ದೊಡ್ಡೇಶ್ ಯಲಿಗಾರ್ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಪ್ಪಳ: ಬಂದಿರೋ ಪೋಸ್ಟ್ ಗಳನ್ನ ಸಂಬಂಧಪಟ್ಟವರಿಗೆ ತಲುಪಿಸುವುದು ಪೋಸ್ಟ್ ಮ್ಯಾನ್ ಕೆಲಸ. ಆದ್ರೆ, ಇಲ್ಲೊಬ್ಬ ಅಂಚೆ ವಿತರಕ ಐದಾರು ವರ್ಷದ ಅಂಚೆಗಳನ್ನ ಮೂಟೆ ಕಟ್ಟಿ ಊರಾಚೆ ಎಸೆದು ಬಂದಿದ್ದಾನೆ. ಆದರೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕಿದ್ದ ಅಧಿಕಾರಿಗಳು ಕೈಕಟ್ಟಿ ಕುಳಿತಿದ್ದಾರೆ. ಅಷ್ಟಕ್ಕೂ ಯಾವ ಊರಲ್ಲಿ ಇಂತಹ ಉಡಾಫೆ ಪೋಸ್ಟ್ ಮ್ಯಾನ್ ಇರುವುದು ಅಂತೀರಾ? ಹಾಗಾದ್ರೆ ಈ ರಿಪೋರ್ಟ್ ನೋಡಿ.
ಕೊಪ್ಪಳ ಜಿಲ್ಲೆ ಸದಾ ಒಂದಿಲ್ಲ ಒಂದು ಸುದ್ದಿಯಲ್ಲಿ ಇದ್ದು, ಈಗ ಮತ್ತೊಂದು ವಿವಾದದ ಸುದ್ದಿಯಲ್ಲಿ ಮುನ್ನಲೆಗೆ ಬಂದಿದೆ. ಈ ಬಾರಿ ಸುದ್ದಿಯಲ್ಲಿರುವುದು ಪೋಸ್ಟ್ ಮ್ಯಾನ್ ಒಬ್ಬನ ಉಡಾಫೆ ಕೆಲಸದಿಂದ. ಹೌದು ಜಿಲ್ಲೆಯ ಕನಕಗಿರಿ ತಾಲೂಕಿನ ಗೌರಿಪುರ ಗ್ರಾಮದಲ್ಲಿ. ಕೆಲಸ ಮಾಡುತ್ತಿರುವ ವಿನಯ್ ಎನ್ನುವ ಪೋಸ್ಟ್ ಮ್ಯಾನ್ ಕಳೆದ 8 ವರ್ಷದಿಂದ ಜನರಿಗೆ ಬಂದಿದ್ದ ಯಾವುದೇ ಪೋಸ್ಟ್ ಸೇರಿದಂತೆ ವಿವಿಧ ವಸ್ತುಗಳನ್ನು ತಲುಪಿಸಿಲ್ಲ. ಇದರಿಂದಾಗಿ ಜನರು ಈ ಉಡಾಫೆ ಪೋಸ್ಟ್ ಮ್ಯಾನ್ ಗೆ ಜನ ಹಿಡಿ ಶಾಪ ಹಾಕುತ್ತಿದ್ದಾರೆ.
undefined
Post Office Scheme:ತಿಂಗಳಿಗೆ ರೂ.10,000 ಹೂಡಿಕೆ ಮಾಡಿ, ರೂ.16 ಲಕ್ಷ ಗಳಿಸಿ!
ಯಾರಿಗೂ ಪೋಸ್ಟ್ ನೀಡಿಲ್ಲ ಈ ಪೋಸ್ಟ್ ಮ್ಯಾನ್
ಈಪೋಸ್ಟ್ ಮ್ಯಾನ್ ವಿನಯ. ಗೌರಿಪುರ ಅಂಚೆ ಕಚೇರಿ ವ್ಯಾಪ್ತಿಯ ಬಸರಿಹಾಳ, ಬೈಲಕ್ಕಂಪುರ, ದೇವಲಾಪೂರ ಮತ್ತು ಚಿಕ್ಕ ವಡ್ಡರಕಲ್ ಗ್ರಾಮಗಳಿಗೆ ಬರುವ ಅಂಚೆ ಡೆಲಿವರಿ ಮಾಡಲು ಸರ್ಕಾರ ಈತನಿಗೆ ಸಂಬಳ ಕೊಡುತ್ತದೆ. ಆದ್ರೆ, ಈತ ಸಂಬಂಧಪಟ್ಟ ವಿಳಾಸಕ್ಕೆ ತಲುಪಿಸಬೇಕಿದ್ದ ವಿವಿಧ ದಾಖಲಾತಿ, ಆಧಾರ್ ಕಾರ್ಡ್, ಮಾಸಾಶನ ಆದೇಶ ಪತ್ರ, ಲೋನ್ ನೋಟಿಸ್‌ಗಳನ್ನ ಡೆಲಿವರಿ ಮಾಡಿಲ್ಲ. ಬದಲಾಗಿ ಮೂಟೆಕಟ್ಟಿ ಊರಾಚೆ ಎಸೆದಿದ್ದಾನೆ. ಮಕ್ಕಳು ಆಟವಾಡುವಾಗ ಮೂಟೆ ತೆಗೆದು ನೋಡಿದಾಗ ಅಂಚೆ ವಿತರಕನ ಬಂಡವಾಳ ಬಯಲಾಗಿದೆ.
ವಿನಯ್‌ನ ಬಂಡವಾಳ ಗೊತ್ತಾದದ್ದು ಹೇಗೆ
ಕಳೆದ 10 ವರ್ಷದ ಹಿಂದೆ ಗೌರಿಪುರ ಗ್ರಾಮದಲ್ಲಿ ಕೆಲಸಕ್ಕೆ ಸೇರಿರೋ ಈತ ಆರಂಭದ ಎರಡು ವರ್ಷ ಮಾತ್ರ ಸರಿಯಾಗಿ ಕೆಲಸ ಮಾಡಿದ್ದಾನೆ. ಕಳೆದ 8 ವರ್ಷದಿಂದ ಯಾವುದೇ ಅಂಚೆಗಳನ್ನು ಈತ ಡೆಲಿವರಿ ಮಾಡಿಲ್ಲವಂತೆ. ಇಂದು ಊರಾಚೆ ಬಿದ್ದಿದ್ದ ಮೂಟೆಯನ್ನು ಗೌರಿಪುರ ಗ್ರಾಮದ ಜನ ಬಿಚ್ಚಿ ನೋಡಿದಾಗ ನೂರಾರು ಆಧಾರ್ ಕಾರ್ಡ್, ಪಾನ್ ಕಾರ್ಡ್, ಎಟಿಎಂ ಕಾರ್ಡ್, ಬ್ಯಾಂಕ್ ಚೆಕ್ ಬುಕ್, ವಿವಿಧ ಮಾಸಾಶನಗಳ ಆದೇಶ ಪತ್ರ, ಸರ್ಕಾರಿ ನೌಕರರ ಜಾಯಿನಿಂಗ್ ಲೆಟರ್, ಎಲ್ಐಸಿ ಪಾಲಿಸಿಯ ನೋಟಿಸ್, ಚಿನ್ನದ ಮೇಲಿನ ಸಾಲದ ಹರಾಜು ನೋಟೀಸ್‌ಗಳು ಸೇರಿ ವಿವಿಧ ದಾಖಲಾತಿ ಪತ್ತೆ ಆಗಿವೆ.
Post Office: ಅಂಚೆ ಕಚೇರಿ ಉಳಿತಾಯ ಖಾತೆಗಳಿಗೆ ಶೀಘ್ರದಲ್ಲಿ ನೆಟ್ ಬ್ಯಾಂಕಿಂಗ್, ಎಟಿಎಂ ಸೌಲಭ್ಯ!
ಜನರಿಗೆ ಏನೇಲ್ಲಾ ಸಮಸ್ಯೆ ಆಯ್ತು
ಇನ್ನು ವಿನಯ್ ಸಕಾಲಕ್ಕೆ ಲೆಟರ್, ನೋಟಿಸ್‌ಗಳನ್ನು ಜನರಿಗೆ ತಲುಪಿಸದ ಪರಿಣಾಮ ಅದೆಷ್ಟೋ ಜನ ಅವರ ಚಿನ್ನ ಕಳೆದುಕೊಂಡಿದ್ದಾರೆ. ಅರ್ಹರು ಮಾಶಾಸನದಿಂದ ವಂಚಿತರಾಗಿದ್ದಾರೆ. ಜೊತೆಗೆ ಅನೇಕರು ಕೆಲಸ ಸಹ ಕಳೆದುಕೊಂಡಿದ್ದಾರೆ. ಆಧಾರ್ ಸಹ ಎಷ್ಟೋ ಜನರಿಗೆ ತಲುಪಿಲ್ಲ. ಒಟ್ನಲ್ಲಿ ಅಂಚೆ ಇಲಾಖೆ ಇಂದಿಗೂ ತನ್ನದೇ ಆದ ಗೌರವ, ಘನತೆ ಉಳಿಸಿಕೊಂಡಿದ್ದು, ಕೋರ್ಟ್ ಸೇರಿದಂತೆ ಎಲ್ಲ ಸರ್ಕಾರಿ ಇಲಾಖೆಗಳು ಭಾರತೀಯ ಅಂಚೆ ಮೂಲಕವೇ ಪತ್ರ ವ್ಯವಹಾರ ನಡೆಸುತ್ತವೆ. ಆದರೆ ಇಲ್ಲಿ ಈ ಅಂಚೆ ವಿತರಕನಿಂದ ಇಡೀ ಅಂಚೆ ಇಲಾಖೆ ತಲೆ ತಗ್ಗಿಸುವಂತೆ ಆಗಿದ್ದು, ತಪ್ಪಿತಸ್ಥನ ವಿರುದ್ಧ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ.