Sri Sri Ravi Shankar Birthday: ಧ್ಯಾನದಿಂದ ಸಾಮಾಜಿಕ ಪರಿವರ್ತನೆಗೈದ ಗುರುದೇವ್

Kannadaprabha News   | Kannada Prabha
Published : May 10, 2026, 06:25 AM IST
Sri Sri Ravi Shankar Birthday How Gurudev Achieved Social Transformation Through Meditation

ಸಾರಾಂಶ

ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ ಗುರೂಜಿಯವರು 'ಆರ್ಟ್‌ ಆಫ್‌ ಲಿವಿಂಗ್‌' ಸಂಸ್ಥೆಯ ಮೂಲಕ ಧ್ಯಾನ ಮತ್ತು ಸುದರ್ಶನ ಕ್ರಿಯೆಯನ್ನು ವಿಶ್ವಾದ್ಯಂತ ಪಸರಿಸಿದರು. ಅವರ ಈ ಪ್ರಯತ್ನವು ಹಿಂಸಾಮುಕ್ತ ಮತ್ತು ಒತ್ತಡರಹಿತ ಜಗತ್ತನ್ನು ನಿರ್ಮಿಸುವ ಗುರಿಯೊಂದಿಗೆ, ಯುದ್ಧಗ್ರಸ್ಥ ದೇಶಗಳಲ್ಲಿ ಶಾಂತಿ ಸ್ಥಾಪನೆ..

ಶ್ರೀ ಶ್ರೀ ರವಿಶಂಕರ ಗುರೂಜಿ ಜನ್ಮದಿನ ಮೇ 13

‘ಧ್ಯಾನ’ ಎಂದರೆ ಆಶ್ರಮದಲ್ಲಿ ಕುಳಿತು ಮಾಡುವ ಕ್ರಿಯೆ ಎಂದು ಜಗತ್ತೇ ನಂಬಿದ್ದಾಗ, ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ ಗುರೂಜಿಯವರು ಇದನ್ನು ಆಧ್ಯಾತ್ಮಿಕ ಸ್ಥಳಗಳ ಹೊರಗೂ ಮಾಡಬಹುದು ಎಂಬುದನ್ನು 45 ವರ್ಷಗಳ ಹಿಂದೆಯೇ ತೋರಿಸಿಕೊಟ್ಟರು. ಅವರು ಸ್ಥಾಪಿಸಿದ ಆರ್ಟ್‌ ಆಫ್‌ ಲಿವಿಂಗ್‌ ಸಂಸ್ಥೆಯ ಮೂಲಕ ವಿಶ್ವಾದ್ಯಂತ ಲಕ್ಷಾಂತರ ಜನರ ಜೀವನದಲ್ಲಿ ಧನಾತ್ಮಕ ಬದಲಾವಣೆಯಾಗಿದೆ. ಇದೆಲ್ಲಾ ಸಾಧ್ಯವಾಗಿದ್ದು ಧ್ಯಾನದಿಂದ. ಹಿಂಸಾಮುಕ್ತ ಮತ್ತು ಒತ್ತಡರಹಿತ ಜಗತ್ತನ್ನು ಕಟ್ಟುವ ಗುರುದೇವರ ಮಹದಾಸೆಯಿಂದ ಆರಂಭವಾದ ಈ ಪ್ರಯಾಣ ಇಂದು ಸ್ವ-ಕಲ್ಯಾಣ ಮತ್ತು ಸಾಮಾಜಿಕ ಪರಿವರ್ತನೆಗಾಗಿ ಕೆಲಸ ಮಾಡುವ ವಿಶ್ವದ ಅತಿ ದೊಡ್ಡ ಸ್ವಯಂಸೇವಕ ಚಳವಳಿಗಳಲ್ಲೊಂದಾಗಿ ಬೆಳೆದಿದೆ.

ಧ್ಯಾನ ಮುನ್ನೆಲೆಗೆ

ಇತ್ತೀಚಿನವರೆಗೂ ಪಾಶ್ಚಿಮಾತ್ಯರು ಧ್ಯಾನವು ಒಂದು ಪಂಥಕ್ಕೆ ಸೀಮಿತ ಎಂದು ಪರಿಗಣಿಸಿದ್ದರು. ಆದರೆ 80ರ ದಶಕದಲ್ಲಿ ಗುರುದೇವರು ಧ್ಯಾನವನ್ನು ಹೆಚ್ಚು ಹೆಚ್ಚು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಹೆಜ್ಜೆ ಹಾಕತೊಡಗಿದರು. ನಾಲ್ಕೂವರೆ ದಶಕಗಳ ನಂತರ ವಿಶ್ವಸಂಸ್ಥೆಯು ಡಿ.21 ಅನ್ನು ವಿಶ್ವ ಧ್ಯಾನ ದಿನವೆಂದು ಘೋಷಿಸಿತು. ಈ ಐತಿಹಾಸಿಕ ಸಂದರ್ಭದಲ್ಲಿ, ‘ಜಾಗತಿಕ ಶಾಂತಿ ಮತ್ತು ಸಾಮರಸ್ಯಕ್ಕಾಗಿ ಧ್ಯಾನ’ ಎಂಬ ವಿಷಯದ ಕುರಿತು ಭಾಷಣ ಮಾಡಲು ಗುರೂಜಿಯವರನ್ನು ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಗೆ ಆಹ್ವಾನಿಸಲಾಯಿತು. 2024ರಲ್ಲಿ ನಡೆದ ಮೊದಲ ವರ್ಷಾಚರಣೆಯು ‘ಜಾಗತಿಕ ಶಾಂತಿ ಮತ್ತು ಸಾಮರಸ್ಯಕ್ಕಾಗಿ ಧ್ಯಾನ’ ಎಂಬ ಥೀಮ್ ಹೊಂದಿತ್ತು. ಗುರುದೇವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮವು ಅತಿ ಹೆಚ್ಚು ವೀಕ್ಷಣೆ ಪಡೆದ ಧ್ಯಾನದ ನೇರಪ್ರಸಾರ ಕಾರ್ಯಕ್ರಮ ಎಂಬ ಗಿನ್ನೆಸ್ ವಿಶ್ವ ದಾಖಲೆಯನ್ನು ನಿರ್ಮಿಸಿತು.

ಆರ್ಟ್‌ ಆಫ್‌ ಲಿವಿಂಗ್‌ ಉಗಮ:

ಶಿವಮೊಗ್ಗದಲ್ಲಿ ಹರಿಯುವ ತುಂಗಭದ್ರಾ ನದಿ ದಡದಲ್ಲಿ 1981ರಲ್ಲಿ 10 ದಿನಗಳ ಮೌನವನ್ನಾಚರಿಸಿದ ಗುರುದೇವರು ಉಸಿರಾಟದ ವಿಶಿಷ್ಟ ವಿಧಾನವೊಂದನ್ನು ಕಂಡುಕೊಂಡರು. ಇದಕ್ಕವರು ‘ಸುದರ್ಶನ ಕ್ರಿಯೆ’ ಎಂದು ಹೆಸರಿಟ್ಟರು. ಅದಾದ ಒಂದೇ ವರ್ಷಕ್ಕೆ ಶಿವಮೊಗ್ಗದಲ್ಲಿ ಆರ್ಟ್‌ ಆಫ್‌ ಲಿವಿಂಗ್‌ನ ಮೊದಲ ತರಬೇತಿ ಏರ್ಪಡಿಸಿ, ಧ್ಯಾನವನ್ನು ಜಗತ್ತಿಗೆ ಕಲಿಸುವ ಕೆಲಸ ಶುರು ಮಾಡಿದರು. ಈ ಸಂಸ್ಥೆಯ ಆರಂಭಿಕ ದಿನಗಳಲ್ಲಿ ಚಿಂತಕರು ಮತ್ತು ಆಧ್ಯಾತ್ಮಿಕ ವ್ಯಕ್ತಿಗಳು ಒಟ್ಟಾದರು. ಆರ್ಟ್‌ ಆಫ್‌ ಲಿವಿಂಗ್‌ನ ಮೊದಲ ಟ್ರಸ್ಟಿ ಆಗಿದ್ದವರು ಮಾಜಿ ಸಿಜೆಐ ನ್ಯಾ। ಪಿ.ಎನ್‌. ಭಗವತಿ ಹಾಗೂ ನ್ಯಾ। ವಿ.ಆರ್‌. ಕೃಷ್ಣ ಅಯ್ಯರ್‌.

ವಿದೇಶಕ್ಕೆ ಧ್ಯಾನ

1980ರಲ್ಲಿ ಗುರುದೇವರು ವಿದೇಶಗಳಲ್ಲಿ ಧ್ಯಾನದ ಪ್ರಚಾರ ಆರಂಭಿಸಿದರಾದರೂ, ಅಲ್ಲಿನ ಜನರಲ್ಲಿ ಆ ಬಗ್ಗೆ ತಪ್ಪುಕಲ್ಪನೆಗಳಿದ್ದವು. ಅಂತಹ ಹೊತ್ತಿನಲ್ಲಿ ಗುರುದೇವರು ಜನರೊಂದಿಗೆ ವಾದಕ್ಕಿಳಿಯುವ ಬದಲು, ಧ್ಯಾನಕ್ಕಿರುವ ಪರಿವರ್ತನಾ ಶಕ್ತಿಯನ್ನು ಪ್ರದರ್ಶಿಸಿದರು. ಇದು ಮನಸ್ಸು ಮತ್ತು ಭಾವನೆಗಳ ಮೇಲೆ ಹಿಡಿತ ಸಾಧಿಸುವ ಕೌಶಲ್ಯ ಎಂದು ತಿಳಿಹೇಳಿದರು.

1983ರಲ್ಲಿ ಸ್ವಿಜರ್ಲೆಂಡ್‌ನಲ್ಲಿ, 1986ರಲ್ಲಿ ಉತ್ತರ ಅಮೆರಿಕದಲ್ಲಿ ಹಾಗೂ 1988ರಲ್ಲಿ ಬೆಂಗಳೂರಿನಲ್ಲಿ ಬೃಹತ್‌ ಧ್ಯಾನ ಕಾರ್ಯಕ್ರಮಗಳನ್ನು ನಡೆಸಲಾಯಿತು. ಇವುಗಳಲ್ಲಿ, 37 ದೇಶಗಳ ಜನ ಭಾಗವಹಿಸಿದರು. ರೈತರು, ಕಾರ್ಪೊರೇಟ್ ಮುಖಂಡರು, ಗೃಹಿಣಿಯರು, ಹದಿಹರೆಯದವರು, ಯೋಧರು ಸೇರಿದಂತೆ ಎಲ್ಲಾ ವೃತ್ತಿ ಮತ್ತು ವಯೋಮಾನದವರು ಧ್ಯಾನದತ್ತ ಒಲವು ತೋರಿದರು. 1990ರಲ್ಲಿ ಗುರುದೇವರನ್ನು ಯೇಲ್‌ನ ಶಾಲೆಯೊಂದರಲ್ಲಿ ಧ್ಯಾನವನ್ನು ‘ಭಾರತದ ಸಂಪತ್ತು’ ಎಂದು ಪರಿಚಯಿಸಿದ್ದು ವಿಶೇಷವಾಗಿತ್ತು.

ಧ್ಯಾನದಿಂದ ಶಾಂತಿ

ಗುರುದೇವರ ಧ್ಯಾನ ಹಾಗೂ ಶಾಂತಿ ಸ್ಥಾಪನೆಯ ಯತ್ನಗಳು ಮುಂದುವರಿದ ದೇಶಗಳಿಗಷ್ಟೇ ಸೀಮಿತವಾಗಿರದೆ, ಶ್ರೀಲಂಕಾ, ಇರಾಕ್‌, ವೆನಿಜುವೆಲಾ, ಕೊಲಂಬಿಯಾದಂತಹ ಯುದ್ಧಗ್ರಸ್ಥ ದೇಶಗಳಲ್ಲೂ ನಡೆದವು. ವರ್ಷಗಳಿಂದ ಮಾತು ಬಿಟ್ಟಿದ್ದವರ ನಡುವೆ ಅವರು ಮೈತ್ರಿ ಮೂಡಿಸಿದರು. ಈ ಮೂಲಕ ಧ್ಯಾನವು ಮನಸ್ಸನ್ನು ಶಾಂತಗೊಳಿಸುವುದರ ಜತೆಗೆ ಹೃದಯಗಳನ್ನು ಮೃದುಗೊಳಿಸುವ ಶಕ್ತಿಯನ್ನೂ ಹೊಂದಿದೆ ಎಂಬುದನ್ನು ಸಾಬೀತುಪಡಿಸಿದರು. ಕೊರೋನಾ ವಿಶ್ವವನ್ನೇ ಆಕ್ರಮಿಸಿದ್ದ ಸಮಯದಲ್ಲಿ ಅನಿಶ್ಚಿತತೆ ತಾಂಡವವಾಡುತ್ತಿತ್ತು. ಆಗ ಗುರುದೇವರು 2 ತಿಂಗಳ ಕಾಲ ದಿನಕ್ಕೆ 2 ಬಾರಿ ಧ್ಯಾನ ಕಾರ್ಯಕ್ರಮ ಆಯೋಜಿಸುತ್ತಿದ್ದರು. ಇದರಲ್ಲಿ ವಿಶ್ವದ ಬೇರೆ ಬೇರೆ ಕಡೆಯಿಂದ ಹಲವರು ಭಾಗಿಯಾಗುತ್ತಿದ್ದರು.

ಕೊಲಂಬಿಯಾದಲ್ಲಿ ಗುರುದೇವರು ಅದ್ಭುತವನ್ನೇ ಮಾಡಿ ತೋರಿಸಿದರು. 2015ರಲ್ಲಿ ಹವಾನಾದಲ್ಲಿ ನಡೆದ ಶಾಂತಿ ಮಾತುಕತೆಯ ಸಮಯದಲ್ಲಿ, ಗುರುದೇವರು ಕೊಲಂಬಿಯಾದ ಕ್ರಾಂತಿಕಾರಿ ಸಶಸ್ತ್ರ ಪಡೆಯ (ಎಫ್‌ಎಆರ್‌ಸಿ) ನಾಯಕರಿಗೆ ಅಹಿಂಸೆ ಮತ್ತು ಶಾಂತಿಯನ್ನು ಆರಿಸಿಕೊಳ್ಳಲು ಸಲಹೆ ನೀಡಿದರು. ಇದು ಮಾತುಕತೆಯ ದಿಕ್ಕನ್ನು ಬದಲಾಯಿಸಲು ಸಹಾಯ ಮಾಡಿತು. ಪರಿಣಾಮ, 2016ರಲ್ಲಿ ಏರ್ಪಟ್ಟ ಶಾಂತಿ ಒಪ್ಪಂದವು 52 ವರ್ಷದ ಸಂಘರ್ಷಕ್ಕೆ ಅಂತ್ಯ ಹಾಡಿತು.

615 ಕಂಪನಿಗಳ ಮೇಲೆ ಪ್ರಭಾವ

ಗುರುದೇವರ ಶಾಂತಿ ಪಾಠಗಳು ವ್ಯಕ್ತಿಗಳಿಗಷ್ಟೇ ಸೀಮಿತವಾಗಿರದೆ, ಹಲವು ಸಂಸ್ಥೆಗಳಲ್ಲೂ ಪರಿವರ್ತನೆಗೆ ಕಾರಣವಾಗಿವೆ. ಟಾಟಾ ಗ್ರೂಪ್, ರಿಲಯನ್ಸ್ ಇಂಡಸ್ಟ್ರೀಸ್, ಗೂಗಲ್ ಮತ್ತು ಐಬಿಎಂ ಸೇರಿದಂತೆ 615ಕ್ಕೂ ಹೆಚ್ಚು ಕಂಪನಿಗಳು ಕೆಲಸದ ಸ್ಥಳಗಳಲ್ಲಿ ಮಾನಸಿಕ ಆರೋಗ್ಯ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ಧ್ಯಾನದ ತಂತ್ರಗಳನ್ನು ಉಪಯೋಗಿಸುತ್ತಿವೆ. 60 ದೇಶಗಳ 800,000 ಕೈದಿಗಳ ಜೀವನವನ್ನು ಬದಲಿಸುವ ಕೆಲಸವನ್ನೂ ಗುರುದೇವರು ಮಾಡಿದ್ದಾರೆ. ಸೇವೆಯಲ್ಲಿದ್ದಾಗ ಕಂಡ ಯುದ್ಧಗಳ ಆಘಾತದಲ್ಲಿರುವ ಅದೆಷ್ಟೋ ಯೋಧರು ಅದರಿಂದ ಹೊರಬಂದಿದ್ದಾರೆ. ಅವರಲ್ಲೆಲ್ಲಾ ಶೇ.94ರಷ್ಟು ಒತ್ತಡ ಇಳಿಕೆ ಕಂಡುಬಂದಿತ್ತು.

ಗ್ರಾಮೀಣ ಭಾರತದಲ್ಲಿ ಧ್ಯಾನವು ಶ್ರೀ ಶ್ರೀ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮದ ಭಾಗವಾಯಿತು. ಈ ಮೂಲಕ ರೈತರು ಹತಾಶೆಯಿಂದ ಹೊರಬಂದು ಹೊಸ ಭರವಸೆಯೊಂದಿಗೆ ಕೆಲಸ ಮಾಡಲು ಸಹಾಯ ಮಾಡಿತು. ನದಿ ಪುನರುಜ್ಜೀವನ ಮತ್ತು ನೈಸರ್ಗಿಕ ಕೃಷಿ ಉಪಕ್ರಮಗಳು 30 ಲಕ್ಷಕ್ಕೂ ಹೆಚ್ಚು ರೈತರ ಮೇಲೆ ಭಾವನಾತ್ಮಕ ಮತ್ತು ಆರ್ಥಿಕ ಪರಿಣಾಮ ಬೀರಿವೆ.

ಸಂಸ್ಕೃತಿಗಳ ಸಮ್ಮಿಲನ

ಬೆಂಗಳೂರು, ದೆಹಲಿ, ವಾಷಿಂಗ್ಟನ್ ಮತ್ತು ಇತರ ನಗರಗಳಲ್ಲಿ ನಡೆದ ವಿಶ್ವ ಸಂಸ್ಕೃತಿ ಉತ್ಸವಗಳು 180ಕ್ಕೂ ಹೆಚ್ಚು ದೇಶಗಳಿಂದ ಲಕ್ಷಾಂತರ ಜನರನ್ನು ಒಟ್ಟುಗೂಡಿಸಿವೆ. 2012ರಲ್ಲಿ ಅರ್ಜೆಂಟೀನಾದ ಬ್ಯೂನಸ್ ಐರಿಸ್‌ನಲ್ಲಿ 150,000 ಜನ ಗುರುದೇವರ ಜತೆಗೂಡಿ ಧ್ಯಾನ ಮಾಡಿದರು. 2013ರಲ್ಲಿ ಪ್ರಾರಂಭಿಸಲಾದ ‘ಐ ಮೆಡಿಟೇಟ್ ಆಫ್ರಿಕಾ’ ಅಭಿಯಾನವು ಖಂಡದಾದ್ಯಂತ ಲಕ್ಷಾಂತರ ಜನರನ್ನು ತಲುಪಿದೆ.

ದಕ್ಷಿಣ ಭಾರತದಿಂದ ವಿಶ್ವವ್ಯಾಪಿ

ದಕ್ಷಿಣ ಭಾರತದಲ್ಲಿ ಧ್ಯಾನ ಮಾಡುತ್ತಿದ್ದ ಶಾಂತ ಹುಡುಗ ಇಂದು ವಿಶ್ವಾದ್ಯಂತ ಗುರುದೇವರೆಂದೇ ಖ್ಯಾತರಾಗಿದ್ದಾರೆ. ಅವರ ಇಂದಿನವರೆಗಿನ ಪ್ರಯಾಣವು ವಿಶ್ವ ವೇದಿಕೆಯಲ್ಲಿ ಭರವಸೆ ಮತ್ತು ಮಾನವ ಸಂಪರ್ಕಕ್ಕೆ ಹಿಡಿದ ಕನ್ನಡಿಯಾಗಿದೆ. ‘ಧ್ಯಾನವು ಜಗತ್ತು ಕಂಡ ಅತ್ಯಂತ ಶಕ್ತಿಶಾಲಿ ಚಳವಳಿ’ ಎಂಬುದು ಗುರುದೇವರ ಅಂಬೋಣ. ಅವರು ಸ್ಥಾಪಿಸಿದ ಆರ್ಟ್‌ ಆಫ್‌ ಲಿವಿಂಗ್‌ಗೆ 45 ವರ್ಷವಾಗಿದೆ. ಹಳ್ಳಿಗಳಿಂದ ಜಾಗತಿಕ ಸಂಸ್ಥೆಗಳವರೆಗೆ, ಸಂಘರ್ಷಪೀಡಿತ ದೇಶಗಳಿಂದ ಕಾರ್ಪೊರೆಟ್‌ ಕೊಠಡಿಗಳವರೆಗೆ ಈ ಚಳವಳಿ ಆವರಿಸಿದೆ. ‘ಶಾಂತ ಮನಸ್ಸು ಉತ್ತಮ ಜಗತ್ತನ್ನು ನಿರ್ಮಿಸಬಹುದು’ ಎಂಬ ಸಂದೇಶವನ್ನು ಸಾರುತ್ತಾ ಬಂದಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಟ್ರೆಡಿಷನಲ್ ಜೊತೆ ಗ್ಲಾಮರ್: ಈ 7 ಟ್ರೆಂಡಿಂಗ್ ಪಿಂಕ್ ಸೀರೆ ಡಿಸೈನ್‌ಗಳು ವೈರಲ್!
ಯಾವುದೇ ವಿಶೇಷ ಬ್ರಷ್, ದುಬಾರಿ ಕ್ಲೀನರ್ ಇಲ್ಲದೆಯೇ ವಾಟರ್ ಬಾಟಲಿ ಸ್ವಚ್ಛಗೊಳಿಸುವುದು ಹೇಗೆ?