುರದಲ್ಲಿ ನಡೆಯುವ ಈ ಲಿಟ್ ಫೆಸ್ಟಿಗೆ ಬರಬೇಕು.

ಇಲ್ಲಿ ವಯಸ್ಸು, ದೇಶ, ಭಾಷೆಗಳ ಹಂಗಿಲ್ಲದೆ ವಿಶ್ವದ ಬೇರೆ ಬೇರೆ ಭಾಗಗಳಿಂದ ಬರುವ ಸಮಾನ ಮನಸ್ಕ ಓದುಗರು, ಲೇಖಕರು ನಮ್ಮ ಅಂತಹ ಅನುಮಾನಗಳನ್ನ ದೂರ ಮಾಡುತ್ತಾರೆ. ಈ ಲಿಟ್ ಫೆಸ್ಟ್ ಓದುಗರಿಗೆ ಹೊಸ ಕತೆಗಳನ್ನು, ಲೇಖಕರಿಗೆ ಹೊಸ ದಾರಿಯಲ್ಲಿ ಸಾಗುವ ಧೈರ್ಯವನ್ನು ಮತ್ತು ನಾನಿಲ್ಲಿ ಒಬ್ಬಂಟಿಯಲ್ಲ, ಇಲ್ಲಿರುವವರು ನಾಳೆ ನನ್ನ ಕತೆಗಳನ್ನೂ ಓದಬಹುದು ಎಂಬ ಭರವಸೆಯನ್ನು ಕೊಡುತ್ತದೆ. ಈ ಕಾರಣಕ್ಕೆ ಸಾಹಿತ್ಯ ಪ್ರೇಮಿಗಳಿಗೆ ಜೈಪುರ ಲಿಟರೇಚರ್ ಫೆಸ್ಟಿವಲ್ ಮುಖ್ಯ ಮತ್ತು ಪ್ರಸ್ತುತ.

click me!