ಮಡಿಕೇರಿ (ಜು.10): ಭಾರಿ ಮಳೆ ಹಿನ್ನೆಲೆಯಲ್ಲಿ ಕೊಡಗಿನಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಮುಂದಾಗಿದ್ದು, ಜುಲೈ 10ರಿಂದ ಅಕ್ಟೋಬರ್ 15ರ ವರೆಗೆ ಭಾರಿ ವಾಹನಗಳಿಗೆ ಜಿಲ್ಲೆಯಲ್ಲಿ ಸಂಪೂರ್ಣ ನಿರ್ಬಂಧ ಹೇರಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ವ್ಯಾಪಕ ಮಳೆಯಾಗುತ್ತಿರುವುದರಿಂದ ಭೂಕುಸಿತ, ಗುಡ್ಡ ಕುಸಿತದ ಅಪಾಯವಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಎಲ್ಲ ರೀತಿಯ ಮರದ ದಿಮ್ಮಿ, ಮರಳು ಸಾಗಿಸುವ ವಾಹನಗಳು ಸೇರಿದಂತೆ, 16.2 ಟನ್‌ಗೂ ಹೆಚ್ಚಿನ ತೂಕದ ಸರಕು ಸಾಗಣೆ ವಾಹನಗಳಿಗೆ ಪ್ರವೇಶವಿಲ್ಲ. ಬುಲೆಟ್ ಟ್ಯಾಂಕರ್, ಶಿಪ್ ಕಾರ್ಗೋ ಕಂಟೈನರ್, ಲಾಂಗ್ ಚಾಸೀಸ್ (ಮಲ್ಟಿಆ್ಯಕ್ಸೆಲ) ವಾಹನಗಳಿಗೂ ನಿರ್ಬಂಧಿಸಲಾಗಿದೆ. ಅಡುಗೆ ಅನಿಲ, ಇಂಧನ ಪೂರೈಕೆ, ಹಾಲು ಪೂರೈಕೆ, ಸರ್ಕಾರಿ ವಾಹನಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಸಿ.ಸತೀಶ್ ಆದೇಶ ಹೊರಡಿಸಿದ್ದಾರೆ.
ಭಾರೀ ಮಳೆ: ಕೆಆರೆಎಸ್ ಭರ್ತಿಗೆ ಇನ್ನು ಎರಡೇ ಅಡಿ..!
ಕೊಡಗು ಜಿಲ್ಲೆಯ ಅಲ್ಲಲ್ಲಿ ಬರೆ ಕುಸಿತ, ಮನೆಗಳಿಗೆ ಅಪಾರ ಹಾನಿ: ಕೊಡಗು ಜಿಲ್ಲಾದ್ಯಂತ ಶನಿವಾರ ಬೆಳಗ್ಗಿನಿಂದಲೂ ಭಾರಿ ಮಳೆಯಾದ ಪರಿಣಾಮ ಜಿಲ್ಲೆಯ ಹಲವೆಡೆಗಳಲ್ಲಿ ಭೂಕುಸಿತ ಹಾಗೂ ಮನೆಗಳಿಗೆ ಹಾನಿಯಾಗಿದೆ. ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಭಾಗಮಂಡಲ, ತಲಕಾವೇರಿ, ಸುಂಟಿಕೊಪ್ಪ, ಸೋಮವಾರಪೇಟೆ, ವಿರಾಜಪೇಟೆ, ಗೋಣಿಕೊಪ್ಪ, ಪೊನ್ನಂಪೇಟೆ ಸೇರಿ ಹಲವು ಕಡೆ ಮಳೆ ಆರ್ಭಟ ಜೋರಾಗಿತ್ತು. ಗಾಳಿ ಸಹಿತ ಮಳೆಯಾದ ಹಿನ್ನೆಲೆಯಲ್ಲಿ ಮನೆಗಳಿಗೆ ಮರ ಬಿದ್ದು ಹಾನಿಯಾಗಿದೆ. ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.
ಪಶ್ಚಿಮ ಘಟ್ಟಪ್ರದೇಶದ ಬ್ರಹ್ಮಗಿರಿ ತಪ್ಪಲಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಭಾಗಮಂಡಲದ ತ್ರಿವೇಣಿ ಸಂಗಮದ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಭಾಗಮಂಡಲ - ಅಯ್ಯಂಗೇರಿ - ನಾಪೋಕ್ಲು ರಸ್ತೆ ಹಾಗೂ ಭಾಗಮಂಡಲ - ನಾಪೋಕ್ಲು ರಸ್ತೆ ಜಲಾವೃತವಾಗಿದ್ದು, ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಮುಂಗಾರಿನಲ್ಲಿ ಎರಡನೇ ಬಾರಿಗೆ ಸಂಪರ್ಕ ಕಡಿತಕೊಂಡಿದ್ದು, ಜಿಲ್ಲಾಡಳಿತ ನರ ಓಡಾಟಕ್ಕೆ ಬೋಟ್ ವ್ಯವಸ್ಥೆ ಕಲ್ಪಿಸಿದೆ. ಭಾಗಮಂಡಲದಲ್ಲಿ ಕಾವೇರಿ, ಕನ್ನಿಕೆ, ಸುಜ್ಯೋತಿ ನದಿಗಳು ಉಕ್ಕಿ ಹರಿಯುತ್ತಿವೆ.
Mangaluru Rain: ಉಕ್ಕಿ ಹರಿಯುವ ಹೊಳೆಗೆ ಬಿದ್ದ ಕಾರು: ಅವಘಡದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಕೊಡಗಿನಲ್ಲಿ ಭಾನುವಾರ ಬೆಳಗ್ಗೆ 8.30ರ ವರೆಗೆ ಆರೆಂಜ್ ಅಲರ್ಚ್ ಘೋಷಣೆ ಮಾಡಲಾಗಿದೆ. ವಿರಾಜಪೇಟೆ ತಾಲೂಕಿನ ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಡಿಯ ಪಿ.ಎಸ್. ನಂಜ ಅವರ ವಾಸದ ಮನೆಯ ಮೇಲೆ ಮಳೆ ಗಾಳಿಯಿಂದಾಗಿ ಮರ ಬಿದ್ದಿದ್ದು ತೀವ್ರ ಹಾನಿಯಾಗಿದೆ. ಭಾಗಮಂಡಲ- ತಲಕಾವೇರಿ ರಸ್ತೆಯ ಚೇರಂಗಾಲ ಸಮೀಪದಲ್ಲಿ ಬರೆ ಕುಸಿದಿದೆ.
ಆಗಮಿಸದ ಉಸ್ತುವಾರಿ ಸಚಿವರು: ಭಾರಿ ಮಳೆಯಿಂದಾಗಿ ಜಿಲ್ಲೆಯ ಹಲವು ಕಡೆಗಳಲ್ಲಿ ಬರೆ ಕುಸಿತ ಉಂಟಾಗಿದೆ. ಅಲ್ಲದೆ ಹಲವು ಮನೆಗಳಿಗೆ ಮರ ಬಿದ್ದು ಹಾನಿ ಆಗಿವೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವರಾದ ನಾಗೇಶ್ ಇನ್ನೂ ಜಿಲ್ಲೆಗೆ ಆಗಮಿಸಿ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿಲ್ಲ.