ಕರಣ್ ಆಚಾರ್ಯ ದೇವರ ಉಗ್ರ ರೂಪದ ಚಿತ್ರ ಬಿಡಿಸುವ ಹಿಂದಿನ ಕಾರಣವೇನು..?

By Kannadaprabha NewsFirst Published Nov 12, 2018, 11:01 AM IST
Highlights

ಇತ್ತೀಚೆಗೆ ಅಯೋಧ್ಯೆಯಲ್ಲಿ ನಡೆದ ‘ಅಯೋಧ್ಯೆ ಆರ್ಟ್ ಫೆಸ್ಟ್ 2018’ ಸ್ಪರ್ಧೆಯಲ್ಲಿ ಭಾಗವಹಿಸಿದ ಕರ್ನಾಟಕದ ಏಕೈಕ ಕಲಾವಿದ ಕರಣ್ ಆಚಾರ್ಯ. ಅಲ್ಲಿ ಅವರು ಬಿಡಿಸಿದ ರಾಮಾಯಣದ ಕತೆ ಸಾರುವ ಚಿತ್ರ ಜಗತ್ತಿನಾದ್ಯಂತ ಮೆಚ್ಚುಗೆಗಳಿಸಿತ್ತು. ಈ ಕುರಿತು ಕರಣ್ ಜತೆ ಮಾತುಕತೆ.

ಚಿತ್ರಕಲೆಗಳ ಮೂಲಕ ಅದರಲ್ಲಿಯೂ ವಿಭಿನ್ನ ಹಾಗೂ ವಿಶಿಷ್ಟ ರೀತಿಯಲ್ಲಿ ತಮ್ಮ ಕೈಚಳಕದ   ಮೂಲಕ ಇಡೀ ಜಗತ್ತನ್ನೇ ತಮ್ಮತ್ತ ತಿರುಗಿ ನೋಡುವಂತೆ ಮಾಡಿದವರು ಕರಣ್ ಆಚಾರ್ಯ. ಪೇಯಿಂಟಿಂಗ್‌ನಲ್ಲಿ ತರಬೇತಿ ಪಡೆದಿದ್ದಾರೆ. ಕಲೆಯೇ ನನ್ನ ಉಸಿರು, ಕಲೆಯೇ ನನ್ನ ಜೀವ, ಜೀವನ ಎಂದು ಪ್ರೀತಿಸುತ್ತಿರುವ ವ್ಯಕ್ತಿ ಇವರು. ಇವರ ಕೈಚಳಕದಿಂದ ಉಗ್ರ ಸ್ವರೂಪಿ ಆಂಜನೇಯ ಸೇರಿದಂತೆ ಪಾರ್ವತಿ, ಅಯ್ಯಪ್ಪ, ರಾಮ, ಮಹರ್ಷಿ ವಿಶ್ವಕರ್ಮ, ಗಣಪತಿ, ಪ್ರಧಾನಿ ಮೋದಿ, ಅಜಾತಶತ್ರು ವಾಜಪೇಯಿ, ಕಂಬಳಕ್ಕೆ ಪ್ರೋತ್ಸಾಹಿಸುವ ಚಿತ್ರ ಹೀಗೆ ಹಲವು ಚಿತ್ರಗಳು ಮೂಡಿಬಂದಿವೆ. ಮೂಲತಃ ಕಾಸರಗೋಡಿನವರಾದ ಕರಣ್ ಆಚಾರ್ಯ ಅವರ ನಿಜವಾದ ಹೆಸರು ಕಿರಣ್ ಆಚಾರ್. ಕಾಸರಗೋಡಿನಲ್ಲೇ ಪಿಯುಸಿವರೆಗೂ ವ್ಯಾಸಂಗ ಮಾಡಿದ ಇವರು, ಪ್ರಸ್ತುತ ಖಾಸಗಿ ಕಂಪನಿಯೊಂದರಲ್ಲಿ ಅನಿಮೇಷನ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. 

ಅಯೋಧ್ಯೆ ಆರ್ಟ್‌ಫೆಸ್ಟ್ ಅನುಭವ ಹೇಗಿತ್ತು?
ದೆಹಲಿಯ ಸಂತನ ಗುಪ್ತ ಎಂಬುವವರು ಮೊದಲು ಪೇಯಿಂಟಿಂಗ್ ಕಲಾವಿದರ ಬಗ್ಗೆ ನನ್ನಲ್ಲಿ ಕೇಳಿದ್ದರು. ಅಯೋಧ್ಯೆ ಆರ್ಟ್ ಫೆಸ್ಟ್ ಮೂರು ದಿನದ ಕಾರ್ಯಕ್ರಮವಾಗಿದ್ದು, ಸ್ಥಳೀಯ ವಿದ್ಯಾರ್ಥಿಗಳು ಸೇರಿದಂತೆ ದೇಶದ ಹಲವು ಕಡೆಯಿಂದ ಸ್ಪರ್ಧಿಗಳು ಆಗಮಿಸಿದ್ದರು. ನಾನು ಅಲ್ಲಿಗೆ ಒಬ್ಬ ತೀರ್ಪುಗಾರನಾಗಿ ಹೋಗಿದ್ದು, ನಂತರ ಅಂತಿಮ ದಿನದಂದು ಕೇವಲ 20 ನಿಮಿಷದಲ್ಲಿ ಗೋಡೆಯ ಮೇಲೆ ರಾಮಾಯಣದ ಕತೆ ಸಾರುವ ಪೇಯಿಂಟಿಂಗ್ ಮಾಡಿದೆ. ಅದೊಂದು ಉತ್ತಮ ಅನುಭವವಾಗಿದ್ದು, ಅದರಿಂದ ನನಗೂ ಸಂತೋಷವಾಯಿತು. 

ಚಿತ್ರ ಬಿಡಿಸಲು ಆಸಕ್ತಿ ಮೂಡಿದ್ದು ಹೇಗೆ?
ಮೂಲತಃ ಕಲಾವಿದರ ಕುಟುಂಬ ನಮ್ಮದು. ಅಜ್ಜ, ತಾಯಿ, ಸೋದರ ಮಾವ ಎಲ್ಲರೂ ಕಲೆಯಲ್ಲಿ ಆಸಕ್ತಿ ಹೊಂದಿದವರಾಗಿದ್ದರು. ಕುಟುಂಬದ ಸದಸ್ಯರಿಂದ ಪ್ರೇರಣೆ ಹೊಂದಿ ಬಾಲ್ಯದಲ್ಲೇ ಚಿತ್ರ ಬಿಡಿಸಲು ಆರಂಭಿಸಿದೆ. ಚಿತ್ರ ಬಿಡಿಸಲು ತಾಯಿಯೇ ಸ್ಫೂರ್ತಿ. ಶಿಕ್ಷಣದಲ್ಲಿ ಹೆಚ್ಚು ಆಸಕ್ತಿ ಇರದ ಕಾರಣ ಪಿಯುಸಿ ನಂತರ ಕಾಸರಗೋಡಿನಲ್ಲಿಯೇ ಖಾಸಗಿ ಸಂಸ್ಥೆಯೊಂದರಲ್ಲಿ ಫೈನ್ ಆರ್ಟ್ಸ್ ತರಬೇತಿ ಪಡೆದೆ. ಪ್ರತಿ ದಿನದ ಅಭ್ಯಾಸದಿಂದ ಪೇಯಿಂಟಿಂಗ್ ಮಾಡುವುದು ಸುಲಭವಾಯಿತು. ಈಗ ಕೇವಲ 10 ನಿಮಿಷಗಳಲ್ಲಿ ಪೇಯಿಂಟಿಂಗ್ ಮಾಡುವ ಹಂತಕ್ಕೆ ಬಂದು ತಲುಪಿದ್ದೇನೆ.

ನಿಮ್ಮ ಚಿತ್ರಗಳಿಗೆ ಭಾರಿ ಬೇಡಿಕೆ ಇದೆಯಲ್ಲ...
ನನಗೆ ಕ್ಯಾನ್ವಾಸ್ ಪೇಯಿಂಟಿಂಗ್ ಮಾಡಬೇಕೆಂಬುದು ಹೆಚ್ಚು ಆಸೆ ಇದೆ. ಬಣ್ಣಗಳ ಜತೆಗಿನ ನಮ್ಮ ಆಟ, ಅದರಿಂದ ಮೂಡುವ ಕಲಾಕೃತಿಗಳು ಹೆಚ್ಚು ಸಂತೋಷ ನೀಡುತ್ತದೆ. ಅನಿಮೇಷನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಜೊತೆಗೆ ಸ್ವತಃ ಕಂಪನಿಯೊಂದು ಆರಂಭಿಸಿದ್ದೇನೆ. ನನ್ನ ಪತ್ನಿ ಅದನ್ನು ನೋಡಿಕೊಳ್ಳುತ್ತಾರೆ. ಅಲ್ಲಿ ತಯಾರಾಗುವ ಟೀ ಷರ್ಟ್‌ಗಳ ಮೇಲಿನ ಪ್ರಿಂಟ್‌ಗೆ ಯಾವುದಾದರು ಆರ್ಟ್ ಬೇಕೆಂದರೆ ಅದನ್ನೂ ಮಾಡಿಕೊಡುತ್ತೇನೆ. ಲಂಡನ್, ನ್ಯೂಯಾರ್ಕ್ ಹೀಗೆ ಹಲವು ಕಡೆಯಿಂದ ಭಾರತೀಯ ಕಲೆಯ ಕಾನ್ಸೆಪ್ಟ್ ಇಟ್ಟುಕೊಂಡು ಪೇಯಿಂಟಿಂಗ್ ಆರ್ಡ್‌ರ್‌ಗಳು ಬರುತ್ತಿವೆ. ಇದನ್ನು ಅಲ್ಲಿ ನೆಲೆಸಿರುವ ಭಾರತೀಯರೇ ಹೆಚ್ಚಾಗಿ ಕೇಳುತ್ತಿದ್ದಾರೆ. ಎಷ್ಟೋ ಜನರು ಫೇಸ್ಬುಕ್, ಇನ್‌ಸ್ಟಾಗ್ರಾಂಗಳಲ್ಲಿ ನಾನು ಬಿಡಿಸಿದ ಚಿತ್ರಗಳನ್ನು ಶೇರ್ ಮಾಡುತ್ತಾರೆ. ಒಮ್ಮೊಮ್ಮೆ ನಾನು ಬಿಡಿಸಿದ ಚಿತ್ರವನ್ನೇ ತೆಗೆದುಕೊಂಡು ಯಾವುದಾದರು ಹಬ್ಬ ಸಮಾರಂಭಗಳಲ್ಲಿ ನನಗೇ ಶೇರ್ ಮಾಡುತ್ತಾರೆ. ಇದರಿಂದ ಎಷ್ಟೋ ಜನರಿಗೆ ನನ್ನ ಚಿತ್ರಗಳು ಮುಟ್ಟುತ್ತಿರುವ ಬಗ್ಗೆ ನನಗೆ ತಿಳಿಯಲು ಅವಕಾಶ ದೊರಕಿದೆ.

ಚಿತ್ರದಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯವಾ?
ಎಷ್ಟೋ ಜನರು ಸಾಮಾಜಿಕ ಜಾಲತಾಣಗಳಲ್ಲಿ ನಾನು ಬಿಡಿಸಿದ ಪೇಯಿಂಟಿಂಗ್‌ಗಳಾಗಲಿ, ಅನಿಮೇಟೆಡ್ ಚಿತ್ರಗಳಾಗಲಿ, ಕಾರ್ಟೂನ್ ಚಿತ್ರಗಳಾಗಲಿ, ಹರಿದಾಡುತ್ತಿರುತ್ತವೆ. ಇದನ್ನು ದಿನವೂ ನೋಡಲು ಸಿಗುತ್ತವೆ, ಎಷ್ಟೋ ಜನರು ಅದನ್ನು ನನಗೆ ಶೇರ್ ಸಹ ಮಾಡುತ್ತಾರೆ. ಚಿತ್ರದ ಮೂಲಕ ಸಮಾಜದಲ್ಲಿ ಟ್ರೆಂಡ್‌ನಲ್ಲಿರುವ ವಿಷಯವನ್ನು ಆಧರಿಸಿ ಚಿತ್ರ ಬಿಡಿಸಿದ್ದು ಇದೆ. ಕಂಬಳವನ್ನು ಪ್ರೋತ್ಸಾಹಿಸಿ, ಸ್ವಚ್ಛ ಭಾರತ್ ಅಭಿಯಾನ, ಮತದಾನ ಹೀಗೆ ಹಲವು ವಿಷಯಗಳನ್ನು ಇಟ್ಟುಕೊಂಡು ಬಿಡಿಸಿದ್ದು ಇದೆ. ಇದರಿಂದ ಪ್ರೇರಿತರಾಗಿ ಬದಲಾವಣೆ ಕಂಡುಕೊಂಡಿದ್ದನ್ನೂ ನಾನು ನೋಡಿದ್ದೇನೆ.

ಉಗ್ರ ರೂಪದ ಚಿತ್ರಗಳೇ ಹೆಚ್ಚು ಬಿಡಿಸುತ್ತೀರಿ, ಏನು ಕಾರಣ?
ಎಲ್ಲರೂ ಸಾಮಾನ್ಯವಾಗಿರುವ ಚಿತ್ರಗಳನ್ನೇ ಬಿಡಿಸುವುದು ಹೆಚ್ಚು. ಆದರೆ ನಮ್ಮ ಆಲೋಚನೆಗಳು ವಿಭಿನ್ನ ಹಾಗೂ ವಿಶಿಷ್ಟವಾಗಿರಬೇಕು. ನಮ್ಮಲ್ಲಿನ ಪ್ರತಿಭೆಯನ್ನು ಹೊರತರಲು, ನಮ್ಮ ಖುಷಿಗಾದರೂ ಹೊಸತನವನ್ನು ಪ್ರಯೋಗಿಸುವ ಉದ್ದೇಶ ನನ್ನದು. ಸಾಮಾನ್ಯವಾಗಿರುವ, ದೇವರ ಎಲ್ಲಾ ರೀತಿಯ ಚಿತ್ರಗಳನ್ನು ಬಿಡಿಸಿದ್ದು ಇದೆ. ಆದರೆ, ಹೆಚ್ಚು ಪ್ರಸಿದ್ಧಿ ಹೊಂದಿದ್ದು, ಉಗ್ರ ಸ್ವರೂಪದಲ್ಲಿರುವ ದೇವರ ಚಿತ್ರಗಳು. ಇದರಲ್ಲಿ ಕೊಯಂಬತ್ತೂರಿನಲ್ಲಿರುವ ಆದಿಯೋಗಿ ಶಿವನ ಚಿತ್ರ, ವಾಜಪೇಯಿ, ಆಂಜನೇಯ ಚಿತ್ರಗಳು ಹೆಚ್ಚು ವೈರಲ್ ಆಗಿವೆ. ಇದರಿಂದ ಚಿತ್ರದ ಬಗ್ಗೆ ಜನರ ಅಭಿರುಚಿಯನ್ನು ತಿಳಿಯಬಹುದಾಗಿದೆ.

 

click me!