ಪುಟ್ಟ ಹುಡುಗನಿಗೆ ಬುದ್ಧನ ಪಾಠ

By Kannadaprabha NewsFirst Published Jul 30, 2018, 3:32 PM IST
Highlights

ಒಮ್ಮೆ ಬುದ್ಧ ಒಬ್ಬ ಪುಟ್ಟ ಹುಡುಗನ ಕನಸಲ್ಲಿ ಬಂದು ಆತನನ್ನು ಸ್ವರ್ಗ ತೋರಿಸಲು ಕರೆದೊಯ್ದ ಬುದ್ಧ

ಸ್ವರ್ಗದಲ್ಲಿ ಒಂದು ದೊಡ್ಡ ಸಭಾಂಗಣವಿತ್ತು. ಅಲ್ಲಿ ನಾನಾ ಬಗೆಯ ಭಕ್ಷ್ಯ ಭೋಜನಗಳನ್ನು ಇಡಲಾಗಿತ್ತು. ಬುದ್ಧ ಆ ಹುಡುಗನೊಂದಿಗೆ ಆ ಕೋಣೆಗೆ ಹೋದ. ಸ್ವಲ್ಪ ಹೊತ್ತಿನಲ್ಲೇ ಜೋರಾದ ಗದ್ದಲದೊಂದಿಗೆ ಒಂದಿಷ್ಟು ಜನ ಬಂದರು. ಅಶಿಸ್ತಿನಿಂದ ಕೂತರು. ಅವರಿಗೆ ಬಹಳ ಉದ್ದದ ಚಮಚವನ್ನು ನೀಡಲಾಗಿತ್ತು. ಅದರಿಂದಲೇ ತಿನ್ನಬೇಕಿತ್ತು. ಅವರು ಅದರಿಂದಲೇ ತಿನ್ನಲು ಪ್ರಯತ್ನಿಸಿದರು. ಆದರೆ ಆ ಉದ್ದದ ಚಮಚದಲ್ಲಿ ಒಂದು ತುತ್ತನ್ನೂ ತಿನ್ನಲಾಗಲಿಲ್ಲ. ಗದ್ದಲ ಹೆಚ್ಚಾಯ್ತು. ಒಬ್ಬರಿಗೊಬ್ಬರು ಕಿರುಚಾಡುತ್ತಾ ಮೈಮೇಲೆ ಬಿದ್ದು ಹೊಡೆದಾಡತೊಡಗಿದರು. ಬುದ್ಧ ಹುಡುಗನಿಗೆ ಇದು ನರಕ ಎಂದು ಪರಿಚಯಿಸಿದ. ಇನ್ನೊಂದು ಸಭಾಂಗಣಕ್ಕೆ ಕರೆದೊಯ್ದ. ಅಲ್ಲಿಯೂ ಇಲ್ಲಿನಂತೆ ಭಕ್ಷ್ಯಗಳಿದ್ದವು. ಇವರಂತೆ ಬಹಳ ಉದ್ದದ ಚಮಚ ನೀಡಲಾಗಿತ್ತು. ಅವರು ಮುಗುಳ್ನಗುತ್ತ ಪರಸ್ಪರ ಅಕ್ಕರೆಯಿಂದ ಮಾತನಾಡುತ್ತ ಬಂದು ಕುಳಿತರು. ಉದ್ದದ ಸ್ಪೂನ್ ಅನ್ನು ಕಂಡು ಸ್ವಲ್ಪವೂ ವಿಚಲಿತರಾಗದೇ ತಮ್ಮ ಎದುರಿಗಿದ್ದ ಪರಸ್ಪರರಿಗೆ ತಿನ್ನಿಸತೊಡಗಿದರು. ಬಹಳ ಆನಂದದಿಂದ ಭೋಜನ ಸವಿದರು. ಹುಡುಗನತ್ತ ನೋಡಿ ಮುಗುಳ್ನಕ್ಕ ಬುದ್ಧ ಕೇಳಿದ, ‘ಇದುವೇ ಸ್ವರ್ಗ ತಿಳಿಯಿತಲ್ಲಾ. ಮಗೂ, ಸ್ವರ್ಗ ನರಕಗಳು ನಮ್ಮಿಂದಲೇ ಸೃಷ್ಟಿಯಾಗುತ್ತವೆ. ಅದನ್ನು ತಿಳಿದುಕೊಂಡು ಬದುಕು’. 

click me!