
ಧಾರವಾಡದಲ್ಲಿ ಯುವ ಕಾಂಗ್ರೆಸ್ ನಾಯಕನ ಬರ್ಬರ ಹ*ತ್ಯೆ ಪ್ರಕರಣ ಭಾರೀ ಸಂಚಲನ ಮೂಡಿಸಿದ್ದು, ಘಟನೆಗೆ ರಾಜಕೀಯ ಪ್ರೇರಣೆ ಇದೆ ಎಂಬ ಆರೋಪಗಳು ಕೇಳಿಬರುತ್ತಿವೆ. ನಗರದ ಹಾಸ್ಮಿ ನಗರದಲ್ಲಿ ಯೂತ್ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಫೈರೋಜ್ ಪಠಾಣ್ ಅವರನ್ನು ದುಷ್ಕರ್ಮಿಗಳು ಕ್ರೂರವಾಗಿ ಹ*ತ್ಯೆ ಮಾಡಿರುವ ಘಟನೆ ನಡೆದಿದೆ.
ಫೈರೋಜ್ ಪಠಾಣ್ ರಾಜಕೀಯವಾಗಿ ಚುರುಕಾಗಿ ಬೆಳೆಯುತ್ತಿದ್ದ ಯುವ ನಾಯಕನಾಗಿದ್ದು, ಇದೇ ತಿಂಗಳ 24ರಂದು ಅವರ ಮದುವೆ ನಿಶ್ಚಯವಾಗಿತ್ತು. ಮದುವೆ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದ ಸಮಯದಲ್ಲೇ ಈ ದುರ್ಘಟನೆ ಸಂಭವಿಸಿರುವುದು ಕುಟುಂಬಸ್ಥರು ಹಾಗೂ ಸ್ನೇಹಿತರನ್ನು ಬೆಚ್ಚಿಬೀಳಿಸಿದೆ.
ಘಟನೆ ವಿವರಗಳ ಪ್ರಕಾರ, ಶುಕ್ರವಾರ ರಾತ್ರಿ ಸುಮಾರು 9:45ರ ವೇಳೆಗೆ ಫೈರೋಜ್ ತಮ್ಮ ಮನೆಯ ಮುಂಭಾಗದಲ್ಲಿ ಮಾತನಾಡುತ್ತಾ ನಿಂತಿದ್ದಾಗ, ದುಷ್ಕರ್ಮಿಗಳು ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ತಕ್ಷಣವೇ ಅವರು ಮನೆಯೊಳಗೆ ಓಡಿ ಹೋಗಿ ಕೊಠಡಿಯಲ್ಲಿ ಬಾಗಿಲು ಹಾಕಿಕೊಂಡರೂ, ಆರೋಪಿಗಳು ಬಾಗಿಲು ಮುರಿದು ಒಳನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊ*ಲೆಗೈದಿದ್ದಾರೆ. ನಾಲ್ವರು ಆರೋಪಿಗಳು ನೇರವಾಗಿ ಕೊಠಡಿಗೆ ನುಗ್ಗಿ ಹತ್ಯೆ ನಡೆಸಿದರೆಂದು ತಿಳಿದುಬಂದಿದೆ.
ಈ ಭೀಕರ ಘಟನೆ ಮನೆಯಲ್ಲಿದ್ದ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ದೃಶ್ಯಗಳ ಆಧಾರದ ಮೇಲೆ ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚಲು ಬಲೆ ಬೀಸಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ, ಸ್ನೇಹಿತರೇ ಸೇರಿ ಈ ಕೃತ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಸ್ಥಳೀಯ ವ್ಯಕ್ತಿಗಳ ಭಾಗವಹಿಸುವಿಕೆ ಕುರಿತು ಅನುಮಾನ ವ್ಯಕ್ತವಾಗಿದೆ.
ಪೊಲೀಸ್ ತನಿಖೆಯಲ್ಲಿ ಇನ್ನಷ್ಟು ವಿವರಗಳು ಬೆಳಕಿಗೆ ಬರುತ್ತಿದ್ದು, ಮೊಹಮ್ಮದ್ ಷಾ ಹಾಗೂ ಅವರ ತಂಡ ಈ ಹ*ತ್ಯೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗುತ್ತಿದೆ. ಕಳೆದ ಎರಡು ತಿಂಗಳ ಹಿಂದೆ ಫೈರೋಜ್ ಮತ್ತು ಮೊಹಮ್ಮದ್ ಷಾ ನಡುವೆ ಗಲಾಟೆ ನಡೆದಿದ್ದು, ಇಬ್ಬರೂ ಪರಸ್ಪರ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದರು. ಈ ವೈಷಮ್ಯವೇ ಕೊಲೆಗೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಹತ್ಯೆ ಪ್ರಕರಣದಲ್ಲಿ ಒಟ್ಟು ಆರು ಮಂದಿ ಭಾಗಿಯಾಗಿರುವ ಮಾಹಿತಿ ಲಭ್ಯವಾಗಿದೆ. ನೇರವಾಗಿ ಕೊಲೆಗೈದ ನಾಲ್ವರು ಆರೋಪಿಗಳು ಪರಾರಿಯಾಗಿದ್ದು, ಸಂಚು ರೂಪಿಸಿದ್ದರೆಂದು ಶಂಕೆ ಇರುವ ಅರ್ಬಾಜ್ ಪಠಾಣ್ ಮತ್ತು ಗುಲಾಬ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಉಳಿದ ಆರೋಪಿಗಳಿಗಾಗಿ ಉಪನಗರ ಠಾಣೆ ಪೊಲೀಸರು ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಇನ್ನೊಂದೆಡೆ, ಯೂತ್ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಅಬ್ದುಲ್ ದೇಸಾಯಿ ಗಂಭೀರ ಆರೋಪಗಳನ್ನು ಹೊರ ಹಾಕಿದ್ದು, ಈ ಹ*ತ್ಯೆಗೆ ರಾಜಕೀಯ ದ್ವೇಷವೇ ಕಾರಣ ಎಂದು ಹೇಳಿದ್ದಾರೆ. ಧಾರವಾಡದ ಹಿರಿಯ ಕಾಂಗ್ರೆಸ್ ಮುಖಂಡನೊಬ್ಬರಿಂದಲೇ ಸಂಚು ರೂಪಿಸಿ ಕೊಲೆ ಮಾಡಿಸಲಾಗಿದೆ ಎಂದು ಅವರು ಆರೋಪಿಸಿದ್ದು, ಆರು ತಿಂಗಳ ಹಿಂದೆಯೇ ಜೀವ ಬೆದರಿಕೆ ಹಿನ್ನೆಲೆಯಲ್ಲಿ ಪೊಲೀಸ್ ಕಮಿಷನರ್‌ಗೆ ದೂರು ನೀಡಲಾಗಿತ್ತು ಎಂದು ತಿಳಿಸಿದ್ದಾರೆ.
ಘಟನೆ ನಂತರ ಫೈರೋಜ್ ಪಠಾಣ್ ಅವರ ಮೃತದೇಹವನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕರೆದೊಯ್ಯಲಾಗಿದೆ. ಶವಗಾರದ ಬಳಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಕುಟುಂಬಸ್ಥರು ಹಾಗೂ ಸ್ನೇಹಿತರು ಶವಗಾರದ ಬಳಿ ಜಮಾಯಿಸಿ ದುಃಖ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಾರೆ, ಈ ಹತ್ಯೆ ಪ್ರಕರಣದಲ್ಲಿ ವೈಯಕ್ತಿಕ ದ್ವೇಷದ ಜೊತೆಗೆ ರಾಜಕೀಯ ಅಂಶಗಳೂ ಮಿಶ್ರಿತವಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸುತ್ತಿದ್ದು, ತನಿಖೆ ಮುಂದುವರಿದಿದೆ. ಸಿಸಿ ಕ್ಯಾಮೆರಾ ದೃಶ್ಯಗಳು ಹಾಗೂ ಸಾಕ್ಷಿಗಳ ಆಧಾರದ ಮೇಲೆ ಆರೋಪಿಗಳನ್ನು ಶೀಘ್ರವೇ ಬಂಧಿಸುವ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.