ಬಿಡಿ ಅರಿಶಿನ ಬಳಕೆಯಿಂದ ಕ್ಯಾನ್ಸರ್ ಕಾಯಿಲೆ ಬರುತ್ತೆ ! ರಾಯಚೂರು ಕೃಷಿ ವಿಶ್ವವಿದ್ಯಾಲಯ ಸಂಶೋಧನಾ ಕೇಂದ್ರದಿಂದ ಪತ್ತೆ | ಬಟ್ಟೆಗೆ ಬಳಸುವ ರಾಸಾಯನಿಕ ಬಿಡಿ ಅರಶಿನಕ್ಕೆ ಬಳಕೆ
ರಾಯಚೂರು (ಅ. 24): ಅರಿಶಿನ ಸೇವಿಸಿದ್ದಲ್ಲಿ ಕ್ಯಾನ್ಸರ್ ಕಾಯಿಲೆ ಬಾರದಂತೆ ತಡೆಯಬಹುದು ಎನ್ನುವ ಸಂಗತಿ ಎಲ್ಲರಿಗೂ ಗೊತ್ತಿದೆ. ಆದರೆ, ಅದೇ ಅರಿಶಿನ ಪುಡಿಯಲ್ಲಿ ಕ್ಯಾನ್ಸರ್ ಕಾಯಿಲೆಗೆ ಬರುವ ರಾಸಾಯನಿಕ ಪದಾರ್ಥಗಳನ್ನು ಸೇರಿಸಿ ಮಾರಾಟ ಮಾಡಲಾಗುತ್ತಿರುವ ಅಘಾತಕಾರಿ ವಿಷಯ ಸಂಶೋಧನೆಯಿಂದ ಬಹಿರಂಗವಾಗಿದೆ.
ಮಾರುಕಟ್ಟೆಯಲ್ಲಿ ಬಿಡಿಯಾಗಿ ಸಿಗುವ ಅರಿಶಿಣವು ಕಲಬೆರಿಕೆಯಿಂದ ಕೂಡಿದೆ, ಅದರಲ್ಲಿ ಬಳಕೆ ಮಾಡುತ್ತಿರುವ ರಾಸಾಯನಿಕ ಅಂಶದಿಂದ ಕ್ಯಾನ್ಸರ್ ಕಾಯಿಲೆ ಹರಡುತ್ತದೆ ಎನ್ನುವ ಸಂಗತಿಯನ್ನು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗವು ಪತ್ತೆ ಹಚ್ಚಿದೆ. ಅರಶಿನದ ಬಣ್ಣವನ್ನು ಮತ್ತಷ್ಟುಹೆಚ್ಚಿಸುವ ಉದ್ದೇಶದಿಂದ ನಿಷೇಧಿತ ರಾಸಾಯನಿಕವನ್ನು ಬಳಸಲಾಗುತ್ತಿದೆ. ಇದು ಕ್ಯಾನ್ಸರ್‌ಗೆ ಕಾರಣವಾಗುತ್ತಿದೆ ಎಂದು ಸಂಶೋಧನೆಯಲ್ಲಿ ಗೊತ್ತಾಗಿದೆ.
ಮಾರುಕಟ್ಟೆಯಲ್ಲಿ ಬಿಡಿಯಾಗಿ ಸಿಗುವ ಅರಿಶಿನದ ವಿವಿಧ ಮಾದರಿಗಳನ್ನು ಕೃಷಿ ವಿವಿ ಆವರಣದಲ್ಲಿರುವ ಪೀಡೆನಾಶಕಗಳ ಅವಶೇಷ ಮತ್ತು ಆಹಾರ ಗುಣಮಟ್ಟದ ವಿಶ್ಲೇಷಣಾ ಪ್ರಯೋಗಾಲಯದಲ್ಲಿ ಸಂಶೋಧನೆ ಮಾಡಲಾಯಿತು. ದೀರ್ಘವಾಗಿ ಸೇವಿಸಿದ್ದಲ್ಲಿ ಕ್ಯಾನ್ಸರ್ ಕಾಯಿಲೆ ಬರುವ ಅಂಶಗಳನ್ನು ಪತ್ತೆ ಮಾಡಿ ವರದಿ ಪ್ರಕಟಿಸಿದೆ.
ಮೆಟನಿಲ್ ಯೆಲ್ಲೋ:
ಸಂಶೋಧನಾ ಕೇಂದ್ರದ ಅಧಿಕಾರಿ, ಸಿಬ್ಬಂದಿ ವರ್ಗದವರು ಮಾರುಕಟ್ಟೆಯಲ್ಲಿರುವ ವಿವಿಧ ಕಂಪನಿಗಳ ಅರಿಶಿನ ಪುಡಿ ಮತ್ತು ಬಿಡಿ ಅರಿಶಿನ ಪುಡಿಗಳನ್ನು ಪ್ರತ್ಯೇಕವಾಗಿ ಪರೀಕ್ಷೆಗೆ ಒಳಪಡಿಸಿದ್ದು, ಕೊನೆಯದಾಗಿ ಬಿಡಿಯಾಗಿ ಮಾರುವ ಅರಿಶಿನ ಪುಡಿಯಲ್ಲಿ ‘ಮೆಟನಿಲ್ ಯೆಲ್ಲೋ’ ಕೆಮಿಕಲ್ ಕಲಬೆರಕೆ ಆಗಿರುವುದನ್ನು ವಿಜ್ಞಾನಿಗಳು ಪತ್ತೆ ಹೆಚ್ಚಿದ್ದಾರೆ. ಮೂರು ತಿಂಗಳ ಕಾಲ ನಡೆಸಿದ ಪರೀಕ್ಷೆಯಲ್ಲಿ ಇದು ಬೆಳಕಿಗೆ ಬಂದಿದ್ದು, ಈ ಕೆಮಿಕಲ್ ಮಿಶ್ರಿತ ಅರಿಶಿನವನ್ನು ನಿರಂತರವಾಗಿ ಸೇವಿಸಿದ್ದಲ್ಲಿ ಕ್ಯಾನ್ಸರ್ ರೋಗ ಬರಲಿದೆ ಎನ್ನುವ ವಿಷಯವನ್ನು ಕಂಡುಹಿಡಿಯಲಾಗಿದೆ.
ಮೆಟಿನಿಲ್ ಯೆಲ್ಲೋ ರಾಸಾಯನಿಕವನ್ನು ಬಟ್ಟೆಗಳಿಗೆ ಬಣ್ಣ ಬರಲು ಬಳಸಲಾಗುತ್ತದೆ. ಇದನ್ನು ಆಹಾರ ಪದಾರ್ಥಗಳಿಗೆ ಬಳಕೆ ಮಾಡುವುದನ್ನು ಭಾರತ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಂದ್ ಮಾಡಲಾಗಿದೆ. ಆದರೆ ಅರಿಶಿಣ ಪುಡಿಯನ್ನು ಇನ್ನಷ್ಟುಹಳದಿಗೊಳಿಸುವುದಕ್ಕಾಗಿ ಮೆಟಿನಿಲ್ ರಾಸಾಯನಿಕ ಬಳಸಿ ಗ್ರಾಹಕರನ್ನು ಆಕರ್ಷಿಸಲಾಗುತ್ತಿದೆ. ಕಡಿಮೆ ವೆಚ್ಚದಲ್ಲಿ ಮೆಟಿನಿಲ್ ಯೆಲ್ಲೋ ಸಿಗುತ್ತಿರುವುದರಿಂದ ಬಿಡಿ ಮಾರಾಟಗಾರರು ಇದನ್ನು ಅರಿಶಿಣದಲ್ಲಿ ಬಳಕೆ ಮಾಡುತ್ತಿದ್ದಾರೆ.
ಸಂಶೋಧನೆಗಾಗಿ 18ಕ್ಕೂ ಹೆಚ್ಚಿನ ದೇಶ-ವಿದೇಶದ ಅಧಿಕೃತ ಕಂಪನಿಗಳ ಅರಿಶಿನವನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಅವುಗಳಲ್ಲಿ ಇಂಥ ಯಾವುದೇ ಹಾನಿಕಾರ ಅಂಶ ಕಂಡು ಬಂದಿಲ್ಲ. ಆದರೆ ಬಿಡಿ ಅರಿಶಿಣದಲ್ಲಿ ಮಾತ್ರ ಈ ಕೆಮಿಕಲ್ ಪತ್ತೆಯಾಗಿದೆ ಎಂದು ಸಂಶೋಧನಾ ಕೇಂದ್ರದ ಪ್ರಾಧ್ಯಾಪಕರು ವಿವರಿಸುತ್ತಾರೆ.
ತಮಿಳುನಾಡಿದ ತಾಂಜಾವೂರಿನ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಫುಡ್ ಪ್ರೊಸೆಸಿಂಗ್ ತಂತ್ರಜ್ಞಾನ ಸಂಸ್ಥೆಯಲ್ಲಿ ಫುಡ್ ಸೇಫ್ಟಿಆ್ಯಂಡ್ ಸ್ಟಾಂಡರ್ಡ್ಸ್ ಆಥರಿಟಿ ಆಫ್ ಇಂಡಿಯಾದಿಂದ (ಎಫ್‌ಎಸ್‌ಎಸ್‌ಎಐ) ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಟ್ಟದ ಕಾರ್ಯಾಗಾರದಲ್ಲಿ ಕೃಷಿ ವಿವಿಯ ಪೀಡೆನಾಶಕಗಳ ಅವಶೇಷ ಮತ್ತು ಆಹಾರ ಗುಣಮಟ್ಟದ ವಿಶ್ಲೇಷಣಾ ಪ್ರಯೋಗಾಲಯದಲ್ಲಿ ಸತತ ಮೂರು ತಿಂಗಳ ಕಾಲ ನಡೆಸಿದ ಅಧ್ಯಯನದ ವರದಿಯನ್ನು ಮಂಡಿಸಲಾಗಿದೆ.
ಈ ಸಂಗತಿಯನ್ನು ಆಹಾರ ಇಲಾಖೆ ಹಾಗೂ ಸಂಬಂಧಿಸಿದ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು. ಮಾರುಕಟ್ಟೆಯಲ್ಲಿ ಸಿಗುತ್ತಿರುವ ಕಲಬೆರಿಕೆಯ ಬಿಡಿ ಅರಿಶಿನ ಪುಡಿಯ ಮಾರಾಟಕ್ಕೆ ಕಡಿವಾಣ ಹಾಕುವುದರ ಜೊತೆಗೆ ಕಠಿಣ ಕ್ರಮ ಜರುಗಿಸಬೇಕು ಎನ್ನುವ ಸಲಹೆಯನ್ನು ವಿಜ್ಞಾನಿಗಳು ನೀಡಿದ್ದಾರೆ.
- ರಾಮಕೃಷ್ಣ ದಾಸರಿ