ಕೊಡಗು ಜಿಲ್ಲೆಯಲ್ಲಿ ಇದೀಗ ಮಳೆ ಕಡಿಮೆಯಾಗಿದ್ದು, ಬಿಸಿಲಿನ ವಾತಾವರಣ ಇರುವುದರಿಂದ ಚಿಟ್ಟೆಗಳ ಕಲರವ ಹೆಚ್ಚಾಗಿ ಕಂಡುಬಂದಿದ್ದು, ನೋಡುಗರ ಗಮನ ಸೆಳೆಯತ್ತಿವೆ. ಮಡಿಕೇರಿ- ಕುಶಾಲನಗರ ಹೆದ್ದಾರಿಯ ಬದಿಯಲ್ಲಿ ಬಣ್ಣ ಬಣ್ಣದ ಚಿಟ್ಟೆಗಳು ಹಾರಾಡುತ್ತಿದ್ದು, ಮನ ಸೂರೆಗೊಳ್ಳುತ್ತಿದೆ.
ಮಡಿಕೇರಿ(ನ.07): ಕೊಡಗು ಜಿಲ್ಲೆಯಲ್ಲಿ ಇದೀಗ ಮಳೆ ಕಡಿಮೆಯಾಗಿದ್ದು, ಬಿಸಿಲಿನ ವಾತಾವರಣ ಇರುವುದರಿಂದ ಚಿಟ್ಟೆಗಳ ಕಲರವ ಹೆಚ್ಚಾಗಿ ಕಂಡುಬಂದಿದ್ದು, ನೋಡುಗರ ಗಮನ ಸೆಳೆಯತ್ತಿವೆ.
ಪಶ್ಚಿಮಘಟ್ಟವ್ಯಾಪ್ತಿಗೊಳಪಡುವ ಕೊಡಗು ಜಿಲ್ಲೆಯಲ್ಲಿ ಸಾಕಷ್ಟುಜೀವ ಪ್ರಬೇಧಗಳಿವೆ. ಅವುಗಳಲ್ಲಿ ಬಗೆ ಬಗೆಯ ಚಿಟ್ಟೆಗಳು ಕೂಡ ಪ್ರಮುಖವಾಗಿದೆ. ಮಡಿಕೇರಿ- ಕುಶಾಲನಗರ ಹೆದ್ದಾರಿಯ ಬದಿಯಲ್ಲಿ ಬಣ್ಣ ಬಣ್ಣದ ಚಿಟ್ಟೆಗಳು ಹಾರಾಡುತ್ತಿದ್ದು, ಮನ ಸೂರೆಗೊಳ್ಳುತ್ತಿದೆ. ಬ್ಲೂ ಟೈಗರ್ ಚಿಟ್ಟೆಗಳು ಗಿಡಗಳಲ್ಲಿ ಗುಂಪು ಗುಂಪಾಗಿ ಹೂವಿನ ಮೇಲೆ ಕುಳಿತು ಮಕರಂದವನ್ನು ಹೀರುತ್ತಿದೆ. ಚಿಟ್ಟೆಗಳ ಈ ಕಲರವ ಮನಸ್ಸಿಗೆ ಮುದ ನೀಡುತ್ತಿದೆ. ರಸ್ತೆಯುದ್ದಕ್ಕೂ ಸಾಕಷ್ಟುಚಿಟ್ಟೆಗಳು ಹಾರಾಡುತ್ತಿವೆ.
ಅಂತಾರಾಜ್ಯ ಗಾಂಜಾ ಸಾಗಾಟ ಜಾಲ ಬೇಧ: 10 ಕೆ.ಜಿ. ಗಾಂಜಾ ವಶ.
ಚಿಟ್ಟೆಗಳ ಪ್ರಾಥಮಿಕ ಆಹಾರ ಹೂವಿನ ಮಕರಂದ. ರಸ್ತೆ ಬದಿಯಲ್ಲಿನ ಗಿಡಗಳಲ್ಲಿ ಹೂವಿನ ಮಕರಂದವನ್ನು ಹೀರಲು ಚಿಟ್ಟೆಗಳು ಮುಗಿಬೀಳುತ್ತಿವೆ. ಕೆಲವೊಂದು ಚಿಟ್ಟೆಗಳು ಹೂವಿನ ಪರಾಗವನ್ನು ಹೀರುತ್ತವೆ. ಇದಲ್ಲದೆ ಸಸ್ಯ ರಸ, ಕೊಳೆತ ಹಣ್ಣುಗಳನ್ನು ಕೂಡ ಚಿಟ್ಟೆಗಳು ಸೇವಿಸುತ್ತವೆ. ಚಿಟ್ಟೆಗಳ ಮುಖದ ಮೇಲಿರುವ ಸ್ಪರ್ಶ ತಂತುಗಳು ಹೂವಿನ ಸುವಾಸನೆಯನ್ನು ಗ್ರಹಿಸುವ ಶಕ್ತಿಯನ್ನು ಹೊಂದಿವೆ. ಚಿಟ್ಟೆಗಳು ಮನುಷ್ಯನಿಗಿಂತ 200 ಪಟ್ಟು ವಾಸನೆ ಸಾಮರ್ಥ್ಯವನ್ನು ಹೊಂದಿವೆ ಎನ್ನುತ್ತಾರೆ ಚಿಟ್ಟೆತಜ್ಞರು.
ಚಿಟ್ಟೆಗಳ ರಕ್ತ ತಂಪಾಗಿದ್ದು, ವಾತಾವರಣಕ್ಕೆ ತಕ್ಕಂತೆ ದೇಹದ ಉಷ್ಣಾಂಶ ಬದಲಾಗುತ್ತದೆ. ಹೀಗಾಗಿ ಇವು ಶೀತ ಪ್ರದೇಶದಲ್ಲೂ ಬದುಕಬಲ್ಲವು. ಚಿಟ್ಟೆಗಳು ಒಂದು ಕಡೆಯಿಂದ ಇನ್ನೊಂದು ಕಡೆಗೆ ವಲಸೆ ಹೋಗುತ್ತವೆ, ಆದರೆ ಇದರ ಜೀವತಾವಧಿ ಕಡಿಮೆ ಇರುವುದರಿಂದ ಕೆಲವೊಮ್ಮೆ ಚಿಟ್ಟೆಗಳು ದಾರಿ ಮಧ್ಯೆಯೇ ಸಾಯುತ್ತವೆ. ಹೆಣ್ಣು ಚಿಟ್ಟೆಗಳು ಅಲ್ಲಲ್ಲಿ ಮೊಟ್ಟೆಯನ್ನಿಡುತ್ತಾ ಸಾಗುತ್ತವೆ.
‘ಆಪರೇಶನ್’ಗೆ ಹಣ ಇದೆ, ಸಂತ್ರಸ್ತರಿಗೆ ನೀಡಲು ಏಕಿಲ್ಲ: ಕಾಂಗ್ರೆಸ್ ವ್ಯಂಗ್ಯ
ಜಿಲ್ಲೆಯಲ್ಲಿ ಇದೀಗ ಸಾಮಾನ್ಯವಾಗಿ ಬ್ಲೂ ಟೈಗರ್ ಚಿಟ್ಟೆಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿವೆ. ರಸ್ತೆಯಲ್ಲಿ ಹೋಗುತ್ತಿದ್ದರೆ ಚಿಟ್ಟೆಗಳು ಒಂದು ಬದಿಯಿಂದ ಇನ್ನೊಂದು ಬದಿಗೆ ಹಾರಾಡುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. ಇಷ್ಟೊಂದು ಸಂಖ್ಯೆಯಲ್ಲಿ ಚಿಟ್ಟೆಗಳನ್ನು ಕಾಣದೇ ತುಂಬಾ ವರ್ಷಗಳಾಗಿವೆ ಎನ್ನುತ್ತಾರೆ ಚಿಟ್ಟೆಪ್ರಿಯರು.
ಚಿಟ್ಟೆಗಳ ಜೀವಿತಾವಧಿ ಬಹಳ ಕಡಿಮೆ. ಒಂದು ವಾರದಿಂದ ಒಂದು ವರ್ಷದ ತನಕ ಮಾತ್ರ ಇವುಗಳು ಬದುಕಬಲ್ಲವು. ಚಿಟ್ಟೆಗಳು ವರ್ಷದಲ್ಲಿ ಒಂದಕ್ಕಿಂತಲೂ ಹೆಚ್ಚು ಬಾರಿ ಮೊಟ್ಟೆಯಿಡುತ್ತದೆ. ಹೀಗೆ ಇಟ್ಟಮೊಟ್ಟೆಗಳು ಚಳಿಗಾಲದಲ್ಲಿ ಮಾತ್ರ ಉಳಿದುಕೊಳ್ಳುತ್ತದೆ. ಚಿಟ್ಟೆಗಳ ಮೊಟ್ಟೆಗಳು ಎಲೆಗಳಿಗೆ ಅಂಟಿಕೊಂಡಿರುತ್ತದೆ. ಚಿಟ್ಟೆಗಳ ಆಕಾರ ನೋಡಲು ಬಹಳ ಸುಂದರವಾಗಿರುತ್ತದೆ. ರೆಕ್ಕೆಗಳ ಹಿಂಭಾಗದಲ್ಲಿ ಚಿಕ್ಕದಾದ ಇನ್ನೆರಡು ರೆಕ್ಕೆಗಳಿರುತ್ತದೆ. ಮೈಮೇಲೆ ಬಣ್ಣದ ಚಿತ್ರ ಬಿಡಿಸಿದಂತೆ ಕಾಣುವ ರೆಕ್ಕೆಗಳು ಸೂಕ್ಷ್ಮ ರಚನೆ ಹೊಂದಿರುತ್ತದೆ ಮತ್ತು ವಿವಿಧ ಬಣ್ಣಗಳಲ್ಲಿ ಇರುತ್ತದೆ. ಚಿಟ್ಟೆಗಳ ರೆಕ್ಕೆಗಳು 8ರಿಂದ 12 ಸೆಂಟಿಮೀಟರ್ ದೊಡ್ಡದಾಗಿರುತ್ತದೆ.
ಕಬ್ಬನ್ ಪಾರ್ಕ್ ನಲ್ಲಿ ಚಿಟ್ಟೆಪಾರ್ಕ್ ಕಾಮಗಾರಿ ಶುರು
ಕೊಡಗಿನಲ್ಲಿ ಈ ಬಾರಿ ಮಳೆ ಬಿಸಿಲಿನ ವಾತಾವರಣ ಇದ್ದ ಕಾರಣ ಚಿಟ್ಟೆಗಳಿಗೆ ಸಂತಾನೋತ್ಪತ್ತಿಗೆ ವಾತಾವರಣ ಪೂರಕವಾಗಿದೆ. ಚಿಟ್ಟೆಗಳು ಮೊಟ್ಟೆಯಿಟ್ಟು, ಲಾರ್ವ ಆಗುತ್ತದೆ. ನಂತರ ಪ್ಯೂಪ, ಚಿಟ್ಟೆಗಳಾಗಿ ರೂಪ ಪರಿವರ್ತನೆಯಾಗುತ್ತದೆ. ಮಾಲಿನ್ಯ ರಹಿತ ವಾತಾವರಣವಿರುವ ಸ್ಥಳಗಳಲ್ಲಿ ಚಿಟ್ಟೆಗಳು ಹೆಚ್ಚಾಗಿ ಕಾಣಸಿಗುತ್ತದೆ ಎನ್ನುತ್ತಾರೆ ಮಡಿಕೇರಿಯ ಎಫ್‌ಎಂಸಿ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಎಂ.ಪಿ. ಕೃಷ್ಣ.
ಎಲ್ಲ ಚಿಟ್ಟೆಗಳು ಎಲ್ಲ ಗಿಡಗಳ ಮೇಲೆ ಇರುವುದಿಲ್ಲ. ಚಿಟ್ಟೆಗಳ ಆಧಾರದ ಮೇಲೆ ಸಮೀಪದಲ್ಲಿ ಯಾವ ಮರಗಳಿವೆ ಎಂದು ಹೇಳಬಹುದು. ಬ್ಲೂ ಟೈಗರ್ ಚಿಟ್ಟೆಗಳು ಗುಂಪು ಗುಂಪಾಗಿ ಮರಗಳಲ್ಲಿ ಎಳೆಗಳಂತೆ ಕಾಣಿಸುತ್ತದೆ ಎಂದು ಬೆಂಗಳೂರಿನ ಪೂರ್ಣಪ್ರಜ್ಞಾ ವಿದ್ಯಾಸಂಸ್ಥೆಯ ಶಿಕ್ಷಕ ಹರೀಶ್ ಪದ್ಮಶಾಲಿ ಹೇಳಿದ್ದಾರೆ.
ಪೂರಕ ವಾತಾವರಣ
ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಮಳೆ ಹಾಗೂ ಬಿಸಿಲಿನ ವಾತಾವರಣ ಇದ್ದ ಹಿನ್ನೆಲೆಯಲ್ಲಿ ಚಿಟ್ಟೆಗಳ ಸಂತಾನೋತ್ಪತ್ತಿಗೆ ಪೂರಕವಾದ ವಾತಾವರಣವಿದೆ. ಇದರಿಂದಾಗಿ ಬ್ಲೂ ಟೈಗರ್ ಚಿಟ್ಟೆಗಳು ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಂಡಿದೆ.
-ವಿಘ್ನೇಶ್ ಎಂ. ಭೂತನಕಾಡು