ಪ್ರತಿನಿತ್ಯ 700 ಮಂದಿಗೆ ಅನ್ನ ನೀಡುವ ಮಾದರಿ ಜ್ಯೋತಿಷಿ

By Kannadaprabha NewsFirst Published Oct 22, 2018, 10:10 AM IST
Highlights

ಬಡತನ ಕಲಿಸುವ ಪಾಠವನ್ನು ಯಾವ ವಿಶ್ವವಿದ್ಯಾಲಯವೂ ಕಲಿಸದು ಎನ್ನುವ ಮಾತಿದೆ. ಅದಕ್ಕೆ ಇಲ್ಲೊಂದು ಉದಾಹರಣೆ ಇದೆ. ತಾವು ಅನುಭವಿಸಿದ ಕಷ್ಟ, ಹಸಿದ ಹೊಟ್ಟೆಯ ಪರಿತಾಪವನ್ನು ಬೇರೆಯವರು ಅನುಭವಿಸುವುದು ಬೇಡ ಎಂದುಕೊಂಡು ಬೆಂಗಳೂರಿನ ನಾಗರಬಾವಿ ಸುತ್ತಮುತ್ತಲು ತಮ್ಮ ಕೈಲಾದಷ್ಟು ಜನರ ಹಸಿವು ನೀಗಿಸುತ್ತಿದ್ದಾರೆ. ಆ ಮೂಲಕ ಅನ್ನದಾಸೋಹಿಯಾಗಿದ್ದಾರೆ. ಮತ್ತೊಂದು ಕಡೆ ಜ್ಯೋತಿಷಿಯಾಗಿ ನಾಡಿನ ಜನರಲ್ಲಿ ಅರಿವು ಬೆಳೆಸುವ ಮೂಲಕ ಜ್ಞಾನ ದಾಸೋಹಿಯೂ ಆಗಿದ್ದಾರೆ. ಇವರೇ ಖ್ಯಾತಿ ಜ್ಯೋತಿಷಿ ವಿದ್ವಾನ್ ಕಮಲಾಕರ ಭಟ್. 

ಜ್ಯೋತಿಷಿ ಕಮಲಾಕರ್ ಭಟ್ ಹುಟ್ಟಿದ್ದು ಉತ್ತರ ಕನ್ನಡದ ಸಿದ್ದಾಪುರ ತಾಲೂಕಿನ ಸೋವಿನಕೊಪ್ಪ ಗ್ರಾಮದಲ್ಲಿ. ತಂದೆ ವೆಂಕಟರಮಣ ಹೆಗಡೆ, ತಾಯಿ ಜಯಲಕ್ಷ್ಮೀ ಹೆಗಡೆ. ನಾಲ್ಕು ಜನ ಮಕ್ಕಳಿದ್ದ ಕಾರಣ ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಆ ಬಡತನವೇ ಇಂದು ಇವರನ್ನು ದೊಡ್ಡ ಮಟ್ಟಕ್ಕೆ ತಂದು ನಿಲ್ಲಿಸಿದೆ. 

ದಿನಕ್ಕೆ ಸುಮಾರು 700ಕ್ಕೂ ಹೆಚ್ಚು ಮಂದಿಗೆ ಅನ್ನ ನೀಡುತ್ತಿರುವ ಕಮಲಾಕರ ಭಟ್ ಅವರ ಹಿಂದೆ ಸಾಕಷ್ಟು ರೋಚಕ ಕತೆಗಳಿವೆ. ಕಷ್ಟದ ದಿನಗಳಿವೆ. ಅದನ್ನು ಅವರೇ ಹೇಳುತ್ತಾರೆ ಕೇಳಿ, ‘ನಮ್ಮದು ಬಡ ಕುಟುಂಬ. ಒಂದು ಹೊತ್ತಿನ ಊಟಕ್ಕೂ ಕಷ್ಟಪಡಬೇಕಿತ್ತು. ಅಂದಿನ ಕಾಲಕ್ಕೆ ಸಾಮಾನ್ಯದಲ್ಲಿ ಸಾಮಾನ್ಯ ಬಡ ಬ್ರಾಹ್ಮಣರ ಕುಟುಂಬ ನಮ್ಮದು. ಆಗ ನನಗೆ ಓದುವ ಆಸೆ ಇತ್ತು. ಆದರೆ ಓದಿಸಲು ನಮ್ಮ ತಂದೆಗೆ ಶಕ್ತಿ ಇರಲಿಲ್ಲ. ಆದ ಕಾರಣ ಏನೂ ಖರ್ಚಿಲ್ಲದೇ, ಉಚಿತವಾಗಿ ಹೇಳಿಕೊಡುತ್ತಿದ್ದ ವೇದ ಮತ್ತು ಜ್ಯೋತಿಷ್ಯ ವಿಜ್ಞಾನ ತರಗತಿಗೆ ನನ್ನನ್ನು ಸೇರಿಸಿದರು. ಕೇರಳದಲ್ಲಿ 14 ವರ್ಷ ವೇದಶಾಸ್ತ್ರ, ಜ್ಯೋತಿಷ್ಯ ವಿಜ್ಞಾನಗಳನ್ನು ಅಧ್ಯಯನ ಮಾಡಿದೆ. ಅಷ್ಟರಲ್ಲಿ ನನಗೆ ಓದಿನ ಶಕ್ತಿ, ಬಡತನದ ಸಂಕಟ ಏನೆಂದು ಗೊತ್ತಾಗಿತ್ತು. ಆಮೇಲೆ ಹಾಸನದ ಅರಸೀಕೆರೆಯಲ್ಲಿ ಅಲ್ ಅಮೀನ್ ಎನ್ನುವ ಮುಸ್ಲಿಂ ಕಾಲೇಜಿನಲ್ಲಿ ಸಂಸ್ಕೃತ ಅಧ್ಯಾಪಕನಾಗಿ ಸೇರಿ 70ಜನ ಮುಸ್ಲಿಂ ಮಕ್ಕಳಿಗೆ ಸಂಸ್ಕೃತ ಕಲಿಸಿದೆ. ನನ್ನ ಪ್ರಕಾರ ಎಲ್ಲರೂ ಜಾತಿ, ಧರ್ಮಗಳನ್ನು ಮೀರಿ ಸಂಸ್ಕೃತ ಕಲಿಯಬೇಕು ಎನ್ನುವುದು. ನಾನು ಹೀಗೆ ಇರುವಾಗ ಹಸಿದವರಿಗೆ ಅನ್ನ ನೀಡಬೇಕು ಎನ್ನುವ ನನ್ನ ಆಸೆ ಹೆಚ್ಚುತ್ತಲೇ ಇತ್ತು.

700 ಜನರಿಗೆ ಊಟ, 400 ಜನರಿಗೆ ಚಿಕಿತ್ಸೆ
‘ನಾನು ಸಾಕಷ್ಟು ಸಭೆ, ಸಮಾರಂಭಗಳಲ್ಲಿ ನಿತ್ಯವೂ ಭಾಗಿಯಾಗುತ್ತಿದ್ದೆ. ಆವಾಗ ನನಗೆ ಅಲ್ಲಿ ಉಳಿದ ಆಹಾರವನ್ನು ವ್ಯರ್ಥ ಮಾಡುತ್ತಿದ್ದನ್ನು ನೋಡಿ ಸಾಕಷ್ಟು ನೋವಾಗುತ್ತಿತ್ತು. ಮತ್ತೊಂದು ಕಡೆ ಮಕ್ಕಳು, ವೃದ್ಧರು ಅನ್ನವಿಲ್ಲದೇ ನರಳುವುದೂ ಕಾಣುತ್ತಿತ್ತು. ಇವೆರಡರ ಮಧ್ಯೆ ನಾನು ಸೇತುವೆಯಾಗಬೇಕು ಎನ್ನಿಸಿ ನಿತ್ಯಪೂಜೆ ಭಿಕ್ಷಾ ಪಾತ್ರೆ ಎನ್ನುವ ಅಭಿಯಾನ ಶುರು ಮಾಡಿದೆ. ಇದರಿಂದ ಇಂದು ಸುಮಾರು 700ಮಕ್ಕಳು ನಿತ್ಯವೂ ಉತ್ತಮವಾಗಿರುವ ಆಹಾರವನ್ನು ಪಡೆಯುತ್ತಿದ್ದಾರೆ. ಇದರ ಜೊತೆಗೆ 400 ಜನ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ಕೊಡಿಸುವ ಕೆಲಸವನ್ನೂ ಮಾಡುತ್ತಿದ್ದೇನೆ’ ಎನ್ನುವ ಕಮಲಾಕರ ಭಟ್ ಅವರು ತಮ್ಮದೇ ಸ್ವಂತ ಹಣದಲ್ಲಿ ನಾಲ್ಕು ಮಾರುತಿ ಓಮ್ನಿ ವ್ಯಾನ್‌ಗಳನ್ನು ಕೊಂಡು, ತಮ್ಮ ಜೊತೆಗೆ 12 ಜನರನ್ನು ಇಟ್ಟುಕೊಂಡು ಹಸಿದವರ ಹೊಟ್ಟೆ ತುಂಬಿಸುತ್ತಿದ್ದಾರೆ.

ತಿಂಗಳಿಗೆ ಬೇಕು ಲಕ್ಷ ರುಪಾಯಿ
ಪ್ರಾರಂಭದಲ್ಲಿ ನಿತ್ಯಪೂಜೆ ಭಿಕ್ಷಾ ಪಾತ್ರೆ ಶುರು ಮಾಡುವಾಗ ತಮ್ಮ ಜ್ಯೋತಿಷಿ ವೃತ್ತಿಯಿಂದ ಸಂಪಾದನೆ ಮಾಡಿದ ಹಣ ಮತ್ತು ಊರಿನ ಕೃಷಿಯಿಂದ ಬಂದ ಹಣದ ಜೊತೆಗೆ ಸ್ವಲ್ಪ ಸಾಲ ಮಾಡಿ ಒಂದು ಮಾರುತಿ ವ್ಯಾನ್ ಕೊಳ್ಳುತ್ತಾರೆ. ಅದಕ್ಕೆ ಅವರೇ ಚಾಲಕರಾಗಿ, ಉಳಿದ ಗುಣಮಟ್ಟದ ಆಹಾರವನ್ನು ಸಂಗ್ರಹಿಸಿ ಸ್ಲಂಗಳು, ಅನಾಥಾಶ್ರಮಗಳಿಗೆ ಕೊಟ್ಟು ಬರುತ್ತಾರೆ. ಅದಾದ ಮೇಲೆ ಹಂತ ಹಂತವಾಗಿ ಸೇವಾ ಸಾಮರ್ಥ್ಯವನ್ನು ಹೆಚ್ಚು ಮಾಡಿಕೊಳ್ಳುತ್ತಾ ಬಂದು ಇಂದು ನಾಲ್ಕು ವ್ಯಾನ್‌ಗಳಲ್ಲಿ ಈ ಸೇವೆ ನಡೆಯುತ್ತಿದೆ. ಇದಕ್ಕಾಗಿ ಇರುವ ೧೨ ಮಂದಿಯ ವೇತನ, ನಿರ್ವಹಣೆಗೆ ಸುಮಾರು ತಿಂಗಳಿಗೆ ಒಂದು ಲಕ್ಷ ರುಪಾಯಿಯನ್ನು ಕಮಲಾಕರ್ ಭಟ್ ಅವರೇ ವಿನಿಯೋಗ ಮಾಡುತ್ತಿದ್ದಾರೆ.

ವೃಕ್ಷಾಭಿಯಾನ, ದೇವತಾ ಉಪವಾಸ
‘ನಾನು ಜ್ಯೋತಿಷಿಯಾಗಿರುವುದರಿಂದ ಕೆಲವೊಂದಷ್ಟು ಮಂದಿ ನನ್ನ ಮಾತು ಕೇಳುತ್ತಾರೆ. ಅದನ್ನೇ ನಾನು ಸಮಾಜಕ್ಕೆ ಒಳಿತಾಗುವುದರ ಕಡೆಗೆ ಬಳಸಿಕೊಳ್ಳುತ್ತೇನೆ. ನಾನು ನನ್ನ ಬಳಿಗೆ ಬಂದ ಎಲ್ಲರಿಗೂ ಮೊದಲು ಹೇಳುವುದು ಏನೆಂದರೆ ಶುಭ ಸಮಾರಂಭದಲ್ಲಿ 40 ರುಪಾಯಿ ಖರ್ಚು ಮಾಡಿ ತಾಂಬೂಲ ನೀಡುವುದರ ಬದಲಿಗೆ, 10 ರು. ಖರ್ಚು ಮಾಡಿ ಒಂದು ಗಿಡವನ್ನು ನೀಡಿ. ಇದರಿಂದ ಸಾಕಷ್ಟು ಹಸಿರು ಸಂಪತ್ತು ಹೆಚ್ಚುತ್ತದೆ. ಇದರ ಜೊತೆಗೆ ಬರ್ತ್‌ಡೇ, ವಿವಾಹ ವಾರ್ಷಿಕೋತ್ಸವ ಮೊದಲಾದವುಗಳಿಗೆ ಅನಗತ್ಯ ಖರ್ಚು ಮಾಡುವುದರ ಬದಲಿಗೆ ದೇವತಾ ಉಪವಾಸ ಮಾಡಿ, ಅದೇ ಹಣವನ್ನು ಸಮಾಜದ ಹಸಿದ ಜೀವಿಗಳ ಕಲ್ಯಾಣಕ್ಕಾಗಿ ಬಳಸಿ ಎಂದು ಹೇಳುತ್ತೇನೆ. ಇದಕ್ಕೆ ಸಾಕಷ್ಟು ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿರುವುದು ನನಗೆ ಸಾಕಷ್ಟು ಸಂತೋಷ ನೀಡಿದೆ’ ಎನ್ನುತ್ತಾರೆ ಜ್ಯೋತಿಷಿಗಳು.

ಒಳ್ಳೆಯ ಆಹಾರ ಮಾತ್ರ ಸಂಗ್ರಹ
‘ಬಡ ಜನರಿಗೆ ಉಚಿತವಾಗಿ ಹಂಚುವ ಆಹಾರ ಎಂದು ಕೆಟ್ಟಿರುವ ಆಹಾರವನ್ನು ನೀಡುವುದಿಲ್ಲ. ನಾನು ಎಲ್ಲಿಯೇ ಆಹಾರ ಸಂಗ್ರಹಕ್ಕೆ ಹೋದರೂ ಅಲ್ಲಿ ಮೊದಲು ಆಹಾರದ ಗುಣ ಮಟ್ಟ ಪರೀಕ್ಷೆ ಮಾಡುತ್ತೇವೆ. ಮೊದಲು ನಾವುಗಳೇ ತಿಂದು ಪರೀಕ್ಷೆ ಮಾಡಿ ಆ ನಂತರವೇ ಬಡ ಜನರಿಗೆ ನೀಡುವುದು. ಇದು ನಾವು ಮೊದಲಿನಿಂದಲೂ ರೂಢಿಸಿಕೊಂಡು ಬಂದ ಪದ್ಧತಿ. ನನ್ನ ಪ್ರಕಾರ ನಾನು ತಿನ್ನಲು ಯೋಗ್ಯವಾದ ಆಹಾರವನ್ನು ಮಾತ್ರ ನಾನು ಇತರರಿಗೆ ನೀಡುವ ಯೋಗ್ಯತೆ ಹೊಂದಿರುತ್ತೇನೆ’ ಎಂದು ಹೇಳಿಕೊಳ್ಳುವ ಮೂಲಕ ಸಮಾಜದಲ್ಲಿ ಗುರು ಸ್ಥಾನದಲ್ಲಿ ಇರುವ ವಿದ್ವಾನ್ ಕಮಲಾಕರ್ ಭಟ್ ಅವರು ಮಾಡುತ್ತಿರುವ ಅಪರೂಪದ ಕಾರ್ಯಕ್ಕೆ ನಿಮ್ಮ ಮೆಚ್ಚುಗೆ ಇರಲಿ. ನಿತ್ಯಪೂಜೆ ಭಿಕ್ಷಾ ಪಾತ್ರೆ ಅಭಿಯಾನದ ಸಂಪರ್ಕಕ್ಕಾಗಿ. ದೂ. 9035524455

click me!