Karnataka Rains: ಬೈಕ್‌ನಲ್ಲಿ ಸೇತುವೆ ದಾಟುತ್ತಿದ್ದ ಯುವಕ ನೀರುಪಾಲು

By Kannadaprabha NewsFirst Published Dec 5, 2021, 7:13 AM IST
Highlights

*  ಮಂಡ್ಯ ಜಿಲ್ಲೆ ಕೆ.ಆರ್‌.ಪೇಟೆ ತಾಲೂಕಿನ ಕೈಗೋನಹಳ್ಳಿ ಗ್ರಾಮದಲ್ಲಿ ನಡೆದ ಘಟನೆ
*  ಕೈಗೋನಹಳ್ಳಿ- ಸಾರಂಗಿ ನಡುವೆ ಹಳ್ಳ ದಾಡುವ ವೇಳೆ ನೀರು ಪಾಲಾದ ಯುವಕ
*  ಮೃತದೇಹಕ್ಕಾಗಿ ಮುಂದುವರಿದ ಶೋಧ ಕಾರ್ಯ

ಮೈಸೂರು/ಮಂಡ್ಯ(ಡಿ.05): ಹಳೇ ಮೈಸೂರು(Mysuru) ಭಾಗದ 2 ಜಿಲ್ಲೆಗಳಲ್ಲಿ ಶುಕ್ರವಾರ ರಾತ್ರಿ ಸುರಿದ ಮಳೆಯಿಂದ(Rain) ಕೃಷಿ ಬೆಳೆಗಳಿಗೆ ಹಾನಿಯಾಗಿದ್ದು ಸೇತುವೆ ದಾಟುತ್ತಿದ್ದ ಯುವಕನೊಬ್ಬ ಬೈಕ್‌ ಸಮೇತ ಕೊಚ್ಚಿಕೊಂಡು ಹೋಗಿರುವ ಘಟನೆ ನಡೆದಿದೆ.  ಮಂಡ್ಯ(Mandya) ಜಿಲ್ಲೆ ಕೆ.ಆರ್‌.ಪೇಟೆ ತಾಲೂಕಿನ ಕೈಗೋನಹಳ್ಳಿ ಗ್ರಾಮದ ಉದಯಶಂಕರ್‌ (27) ನೀರಿನ ಪ್ರವಾಹದಲ್ಲಿ(Flood) ಕೊಚ್ಚಿ ಹೋದ ಯುವಕ. ಶುಕ್ರವಾರ ಸಂಜೆ ಕಾರ್ಯನಿಮಿತ್ತ ಸಮೀಪದ ಮಲ್ಲೇನಹಳ್ಳಿಗೆ ಹೋಗಿದ್ದ ದಯ ಕುಮಾರ್‌ ರಾತ್ರಿ ಹಿಂತಿರುಗುವ ವೇಳೆ ಕೈಗೋನಹಳ್ಳಿ- ಸಾರಂಗಿ ನಡುವೆ ಹಳ್ಳ ದಾಡುವ ವೇಳೆ ನೀರಿನ ರಭಸಕ್ಕೆ ಸಿಕ್ಕಿ ಬೈಕ್‌ ಸಮೇತ ಕೊಚ್ಚಿ ಹೋಗಿದ್ದಾರೆ ಎನ್ನಲಾಗಿದೆ. 

ಮೃತದೇಹಕ್ಕಾಗಿ(Deadbody) ಶೋಧ ಮುಂದುವರಿದಿದೆ. ಇನ್ನು ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನಲ್ಲಿ ಶುಕ್ರವಾರ ಸುರಿದ ಭಾರಿ ಮಳೆಯಿಂದ ಲಕ್ಷಾಂತರ ರು. ಮೌಲ್ಯದ ಬಾಳೆ ಮತ್ತು ಈರುಳ್ಳಿ ಬೆಳೆ ನಾಶವಾಗಿರುವ(Crop Damage) ಘಟನೆ ತಾಲೂಕಿನ ದೇಪೆಗೌಡನಪುರ ಗ್ರಾಮದಲ್ಲಿ ನಡೆದಿದೆ.

Farmers Loan: ಅಕಾಲಿಕ ಮಳೆಗೆ ಬೆಳೆನಷ್ಟ: ಮತ್ತಿಬ್ಬರು ರೈತರು ಆತ್ಮಹತ್ಯೆ

ಹೂವಿನಹಡಗಲಿಯಲ್ಲಿ 33.8 ಮಿ.ಮೀ ಮಳೆ

ಹೂವಿನಹಡಗಲಿ: ವಿಜಯನಗರ(Vijayanagara) ಜಿಲ್ಲೆಯ ಹೂವಿನಹಡಗಲಿ(Huvina Hadagali) ತಾಲೂಕಿನಲ್ಲಿ ಶುಕ್ರವಾರ ತಡರಾತ್ರಿ ಮತ್ತೆ ಮಳೆಯಾಗುತ್ತಿದ್ದು, ರೈತರು(Farmers) ಕೃಷಿ ಚಟುವಟಿಕೆಯಲ್ಲಿ ತೊಡಗಲು ತೊಂದರೆ ಉಂಟಾಗಿದೆ.

ಹೂವಿನಹಡಗಲಿ ಹೋಬಳಿಯಲ್ಲಿ 33.8 ಮಿ.ಮೀ ಹಾಗೂ ಹಿರೇಹಡಗಲಿ ಹೋಬಳಿ ವ್ಯಾಪ್ತಿಯಲ್ಲಿ 20 ಮಿ.ಮೀ ಮಳೆಯಾಗಿದೆ. ಈ ಹಿಂದೆ ಸುರಿದ ಮಳೆಗೆ ರೈತರು ಅಪಾರ ನಷ್ಟ ಅನುಭವಿಸುತ್ತಿರುವ ಬೆನ್ನೆಲ್ಲ ಮತ್ತೆ ಮಳೆಯಾಗುತ್ತಿದ್ದು, ಇದರಿಂದ ಭತ್ತ, ಮೆಕ್ಕೆಜೋಳ ಹಾಗೂ ಮೆಣಸಿನ ಹಣ್ಣು ಕಟಾವಿಗೆ ಬಂದರೂ, ಮಳೆ ಸುರಿದು ರೈತರಿಗೆ ಮತ್ತಷ್ಟು ಹಾನಿ ಉಂಟಾಗುವ ಸಂಭವವಿದೆ.

ಕಟಾವು ಮಾಡಿ ರಸ್ತೆ ಹಾಗೂ ಇತರೆ ಕಡೆಗಳಲ್ಲಿ ಒಣಗಲು ಹಾಕಿ ಭತ್ತ(Paddy) ಮತ್ತು ಮೆಕ್ಕೆಜೋಳ ಮಳೆ ನೀರಿಗೆ ಹಾನಿಯಾಗಿವೆ. ಕೆಲ ರೈತರ ಭತ್ತದ ಬೆಳೆ ನೆಲಕಚ್ಚಿದ್ದು ಕಟಾವು ಮಾಡಲು ಆಗದಂತಹ ಸ್ಥಿತಿ ಇದೆ. ಮಳೆ ನೀರಿನಲ್ಲಿ ಭತ್ತ ಮೊಳಕೆಯಾಗಿದೆ. ಮೆಕ್ಕೆಜೋಳ ತೆನೆಗಳು ನೆಲಕ್ಕೆ ಬಿದ್ದು ಮೊಳಕೆಯೊಡೆದು ಹಾನಿ ಉಂಟಾಗಿದೆ. ಈಗಾಗಲೇ ಬೆಳೆ ನಷ್ಟಹೊಂದಿರುವ ರೈತರ ಜಮೀನುಗಳಿಗೆ ಕೃಷಿ, ಕಂದಾಯ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತೆರಳಿ ಜಂಟಿ ಸಮೀಕ್ಷೆ(Survey) ಮಾಡಿ ವರದಿ ಸಿದ್ಧಪಡಿಸುತ್ತಿದ್ದಾರೆ.

Karnataka Rains: ಗಾಯದ ಮೇಲೆ ಬರೆ ಎಳೆದ ವರುಣ: ಡಿಸೆಂಬರ್‌ ಮಳೆಗೆ ದಂಗಾದ ಅನ್ನದಾತ..!

ಈಗಾಗಲೇ ಮಳೆ ರಭಸಕ್ಕೆ ಬಿದ್ದಿರುವ ಮನೆಗಳ ಮಾಹಿತಿ ಸಂಗ್ರಹಿಸಿ ವರದಿ ಸಿದ್ಧಪಡಿಸಿದ್ದಾರೆ. ಶುಕ್ರವಾರ ತಡ ರಾತ್ರಿ ಸುರಿದ ಮಳೆಗೆ ಮತ್ತೆ ತಾಲೂಕಿನ 8 ಮಣ್ಣಿನ ಮನೆಗಳು ಭಾಗಶಃ ಹಾನಿಯಾಗಿವೆ. ಮನೆ ಕಳೆದುಕೊಂಡಿರುವ ಬಡ ಕುಟುಂಬಗಳ ಅಳಿದುಳಿದ ಮನೆಯಲ್ಲಿ ವಾಸವಾಗಿದ್ದಾರೆ. ಮಳೆಗೆ ಬಿದ್ದಿರುವ ಮನೆಗಳ ಮಾಹಿತಿ ಸಂಗ್ರಹಿಸಲು ಆಯಾ ಗ್ರಾಮಗಳ ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಕಂದಾಯ ನಿರೀಕ್ಷಕರು ಭೇಟಿ ನೀಡಿದ್ದಾರೆ.

ಭಾರಿ ಮಳೆಗೆ ಬಾಳೆ ಬೆಳೆ ನಾಶ

ನಂಜನಗೂಡು: ಮೈಸೂರು ಜಿಲ್ಲೆಯ ನಂಜನಗೂಡು(Nanjangud) ತಾಲೂಕಿನಲ್ಲಿ ಶುಕ್ರವಾರ ಸುರಿದ ಭಾರಿ ಮಳೆಯಿಂದ ಬಾಳೆ ಬೆಳೆ ನಾಶವಾಗಿರುವ ಘಟನೆ ತಾಲೂಕಿನ ದೇಪೆಗೌಡನಪುರ ಗ್ರಾಮದಲ್ಲಿ ನಡೆದಿದೆ.

ಭಾರಿ ಮಳೆಯಿಂದ ಗ್ರಾಮದ ಮಹದೇವಪ್ಪ ಎಂಬವವರ ಜಮೀನಿಗೆ ನುಗ್ಗಿದ ನೀರಿನ ರಭಸಕ್ಕೆ ಲಕ್ಷಾಂತರ ರು. ಮೌಲ್ಯದ ಬಾಳೆ ಹಾಗೂ ಈರುಳ್ಳಿ ಬೆಳೆಯು ಸಂಪೂರ್ಣವಾಗಿ ಹಾನಿಯಾಗಿದೆ. ರೈತ ಮಹದೇವಪ್ಪ ಮಾತನಾಡಿ, ಕಾಡಾಂಚಿನ ಗ್ರಾಮವಾದ ದೇಪೆಗೌಡನಪುರದಲ್ಲಿ ಪ್ರತಿ ದಿನ ಕಾಡಾನೆಗಳು ಲಗ್ಗೆ ಇಡುತ್ತಿವೆ, ರಾತ್ರಿ ಹಗಲು ಎನ್ನದೆ ಕಾದು ಬೆಳೆಗಳನ್ನು ಬೆಳೆಯುತ್ತೆವೆ, ಆದರೆ ಈಗ ಸಾಲ ಸೊಲ ಮಾಡಿ ಬೆಳೆದ ಫಸಲು ಮಳೆಯಿಂದ ಸಂಪೂರ್ಣವಾಗಿ ಹಾನಿಯಾಗಿದೆ, ಇದಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
 

click me!