ವಿಜಯಪುರ ಪೊಲೀಸರಿಂದ ಸೂಪರ್ ಮೆಗಾ ಆಪರೇಷನ್: ಮೂರೂವರೆ ಕೋಟಿ ಮೌಲ್ಯದ ಮೊಬೈಲ್ ಪತ್ತೆ

Published : Apr 11, 2026, 02:35 PM IST
Vijayapur Police

ಸಾರಾಂಶ

ವಿಜಯಪುರ ಜಿಲ್ಲಾ ಪೊಲೀಸರು ಸಿಇಐಆರ್‌ ಪೋರ್ಟಲ್‌ ಬಳಸಿ, ಸಾರ್ವಜನಿಕರು ಕಳೆದುಕೊಂಡಿದ್ದ ಸುಮಾರು ₹3.5 ಕೋಟಿ ಮೌಲ್ಯದ 340 ಮೊಬೈಲ್‌ಗಳನ್ನು ಪತ್ತೆಹಚ್ಚಿದ್ದಾರೆ. ಈ ಮೊಬೈಲ್‌ಗಳನ್ನು ವಾರಸುದಾರರಿಗೆ ಮರಳಿಸಲಾಗುತ್ತಿದ್ದು, ಪೆರೋಲ್ ಮೇಲೆ ತೆರಳಿ ತಲೆಮರೆಸಿಕೊಂಡಿದ್ದ ಜೀವಾವಧಿ ಶಿಕ್ಷೆಯ ಆರೋಪಿಯನ್ನೂ ಬಂಧಿಸಲಾಗಿದೆ.

ವಿಜಯಪುರ: ಜಿಲ್ಲೆಯಲ್ಲಿ ವಿವಿಧ 26 ಪೊಲೀಸ್ ಠಾಣೆಗಳ ವ್ಯಾಪ್ತಿಗಳಲ್ಲಿ ಸಾರ್ವಜನಿಕರು ಕಳೆದುಕೊಂಡಿದ್ದ ಸುಮಾರು ಮೂರೂವರೆ ಕೋಟಿ ಮೌಲ್ಯದ ವಿವಿಧ ಕಂಪನಿಗಳ ಹಾಗೂ ವಿವಿಧ ಮಾಡೆಲ್‌ಗಳ 340 ಮೊಬೈಲ್‌ಗಳನ್ನು ಪತ್ತೆಹಚ್ಚಿ ವಾರಸುದಾರರಿಗೆ ನೀಡಲಾಗುತ್ತಿದೆ. ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಸಿಇಐಆರ್‌ ಪೋರ್ಟಲ್‌ ಮುಖಾಂತರ ಜಿಲ್ಲೆಯಲ್ಲಿ ಕಳೆದುಹೋಗಿದ್ದ ಮೊಬೈಲ್‌ಗಳನ್ನು ಪತ್ತೆ ಮಾಡಲಾಗಿದೆ ಎಂದು ಎಸ್‌ಪಿ ಲಕ್ಷ್ಮಣ ನಿಂಬರಗಿ ಹೇಳಿದರು.

₹3.5 ಕೋಟಿ ಮೌಲ್ಯದ ಒಟ್ಟು 340 ಮೊಬೈಲ್‌

ನಗರದ ಪೊಲೀಸ್ ಸಮುದಾಯ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲ ಪೊಲೀಸ್‌ ಠಾಣೆಗಳಲ್ಲಿ ಸಿಇಐಆರ್‌ ಪೋರ್ಟಲ್‌ ಅನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಸಾರ್ವಜನಿಕರಿಂದ ಮೊಬೈಲ್ ಕಳೆದುಹೋದ/ ಕಳ್ಳತನವಾದ ಬಗ್ಗೆ ದಾಖಲಾದ ದೂರಗಳನ್ನು ಪರಿಶೀಲಿಸಿ, ಅವುಗಳ ಪತ್ತೆ ಕುರಿತು ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.ಜಿಲ್ಲೆಯ 26 ಪೊಲೀಸ್‌ ಠಾಣೆಗಳನ್ನು ಒಳಗೊಂಡಂತೆ ಸಿಇಐಆರ್‌ ಪೋರ್ಟಲ್‌ದಲ್ಲಿ ದಾಖಲಾದ ದೂರುಗಳನ್ನು ಪರಿಶೀಲಿಸಿ, ಪತ್ತೆಹಚ್ಚಿ ₹3.5 ಕೋಟಿ ಮೌಲ್ಯದ ಒಟ್ಟು 340 ಮೊಬೈಲ್‌ಗಳನ್ನು ವಿವಿಧ ಜಿಲ್ಲೆ ಹಾಗೂ ರಾಜ್ಯಗಳಿಂದ ಪತ್ತೆ ಮಾಡಿ ಸಂಬಂಧಪಟ್ಟ ಸಾರ್ವಜನಿಕರಿಗೆ ಮರಳಿಸಲಾಗುತ್ತಿದೆ. 

ಇನ್ನು ಕೆಲವು ದೂರುಗಳ ಪತ್ತೆ ಕಾರ್ಯ ಮುಂದುವರೆದಿದೆ. ಸಿಇಐಆರ್‌ ಪೋರ್ಟಲ್‌ ಮೊಬೈಲ್ ಕಳುವಾದ / ಕಳ್ಳತನವಾದ ಬಗ್ಗೆ ಪತ್ತೆ ಮಾಡಲು ಅತ್ಯಂತ ಪರಿಣಾಮಕಾರಿಯಾದ ಆಪ್‌ ಆಗಿದ್ದು, ಸಾರ್ವಜನಿಕರು ಅದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮಾಹಿತಿ ನೀಡಿದರು.

ಇತ್ತೀಚಿನ ದಿನಗಳಲ್ಲಿ ಮೊಬೈಲ್ ಸಾಧನವು ಸಾರ್ವಜನಿಕರ ದಿನನಿತ್ಯದ ಮತ್ತು ಅತೀ ಅವಶ್ಯಕ ಬಳಕೆವುಳ್ಳ ಸಾಧನೆಗಳಲ್ಲೊಂದಾಗಿದೆ. ಈ ನಡುವೆ ಸಾರ್ವಜನಿಕರಿಂದ ದಿನಂಪ್ರತಿ ತಮ್ಮ ಮೊಬೈಲ್ ಕಳೆದುಹೋದ / ಕಳ್ಳತನವಾದ ಬಗ್ಗೆ ಪೊಲೀಸ್‌ ಠಾಣೆಗಳಲ್ಲಿ ದೂರುಗಳು ಸ್ವೀಕೃತವಾಗುತ್ತಿವೆ. ಈ ರೀತಿ ಮೊಬೈಲ್ ಕಳುವಾದ / ಕಳ್ಳತನದ ದೂರುಗಳ ಬಗ್ಗೆ ಪೊಲೀಸ್‌ ಇಲಾಖೆಯು ಕ್ರಮ ವಹಿಸಿ, ಸಿಇಐಆರ್‌ ಪೋರ್ಟಲ್‌ ಸಾಧನದ ಮೂಲಕ ಮೊಬೈಲ್‌ಗಳ ಪತ್ತೆ ಕಾರ್ಯ ಕೈಗೊಳ್ಳಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಎಸ್‌ಪಿ ರಾಮನಗೌಡ ಹಟ್ಟಿ, ಡಿವೈಎಸ್‌ಪಿಗಳಾದ ಸದಾಶಿವ ಕಟ್ಟಿಮನಿ, ಬಲ್ಲಪ್ಪ ನಂದಗಾವಿ, ಸುನೀಲ ಕಾಂಬಳೆ, ತುಳಜಪ್ಪ ಸುಲ್ಫಿ, ಸಿಪಿಐಗಳಾದ ಮಲ್ಲಯ್ಯ ಮಠಪತಿ, ಪ್ರದೀಪ ತಳಕೇರಿ ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು.

ಇದನ್ನೂ ಓದಿ: ಶೇಖಿ ಅಣ್ಣನ ಅಂಗಡಿಗೆ ಬೀಗ; ಅಕ್ಷರಗಳ ಯುಗಕ್ಕೆ ತೆರೆ ಓದುಗರ ಮನದಲ್ಲಿ ಉಳಿದ ಅಯ್ನೋರ ನೆನಪು

ಆರೋಪಿ ಪತ್ತೆ ಪ್ರಕರಣ:

ಕೊಲೆ ಕೇಸಿನಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಆರೋಪಿ ಕಿರಣಕುಮಾರ ತಂ. ಆನಂದಯ್ಯ ಹಿರೇಮಠ 13 ದಿನಗಳ ಕಾಲ ಪೆರೋಲ್‌ ರಜೆ ಪಡೆದುಕೊಂಡು 2023 ಆಗಸ್ಟ್ 11ರಂದು ವಿಜಯಪುರ ಕೇಂದ್ರ ಕಾರಾಗೃಹದಿಂದ ತೆರಳಿದ್ದನು. ಆದರೆ, ಆರೋಪಿ ಕಿರಣಕುಮಾರ ತಂ. ಆನಂದಯ್ಯ ಹಿರೇಮಠ ವಾಪಸ್ಸು ಬಾರದೆ ತಲೆ ಮರೆಸಿಕೊಂಡಿದ್ದ ಕುರಿತು ಆದರ್ಶನಗರ ಠಾಣೆಯಲ್ಲಿ 2023 ಆಗಸ್ಟ್ 23ರಂದು ಕೇಂದ್ರ ಕಾರಾಗೃಹದ ಉಪಅಧೀಕ್ಷಕ ಡಾ.ಮಂಜುನಾಥ.ಎಚ್.ಜಿ ದೂರು ನೀಡಿದ್ದರು. ಆರೋಪಿಯ ಪತ್ತೆಗೆ ಜಾಲ ಬೀಸಿದ ಆದರ್ಶನಗರ ಠಾಣೆ ಪಿಎಸ್ಐ ಸೀತಾರಾಮ ಲಮಾಣಿ ಹಾಗೂ ಸಿಬ್ಬಂದಿ ತಂಡ ಆರೋಪಿತನು ಮೈಸೂರಿನಲ್ಲಿ ಇರುವಿಕೆಯ ಬಗ್ಗೆ ಖಚಿತ ಮಾಹಿತಿ ಪಡೆದು 2026 ಏ.8ರಂದು ಬಂಧಿಸಿದ್ದಾರೆ. ಆರೋಪಿಯನ್ನು ಬಂಧಿಸುವಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದ ಪಿಎಸ್‌ಐ ಹಾಗೂ ಸಿಬ್ಬಂದಿಯ ಕರ್ತವ್ಯವನ್ನು ಶ್ಲಾಘೀಸಲಾಗಿದೆ ಎಂದು ಎಸ್‌ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಪ್ರೀತಿಸಿ ಮದುವೆಯಾದ ಅಂತರ್‌ಧರ್ಮೀಯ ಕೊಪ್ಪಳ ಜೋಡಿ, ತಸ್ಲೀಮಾ ಹಣೆಗೆ ಸಿಂಧೂರವಿಟ್ಟ ಕೇಶವ, ಠಾಣೆ ಮೆಟ್ಟಿಲೇರಿದ್ದೇಕೆ?

PREV
Read more Articles on
click me!

Recommended Stories

ಕೊಪ್ಪಳದಲ್ಲೂ 'ಲವ್ ಜಿಹಾದ್': ಮುಸ್ತಫಾ ಮೊಬೈಲ್‌ನಲ್ಲಿ ಹಿಂದೂ ಯುವತಿಯರ ಅಶ್ಲೀಲ ವಿಡಿಯೋ ಪತ್ತೆ! ಎಸ್‌ಪಿಗೆ ದೂರು
ಮಾಣಿಕ್ಯಧಾರಾದಲ್ಲಿ ಕೇರಳ ಬಾಲಕಿ ಸಾವು: ನಾಪತ್ತೆಯಾಗುವುದಕ್ಕೂ ಮುನ್ನ1000 ಸೆಕೆಂಡ್ ಫೋನಲ್ಲಿ ಮಾತಾಡಿದ್ದ ಶ್ರೀನಂದಾ!