ಭಾರತದ Gen Z ಹುಡುಗಿಯರಿಗೆ ಮದುವೆಗಿಂತ ಸೋಲೋ ಟ್ರಿಪ್, ನೆಮ್ಮದಿ ಮುಖ್ಯ! ಆದ್ರೆ, ಒಂದು ಗಿಲ್ಟ್ ಭಾರೀ ಕಾಡುತ್ತಂತೆ!

Published : Mar 10, 2026, 03:43 PM IST
Gen Z girl Solo Trip

ಸಾರಾಂಶ

ಇಂದಿನ ಜೆನ್ ಜಿ ಯುವತಿಯರು ಮದುವೆ, ಸಂಸಾರಕ್ಕಿಂತ ಹೆಚ್ಚಾಗಿ ತಮ್ಮ ಸ್ವಾತಂತ್ರ್ಯ ಮತ್ತು ವ್ಯಕ್ತಿತ್ವಕ್ಕೆ ಮೊದಲ ಆದ್ಯತೆ ನೀಡುತ್ತಿದ್ದಾರೆ. ಸಮೀಕ್ಷೆ ಪ್ರಕಾರ, ಆರ್ಥಿಕ ಸ್ವಾತಂತ್ರ್ಯ, ನೆಮ್ಮದಿ ಜೀವನ ಮತ್ತು ಸ್ವಂತ ಇಚ್ಛೆಯಂತೆ ಬದುಕುವುದು ಇವರ ಗುರಿಯಾಗಿದೆ. ಆದರೆ ಒಂದು ಗಿಲ್ಟ್ ಮಾತರ ಕಾಡುತ್ತಂತೆ.

ಮದುವೆ ಮಾಡ್ಕೊಂಡು, ಸಂಸಾರ ನೋಡ್ಕೊಂಡು ಮನೆಯಲ್ಲೇ ಇರೋದು... ಈ ಸೀನ್‌ಗೆಲ್ಲಾ ಈಗಿನ ಹುಡುಗಿಯರ ಲೈಫಲ್ಲಿ ಜಾಗಾನೇ ಇಲ್ಲ. ಸಂಗಾತಿ ಹುಡುಕುವುದಕ್ಕಿಂತ, ಸಂಸಾರ ಶುರು ಮಾಡುವುದಕ್ಕಿಂತ ಹೆಚ್ಚಾಗಿ ಜೆನ್ ಜಿ ಹುಡುಗಿಯರು ತಮ್ಮ ವ್ಯಕ್ತಿತ್ವ ಮತ್ತು ಸ್ವಾತಂತ್ರ್ಯಕ್ಕೆ ಮೊದಲ ಆದ್ಯತೆ ನೀಡುತ್ತಿದ್ದಾರೆ. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಗೂ ಮುನ್ನ ಬಿಡುಗಡೆಯಾದ 'ದಿ ಕಾನ್ಫಿಡೆನ್ಸ್ ಎಡಿಟ್' ಎಂಬ ಸಮೀಕ್ಷಾ ವರದಿಯು ಭಾರತೀಯ ಯುವತಿಯರ ಬದಲಾಗುತ್ತಿರುವ ಮನಸ್ಥಿತಿಯ ಬಗ್ಗೆ ಹಲವು ಇಂಟರೆಸ್ಟಿಂಗ್ ವಿಚಾರಗಳನ್ನು ಹೊರಹಾಕಿದೆ.

ದೇಶದಾದ್ಯಂತ ಸಾವಿರಕ್ಕೂ ಹೆಚ್ಚು ಯುವತಿಯರಿಂದ ಮಾಹಿತಿ ಸಂಗ್ರಹಿಸಿ ಈ ವರದಿ ಸಿದ್ಧಪಡಿಸಲಾಗಿದೆ. ಇದರ ಪ್ರಕಾರ, ಜೆನ್ ಜಿ ಹುಡುಗಿಯರು ಯಶಸ್ಸು ಮತ್ತು ಸಂತೋಷದ ವ್ಯಾಖ್ಯಾನವನ್ನೇ ಬದಲಿಸುತ್ತಿದ್ದಾರೆ. ಹಳೆಯ ಕಾಲದ ಜವಾಬ್ದಾರಿಗಳಿಂದ ದೂರ ಸರಿದು, ಸ್ವಂತ ದುಡಿಮೆಯಲ್ಲಿ, ತಮ್ಮದೇ ಆದ ನಿಯಮಗಳ ಮೇಲೆ ಬದುಕಲು ಇವರು ಇಷ್ಟಪಡುತ್ತಿದ್ದಾರೆ.

ನೆಮ್ಮದಿಯೇ ಹೊಸ ಗೆಲುವು

ಗೆಲುವು ಅಂದರೆ ಬರೀ ಕೆರಿಯರ್‌ನಲ್ಲಿ ಓಡಿ ದಣಿಯುವುದಲ್ಲ ಎಂದು ಈ ಪೀಳಿಗೆ ನಂಬಿದೆ. ಸಮೀಕ್ಷೆಯಲ್ಲಿ ಭಾಗವಹಿಸಿದ್ದ ನಾಲ್ವರಲ್ಲಿ ಒಬ್ಬರು ಹೇಳುವಂತೆ, ಪರ್ಫೆಕ್ಷನ್‌ಗಿಂತ ನೆಮ್ಮದಿಯೇ ನಮಗೆ ಮುಖ್ಯ. ಎಲ್ಲದರಲ್ಲೂ ನಂಬರ್ ಒನ್ ಆಗಲು ಓಡುವ ಬದಲು, ತಮಗೆ ಖುಷಿ ಮತ್ತು ನೆಮ್ಮದಿ ಕೊಡುವ ಹಾಗೆ ಜೀವನವನ್ನು ರೂಪಿಸಿಕೊಳ್ಳಲು ಇವರು ಬಯಸುತ್ತಾರೆ. ಅನಗತ್ಯ ಒತ್ತಡಗಳನ್ನು ಬದಿಗಿಟ್ಟು, ಬ್ಯಾಲೆನ್ಸ್ಡ್ ಜೀವನಶೈಲಿ ನಡೆಸುವುದು ಇವರ ಗುರಿಯಾಗಿದೆ.

ಆರ್ಥಿಕ ಮತ್ತು ಭಾವನಾತ್ಮಕ ಸ್ವಾತಂತ್ರ್ಯ

ಶೇ. 86ರಷ್ಟು ಯುವತಿಯರು ಸ್ವಾತಂತ್ರ್ಯ ಅಂದರೆ ಬರೀ ಮನೆಯಿಂದ ಹೊರಗೆ ಹೋಗುವುದಲ್ಲ, ಅದು ಆರ್ಥಿಕ ಮತ್ತು ಭಾವನಾತ್ಮಕ ಶಕ್ತಿ ಅಂತ ದೃಢವಾಗಿ ನಂಬಿದ್ದಾರೆ. ಯಾರನ್ನೂ ಅವಲಂಬಿಸದೆ ತಮ್ಮ ಕಾಲ ಮೇಲೆ ನಿಲ್ಲುವ ಸಾಮರ್ಥ್ಯ ಪಡೆಯಲು ಇವರು ಪ್ರಯತ್ನಿಸುತ್ತಿದ್ದಾರೆ. ಜೀವನದ ಪ್ರಮುಖ ನಿರ್ಧಾರಗಳನ್ನು ಕುಟುಂಬದೊಂದಿಗೆ ಚರ್ಚಿಸಿದರೂ, ಅಂತಿಮ ತೀರ್ಮಾನ ಮಾತ್ರ ತಮ್ಮದೇ ಆಗಿರಬೇಕೆಂದು ಬಹುತೇಕರು ಬಯಸುತ್ತಾರೆ.

ಸೋಲೋ ಟ್ರಿಪ್‌ಗಳು ಈಗ ಕಾಮನ್

ಒಬ್ಬರೇ ಟ್ರಿಪ್ ಹೋಗೋದು ಈಗಿನ ಹುಡುಗಿಯರಿಗೆ ಹೊಸ ಟ್ರೆಂಡ್ ಏನಲ್ಲ, ಬದಲಿಗೆ ಅದೊಂದು ಸಹಜ ಆಯ್ಕೆಯಾಗಿದೆ. ಸಮೀಕ್ಷೆಯಲ್ಲಿ ಭಾಗವಹಿಸಿದ ಶೇ. 70ರಷ್ಟು ಮಂದಿ ಸೋಲೋ ಟ್ರಿಪ್ ಹೋಗಲು ಆಸಕ್ತಿ ಹೊಂದಿದ್ದಾರೆ. ಮನೆಯವರ ವಿರೋಧ ಅಥವಾ ಬಜೆಟ್‌ಗಿಂತ ಹೆಚ್ಚಾಗಿ, ಇವರು ಸುರಕ್ಷತೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಪ್ರಯಾಣವನ್ನು ಕೇವಲ ಒಂದು ಅಡ್ವೆಂಚರ್ ಅಂತ ನೋಡದೆ, ತಮ್ಮನ್ನು ತಾವು ಅರಿಯುವ ದಾರಿಯನ್ನಾಗಿ ಇವರು ನೋಡುತ್ತಿದ್ದಾರೆ.

ಫ್ಯಾಷನ್ ತಮಗಾಗಿ, ಬೇರೆಯವರಿಗಲ್ಲ

ಬಟ್ಟೆ ಹಾಕೋ ವಿಚಾರದಲ್ಲೂ ದೊಡ್ಡ ಬದಲಾವಣೆ ಕಾಣಿಸುತ್ತಿದೆ. ಬೇರೆಯವರನ್ನು ಮೆಚ್ಚಿಸೋಕಲ್ಲ, ನಮಗಾಗಿ ನಾವು ಬಟ್ಟೆ ಹಾಕ್ತೀವಿ ಅಂತ ಶೇ. 70ರಷ್ಟು ಹುಡುಗಿಯರು ಹೇಳ್ತಾರೆ. ಫ್ಯಾಷನ್ ಅನ್ನು ತಮ್ಮ ವ್ಯಕ್ತಿತ್ವವನ್ನು ತೋರಿಸುವ ಒಂದು ಮಾಧ್ಯಮವಾಗಿ ಇವರು ನೋಡುತ್ತಾರೆ. ಯಾರು ನೋಡದಿದ್ದರೂ ತಮಗಿಷ್ಟವಾದ ಹಾಗೆ ರೆಡಿಯಾಗಲು ಇಷ್ಟಪಡುತ್ತಾರೆ.

ಜೆನ್ ಜಿ ಹುಡುಗಿಯರಿಗೆ ಭಾರೀ ಕಾಡುವ ಗಿಲ್ಟ್:

ಜೆನ್ ಜಿ ಹುಡುಗಿಯರು ಆತ್ಮವಿಶ್ವಾಸಿಗಳಾಗಿದ್ದರೂ, ಮಾನಸಿಕ ಒತ್ತಡಗಳು ಇವರನ್ನು ಭಾರೀ ಕಾಡುತ್ತವೆ. ಸುಮಾರು ಶೇ. 40ರಷ್ಟು ಯುವತಿಯರು ಬೇರೆಯವರ ನಿರೀಕ್ಷೆಗೆ ತಕ್ಕಂತೆ ಬದುಕಲು ಆಗಲಿಲ್ಲವಲ್ಲ ಎಂಬ ತಪ್ಪಿತಸ್ಥ ಭಾವನೆಯಿಂದ ಬಳಲುತ್ತಿದ್ದಾರೆ. ತಮಗೆ ಬೇಕಾದನ್ನು ಕೇಳಿ ಪಡೆಯಲು ಅಥವಾ ಬೇಡವಾದ ವಿಷಯಗಳಿಗೆ 'ನೋ' ಹೇಳಲು ಇಂದಿಗೂ ಹಲವರು ಕಷ್ಟಪಡುತ್ತಾರೆ. ಆದರೂ, ತಮ್ಮ ವ್ಯಕ್ತಿತ್ವವನ್ನು ಗಟ್ಟಿಯಾಗಿ ಹೇಳಿಕೊಳ್ಳಲು ಇವರು ಹೆಚ್ಚು ಧೈರ್ಯ ತೋರುತ್ತಿದ್ದಾರೆ.

ಚಿಕ್ಕ ಖುಷಿಗಳಲ್ಲೇ ದೊಡ್ಡ ಸಂತೋಷ

ದೊಡ್ಡ ಸಾಧನೆ ಮಾಡಿದಾಗ ಮಾತ್ರ ಸಂತೋಷ ಸಿಗುತ್ತದೆ ಎಂದು ಇವರು ಭಾವಿಸುವುದಿಲ್ಲ. ತಮ್ಮಿಷ್ಟದ ಒಂದು ವಸ್ತು ಖರೀದಿಸುವುದು, ಹೊಸ ವಿಷಯ ಕಲಿಯುವುದು, ಫ್ರೆಂಡ್ಸ್ ಜೊತೆ ಸಮಯ ಕಳೆಯುವುದರಲ್ಲೇ ಶೇ. 43.3ರಷ್ಟು ಮಂದಿ ನಿಜವಾದ ಖುಷಿ ಕಾಣುತ್ತಾರೆ. ಪ್ರತಿದಿನದ ಚಿಕ್ಕಪುಟ್ಟ ಗೆಲುವುಗಳೇ ಜೀವನವನ್ನು ಸುಂದರವಾಗಿಸುತ್ತವೆ ಎಂಬುದನ್ನು ಈ ಹೊಸ ಪೀಳಿಗೆ ಅರಿತುಕೊಂಡಿದೆ.

ಒಟ್ಟಿನಲ್ಲಿ, ಹಳೇ ಕಾಲದ ಯೋಚನೆಗಳಿಂದ ಹೊರಬಂದು, ತಮ್ಮನ್ನು ತಾವು ಪ್ರೀತಿಸುತ್ತಾ, ಸ್ವಂತ ಕಾಲ ಮೇಲೆ ನಿಲ್ಲಲು ಕಲಿಯುತ್ತಿರುವ ಹೊಸ ಪೀಳಿಗೆಯ ಚಿತ್ರಣವನ್ನು ಈ ಸಮೀಕ್ಷೆ ಕಟ್ಟಿಕೊಡುತ್ತದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಲಿಂಡರ್ ಸಿಗ್ತಿಲ್ಲ ಎಂಬ ಟೆನ್ಷನ್ ಬೇಡ, ಗ್ಯಾಸ್ ಇಲ್ದೆ ಹೀಗೆ ಅಡುಗೆ ಮಾಡಿ
ಆ ನೀರು ಹಾಕಿ ಸಾಕು, ಎಲೆ ಕಾಣದಷ್ಟು ಪಾಟ್‌ನಲ್ಲೇ ವರ್ಷವಿಡೀ ಮಲ್ಲಿಗೆ ಬಿಡುತ್ತೆ!