ನರಕಾಸುರನ ವಧೆ ಹಿಂದಿದೆ ಈ ಕಥೆ

By Web DeskFirst Published Nov 5, 2018, 5:18 PM IST
Highlights

ಅಸುರ ವಂಶದ ಪರಾಕ್ರಮಿ ನರಕಾಸುರ. ಈತ ದುರುಳತೆಗೂ ಹೆಸರಾದವನು. ಅವನಿಗೊಮ್ಮೆ ತನ್ನ ಆಯುಸ್ಸು ಹೆಚ್ಚಿಸಿಕೊಳ್ಳಬೇಕು ಎಂಬ ಆಸೆಯಾಯ್ತು. ಬ್ರಹ್ಮನ ಕುರಿತು ತಪಸ್ಸು ಮಾಡಿದ. ಮುಂದೇನಾಯ್ತು ಗೊತ್ತಾ? ಇದನ್ನು ಓದಿ

ಅಸುರ ವಂಶದ ಪರಾಕ್ರಮಿ ನರಕಾಸುರ. ಈತ ದುರುಳತೆಗೂ ಹೆಸರಾದವನು. ಅವನಿಗೊಮ್ಮೆ ತನ್ನ ಆಯುಸ್ಸು ಹೆಚ್ಚಿಸಿಕೊಳ್ಳಬೇಕು ಎಂಬ ಆಸೆಯಾಯ್ತು. ಬ್ರಹ್ಮನ ಕುರಿತು ತಪಸ್ಸು ಮಾಡಿದ. ಬ್ರಹ್ಮ ಪ್ರತ್ಯಕ್ಷನಾದಾಗ ‘ನನಗೆ ಚಿರಂಜೀವತ್ವದ ವರ ಬೇಡ. ನಾನು ಭೂಮಿ ತಾಯಿಯಿಂದ ಜನಿಸಿದವನು. ನನಗೆ ಆ ತಾಯಿಯಿಂದಲೇ ಸಾವು ಬರುವ ಹಾಗೆ ಮಾಡು’ ಎಂದ.

ಬ್ರಹ್ಮನಿಗೆ ಈ ಅಸುರನ ಕಪಟ ತಿಳಿಯದ್ದಲ್ಲ. ಆದರೂ ಆತ ಬ್ರಹ್ಮ, ತಥಾಸ್ತು ಎಂದ. ಬ್ರಹ್ಮನ ದಡ್ಡತನಕ್ಕೆ ಮನಸಾರೆ ನಕ್ಕು ತನ್ನ ಅರಮನೆಗೆ ಹಿಂತಿರುಗಿದ ನರಕಾಸುರ. ಭೂಮಿಯ ಒಂದೊಂದೇ ಅರಸೊತ್ತಿಗೆಗಳನ್ನು ವಶಪಡಿಸಿಕೊಂಡ ಬಳಿಕ ದೇವಲೋಕಕ್ಕೆ ಅಡಿಯಿಟ್ಟ. ಇಂದ್ರನನ್ನು ಸೋಲಿಸಿ ದೇವಲೋಕದ ಸ್ತ್ರೀಯರನ್ನೆಲ್ಲ ತನ್ನ ಜೊತೆಗೆ ಸೆಳೆದೊಯ್ದ. ಈ ಹೊತ್ತಿಗೆ ತಾಯಿ ಅದಿತೀ ದೇವಿಯ ಕರ್ಣಾಭರಣಗಳು ಆತನನ್ನು ಆಕರ್ಷಿಸಿದವು. ಅದನ್ನು ಕತ್ತರಿಸಿ ತನ್ನ ವಶಕ್ಕೆ ತೆಗೆದುಕೊಂಡು ಹೋದ. ಇತ್ತ ಖಾಲಿ ಕಿವಿಯಲ್ಲಿ ಅಳುತ್ತಾ ಅದಿತಿಯು ಸತ್ಯಭಾಮೆ ಇರುವಲ್ಲಿಗೆ ಬಂದು ತನ್ನ ತಮ್ಮವರ ವ್ಯಥೆಯನ್ನು ಹೇಳುತ್ತಾಳೆ.

ಸತ್ಯಭಾಮೆ ಈ ವಿಷಯ ಕೃಷ್ಣನಿಗೆ ತಿಳಿಸುತ್ತಾಳೆ. ಚತುರ ಕೃಷ್ಣ ಇದೇ ಸಂದರ್ಭಕ್ಕೆ ಕಾದಿದ್ದವನಂತೆ ನರಕಾಸುರನ ವಿರುದ್ಧ ಯುದ್ಧ ಘೋಷಿಸುತ್ತಾನೆ. ಯುದ್ಧಕ್ಕೆ ಹೋಗುವ ಮೊದಲು ಆತ ಸತ್ಯಭಾಮೆಯನ್ನು ಕರೆಯುತ್ತಾನೆ, ‘ಬಹಳ ದಿನಗಳಿಂದ ನನ್ನ ಜೊತೆಗೆ ಯುದ್ಧಭೂಮಿಗೆ ಬರಬೇಕು ಅಂತ ಹಂಬಲಿಸಿದವಳು ನೀನು. ಆ ದಿನ ಈಗ ಬಂದಿದೆ. ಈ ಯುದ್ಧಕ್ಕೆ ನಾವಿಬ್ಬರೂ ಜೊತೆಯಲ್ಲೇ ಹೋಗೋಣ’. ಹೀಗೆ ಸತ್ಯಭಾಮೆಯೊಡಗೂಡಿ ಯುದ್ಧಕ್ಕೆ ಕೃಷ್ಣ ಬಂದಾಗ ನರಕಾಸುರ ನಿರ್ಲಕ್ಷ್ಯದಿಂದ ನಗುತ್ತಾನೆ.

‘ಅವನಿಗೂ ತಿಳಿದಿದೆ. ನನ್ನ ಸಾವು ನನ್ನ ಭೂಮಿತಾಯಿಯಿಂದಲೇ ಬರುವುದು ಅಂತ. ಹಾಗಿದ್ದರೂ ಯಾಕೆ ವೃಥಾ ಪ್ರಯತ್ನ ಮಾಡುತ್ತಿದ್ದಾನೆ’ ಅಂದುಕೊಂಡೇ ಸೈನ್ಯವನ್ನು ಯುದ್ಧಕ್ಕೆ ಕಳುಹಿಸುತ್ತಾನೆ. ಅವನ ಲೆಕ್ಕಾಚಾರಕ್ಕೆ ವಿರುದ್ಧವಾಗಿ ಕೃಷ್ಣ ರಾಕ್ಷಸರನ್ನೆಲ್ಲ ಸದೆಬಡಿದ. ಕೊನೆಗುಳಿದವನು ನರಕಾಸುರ ಒಬ್ಬನೇ. ಅವನಿಗೂ ಕೃಷ್ಣನಿಗೂ ಭಯಂಕರ ಯುದ್ಧ. ಒಂದು ಹಂತದಲ್ಲಿ ನರಕಾಸುರ ಬಿಟ್ಟ ಬಾಣಕ್ಕೆ ಕೃಷ್ಣ ಪ್ರಜ್ಞೆ ತಪ್ಪಿ ಬಿದ್ದ.

ಸತ್ಯಭಾಮೆಗೀಗ ಏನೂ ಮಾಡಲೂ ತೋಚದ ಸ್ಥಿತಿ. ಆದರೆ ಆಕೆ ಮಹಾ ಧೀರೆ. ತಾನೇ ಮುಂದೆ ನಿಂತು ನರಕನ ಮೇಲೆ ಬಾಣ ಪ್ರಯೋಗಿಸುತ್ತಾಳೆ. ಆ ಅಸ್ತ್ರ ನರಕನ ಶಿರವನ್ನು ಛಿದ್ರ ಮಾಡಿ ಆತ ಸಾಯುವಂತೆ ಮಾಡುತ್ತದೆ. ಮೂರ್ಛೆ ಹೋದಂತೆ ಬಿದ್ದುಕೊಂಡಿದ್ದ ಕೃಷ್ಣ ಈಗ ಎಂದಿನ ತುಂಟ ನಗುವಿನೊಂದಿಗೆ ಎದ್ದು ನಿಲ್ಲುತ್ತಾನೆ.

ಇಲ್ಲಾಗಿದ್ದು ಒಂದು ಪ್ರಹಸನ. ಸತ್ಯಭಾಮೆ ಭೂದೇವಿಯ ಅವತಾರ. ಆಕೆಯಿಂದಲೇ ನರಕಾಸುರನ ವಧೆಯಾಗಬೇಕು ಎಂದಿತ್ತು. ಕೃಷ್ಣ ಇಲ್ಲಿ ತನ್ನ ಪಾತ್ರ ನಿರ್ವಹಿಸಿದ ಅಷ್ಟೇ. ಸೆರೆಯಾಗಿದ್ದ 16000 ಕನ್ಯೆಯರ ಬಿಡುಗಡೆಯಾಯ್ತು. ಅದಿತಿಯ ಓಲೆ ಅವಳಿಗೆ ಮರಳಿ ಸಿಕ್ಕಿತು. ದೇವತೆಗಳು ಮತ್ತೊಮ್ಮೆ ನಿರಾಳತೆಯಿಂದ ನಿಟ್ಟುಸಿರು ಬಿಟ್ಟರು.

 

click me!