
ಇಂದು ನಾಳೆಯ ನಡುವೆ ಅನೂಹ್ಯದ ಹೊಸಿಲು. ಅದರ ಮೇಲಿಟ್ಟ ಹಣತೆಯ ಬೆಳಕಲ್ಲಿ ನಾವು ಇಂದಿನಿಂದ ನಾಳೆಗೆ ದಾಟಿಕೊಳ್ಳಬೇಕು. ಆ ಬೆಳಕಿಲ್ಲದೇ ಹೋದರೆ ಕತ್ತಲಲ್ಲಿ ಪಯಣ ಸಾಗುತ್ತದೆ. ಆ ಕತ್ತಲು ನಮ್ಮನ್ನು ಎಲ್ಲಿಗೆ ಒಯ್ಯುತ್ತದೆ. ಕತ್ತಲಿನ ಹಾದಿ ಯಾವತ್ತೂ ನರಕಕ್ಕೇ ಕರೆದೊಯ್ಯುತ್ತದೆ ಎಂಬುದೊಂದು ನಂಬಿಕೆ. ಅದಕ್ಕೇ ನಾವು ದೀಪಾವಳಿಯ ಹೊತ್ತಲ್ಲಿ ನರಕ ಚತುರ್ದಶಿಯನ್ನು ಆಚರಿಸುತ್ತೇವೆ. ಆವತ್ತು ನರಕಾಸುರ ವಧೆಯಾಗಿ ಬೆಳಕು ಹುಟ್ಟಿದ ದಿವಸ. ಸ್ವರ್ಗ ಅದರೆ ದಿವ. ದಿವ ಅಂದರೆ ಬೆಳಕು. ತಮಸ್ಸಿನಿಂದ ಜ್ಯೋತಿಯತ್ತ ಸಾಗುವುದೇ ದೀಪಾವಳಿ.
ನಾವೀಗ ಒಟ್ಟಾರೆಯಾಗಿ ಕತ್ತಲಿನಿಂದ ಬೆಳಕಿನತ್ತ ಸಾಗುತ್ತಿದ್ದೇವೆ. ಸಾಗುತ್ತಲೇ ಇದ್ದೇವೆ. ಬೆಳಕಿನ ಪರಿಧಿಯೊಳಗೆ ಬಂದು ನಿಂತಿದ್ದೇವೆ ಎಂದು ಭಾಾವಿಸುವ ಹೊತ್ತಿಗೆ, ಆ ಬೆಳಕು ಕರಗಿ ಕತ್ತಲೆಯ ಛಾಯೆ ಆವರಿಸಿಕೊಳ್ಳುತ್ತದೆ. ಮತ್ತೆ ಪ್ರಯಾಣ ಆರಂಭವಾಗುತ್ತದೆ. ಹೀಗಾಗಿಯೇ ನಮ್ಮೆಲ್ಲರದು ನಿರಂತರವಾಗಿ ಬೆಳಕಿನತ್ತ ಸಾಗುವ ಯಾತ್ರೆ. ಯಾತ್ರೆಯ ಕೊನೆಗೆ ಸಿಗುವುದೇ ಬೆಳಕಿನ ಜಾತ್ರೆ. ಮೂಡಲ ಮನೆಯ ಮುತ್ತಿನ ನೀರಿನ ಎರಕಕ್ಕೆ, ಅದು ಸಹಜೀವಿಗಳ ಕುರಿತು ನಮ್ಮಲ್ಲಿ ಹುಟ್ಟಿಸುವ ಮರುಕಕ್ಕೆ ನಾವೆಲ್ಲ ಕಾಯುತ್ತಲೇ ಇರಬೇಕು.
ಹಾಗಿದ್ದರೆ ಯಾವುದು ಬೆಳಕಿನ ಹಾದಿ. ಅದನ್ನು ಕಂಡುಕೊಳ್ಳುವುದಕ್ಕೆ ನಮ್ಮ ಹಿರಿಯರು ತೋರಿದ ದೀಪ ಎಂದರೆ ಸಾಹಿತ್ಯ, ಕಲೆ, ಕಾವ್ಯ, ನಾಟಕಗಳು. ಇವು ಸತ್ಯವನ್ನು ಮಥಿಸುವಂಥ ಸಾಧನಗಳು. ನಾವು ನಿತ್ಯ ಜೀವನದಲ್ಲಿ ಸುಳ್ಳು ಹೇಳಬಲ್ಲೆವು, ಆದರೆ ಒಂದು ಪಾತ್ರ ಸುಳ್ಳು ಹೇಳುವುದಿಲ್ಲ. ನಮ್ಮ ಸೃಷ್ಟಿ ಪವಿತ್ರವೂ ಅಕಳಂಕವೂ ಆಗಿರಬೇಕು ಎಂದು ಬಯಸುವ ನಾವೆಲ್ಲರೂ ನಾವು ಬರೆಯುವ ಕತೆ, ಕವಿತೆಗಳನ್ನು ಸಾಧ್ಯವಾದಷ್ಟೂ ಪ್ರಾಮಾಣಿಕವಾಗಿಯೇ ಇಡುತ್ತೇವೆ.
ಅಂಥ ಕತೆಗಳನ್ನು, ಕವಿತೆಗಳನ್ನು, ಬದುಕಿನ ತುಣುಕುಗಳನ್ನು, ಆತ್ಮಕತೆಗಳನ್ನು, ನೀಳ್ಗತೆಗಳನ್ನು ಓದುವ ಕಾಲ ಇದು. ಕನ್ನಡದ ಅತ್ಯುತ್ತಮ ಪ್ರತಿಭೆಗಳು ಇಲ್ಲಿ ಸೇರಿದ್ದಾರೆ. ಈ ಸಂಚಿಕೆಯನ್ನು ಬೆಳಗಿದ್ದಾರೆ. ನಿಮ್ಮನ್ನು ಬೆಳಕಿನ ದಾರಿಯಲ್ಲಿ ಜೊತೆಯಾಗಲಿದ್ದಾರೆ.
ತಮಸೋಮಾ ಜ್ಯೋತಿರ್ಗಮಯ ಎಂಬುದು ಕೇವಲ ಆಶಯವೋ ಪ್ರಾರ್ಥನೆಯೋ ಅಲ್ಲ. ಅದು ಅಂತರಂಗದ ನಿಶ್ಚಯವೂ ಹೌದು. ಹೀಗಾಗಿ ನಾವು ನಂಬಿ ನಡೆಯಬೇಕಾದ ಅನಿವಾರ್ಯತೆ ಇದೆ. ರಾಜಕೀಯ ಸ್ಥಿತ್ಯಂತರ, ಆಯ್ಕೆಯ ಪ್ರಶ್ನೆ, ಐಹಿಕದ ಅನುಮಾನ- ಇವನ್ನೆಲ್ಲ ನಾವು ಮೀರಲಾರೆವು. ಅವುಗಳೊಂದಿಗೆ ಬದುಕುತ್ತಲೇ ನಮ್ಮ ಮೌಲ್ಯಗಳನ್ನು ಉಳಿಸಿಕೊಳ್ಳುವುದು ನಮ್ಮ ಸವಾಲು.
ಆ ಸವಾಲಿನಲ್ಲಿ ಗೆಲ್ಲುವುದಕ್ಕೆ ಈ ದೀಪಾವಳಿಯ ಬೆಳಕು ಸ್ಫೂರ್ತಿ ಕೊಡಲಿ ಎಂಬ ಹಾರೈಕೆಯೊಂದಿಗೆ ಈ ಸಂಚಿಕೆಯನ್ನು ನಿಮ್ಮ ಕೈಗಿಡುತ್ತಿದ್ದೇವೆ.
ಎಲ್ಲರಿಗೂ ಬೆಳಕಿನ ಹಬ್ಬದ ಶುಭಾಾಶಯ.
ರವಿ ಹೆಗಡೆ
ಪ್ರಧಾನ ಸಂಪಾದಕ