ಕೈಯಿಲ್ಲದಿದ್ದರೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಈಜುಪಟು

First Published Jul 2, 2018, 2:52 PM IST
Highlights

ಬೆಳಗಾಗಿವಿಯ ಶ್ರೀಧರ ಮಾಳಗಿ ಆರನೇ ವಯಸ್ಸಿನಲ್ಲಿದ್ದಾಗ ಸಂಭವಿಸಿದ ಅಪಘಾತವೊಂದರಲ್ಲಿ ತನ್ನ ಬಲಗೈ ಕಳೆದುಕೊಳ್ಳುತ್ತಾನೆ. ಇನ್ನೇನು ಬದುಕು ಇಷ್ಟಕ್ಕೆ ಮುಗಿಯಿತು, ನನ್ನ ಮೇಲೆ ಬದುಕು ಮಿತಿಗಳನ್ನು ಹೇರಿತು ಎಂದುಕೊಳ್ಳುವ
ಹೊತ್ತಿನಲ್ಲಿಯೇ ಆಶಾಕಿರಣವೊಂದು ಮೂಡುತ್ತದೆ. ಈಜು ಕಲಿಯುವುದಕ್ಕೆ ಮುಂದಾಗುತ್ತಾನೆ. ಈಗ ಅವನ ಸಾಧನೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುವರ್ಣ  ಪದಕಗಳು ಲಭಿಸಿವೆ.

ನಾನು ಆರನೇ ವಯಸ್ಸಿನವನಿದ್ದಾಗ ಅಪಘಾತವಾಗಿ ಬಲಗೈ ಕಳೆದುಕೊಂಡೆ. ನನ್ನ ತಂದೆಯದ್ದು ಕೂಲಿ ಕೆಲಸ. ತಾಯಿ ಅವರಿವರ ಮನೆಯಲ್ಲಿ ಕೆಲಸ ಮಾಡುತ್ತಾಳೆ. ಬಡತನ ಮನೆಯಲ್ಲಿ ತಾಂಡವವಾಡುತ್ತಿದ್ದಾಗ ಇಂತಹುದೊಂದು ಅಪಘಾತ ನಮ್ಮನ್ನು ಜರ್ಜರಿತ ಮಾಡಿತ್ತು.

ಆದರೆ ನನ್ನ ತಂದೆ ತಾಯಿ ಇದಕ್ಕೆ ಹೆದರದೇ ನನಗೆ ಧೈರ್ಯ ತುಂಬಿದರು. ಸ್ವಾವಲಂಭಿಯನ್ನಾಗಿ ಮಾಡಲು ಸಾಕಷ್ಟು ಪ್ರಯತ್ನ ಪಟ್ಟರು. ಒಂದು ಕಡೆ ನನ್ನ ಮೂವರು ಅಕ್ಕಂದಿರನ್ನು ಸಾಕುವ ಹೊಣೆ. ಭವಿಷ್ಯದಲ್ಲಿ ನಮಗೆ ಆಶ್ರಯವಾಗುತ್ತಾನೆ ಎಂದುಕೊಂಡಿದ್ದ ಮಗನಿಗೆ ಬಂದ ಗತಿ, ನನ್ನ ವಾರಿಗೆಯ ಮಕ್ಕಳು ನನ್ನ ಕಣ್ಣೆದುರು ಆಡಿ ನಲಿಯುತ್ತಿದ್ದದ್ದನ್ನು ಕಂಡು ನನ್ನ ತಂದೆ ತಾಯಿ ಸಾಕಷ್ಟು ನೊಂದುಕೊಳ್ಳುತ್ತಿದ್ದರು. ಆಗ ನಾನು ಹೀಗೆ ಕೂರಬಾರದು,  ಏನಾದರೂ ಮಾಡಿ ನನ್ನ ಕಾಲ ಮೇಲೆ ನಾನು ನಿಲ್ಲಬೇಕು, ಜೊತೆಗೆ ಅಪ್ಪ ಅಮ್ಮನನ್ನೂ ಚೆನ್ನಾಗಿ ನೋಡಿಕೊಳ್ಳಬೇಕು ಎಂದು ನಿರ್ಧಾರ ಮಾಡಿದೆ.

ದೇವರಂತೆ ಸಿಕ್ಕ ಗುರು ಅದೊಂದು ದಿನ ಗೆಳೆಯರೆಲ್ಲ ಬಂದು ಒತ್ತಾಯ ಮಾಡಿದ್ದರಿಂದ ಬೆಳಗಾವಿಯ ಬಸವೇಶ್ವರ ಸರ್ಕಲ್ ಹತ್ತಿರದ ಈಜು ಕೊಳದೊಳಗೆ ಹೋದೆ. ಆದರೆ, ನನಗೆ ಈಜು ಬರುತ್ತಿರಲಿಲ್ಲ, ಹೀಗಾಗಿ ಪಕ್ಕದಲ್ಲೇ ಗೆಳೆಯರ ಮೋಜು-ಮಸ್ತಿ ನೋಡುತ್ತಾ ಕುಳಿತ್ತಿದ್ದೆ. ನಾನು ಅವರಂತೆಯೇ ಇದ್ದಿದ್ದರೆ ಈಜು ಕಲಿಯಬಹುದಿತ್ತು ಎನ್ನಿಸುತ್ತಿತ್ತು. ನನ್ನ ತಳಮಳ ಕಂಡ ಈಜು ಮಾಸ್ಟರ್ ನನ್ನ ಬಳಿ ಬಂದು ಯಾಕಯ್ಯ ಒಬ್ಬನೇ ಕುಳಿತಿದ್ದೀಯಾ, ನೀನು ನೀರಿಗಿಳಿತೀಯಾ ಎಂದು ಕೇಳಿದರು. ಹೌದು, ಸರ್ ನಾನು ಕೂಡಾ ಈಜು ಕಲಿಬೇಕು ಎಂಬ ಆಸೆ ಇದೆ. ಆದರೆ, ನಾನು ಅವರಂತಲ್ಲ, ಎಂದು ನನ್ನ ಅರ್ಧ ಕೈ ತೊರಿಸಿದೆ. ಅದಕ್ಕೆ ಅವರು, ಸ್ವಲ್ಪ ಯೋಚಿಸಿ ನಿನಗೆ ನಿಜವಾಗ್ಲು ಈಜು ಕಲಿಯುವ ಆಸೆ ಇದ್ರೆ, ನಾಳೆ ನಿನ್ನ ಪಾಲಕರನ್ನು ಕರೆದುಕೊಂಡು ಬಾ, ನಾನು ನಿನಗೆ ಈಜು ಕಲಿಸುತ್ತೇನೆ ಎಂದು ಹೇಳಿ ಕಳುಹಿಸಿದರು.

ನಾನು ಕೂಡಾ ಅಪ್ಪನ ಮುಂದೆ, ನಡೆದ ಎಲ್ಲ ವಿಷಯ ಹೇಳಿದೆ, ಅದಕ್ಕೆ ಅಪ್ಪ ತುಸು ಯೋಚನೆ ಮಾಡಿ, ಈಜು ನಿನ್ನಿಂದ ಸಾಧ್ಯನಾ? ಎಂದು ಮರು ಪ್ರಶ್ನೆ ಹಾಕಿದರು. ನಾನು ಆತ್ಮ ವಿಶ್ವಾಸದಿಂದ ಹುಂ ಎಂದೆ. ಮರುದಿನವೇ ನಾನು ಈಜು ಕೊಳದಲ್ಲಿದ್ದೆ. ಗುರು ಉಮೇಶ ಕಲಘಟಗಿ ದೇವರ ರೀತಿ ಬಂದು ನನ್ನ ಬಾಳಿಗೆ ಹೊಸ ಆಯಾಮ ಕೊಟ್ಟರು. ವಿಶ್ವ ಪ್ಯಾರಾ ಈಜು ಸ್ಪರ್ಧೆಯಲ್ಲಿ ಭಾಗಿ ಜೂ. 7 ರಿಂದ 10 ರವರೆಗೂ ಜರ್ಮನ್‌ನ ಬರ್ಲಿನ್ ನಲ್ಲಿ ನಡೆದ ವಿಶ್ವ ಪ್ಯಾರಾ ಈಜು ಸ್ಪಧೆಯಲ್ಲಿ ಭಾಗವಹಿಸಿ 100  ಮೀಟರ್ ಫ್ರೀ ಸ್ಟೈಲ್‌ನಲ್ಲಿ 1 ನಿಮಿಷ 10 ಸೆಕೆಂಡ್‌ನಲ್ಲಿ ಗುರಿ ಮುಟ್ಟಿ 11 ನೇ ಸ್ಥಾನ ಪಡೆದುಕೊಂಡೆ. ಬಟರ್ ಫ್ಲೈನಲ್ಲಿ 1.16 ಸೆಕೆಂಡ್‌ನಲ್ಲಿ ಗುರಿ ಮುಟ್ಟಿ 5 ನೇ ಸ್ಥಾನ ಪಡೆದುಕೊಂಡು ಏಷಿಯನ್ ಗೇಮ್ಸ್‌ಗೆ ಕ್ವಾಲಿಫೈ ಆಗಿದ್ದೇನೆ.

ಈ ಸ್ಪರ್ಧೆಯಲ್ಲಿ 34 ದೇಶಗಳ 30 ಕ್ಕೂ ಹೆಚ್ಚು ಸ್ಪರ್ಧಾಳುಗಳು ಪಾಲ್ಗೊಂಡಿದ್ದರು. ಇವರೆಲ್ಲೂರಿಗೂ ಕಠಿಣ ಸವಾಲೊಡ್ಡಿದ ಹೆಮ್ಮೆ ನನಗಿದೆ. ಮುಂದೆ ಇನ್ನಷ್ಟು ಸಾಧಿಸಬಲ್ಲೆ ಎನ್ನುವ ವಿಶ್ವಾಸವೂ ನನ್ನಲ್ಲಿ ಮೊಳಕೆಯೊಡೆದಿದೆ. ಮೊದಲ ಬಾರಿಗೆ 2012 ರಲ್ಲಿ ಚೆನ್ನೈನಲ್ಲಿ ನಡೆದ 12 ನೇ ಪ್ಯಾರಾ ಒಲಿಂಪಿಕ್ ಈಜು ಹಾಗೂ ವಾಟರ್ ಪೋಲೋ ಸ್ಪರ್ಧೆಯಲ್ಲಿ ಭಾಗವಹಿಸಿ 2 ಚಿನ್ನ, 1 ಬೆಳ್ಳಿ, 1 ಕಂಚಿನ ಪದಕ, ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ 14 ನೇ ಅಂಗವಿಕಲ ರಾಷ್ಟ್ರೀಯ ಈಜು ಚಾಂಪಿಯನ್‌ಶಿಪ್‌ನಲ್ಲಿ 4 ಚಿನ್ನ, 1 ಕಂಚು, 2017 ರಲ್ಲಿ ಉದಯಪುರಲ್ಲಿ ನಡೆದ 17 ನೇ ರಾಷ್ಟ್ರೀಯ ಪ್ಯಾರಾ ಈಜು ಸ್ಪರ್ಧೆಯಲ್ಲಿ 5  ಚಿನ್ನ ಗೆದ್ದಿದ್ದೇನೆ. ಇದರೊಂದಿಗೆ ಸ್ಥಳೀಯ ಮಟ್ಟದ ಸಾಕಷ್ಟು ಸ್ಪರ್ಧೆಗಳಲ್ಲಿ ಗೆದ್ದಿರುವುದೂ ಇದೆ.

ನನ್ನ ಪ್ರತಿಭೆ, ಉತ್ಸಾಹವನ್ನು ಗುರುತಿಸಿ ಬೆಳಗಾವಿಯ ಪೋಲಿಯೊ ಹೈಡಾನ್ ಕಂಪನಿ ಆರ್ಥಿಕ ಸಹಾಯ ಮಾಡಿದೆ. ಕಳೆದ ಒಂದು ವರ್ಷದಿಂದ ಬೆಂಗಳೂರಿನ ಗೋ ಸ್ಪೋರ್ಟ್ಸ್ ಫೌಂಡೇಶನ್ ಕ್ರೀಡಾ ವೆಚ್ಚ ಭರಿಸುತ್ತಿದೆ. ಬಡತನದ ನೆರಳಿನಲ್ಲೇ ಬೆಳೆದು, ಒಂದು ಕೈ ಕಳೆದುಕೊಂಡರೂ ಇಂದಿಗೂ ಆತ್ಮ ವಿಶ್ವಾಸವೇ ನನ್ನನ್ನು ಮುನ್ನಡೆಸುತ್ತಿರುವುದು.
 

click me!