ಮಳೆಯಲಿ ಜೊತೆಯಲಿ ಒಂದು ಕ್ರಶ್‌ನ ಕಥೆ!

By Web DeskFirst Published Oct 24, 2018, 4:32 PM IST
Highlights

ಯಾರು ನಿಮ್ಮ ಕ್ರಶ್ ಎಂದು ಯಾರಾದರೂ ಕೇಳಿದರೆ ತಕ್ಷಣ ತುಟಿಯ ಮೇಲೊಂದು ಮುಗುಳುನಗೆ ಮೂಡುತ್ತದೆ.  ಕ್ರಶ್ ಎಂದರೆ ಪ್ರೇಮವಲ್ಲ. ಕ್ರಶ್ ಎಂದರೆ ಬಂಧನವಲ್ಲ. ಕ್ರಶ್ ಎಂದರೆ ಕಿರಿಕಿರಿಯಲ್ಲ.
ಪ್ರತಿಯೊಬ್ಬರ ಜೀವನದಲ್ಲೂ ಯಾರಿಗೋ ಯಾರ ಮೇಲೋ ಕ್ರಶ್ ಆಗಿಯೇ ಇರುತ್ತದೆ. ಅದೊಂದು ಮಧುರ ನೆನಪಾಗಿ ಕೊನೆಯವರೆಗೂ ಉಳಿದುಹೋಗುತ್ತದೆ. 

ಆಕಾಶದಿಂದ ಅಕ್ಷತೆಗಳೆಂಬಂತಹ ನೀರಿನ ಹನಿಗಳು ಸುರಿಯುತ್ತಿದ್ದವು. ತಣ್ಣನೆಯ ವಾತಾವರಣ. ಸುತ್ತಲಿನ ಭೂಮಿ ಮಾತೆಗೆ ಹಸಿರು ಬಣ್ಣದ ಸೀರೆ ಉದಿಸಿದಂತಿತ್ತು. ಸಾವಿರಾರು ಅಡಿಕೆ ಮರ ಮತ್ತು ಕಾಫಿ ಸಸಿ. ಮಳೆಗಾಲದ ಸಮಯದಲ್ಲಿ ಮಲೆನಾಡಿನ ಸೊಬಗನ್ನು ವರ್ಣಿಸಲು ಪದಗಳೇ ಸಾಲದು.

ನನ್ನ ಸ್ನೇಹಿತೆ ಮೋನಿಷಾಳ ಚಿಕ್ಕಮಂಗಳೂರಿನಲ್ಲಿ ಇರುವ ಅಕ್ಕನ ಮನೆಗೆ ತೆರಳಿದ್ದ ನಾನು, ಬಸ್ಸಿನಲ್ಲಿ ವಾಪಸ್ಸು ಬೆಂಗಳೂರಿಗೆ ತೆರಳುತ್ತಿದ್ದೆ. ಕಿಟಕಿಯಿಂದ ಹೊರನೋಡಿ ಪರಿಸರದ ಸೌಂದರ್ಯವನ್ನು ಸವಿಯುತ್ತಿರುವ ವೇಳೆಯಲ್ಲಿ ನನ್ನ ಕಣ್ಣನ್ನು ಸೆಳೆದದ್ದು, ರಸ್ತೆಯ ಬದಿಯಲ್ಲಿ ನಡೆಯುತ್ತಿದ್ದ ಘಟನೆ. ಇಬ್ಬರು ಕಾಲೇಜಿನ ಹೆಣ್ಣು ಮಕ್ಕಳು ಕೊಡೆ ಹಿಡಿದು ನಡೆದುಕೊಂಡು ಹೋಗುತ್ತಿದ್ದರೆ, ಇಬ್ಬರು ಹುಡುಗರು ಮಳೆಯನ್ನೂ ಲೆಕ್ಕಿಸದೆ ನಡುಗೆಯಲ್ಲಿ ಹೋಗುವವರು ಅವರನ್ನು ಮೀರಿಸಬಹುದಾದಂತಹ ವೇಗದಲ್ಲಿ ಬೈಕ್ ಚಲಾಯಿಸುತ್ತಾ, ಆ ಹುಡುಗಿಯರ ಹಿಂದೆಯೇ ಸಾಗುತ್ತಿದ್ದರು.

ಆ ಹುಡುಗಿಯರನ್ನು ಮಾತನಾಡಿಸಲೇಬೇಕೆಂದು, ಅದಕ್ಕೆ ತಕ್ಕ ಸಮಯಕ್ಕೆ ಕಾಯುತ್ತಾ ಕಾತುರರಾಗಿದ್ದ ಹುಡುಗರು ಒಂದೆಡೆಯಾದರೆ ಮಾತನಾಡಲು ಇಷ್ಟವಿದ್ದರೂ, ಯಾರಾದರೂ ನೋಡಿ ಮನೆಯಲ್ಲಿ ಅಪ್ಪನಿಗೆ ಹೇಳಿಬಿಟ್ಟರೆ ಎಂಬ ಭಯಕ್ಕೆ ಸುಮ್ಮನಾಗಿ, ವಾರೆ ಕಣ್ಣಿನಲ್ಲಿ ಹುಡುಗರು ಹಿಂಬಾಲಿಸುವುದನ್ನು ಕಂಡು ನಕ್ಕು ನಾಚಿ ನೀರಾಗಿ ವೈಯಾರದಿಂದ ನಡೆಯುತ್ತಿದ್ದ ಹುಡುಗಿಯರು.

ಈ ಘಟನೆ ಗಮನಿಸುತ್ತಿದ್ದ ಹಾಗೆಯೇ ನನ್ನ ತಲೆಗೆ ಬಂದ ಪದ ‘ಕ್ರಶ್’. ಈ ಪದ ಕೇಳಿದ ತಕ್ಷಣ ಪ್ರತಿಯೊಬ್ಬರಿಗೂ ಅವರ ಕ್ರಶ್ ಬಗ್ಗೆ ನೆನಪಾಗಿ, ಮುಖದಲ್ಲಿ ಮಂದಹಾಸ ಬೀರುವುದು ಸಹಜ. ಪಕ್ಕದ ರೋಡಿನ ಹುಡುಗ ಕ್ರಶ್, ಸಿನಿಮಾ ನಟ/ನಟಿಯರ ಕ್ರಶ್, ಶುಕ್ರವಾರ ಅರಳಿಕಟ್ಟೆ ಸುತ್ತುವ ಹುಡುಗಿ ಕ್ರಶ್, ಲೆಕ್ಚರರ್ ಕ್ರಶ್, ವೇಗವಾಗಿ ಬೈಕ್ ಚಲಾಯಿಸುವ ಹುಡುಗ ಕ್ರಶ್, ಹಾಡುಗಾರ/ ಮಾತುಗಾತಿ ಕ್ರಶ್.

ಹೀಗೆ ಲೆಕ್ಕವಿಲ್ಲದ ಬಾರಿ, ಜೀವನದಲ್ಲಿ ಎದುರಾಗುವ ಮೇಲೆಲ್ಲಾ ಕ್ರಶ್. ಒಂದು ವ್ಯಕ್ತಿಯ ಮೇಲೆ ಕ್ರಶ್ ಆಗುವುದು ಸರ್ವೇಸಾಮಾನ್ಯ. ಕ್ರಶ್ ಎಂಬುದಕ್ಕೆ ಯಾವ ವಯೋಮಿತಿಯ ಎಲ್ಲೆಯೂ ಇಲ್ಲಾ, ಯಾವ ಅಡೆತಡೆಗಳೂ ಇಲ್ಲಾ. ಒಂದು ಸಿಹಿ ಪದಾರ್ಥ ತಿಂದಾಗ 5 ನಿಮಿಷಗಳ ಮಟ್ಟಿಗಾದರೂ ಹೀಗೆ ಅದರ ಸ್ವಾದ ಸವಿಯುತ್ತೇವೋ, ಹೇಗೆ ಅದರ ರುಚಿ ಬಾಯಿಯಲ್ಲೇ ಇರುತ್ತದೆಯೋ ಹಾಗೆಯೇ ಒಂದು
ಹುಡುಗ/ಹುಡುಗಿ ನೋಡಿದಾಗ ಅವರ ಯಾವುದೋ ಒಂದು ಗುಣಕ್ಕೆ ಆಕರ್ಷಿತರಾಗಿ ಅವರ ಬಗ್ಗೆ ನೆನೆಯುವುದೇ ‘ಕ್ರಶ್’.

click me!