Bharat Jodo Yatra, ಕಾಂಗ್ರೆಸ್‌ ಅಧ್ಯಕ್ಷೀಯ ಚುನಾವಣೆ ನಡುವೆ ಸೋನಿಯಾ ಕೊಡಗಿನಲ್ಲಿ ವಿಶ್ರಾಂತಿ

Published : Oct 03, 2022, 10:48 AM ISTUpdated : Oct 03, 2022, 01:02 PM IST
Bharat Jodo Yatra, ಕಾಂಗ್ರೆಸ್‌ ಅಧ್ಯಕ್ಷೀಯ ಚುನಾವಣೆ ನಡುವೆ ಸೋನಿಯಾ ಕೊಡಗಿನಲ್ಲಿ ವಿಶ್ರಾಂತಿ

ಸಾರಾಂಶ

Sonia Gandhi to Kodagu: ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ರಾಜ್ಯಕ್ಕೆ ಆಗಮಿಸಲಿದ್ದು ಕೊಡಗಿನ ರೆಸಾರ್ಟ್‌ ಒಂದರಲ್ಲಿ ಎರಡು ದಿನಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ. ಈ ವೇಳೆ ಭಾರತ ಐಕ್ಯತಾ ಯಾತ್ರೆಯಲ್ಲಿರುವ ರಾಹುಲ್‌ ಗಾಂಧಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್‌ ಮತ್ತು ಕಾಂಗ್ರೆಸ್‌ ಸಂಘಟನಾ ಕಾರ್ಯದರ್ಶಿ ಕೆಸಿ ವೇಣುಗೋಪಾಲ್‌ ಭೇಟಿ ಮಾಡಲಿದ್ದಾರೆ. 

ಕೊಡಗು: ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಇಂದು ರಾಜ್ಯಕ್ಕೆ ಆಗಮಿಸಲಿದ್ದು, ಎರಡು ದಿನಗಳ ಕಾಲ ಕೊಡಗಿನ ರೆಸಾರ್ಟ್‌ ಒಂದರಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ. ಒಂದೆಡೆ ಕಾಂಗ್ರೆಸ್‌ ರಾಷ್ಟ್ರಾಧ್ಯಕ್ಷರ ಆಯ್ಕೆಗಾಗಿ ಶಶಿ ತರೂರ್‌ ಮತ್ತು ಮಲ್ಲಿಕಾರ್ಜುನ್‌ ಖರ್ಗೆ ನಡುವೆ ಚುನಾವಣೆ ನಡೆಯಲಿದ್ದರೆ, ಇನ್ನೊಂದೆಡೆ ರಾಹುಲ್‌ ಗಾಂಧಿ ಭಾರತ ಐಕ್ಯತಾ ಯಾತ್ರೆಯಲ್ಲಿದ್ದಾರೆ. ಯಾತ್ರೆ ಇಂದು ಜೆಡಿಎಸ್‌ನ ಭದ್ರಕೋಟೆ ಹಾಸನಕ್ಕೆ ಕಾಲಿಟ್ಟಿದ್ದು, ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿಯವರು ಸಹ 6ನೇ ತಾರೀಕು ಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ಸೋನಿಯಾ ಗಾಂಧಿ ಪಾದಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ಮರುದಿನ ಅಂದರೆ 7ನೇ ತಾರೀಕು ಪ್ರಿಯಾಂಕಾ ಗಾಂಧಿ ವಾದ್ರಾ ನಾಗಮಂಗಲ ತಾಲೂಕಿನಲ್ಲಿ ಪಾದಯಾತ್ರೆ ಮಾಡಲಿದ್ದಾರೆ. 

ಮಧ್ಯಾಹ್ನ 12:30ಕ್ಕೆ ಹೆಲಿಕಾಪ್ಟರ್ ಮೂಲಕ ಮೈಸೂರಿಗೆ ಸೋನಿಯಾ ಗಾಂಧಿ ಆಗಮಿಸಲಿದ್ದು, ಕೆಲ ಕಾಲ ಮೈಸೂರಿನಲ್ಲಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ್‌ ಖರ್ಗೆ, ವೇಣುಗೋಪಾಲ್, ಸಿದ್ದರಾಮಯ್ಯ, ಡಿಕೆಶಿ ಜೊತೆ ಮಾತುಕತೆ ನಡೆಸಲಿದ್ದಾರೆ. 1:00 ಗಂಟೆಗೆ ಮೈಸೂರಿನಿಂದ ಹೆಲಿಕಾಪ್ಟರ್ ಮೂಲಕ ಹೊರಟು 1:20ಕ್ಕೆ ಮಡಿಕೇರಿ ತಲುಪಲಿದ್ದಾರೆ. ಮಡಿಕೇರಿ ನಗರದ ಹೊರವಲಯದ ಗಾಲ್ಫ್ ಹೆಲಿಪ್ಯಾಡ್‌ಗೆ ಸೋನಿಯಾ ಆಗಮಿಸಲಿದ್ದು ಅಲ್ಲಿಂದ ರಸ್ತೆ ಮಾರ್ಗವಾಗಿ ಮೇಕೇರಿಯ ರೆಸಾರ್ಟ್‌‌ಗೆ ತೆರಳುತ್ತಾರೆ. 

ಇದನ್ನೂ ಓದಿ: ಕಾಂಗ್ರೆಸ್‌ ಅಧ್ಯಕ್ಷ ಸ್ಥಾನ: ಪಕ್ಷ ಬಲಪಡಿಸಲು ಸ್ಪರ್ಧಿಸಿದ್ದೇನೆ, ಮಲ್ಲಿಕಾರ್ಜುನ ಖರ್ಗೆ

ಹಿರಿಯ ಕೈ ನಾಯಕ ಟಿ ಜಾನ್ ಮಾಲಿಕತ್ವದ ಮೇಕೇರಿಯ ಕೂರ್ಗ್ ವೈಲ್ಡರ್ ನೆಸ್ ರೆಸಾರ್ಟ್‌ನಲ್ಲಿ ಎರಡು ದಿನಗಳ ಕಾಲ ಸೋನಿಯಾ ಗಾಂಧಿ ತಂಗಲಿದ್ದಾರೆ. ಸಂಜೆ ವೇಳೆಗೆ ಅದೇ ರೆಸಾರ್ಟ್‌ಗೆ ರಸ್ತೆ ಮಾರ್ಗವಾಗಿ ರಾಹುಲ್‌ ಗಾಂಧಿ ಬಂದು ಸೇರಲಿದ್ದಾರೆ. ರಾಹುಲ್‌ ಜೊತೆಗೆ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಮತ್ತು ಕೆ ಸಿ ವೇಣುಗೋಪಾಲ್ ಕೂಡ ಆಗಮಿಸಲಿದ್ದಾರೆ. ಕೊಡಗಿಗೆ ಕಾಂಗ್ರೆಸ್ ಅಧಿನಾಯಕಿ‌ ಆಗಮಿಸುವ ಹಿನ್ನೆಲೆ ಜಿಲ್ಲೆಯಾದ್ಯಂತ ಬಿಗಿ ಭದ್ರತೆ ಆಯೋಜನೆ ಮಾಡಲಾಗಿದೆ. ಭಾರತ ಜೋಡೊ ಯಾತ್ರೆ ಕೂಡ ಎರಡು ದಿನಗಳ ಕಾಲ ವಿರಾಮಗೊಳ್ಳಲಿದೆ. 2 ದಿನಗಳ ಕಾಲ ಕೊಡಗಿನಲ್ಲಿ ಸೋನಿಯಾ ಮತ್ತು ರಾಹುಲ್ ಗಾಂಧಿ ತಂಗಲಿದ್ದಾರೆ. 

ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣೆಗೆ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧಿಸಲಿರುವ ಹಿನ್ನೆಲೆ, ರಾಹುಲ್‌ ಮತ್ತು ಸೋನಿಯಾ ಜೊತೆ ಚರ್ಚಿಸಲಿದ್ದಾರೆ. ಖರ್ಗೆ ಗೆಲುವು ಬಹುತೇಕ ಖಚಿತವಾಗಿದ್ದು, ಗಾಂಧಿ ಕುಟುಂಬದ ಅಧಿಕೃತ ಅಭ್ಯರ್ಥಿ ಎಂದೇ ಖರ್ಗೆ ಅವರನ್ನು ಬಿಂಬಿಸಲಾಗುತ್ತಿದೆ. ಖರ್ಗೆ ಅವರಿಗೆ ಎದುರಾಗಿ ಶಶಿ ತರೂರ್‌ ಕಣಕ್ಕಿಳಿದಿದ್ದು, ಕೇರಳ ಕಾಂಗ್ರೆಸ್‌ನ ಸದಸ್ಯರು ಸಹ ಖರ್ಗೆ ಅವರನ್ನೇ ಬೆಂಬಲಿಸುತ್ತಿದ್ದಾರೆ. ಕಾಂಗ್ರೆಸ್‌ನ ಬಹುತೇಕ ಹಿರಿಯ ಮುಖಂಡರು ಖರ್ಗೆ ಅವರ ಪರವಾಗಿ ನಿಂತಿದ್ದು, ಕೆಲ ಯುವ ನಾಯಕರು ಶಶಿ ತರೂರ್‌ ಪರ ನಿಂತಿದ್ದಾರೆ. 

ಇದನ್ನೂ ಓದಿ: Congress President Election: ಖರ್ಗೆ ಕಾಂಗ್ರೆಸ್‌ನಲ್ಲಿ ಯಾವ ಬದಲಾವಣೆಯನ್ನೂ ತರೋದಿಲ್ಲ: ಶಶಿ ತರೂರ್‌

ಮುಂಬರುವ ವಿಧಾನಸಭೆ ಚುನಾವಣೆ ಕುರಿತಾಗಿಯೂ ಸೋನಿಯಾ ಭೇಟಿ ವೇಳೆ ಚರ್ಚೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಕರ್ನಾಟಕದಲ್ಲಿ ಮತ್ತೆ ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ಬರುವ ಇರಾದೆ ಕಾಂಗ್ರೆಸ್‌ಗಿದ್ದು ಈ ನಿಟ್ಟಿನಲ್ಲಿ ಮಾಡಬೇಕಾದ ರಾಜಕೀಯ ನೀತಿಗಳ ಕುರಿತು ಚರ್ಚಿಸಬಹುದು ಎನ್ನಲಾಗಿದೆ. ಎರಡು ದಶಕಗಳ ನಂತರ ಕಾಂಗ್ರೆಸ್‌ಗೆ ಗಾಂಧಿ ಕುಟುಂಬದ ಹೊರತಾದ ಅಧ್ಯಕ್ಷರು ನೇಮಕ ಕೂಡ ಈ ಸಂದರ್ಭದಲ್ಲೇ ಆಗಲಿದ್ದಾರೆ. ಖರ್ಗೆ ಏನಾದರೂ ಆಯ್ಕೆಯಾದರೆ ಕರ್ನಾಟಕದಿಂದ ಕಾಂಗ್ರೆಸ್‌ ರಾಷ್ಟ್ರಾಧ್ಯಕ್ಷರಾದ ಎರಡನೇ ರಾಜಕಾರಣಿ ಎಂಬ ಹೆಸರಿಗೆ ಪಾತ್ರರಾಗಲಿದ್ದಾರೆ. ಈ ಹಿಂದೆ ಎಸ್‌ ನಿಜಲಿಂಗಪ್ಪ ಅವರು ಕಾಂಗ್ರೆಸ್‌ ರಾಷ್ಟ್ರಾಧ್ಯಕ್ಷರಾಗಿದ್ದರು. 1969ರಲ್ಲಿ ಇಂದಿರಾ ಗಾಂಧಿ ವಿರುದ್ಧವೇ ನಿಜಲಿಂಗಪ್ಪ ತಿರುಗಿ ಬಿದ್ದಿದ್ದರು. 

PREV
Read more Articles on
click me!

Recommended Stories

ಬಾರ್ ಆಗಿ ಮಾರ್ಪಟ್ಟ KSRTC ಬಸ್: ಪ್ರಯಾಣದ ಮಧ್ಯೆಯೇ ಮದ್ಯ ಸೇವನೆ!
Kodagu: ಇಡೀ ರಾತ್ರಿ ಕಾಫಿ ತೋಟದಲ್ಲಿ ಒಂಟಿಯಾದ 2 ವರ್ಷದ ಮಗು; ಸಾಕು ನಾಯಿಯಿಂದ ಪತ್ತೆ