ಬೆಂಗಳೂರು (ಆ.10) :ರಾಜ್ಯದಲ್ಲಿ ಮಂಗಳವಾರ ಮಳೆಯ ತೀವ್ರತೆ ಕಡಿಮೆಯಾಗಿದ್ದರೂ ಮಲೆನಾಡು, ಕರಾವಳಿಯ ಅಲ್ಲಲ್ಲಿ ಭೂ ಕುಸಿತದ ಘಟನೆಗಳು ಮಾತ್ರ ಅಲ್ಲಲ್ಲಿ ವರದಿಯಾಗುತ್ತಲೇ ಇವೆ. ಭೂಕುಸಿತ, ಭೂಮಿ ಬಿರುಕು ಬಿಟ್ಟಘಟನೆಗಳಿಂದಾಗಿ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸೇರಿ ರಾಜ್ಯದ ನಾಲ್ಕೈದು ಪ್ರಮುಖ ರಸ್ತೆಗಳಲ್ಲಿ ಸಂಚಾರಕ್ಕೆ ಕಂಟಕ ಎದುರಾಗಿದ್ದು, ಸಾರ್ವಜನಿಕರು ಆತಂಕದಿಂದಲೇ ಈ ರಸ್ತೆಯಲ್ಲಿ ಓಡಾಡುವಂತಾಗಿದೆ.
ಕೊಡಗಿನಲ್ಲಿ ಮತ್ತೆ ಪ್ರವಾಹ; ಮತ್ತೆ ಮರುಕಳಿಸಲಿದೆಯಾ 2018ರ ಕರಾಳ ದಿನ..?
undefined
ಕೊಡಗಿನಲ್ಲಿ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ-275ರಲ್ಲಿ ಒಂದೆರಡು ಕಡೆ ಗುಡ್ಡಕುಸಿದು, ರಸ್ತೆ ಬಿರುಕು ಬಿಟ್ಟು ಈಗಾಗಲೇ ಸಂಚಾರ ಕಷ್ಟಎಂಬಂಥ ಸ್ಥಿತಿ ಇದೆ. ಇದರ ನಡುವೆಯೇ ಇದೀಗ ಮಡಿಕೇರಿ ತಾಲೂಕಿನ ಮದೆನಾಡಿನ ಕರ್ತೋಜಿ ಬಳಿಯ ಬೆಟ್ಟದಲ್ಲಿ ಭಾರೀ ಬಿರುಕು ಕಂಡು ಬಂದಿದ್ದು, ಬೆಟ್ಟನಾಲ್ಕು ಅಡಿಯಷ್ಟುಕುಸಿದಿದೆ. ಒಂದು ವೇಳೆ ಬೆಟ್ಟಮತ್ತಷ್ಟುಕುಸಿದಲ್ಲಿ ನೂರಾರು ಲೋಡ್ ಮಣ್ಣು ರಸ್ತೆಗೆ ಬೀಳುವ ಸಾಧ್ಯತೆ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ರಾತ್ರಿ ವಾಹನ ಸಂಚಾರ ಸಂಪೂರ್ಣ ಬಂದ್ ಆಗಿದೆ. ಅದೇ ರೀತಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ-ಶೃಂಗೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಉಳುಮೆ ಗ್ರಾಮದ ಬಳಿ ರಸ್ತೆ ಬಿರುಕುಬಿಟ್ಟಿದ್ದು, ಉತ್ತರ ಕನ್ನಡ ಜಿಲ್ಲೆಯ ಕಾರವಾರ ಹಾಗೂ ಜೋಯಿಡಾ ನಡುವೆ ಅಣಶಿ ಘಟ್ಟದಲ್ಲಿ ಗುಡ್ಡ ಕುಸಿತವಾಗಿದ್ದು ಸಂಚಾರಕ್ಕೆ ಅಡ್ಡಿಯಾಗಿದೆ.
ಇನ್ನು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿ ಚುರ್ಚಿಗುಂಡಿ ಮತ್ತು ಚಿಕ್ಕ ಜೋಗಿಹಳ್ಳಿ ಗ್ರಾಮಗಳ ನಡುವಿನ ರಾಜ್ಯ ಹೆದ್ದಾರಿ ರಸ್ತೆ ಕುಸಿದಿದ್ದರೆ, ಹೊಸನಗರ ತಾಲೂಕಿನ ನಗರ ಹೋಬಳಿಯಲ್ಲಿ ರಸ್ತೆ ಮೇಲೆ ಬೃಹತ್ ಗಾತ್ರದ ಬಂಡೆ ಉರುಳಿ ಬಿದ್ದಿದೆ.
ಕೊಡಗಿನಲ್ಲಿ ಮಳೆಯಬ್ಬರ : ಧರೆ ಕುಸಿತ
ಡ್ಯಾಂಗಳಿಂದ ಭಾರೀ ನೀರು ಬಿಡುಗಡೆ: ಮಲೆನಾಡು, ಕರಾವಳಿಯಲ್ಲಿ ಮಳೆ ಇಳಿಮುಖವಾಗಿದ್ದರೂ ಮಹಾರಾಷ್ಟ್ರ ಮತ್ತು ಪಶ್ಚಿಮಘಟ್ಟದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದಲ್ಲಿ ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿಗಳಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಆಲಮಟ್ಟಿಯಿಂದ 1.25 ಲಕ್ಷ ಕ್ಯುಸೆಕ್ ಹಾಗೂ ನಾರಾಯಣಪುರ ಡ್ಯಾಂನಿಂದ 1.42 ಲಕ್ಷ ಕ್ಯುಸೆಕ್‌ನಷ್ಟುನೀರು ಕೃಷ್ಣಾನದಿಗೆ ಹರಿದು ಬಿಡಲಾಗುತ್ತಿದ್ದು, ನದಿ ತೀರದ ತಗ್ಗುಪ್ರದೇಶಗಳಲ್ಲಿ ಆತಂಕ ಶುರುವಾಗಿದೆ.
ಇನ್ನು ತುಂಗಭದ್ರಾ ಡ್ಯಾಂನಿಂದ 1.54 ಲಕ್ಷ ಕ್ಯುಸೆಕ್ ನೀರು ನದಿಗೆ ಬಿಡಲಾಗುತ್ತಿದ್ದು, ಹಂಪಿಯ ಪುರಂದರ ಮಂಟಪ ಸೇರಿ ಇನ್ನಷ್ಟುಸ್ಮಾರಕಗಳು ಜಲಾವೃತವಾಗಿವೆ. ಕಂಪ್ಲಿ-ಗಂಗಾವತಿ ಸೇತುವೆ ಮೇಲೆ 2 ಅಡಿಗಳಷ್ಟುನೀರು ಹರಿಯುತ್ತಿದ್ದು, ಕೊಪ್ಪಳದ ಗಂಗಾವತಿ ಬಳಿ ಕೃಷ್ಣದೇವರಾಯನ ಸಮಾಧಿ, ನವ ವೃಂದಾವನಗಡ್ಡೆಗಳು ನೀರಿನಿಂದಾವೃತವಾಗಿವೆ.