
ಭಾರತ ಎಷ್ಟೇ ಆಧುನಿಕವಾಗಿ ಮುಂದುವರಿದರು ಗ್ರಾಮೀಣ ಭಾರತದ ಬಹುತೇಕ ಕುಟುಂಬಗಳು ಅಡುಗೆ ಮಾಡಲು ಸೌದೆ ಒಲೆಯನ್ನೇ ಆವಲಂಬಿಸಿದ್ದಾರೆ. ಬೆಳಗಿನ ಚಹಾ, ಟಿಫೀನ್ ಮಾಡುವಾಗ, ರೊಟ್ಟಿ ತಟ್ಟುವಾಗ ಸೌದೆ, ಸ್ಟೌವ್ ಮೇಲೆ ಹೆಂಚು ಇಡುವುದರಿಂದ ತಳ ಕಪ್ಪಾಗುವುದು ಸಾಮಾನ್ಯ. ಗ್ಯಾಸಿನ ಮೇಲೆ ದಿನನಿತ್ಯ ಹಾಲು ಉಕ್ಕಿಸುವ ಪಾತ್ರೆಯ ತಳವೂ ಸಹ ಕಪ್ಪು ಬಣ್ಣಕ್ಕೆ ತಿರುಗಿರುತ್ತದೆ. ಹೀಗೆ ತಳಕ್ಕಿಡಿದ ಕಪ್ಪು ಕಲೆ ತೊಳೆಯಲು ಮುಂದಾಗುವುದಿಲ್ಲ. ಕೆಲವು ಸಲ ಎಷ್ಟೇ ಉಜ್ಜಿ ತೊಳೆಯಲು ಪ್ರಯತ್ನಿಸಿದರೂ ಕಲೆ ಹೋಗುವುದಿಲ್ಲ. ಹೀಗಾಗಿ ಪಾತ್ರೆಯ ತಳದ ಕಪ್ಪು ಕಲೆ ತೊಳೆಯುವುದೆಂದರೆ ತಲೆನೋವು ಬರುತ್ತದೆ. ಇದನ್ನು ಸಾಮಾನ್ಯ ಸೋಪ್ ಸ್ಕ್ರಬ್ಬರ್‌ನಿಂದ ಸ್ವಚ್ಛಗೊಳಿಸಲು ಹೋದರೆ ಸೋಪು ಖಾಲಿಯಾಗುತ್ತದೆ ಹೊರತು ಕಪ್ಪು ಹೋಗುವುದಿಲ್ಲ. ಏನು ಮಾಡುವುದು? ಹೇಗೆ ಸ್ವಚ್ಛಗೊಳಿಸುವುದು? ಎಂಬ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ಮನೆಯಲ್ಲಿಯೇ ಸಿಗುವ ಕೆಲವು ವಸ್ತು, ಪದಾರ್ಥಗಳನ್ನ ಬಳಸಿಕೊಂಡು ಸುಟ್ಟ ಪದರವನ್ನು ಸುಡಿಲಗೊಳಿಸುವುದು ಬಳಿಕ ಅದನ್ನು ಸ್ವಚ್ಛಗೊಳಿಸಲು ಸುಲಭವಾಗುತ್ತೆ ಅದ್ಹೇಗೆ ಎಂಬುದನ್ನು ಇಲ್ಲಿ ತಿಳಿಯೋಣ.
ಮನೆಯಲ್ಲೇ ಸಿಗುವ ಅಡುಗೆ ಸೋಡಾ ಬಳಸಿಕೊಂಡು ಪಾತ್ರೆಗಳನ್ನೂ ಸ್ವಚ್ಛಗೊಳಿಸಬಹುದು. ಬಹುತೇಕರು ಪಾತ್ರೆಗಳನ್ನ ಸ್ವಚ್ಛಗೊಳಿಸಲು ಹಣ ತೆತ್ತು ಸೋಪ್ ತರುತ್ತಾರೆ. ಆದರೆ ಮನೆಯಲ್ಲೇ ಈಗಾಗಲೇ ಇರುವ ಅಡುಗೆ ಸೋಡಾ ಬಳಸಿಕೊಂಡು ತೊಳೆಯುವುದಿಲ್ಲ ಅಥವಾ ಅದರ ಹಲವು ಉಪಯೋಗ ಹೆಚ್ಚಿನವರಿಗೆ ಗೊತ್ತಿಲ್ಲ. ಸುಟ್ಟ ಪಾತ್ರೆಗಳನ್ನ ತೊಳೆಯಲು ಉಪ್ಪಿನೊಂದಿಗೆ ಅಡುಗೆ ಸೋಡಾ ಬಳಸಬಹುದು. ಮೊದಲಿಗೆ ಕಪ್ಪು ಬಣ್ಣಕ್ಕೆ ತಿರುಗಿದ ಪಾತ್ರೆಯ ತಳಕ್ಕೆ ಅಡುಗೆ ಸೋಡಾ ಹಚ್ಚಿ ಅದರ ಮೇಲೆ ಸ್ವಲ್ಪ ಉಪ್ಪು ಹಾಕಿ. ನಂತರ ನೀರು ಸ್ವಲ್ಪ ನೀರು ಸೇರಿಸಿ ಪೇಸ್ಟ್ ರೀತಿ ಸುಟ್ಟಜಾಗದ ಮೇಲೆ ಕೆಲವು ನಿಮಿಷ ಹಾಗೆ ಬಿಡಿ. ನಂತರ ಮೃದುವಾದ ಸ್ಕ್ರಬ್ಬರ್ ಅಥವಾ ಸ್ಪಂಜಿನೊಂದಿಗೆ ನಿಧಾನವಾಗಿ ಉಜ್ಜಿ. ಸುಟ್ಟ ಪದರವು ಸಡಿಲಗೊಳ್ಳಲು ಪ್ರಾರಂಭಿಸಿದರೆ ಅದನ್ನು ನೀರಿನಿಂದ ತೊಳೆಯಿರಿ. ಕಪ್ಪು ಬಣ್ಣವು ತೀರಾ ಹಳೆಯದು, ಗಟ್ಟಿಯಾಗಿದ್ದರೆ, ನೀವು ಇದೇ ವಿಧಾನ ಮತ್ತೆ ಮತ್ತೆ ಮಾಡಬಹುದು. ಪಾತ್ರೆಯ ಕಲೆ ತೆಗೆಯಲು ತುಂಬಾ ಗಟ್ಟಿಯಾಗಿ ಉಜ್ಜಬೇಡಿ.
ಮನೆಯಲ್ಲಿ ಅಡುಗೆ ಸೋಡಾ ಇಲ್ಲದಿದ್ರೆ ಪಾತ್ರೆಯ ಕಪ್ಪು ಕಲೆ ತೊಳೆಯಲು ನಿಂಬೆ-ಉಪ್ಪು ಬೆಸ್ಟ್. ನಿಂಬೆಯಲ್ಲಿರುವ ಆಮ್ಲೀಯ ಗುಣಗಳಿಂದ ಗ್ರೀಸ್ ಮತ್ತು ಕೆಲವು ಕಲೆಗಳನ್ನು ಸಡಿಲಗೊಳಿಸುತ್ತೆ. ಮೊದಲಿಗೆ ಸುಟ್ಟ ತಳದ ಮೇಲೆ ನಿಂಬೆ ರಸವನ್ನು ಹಾಕಿ ಅದರ ಮೇಲೆ ಉಪ್ಪು ಹಾಕಿ ಸುಮಾರು 15-20 ನಿಮಿಷಗಳ ಕಾಲ ಹಾಗೆ ಬಿಡಿ. ನಂತರ ಸ್ಪಂಜಿನೊಂದಿಗೆ ನಿಧಾನವಾಗಿ ಸ್ಕ್ರಬ್ ಮಾಡಿ. ಶುದ್ಧ ನೀರಿನಿಂದ ತೊಳೆಯಿರಿ. ಹೀಗೆ ದಿನವೂ ತೊಳೆಯುವುದರಿಂದ ತಳದ ಕಪ್ಪು ಬೇಗನೇ ಹೋಗುತ್ತದೆ.
ಅನ್ನ, ಅಥವಾ ಇತರೆ ಆಹಾರ ಒಳಗಿನ ಪಾತ್ರೆಗೆ ಗಟ್ಟಿಯಾಗಿ ಅಂಟಿಕೊಂಡು ಒಣಗಿದಂತೆ ಇದ್ದರೆ. ಅದನ್ನು ತಕ್ಷಣ ಉಜ್ಜುವುದು ಬೇಡ. ಅದರ ಬದಲಿಗೆ ಬಿಸಿ ನೀರು ಹಾಕಿ ಅದನ್ನು ಸ್ವಲ್ಪ ಹೊತ್ತು ನೆನಸಿಟ್ಟರೆ ಸುಲಭವಾಗಿ ತೊಳೆಯಬಹುದು. ರಾತ್ರಿ ಮಾಡಿದ ಅನ್ನದ ಕುಕ್ಕರ್‌ನಲ್ಲಿ ಸುತ್ತಲೂ ಅನ್ನ ಅಂಟಿಕೊಂಡು ಒಣಗಿದ್ದರೆ. ತಕ್ಷಣ ತೊಳೆಯುವ ಬದಲು ಅದರಲ್ಲಿ ಬಿಸಿನೀರು ಹಾಕಿ. ಇದರಿಂದ ಒಣಗಿದ ಭಾಗ ಬಿಸಿನೀರಿನಲ್ಲಿ ಸಂಪೂರ್ಣ ಮುಳುಗಿ ತಾನೇತಾನಾಗಿ ಮೆತ್ತಗಾಗುತ್ತೆ. ಅನಂತರ ಬಿಸಿ ನೀರು ಚೆಲ್ಲಿ ಸಾಮಾನ್ಯವಾಗಿ ತೊಳೆಯುವಂತೆ ಉಜ್ಜಿದರೂ ಕಲೆ ಹೋಗುತ್ತದೆ. ಒಂದು ವೇಳೆ ಅನ್ನ ತೀವ್ರ ಸುಟ್ಟು ಕುಕ್ಕರ್ ತಳಕ್ಕೂ ಕಪ್ಪಾಗಿದ್ದರೆ. ಅದರಲ್ಲಿ ಬಿಸಿನೀರು ಹಾಕಿ ಸ್ವಲ್ಪ ಹೊತ್ತು ಬಿಟ್ಟು ಅನಂತರ ತೊಳೆಯಬಹುದು.
ಸುಟ್ಟ ಪಾತ್ರೆಗಳಿಗೂ ಬಿಳಿ ವಿನೆಗರ್ ಬಳಸುತ್ತಾರೆ. ಸುಟ್ಟು ಕರಕಲಾದ ಜಾಗ ಮುಚ್ಚುವಷ್ಟು ವಿನೆಗರ್ ಹಾಕಿ. ಸ್ವಲ್ಪ ಹೊತ್ತು ಹಾಗೆಯೇ ಬಿಡಿ. ಹೆಚ್ಚು ಗಟ್ಟಿ ಕಲೆಗಳಿದ್ದರೆ ಪಾತ್ರೆಯಲ್ಲಿ ವಿನೆಗರ್ ಅನ್ನು ಸ್ವಲ್ಪ ಹೊತ್ತು ಬಿಸಿ ಮಾಡಿ. ನಂತರ ಗ್ಯಾಸ್ ಆಫ್ ಮಾಡಿ ಪಾತ್ರೆಯನ್ನು ಸ್ವಲ್ಪ ತಣ್ಣಗಾಗಲು ಬಿಡಿ ನಂತರ ಸುಟ್ಟ ಪದರವನ್ನು ಸ್ಪಂಜಿನೊಂದಿಗೆ ಸ್ವಚ್ಛಗೊಳಿಸಿ. ಸ್ವಚ್ಛಗೊಳಿಸಿದ ನಂತರ ಪಾತ್ರೆಯನ್ನು ಡಿಶ್ ಸೋಪ್ ಮತ್ತು ನೀರಿನಿಂದ ಮತ್ತೊಮ್ಮೆ ತೊಳೆಯಿರಿ. ಕರಕಲು ಕಡಿಮೆ ಆಗುತ್ತದೆ. ಆದರೆ ಒಂದು ಗಮನಿಸಿ; ವಿನೆಗರ್ ಎಲ್ಲಾ ರೀತಿಯ ಪಾತ್ರೆಗಳಿಗೆ ಸೂಕ್ತವಲ್ಲ. ಇದನ್ನು ಬಳಸುವ ಮೊದಲು ಪಾತ್ರೆ ತಯಾರಕರ ಸೂಚನೆ ತಿಳಿಯುವುದು ಮುಖ್ಯ.
ಪಾತ್ರೆಗಳನ್ನು ಸ್ವಚ್ಛಗೊಳಿಸಿದ ನಂತರ, ಅವುಗಳನ್ನು ಬಿಸಿಲಲ್ಲಿ ಅಥವಾ ಗಾಳಿಯಾಡುವ ಸ್ಥಳದಲ್ಲಿಟ್ಟು ಚೆನ್ನಾಗಿ ಒಣಗಿಸಿ. ಅಡುಗೆ ಮಾಡುವಾಗ ಕಡಿಮೆ ಹುರಿ ಇರಲಿ. ಏಕೆಂದರೆ ಇದು ಪಾತ್ರೆಯ ಕೆಳಭಾಗವನ್ನು ಬೇಗನೆ ಕಪ್ಪಾಗಿಸಬಹುದು. ಅಷ್ಟೇ ಅಲ್ಲ ಕುಕ್ಕರ್ ಒಳ ಭಾಗದಲ್ಲೂ ಅನ್ನ ಸುಟ್ಟು ತಳಕ್ಕೆ ಒತ್ತಿಕೊಳ್ಳಬಹುದು. ಅಡುಗೆ ಮಾಡಿದ ತಕ್ಷಣ ಪಾತ್ರೆಯನ್ನು ಸ್ವಚ್ಛಗೊಳಿಸುವುದು ಒಳ್ಳೆಯ ಅಭ್ಯಾಸ. ಪಾತ್ರೆ ತಳ ಕರಕಲಾಗದಂತೆ ತಡೆಯಲು ಬೆಸ್ಟ್.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.