ಮೊದಲ ಕ್ರಶ್’ನ ಮಜವೇ ಬೇರೆ!

By Web DeskFirst Published Oct 24, 2018, 4:21 PM IST
Highlights

ಕ್ರಶ್ ಎಂದರೆ ಪ್ರೇಮವಲ್ಲ. ಕ್ರಶ್ ಎಂದರೆ ಬಂಧನವಲ್ಲ. ಕ್ರಶ್ ಎಂದರೆ ಕಿರಿಕಿರಿಯಲ್ಲ. ಪ್ರತಿಯೊಬ್ಬರ ಜೀವನದಲ್ಲೂ ಯಾರಿಗೋ ಯಾರ ಮೇಲೋ ಕ್ರಶ್ ಆಗಿಯೇ ಇರುತ್ತದೆ. ಅದೊಂದು ಮಧುರ ನೆನಪಾಗಿ ಕೊನೆಯವರೆಗೂ ಉಳಿದುಹೋಗುತ್ತದೆ. 

ಆತ ನನ್ನೆದುರಿಗೆ ಬರುತ್ತಿದ್ದ. ಅವನ ಕಣ್ಣುಗಳು ನನ್ನನ್ನೇ ನೋಡುತ್ತಿತ್ತು. ಅವನತ್ತದೃಷ್ಟಿ ಹಾಯಿಸುವಾಗ ನನ್ನ ಎದೆ ಜೋರಾಗಿ ಬಡಿದುಕೊಳ್ಳಲಾರಂಭಿಸಿತು. ನನ್ನ ಸಮೀಪ ಬರುತ್ತಿದ್ದಂತೆ ಹಾಯ್‌ಎಂದ. ತತ್‌ಕ್ಷಣ ಏನು ಪ್ರತಿಕ್ರಿಯಿಸಬೇಕೆಂದು ಗೊತ್ತಾಗಲಿಲ್ಲ.

ನಡುಗಿಕೊಂಡು ಮೆಲುದನಿಯಲ್ಲಿ ಹಾಯ್ ಎಂದೆ. ಅವನು ಕೈಯನ್ನು ಮುಂದಕ್ಕೆ ಚಾಚಿ ‘ಕಂಗ್ರಾಟ್ಸ್’ ಎಂದ. ಅವನ ಕೈ ಕುಲುಕಿದಾಗ ಹೊಟ್ಟೆಯೊಳಗೆ ಚಿಟ್ಟೆ ಬಿಟ್ಟಂತೆ ಅನುಭವವಾಯಿತು. ಆ ಮೊದಲ ನಯವಾದ ಸ್ಪರ್ಶಕ್ಕೆ ನಾನು ನಾಚಿ ನೀರಾದೆ. ಥಾಂಕ್ಯೂ ಎಂದು ಕಿರುನಗೆ ಬೀರಿ ಆ ಸ್ಪರ್ಶವನ್ನು ನೆನೆಸಿಕೊಂಡು ಯೋಚನಾಲಹರಿಯಲ್ಲಿ ಮುಂದೆ ಸಾಗುತ್ತಿದ್ದೆ.

ಅಷ್ಟರಲ್ಲಿ ಕಾರಿಡಾರಿನಲ್ಲಿ ನಮ್ಮ ಕ್ಲಾಸ್ ಟೀಚರ್ ಬರುತ್ತಿದ್ದರು. ನಾನು ಮುಗುಳ್ನಗೆ ಬೀರಿಕೊಂಡು ನನ್ನದೇ ಲೋಕದಲ್ಲಿದ್ದೆ. ನನ್ನನ್ನು ಗಮನಿಸಿದ ಅವರು ‘ಯಾಕಮ್ಮಾ ಒಬ್ಬಳೇ ನಗುತ್ತಿದ್ದೀಯಾ, ಏನಾಯಿತು’ ಎಂದು ಕೇಳಿದರು. ನನ್ನ ಕೈಗಳು ನಡುಗಲಾರಂಭಿಸಿದವು. ಏನು ಹೇಳಬೇಕೆಂದು ತೋಚದೆ ಸ್ತಬ್ದಳಾಗಿ ನಿಂತುಕೊಂಡೆ. ‘ಆರ್ ಯು ಆಲ್‌ರೈಟ್, ಎನೀಥಿಂಗ್ ರಾಂಗ್’ ಎಂದು ಜೋರಾಗಿ ಕೇಳಿದರು. ‘ಐಯಾಮ್
ಫೈನ್ ಸರ್’ ಎಂದು ಕೂಡಲೇ ಕ್ಲಾಸ್‌ರೂಂಗೆ ತೆರಳಿ ನನ್ನ ಜಾಗದಲ್ಲಿ ಕೂತುಕೊಂಡೆ.

ಸೈನ್ಸ್ ಟೀಚರ್ ಕೊಟ್ಟಿದ್ದ ಹೋಮ್‌ವರ್ಕ್ ಕಂಪ್ಲೀಟ್ ಮಾಡುತ್ತಿದ್ದಾಗ, ಅವನು ಮತ್ತೆ ನನ್ನ ಬಳಿಗೆ ಬಂದ. ನಿನ್ನನ್ನು ಮುಖ್ಯೋಪಾಧ್ಯಾಯರು ಕರೆಯುತ್ತಿದ್ದಾರೆ ಎಂದ. ಆತ ನನ್ನೊಂದಿಗೆ ಮಾತನಾಡಿದ ಖುಷಿ
ಒಂದೆಡೆಯಾದರೆ, ಇನ್ನೊಂದೆಡೆ ಭಯ ಉಂಟಾಯಿತು. ನಾನು ಮಂದಹಾಸ ಬೀರಿ ಬರುತ್ತಿದ್ದದ್ದನ್ನು ಕ್ಲಾಸ್ ಟೀಚರ್ ಮುಖ್ಯೋಪಾಧ್ಯಾಯರಿಗೆ ಏನಾದರೂ ಹೇಳಿರಬಹುದಾ ಎಂದು ಗಾಬರಿಯಾಯಿತು. ಅವನು ನನ್ನೊಂದಿಗೆ ಮಾತನಾಡಿಕೊಂಡು ಮುಖ್ಯಗುರುಗಳ ಕೊಠಡಿಯ ತನಕ ಬಂದ.

ನಾನು ರಾಮಾಯಣ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದೆ. ಹೀಗಾಗಿ ಪ್ರಶಂಸಿಸಲು ನನ್ನನ್ನು ಕರೆದಿದ್ದರು. ನನ್ನ ಕ್ರಶ್ ಕೂಡ ಅಭಿನಂದನೆಗಳನ್ನು ಹೇಳಿದ್ದು. ಇದೇ ಕಾರಣಕ್ಕಾಗಿ! ಅವನು ನನ್ನೆದುರಿಗೆ ಬಂದಾಗ ಎಲ್ಲವನ್ನು ಮರೆತುಬಿಡುತ್ತಿದ್ದೆ. ಕ್ಲಾಸಿನಲ್ಲಿ ಪಾಠ ಮಾಡುವಾಗ ಕದ್ದುಕದ್ದು ಅವನ ಮುಖವನ್ನು ನೋಡುವುದರಲ್ಲಿ ಅತೀವ ಆನಂದ ಸಿಗುತ್ತಿತ್ತು.

ಅವನು ನನ್ನ ಕೈಕುಲುಕಿದ್ದನ್ನು ನೆನೆಸಿಕೊಂಡಾಗ ಇಂದಿಗೂ ಒಂದುಕ್ಷಣ ನನ್ನ ನೆನಪುಗಳು ಅವನತ್ತ ತಿರುಗತ್ತವೆ. ನೋಡಲು ಸ್ಫುರದ್ರೂಪಿಯಾಗಿದ್ದ ಅವನು ನನ್ನ ಹೈಸ್ಕೂಲ್ ಕ್ರಶ್. ಅವನು ಯಾರೆಂದು ಮಾತ್ರ ಕೇಳಬೇಡಿ! 

click me!